CONNECT WITH US  

‘ನನಗ್ಯಾಕೆ ಈ ಶಿಕ್ಷೆ… ಇದು ನ್ಯಾಯನಾ…?’ : ಸ್ಪೀಕರ್ ರಮೇಶ್ ಕುಮಾರ್

ತಮ್ಮ ಮೇಲಿನ ಆರೋಪಗಳಿಂದ ನೊಂದು ಮಾತನಾಡಿದ ರಮೇಶ್ ಕುಮಾರ್

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕೋಲಾಹಲಕ್ಕೆ ಕಾರಣವಾಗಿರುವ ಮತ್ತು ಪಕ್ಷ ಪಕ್ಷಗಳ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿರುವ ‘ಆಡಿಯೋ ಟೇಪ್’ ಹಗರಣ ಇದೀಗ ವಿಧಾನ ಸಭೆಯಲ್ಲೂ ಪ್ರಸ್ತಾಪಗೊಳ್ಳುವಂತಾಗಿದೆ. ಶುಕ್ರವಾರದ ಬಜೆಟ್ ಅಧಿವೇಶನದ ನಂತರ ಸೋಮವಾರಕ್ಕೆ ಮುಂದೂಡಲ್ಪಟ್ಟಿದ್ದ ವಿಧಾನಸಭೆಯ ಕಲಾಪ ಪ್ರಾರಂಭಗೊಂಡ ಸಂದರ್ಭದಲ್ಲಿ ವಿಧಾನ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಸದನವನ್ನುದ್ದೇಶಿಸಿ ಮಾತನಾಡುತ್ತ ತಮ್ಮ ಮೇಲೆ ಕೇಳಿಬಂದಿರುವ ಹಣ ಪಡೆದುಕೊಂಡಿರುವ ಆರೋಪಗಳಿಂದ ತಾನು ಎರಡು ದಿನಗಳಿಂದ ತೀವ್ರ ಮಾನಸಿಕ ಗೊಂದಲಕ್ಕೆ ಒಳಗಾಗಿದ್ದೆ ಎಂದು ಹೇಳಿದರು. 'ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಧ್ವನಿ ಮುದ್ರಿಕೆಯೊಂದನ್ನು ನನಗೆ ನೀಡಿದ್ದಾರೆ ಮತ್ತು ಅದರಲ್ಲಿ ನನಗೆ ದೊಡ್ಡ ಮೊತ್ತವೊಂದನ್ನು ಸಂದಾಯ ಮಾಡುವ ಕುರಿತು ಈ ಸದನದ ಗೌರವಾನ್ವಿತ ಸದಸ್ಯರೊಬ್ಬರ ಧ್ವನಿಯೆಂದು ಹೇಳಲಾಗುವ ವ್ಯಕ್ತಿಯು ಪ್ರಸ್ತಾಪ ಮಾಡಿರುವ ವಿಷಯ ನನ್ನ ಗಮನಕ್ಕೆ ಬಂದಿರುತ್ತದೆ.'

