CONNECT WITH US  

ಪ್ರಹಸನದಿಂದ ಜನರಿಗೆ ಬೇಸರ: ವಿಶ್ವನಾಥ್‌

ಚಿತ್ರದುರ್ಗ: ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಬಿಡುಗಡೆ ಮಾಡುತ್ತಿರುವ ಆಡಿಯೋ-ವಿಡಿಯೋ ಕಂಡು ರಾಜ್ಯ ರಾಜಕಾರಣದ ಬಗ್ಗೆ ಜನರು ರೋಸಿ ಹೋಗಿದ್ದಾರೆ ಎಂದು ಜೆಡಿಎಸ್‌ ರಾಜ್ಯಾದ್ಯಕ್ಷ ಎಚ್. ವಿಶ್ವನಾಥ್‌ ಬೇಸರ ವ್ಯಕ್ತಪಡಿಸಿದರು. ಹೊಸದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧ್ವನಿಮುದ್ರಿಕೆಗಳ ಪ್ರಹಸನದಿಂದಾಗಿ ನಾಡಿನ ಮತದಾರರು ರಾಜಕಾರಣಿಗಳನ್ನು ಮನ್ನಿಸಲಾರದಂತಹ ಕೆಲಸ ಮಾಡುತ್ತಿದ್ದೇವೆ. ಕುಮಾರಸ್ವಾಮಿ, ಸಿದ್ದರಾಮಯ್ಯ, ಯಡಿಯೂರಪ್ಪ ಹಾಗೂ ಮುಖಂಡರಿಗೆ ಭಗವಂತ ಒಳ್ಳೆಯ ಬುದ್ಧಿ ಕೊಡಲಿ ಎಂದರು.

ಒಬ್ಬೊಬ್ಬ ಶಾಸಕರಿಗೆ 20, 30 ಕೋಟಿ ರೂ. ನೀಡಲಾಗುತ್ತದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಇಷ್ಟೊಂದು ದುಡ್ಡು ಎಲ್ಲಿಂದ ಬರುತ್ತದೆ, ವಿಧಾನಸೌಧದ ಬಳಿ ದನಗಳ ಜಾತ್ರೆ ನಡೆಯುತ್ತಿದೆಯೇನೋ ಅನ್ನಿಸುತ್ತಿದೆ ಎಂದು ವ್ಯಂಗ್ಯವಾಡಿದರು.

ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಅವರ ಶಿಷ್ಯ ನಾನು. ನನ್ನ ಬೆಳವಣಿಗೆಗೆ ಅವರೇ ಕಾರಣ. ದೇವರಾಜ ಅರಸು ಆಗಲು ಯಾರಿಗೂ ಸಾಧ್ಯವಿಲ್ಲ. ಅವರ ಸಾಧನೆಯ ಸಮೀಪಕ್ಕೂ ಹೋಗಲು ಆಗುವುದಿಲ್ಲ. ಕೆಲವರು ತಾವೇ ದೇವ ರಾಜ ಅರಸು ಅಂತಾರೆ. ಕೆಲವರು ನೀವೇ ದೇವರಾಜ ಅರಸು ಅಂತ ರೈಲು ಹತ್ತಿಸುತ್ತಾರೆ ಎಂದು ಪರೋಕ್ಷ ವಾಗಿ ಸಿದ್ದರಾಮಯ್ಯ ಅವರನ್ನು ಟೀಕಿಸಿದರು.


Trending videos

Back to Top