CONNECT WITH US  

ನನ್ನ ಸಿಎಂ ಮಾಡ್ರಯ್ಯ ಬರ್ತೀನಿ: ಸಚಿವ ಡಿಕೆಶಿ

ಬೆಂಗಳೂರು: 'ನನ್ನ ಜೊತೆಗಿದ್ದ ಹೊಸ ಶಾಸಕರಿಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಕರೆ ಮಾಡಿ ಬಿಜೆಪಿಗೆ ಆಹ್ವಾನ ನೀಡಿದ್ದರು. ಆ ಸಂದರ್ಭದಲ್ಲಿ ಅವರೊಂದಿಗೆ ನಾನು ಮಾತನಾಡಿ, ನನ್ನ ಮುಖ್ಯಮಂತ್ರಿ ಮಾಡ್ರಯ್ಯ ಬರುತ್ತೇನೆಂದು ಆಗ ಹೇಳಿದ್ದೆ ' ಎಂದು ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್‌ ಹನುಮಂತಯ್ಯ ಅವರ 111 ನೇ ಜನ್ಮ ದಿನದ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಆಪರೇಷನ್‌ ಕಮಲದ ಆಮಿಷ ಒಡ್ಡಿರುವ ಸಿಡಿಯಲ್ಲಿರುವ ಧ್ವನಿ ತಮ್ಮದೇ ಎಂದು ಯಡಿಯೂರಪ್ಪ ಅವರು ಒಪ್ಪಿಕೊಂಡಿರುವುದನ್ನು ಪ್ರಸ್ತಾಪಿಸಿ, ಈ ರೀತಿ ಹೇಳಿದರು. ಅವರ ಆತ್ಮಸಾಕ್ಷಿಗೆ ಮೆಚ್ಚುಗೆ ವ್ಯಕ್ತಪಡಿಸುವುದಾಗಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಕೆಮ್ಮು, ಸುಳ್ಳು, ಕಳ್ಳತನದಂತಹ ವಿಚಾರಗಳನ್ನು ಬಹಳ ದಿನ ಮುಚ್ಚಿಡಲು ಆಗುವುದಿಲ್ಲ. ಯಡಿಯೂರಪ್ಪ ಅವರು ತಮ್ಮದೇ ಧ್ವನಿ ಎಂದು ಒಪ್ಪಿಕೊಂಡಿರುವುದರಿಂದ ಅದು ಮಿಮಿಕ್ರಿ ಎನ್ನುವ ಪ್ರಶ್ನೆಯೇ ಬರುವುದಿಲ್ಲ. ದೇವರು ಯಡಿಯೂರಪ್ಪ ಅವರಿಗೆ ಒಳ್ಳೆಯದು ಮಾಡಲಿ ಎಂದು ಹೇಳಿದರು.

ಬಿ.ಸಿ. ಪಾಟೀಲ್‌, ಶಿವರಾಂ ಹೆಬ್ಟಾರ್‌ ಅವರ ಪತ್ನಿಯ ಧ್ವನಿ ಕೂಡ ಇದೇ ರೀತಿಯಲ್ಲಿ ರೆಕಾರ್ಡ್‌ ಮಾಡಲಾಗಿತ್ತು. ನನ್ನ ಧ್ವನಿ, ಯಡಿಯೂರಪ್ಪ, ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ಧ್ವನಿಯನ್ನು ಯಾರಾದರೂ ಬದಲಾವಣೆ ಮಾಡಲು ಆಗುತ್ತದಾ? ಯಾರೂ ಮಿಮಿಕ್ರಿ ಮಾಡಲು ಆಗುವುದಿಲ್ಲ. ವಾಸ್ತವವನ್ನು ನಾವು ಒಪ್ಪಿಕೊಳ್ಳಬೇಕು. ಇದ್ಯಾವುದು ಮುಚ್ಚು ಮರೆಯಿಂದ ನಡೆಯುತ್ತಿಲ್ಲ. ಎಲ್ಲವೂ ಬಹಿರಂಗವಾಗಿಯೇ ನಡೆಯುತ್ತಿದೆ ಎಂದು ಹೇಳಿದರು.

ಸಭಾಧ್ಯಕ್ಷ ರಮೇಶ್‌ ಕುಮಾರ್‌ ಅವರೇ ಸೋಮವಾರ ಸದನದಲ್ಲಿ ಪ್ರಕರಣವನ್ನು ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ. ಯಾವ ರೀತಿಯ ತನಿಖೆಯಾಗಬೇಕು ಎಂದು ಸ್ಪೀಕರ್‌ ಚರ್ಚೆ ಮಾಡಿ, ರಾಜ್ಯದ ಜನತೆಗೆ ಎಲ್ಲವನ್ನೂ ಬಿಚ್ಚಿಡಲಿದ್ದಾರೆ ಎಂದರು.