ಈ ಪ್ರಕರಣ ನನ್ನ ಗಮನಕ್ಕೆ ಬಂದ ಬಳಿಕ ನಾನು ತೀವ್ರ ಗೊಂದಲಕ್ಕೆ ಸಿಲುಕಿದೆ. ಮತ್ತೆ ಎರಡು ದಿನಗಳ ಕಾಲ ಸದನಕ್ಕೆ ಬಿಡುವು ಇದ್ದ ಕಾರಣ ಆ ಎರಡು ದಿನಗಳನ್ನು ಕಳೆಯುವುದು ನನಗೆ ಬಹಳ ಕಷ್ಟವೆಣಿಸಿತು. ಇವತ್ತು ಸದನ ಪ್ರಾರಂಭಗೊಂಡ ತಕ್ಷಣ ನನ್ನ ಮನಸ್ಸಿನಲ್ಲಿದ್ದ ಭಾವನೆಗಳನ್ನು ಸದನ ಸದಸ್ಯರ ಮುಂದೆ ಹಂಚಿಕೊಳ್ಳುವವರೆಗೆ ನನ್ನ ಮನಸ್ಸಿಗೆ ಸಮಾಧಾನವಿಲ್ಲ. ಹಾಗಾಗಿ ಇವತ್ತಿನ ಈ ಸದನ ಪ್ರಾರಂಭದ ಅವಧಿಯಲ್ಲಿ ಮೊದಲಿಗೆ ನಾನೇ ಮಾತನಾಡುತ್ತಿದ್ದೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ಅವರು ಹೇಳಿದರು. ಈ ಸಂದರ್ಭದಲ್ಲಿ ರಮೇಶ್ ಕುಮಾರ್ ಅವರು ತಮ್ಮ ತಾಯಿಯನ್ನು ನೆನಪಿಸಿಕೊಂಡು ಭಾವುಕರಾದ ಘಟನೆಯೂ ನಡೆಯಿತು.

ಇಷ್ಟು ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ನಾನು ಪ್ರಾಮಾಣಿಕವಾಗಿಯೇ ಬದುಕಿದ್ದೇನೆ. ಮತ್ತು ಅಸಹಾಯಕರ ಪಾಲಿಗೆ ಸಮಾಧಾನ ವಹಿಸುವ ಕೆಲಸವನ್ನಷ್ಟೇ ನಾನು ಇದುವರೆಗೂ ಮಾಡುತ್ತಿದ್ದೇನೆ. ಮತ್ತು ಪಕ್ಷಾತೀತವಾಗಿ ಉತ್ತಮ ಸಂಸದೀಯಪಟುಗಳನ್ನು ಗುರುತಿಸುವ ಮತ್ತು ಗೌರವಿಸುವ ಕಾರ್ಯವನ್ನಷ್ಟೇ ಮಾಡುತ್ತಾ ಬಂದಿದ್ದೇನೆ ಎಂದವರು ಭಾವುಕರಾಗಿ ಹೇಳಿದರು.

ಈ ಸಂದರ್ಭದಲ್ಲಿ ಸ್ಪೀಕರ್ ಮಾತಿಗೆ ಮಧ್ಯಪ್ರವೇಶಿಸಿದ ಸಚಿವ ಕೃಷ್ಣ ಭೈರೇಗೌಡ ಅವರು ಮಾತನಾಡಿ ಸದನದ ಸದಸ್ಯರೆನ್ನಲಾಗಿರುವ ವ್ಯಕ್ತಿಯೊಬ್ಬರು ಸ್ಪೀಕರ್ ಅವರ ಮೇಲೆ ಹಣ ಪಡೆದುಕೊಂಡಿರುವ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂಬ ಅಂಶವು ಇದು ಕೇವಲ ಸಭಾದ್ಯಕ್ಷರಾಗಿ ನಿಮ್ಮ ಮೇಲೆ ಮಾತ್ರ ಬಂದಿರುವ ಆರೋಪವಲ್ಲ ; ಇದು ಸದನದ ಸದಸ್ಯರ ಹಕ್ಕುಚ್ಯುತಿಯಾಗಿದೆ ಹಾಗಾಗಿ ಗೌರವಾನ್ವಿತ ಸದನದ ಸದಸ್ಯನಾಗಿ ನನ್ನ ಹಕ್ಕಿಗೂ ಚ್ಯುತಿ ತರುವ ಘಟನೆ ಇದಾಗಿದೆ ಹಾಗಾಗಿ ಇದರ ಬಗ್ಗೆ ಕಠಿಣ ಕ್ರಮವನ್ನು ನೀವು ತೆಗೆದುಕೊಳ್ಳಬೇಕು ಎಂದು ಸ್ಪೀಕರ್ ಅವರಿಗೆ ಮನವಿ ಮಾಡಿದರು.


Trending videos

Back to Top