ಅನಿತಾ ಕುಮಾರಸ್ವಾಮಿ ಮೂಲ ಕೂಡ ಆಂಧ್ರ!
Team Udayavani, Feb 6, 2019, 12:56 AM IST
ಮಂಡ್ಯ: ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅಂಬರೀಶ್ ಪತ್ನಿ ಸುಮಲತಾ ಆಂಧ್ರ ಗೌಡ್ತಿ ಎಂಬ ಅಸ್ತ್ರ ಬಿಟ್ಟ ಬೆನ್ನಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ನಿ ಅನಿತಾ ಕೂಡ ಆಂಧ್ರ ಗೌಡ್ತಿಯೇ ಎಂದು ಅಂಬರೀಶ್ ಅಭಿಮಾನಿಗಳು ತಿರುಗುಬಾಣ ಬಿಟ್ಟಿದ್ದಾರೆ.
ನನ್ನ ಪತ್ನಿ ಮೂಲತಃ ತೆಲುಗು ಮೂಲದವರು ಎಂದು ಸ್ವತಃ ಕುಮಾರಸ್ವಾಮಿ ಅವರೇ ತೆಲುಗು ಚಾನಲ್ವೊಂದಕ್ಕೆ ನೀಡಿದ್ದ ಸಂದರ್ಶನದ ವಿಡಿಯೋ ಇದೀಗ ವ್ಯಾಟ್ಸ್ಆ್ಯಪ್, ಫೇಸ್ಬುಕ್ಗಳಲ್ಲಿ ಹರಿದಾಡುತ್ತಿದೆ. ಅಂಬರೀಶ್ ಅಭಿಮಾನಿಗಳೇ ಅದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟು ಜೆಡಿಎಸ್ ಮುಖಂಡರಿಗೆ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ಪುತ್ರ ನಿಖೀಲ್ಗೌಡರ ಚೊಚ್ಚಲ ‘ಜಾಗ್ವಾರ್’ ಚಲನಚಿತ್ರ ಬಿಡುಗಡೆ ಸಂದರ್ಭದ ವೇಳೆ ತೆಲುಗು ಮೂಲದ ಖಾಸಗಿ ಟಿವಿ ಚಾನಲ್ವೊಂದಕ್ಕೆ ನಿಖೀಲ್ ಹಾಗೂ ಕುಮಾರಸ್ವಾಮಿ ಸಂದರ್ಶನ ನೀಡಿದ್ದರು. ಈ ವೇಳೆ ಆಂಧ್ರಕ್ಕೂ ನಮ್ಮ ಕುಟುಂಬಕ್ಕೂ ನಂಟಿದೆ. ನನ್ನ ಪತ್ನಿ ಆಂಧ್ರ ಮೂಲದ ಕುಟುಂಬಕ್ಕೆ ಸೇರಿದವರು. ತೆಲುಗು ಮನೆತನದ ಮಗಳನ್ನು ಮದುವೆಯಾಗಿರುವುದಾಗಿ ಕುಮಾರಸ್ವಾಮಿ ಖುದ್ದು ಹೇಳಿಕೊಂಡಿದ್ದರು. ಅಪ್ಪ ಹೇಳಿದ ಮಾತಿಗೆ ಮಗ ನಿಖೀಲ್ ಕೂಡ ದನಿಗೂಡಿಸಿದ್ದರು. ಆ ವಿಡಿಯೋ ವೈರಲ್ ಮಾಡುವ ಮೂಲಕ ಅಂಬಿ ಅಭಿಮಾನಿಗಳು ಇದಕ್ಕೆ ಉತ್ತರ ಕೊಡುವಂತೆ ಕುಮಾರಸ್ವಾಮಿಗೆ ಸವಾಲು ಹಾಕಿದ್ದಾರೆ.