ಇದೇ ವೇಳೆ, ಹುಬ್ಬಳ್ಳಿಯಲ್ಲಿ ನಡೆದ ಪ್ರಧಾನಿಯವರ ಸರ್ಕಾರಿ ಕಾರ್ಯಕ್ರಮಕ್ಕೆ ಸಿಎಂ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡದಿರುವುದು ರಾಜ್ಯಕ್ಕೆ ಮಾಡಿರುವ ಅವಮಾನ. ಸಿಎಂಕೂಡ ಕಾರ್ಯಕ್ರಮಕ್ಕೆ ತೆರಳಲು ಸಿದ್ದರಾಗಿದ್ದರು. ಆದರೆ, ಕೇಂದ್ರದಿಂದ ಆಹ್ವಾನ ನೀಡದೇ ರಾಜ್ಯಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು. ಕೆಂಗಲ್‌ ಹನುಮಂತಯ್ಯ ಅವರ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಬೆಂಗಳೂರಿನಲ್ಲಿಯೇ ಇದ್ದರೂ ಗೈರು ಹಾಜರಾಗಿದ್ದರು.

ಕಾಂಗ್ರೆಸ್‌ ಅತೃಪ್ತರ ನಡೆ ಇನ್ನೂ ಅಸ್ಪಷ್ಟ

ಬೆಂಗಳೂರು: ಶಾಸಕಾಂಗ ಪಕ್ಷದಿಂದ ನಿರಂತರ ವಿಪ್‌ ಜಾರಿಗೊಳಿಸುತ್ತಿದ್ದರೂ, ಪತ್ರದ ಮೂಲಕವೇ ಉತ್ತರ ನೀಡುತ್ತಿರುವ ಅತೃಪ್ತ ಶಾಸಕರ ನಡೆ ಇನ್ನೂ ನಿಗೂಢವಾಗಿಯೇ ಮುಂದುವರಿದಿದೆ. ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ ನೇತೃತ್ವದಲ್ಲಿ ಮೂವರು ಶಾಸಕರು ಮುಂಬೈನಲ್ಲಿಯೇ ಬೀಡು ಬಿಟ್ಟಿದ್ದು, ಬೆಂಗಳೂರಿಗೆ ವಾಪಸ್‌ ಆಗುವ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿದು ಬಂದಿದೆ.ಅತೃಪ್ತ ಶಾಸಕರ ನಾಯಕತ್ವ ವಹಿಸಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಭಾನುವಾರ ಸಂಜೆ ಹೊಸಕೋಟೆ ಮೂಲಕ ಬೆಂಗಳೂರಿಗೆ ಆಗಮಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದರೂ ಖಚಿತವಾಗಿಲ್ಲ. ರಮೇಶ್‌ ಆಪ್ತ ಮೂಲಗಳ ಪ್ರಕಾರ ಅತೃಪ್ತರೆಲ್ಲರೂ ಮುಂಬೈನಲ್ಲೇ ಉಳಿದುಕೊಂಡಿದ್ದು, ಅತೃಪ್ತರ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅರಭಾವಿಯ ಶಾಸಕ ಬಾಲಚಂದ್ರ ಜಾರಕಿಹೊಳಿ, ಶನಿವಾರ ರಾಜ್ಯಕ್ಕೆ ಆಗಮಿಸಿ ಭಾನುವಾರ ಮತ್ತೆ ಮುಂಬೈಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಸೋಮವಾರ ಅಧಿವೇಶನದಲ್ಲಿ ನಡೆಯುವ ಬೆಳವಣಿಗೆಗಳ ಆಧಾರದಲ್ಲಿ ಅತೃಪ್ತರು ಮುಂಬೈನಿಂದ ವಾಪಸ್‌ ಬರುವ ಬಗ್ಗೆ ತೀರ್ಮಾನಿಸುವ ಸಾಧ್ಯತೆ ಇದೆ. ಬೆಂಗಳೂರಿಗೆ ಆಗಮಿಸಿದರೂ ಸದನಕ್ಕೆ ಹಾಜರಾಗದೇ ದೂರ ಉಳಿಯುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.


Trending videos

Back to Top