CONNECT WITH US  

ಬಿಎಸ್‌ವೈ ಕಟ್ಟಿ ಹಾಕುವಲ್ಲಿ ಕೈ-ದಳ ಯಶಸ್ವಿ

ವ್ಯವಸ್ಥಿತವಾಗಿ ಹೆಣೆದ ಕಾರ್ಯತಂತ್ರ, ಅಪರಾಧಿ ಸ್ಥಾನದಲ್ಲಿ ಯಡಿಯೂರಪ್ಪ

ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನಗೊಳಿಸುವ ಪ್ರಯತ್ನವಾಗಿ ಯಡಿಯೂರಪ್ಪ ನಡೆಸಿದರೆನ್ನಲಾದ ಆಡಿಯೋ ಸಂಭಾಷಣೆ 'ಅಸ್ತ್ರ' ಮೂಲಕ ಆಪರೇಷನ್‌ ಕಮಲ ಕಾರ್ಯಾಚರಣೆಗೆ ತಕ್ಷಣದ ಮಟ್ಟಿಗೆ ಬ್ರೇಕ್‌ ಹಾಕುವಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಯಶಸ್ವಿಯಾದಂತಾಗಿದೆ.

ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಅದರಲ್ಲೂ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ ಆಡಿಯೋ 'ಬಾಂಬ್‌' ಸಂಸತ್‌ನಲ್ಲೂ ಪ್ರಸ್ತಾಪವಾಗಿ ರಾಷ್ಟ್ರಮಟ್ಟದಲ್ಲೂ ಬಿಜೆಪಿಗೆ ಮುಜುಗರ ಉಂಟು ಮಾಡುವ ಎರಡೂ ಪಕ್ಷಗಳ ಉದ್ದೇಶವೂ ಈಡೇರಿದಂತಾಗಿದೆೆ.

ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದಲೂ ಇಂಥದ್ದೊಂದು ಸಮಯಕ್ಕೆ ಕಾಯುತ್ತಿದ್ದ ಜೆಡಿಎಸ್‌-ಕಾಂಗ್ರೆಸ್‌, ಆಡಿಯೋ ಪ್ರಕರಣದಲ್ಲಿ ಸರ್ಕಾರ ಉಳಿಸಿಕೊಳ್ಳುವ ಜತೆಗೆ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ನೀಡಲು ಕಾರ್ಯತಂತ್ರ ರೂಪಿಸಿದೆ. ಇದರ ಭಾಗವಾಗಿಯೇ ಸೋಮವಾರ ಸದನದಲ್ಲಿ ವಿಷಯ ಪ್ರಸ್ತಾಪಿಸಿ ಎಸ್‌ಐಟಿ ತನಿಖೆಗೆ ಪ್ರಕರಣ ಒಪ್ಪಿಸುವಂತೆ ನೋಡಿಕೊಂಡಿದೆ. ಇದು ಮುಂದಿನ ದಿನಗಳಲ್ಲಿ ಯಾರ್ಯಾರ ಕೊರಳಿಗೆ ಉರುಳಾಗುವುದೋ ಎಂಬುದು ಕುತೂಹಲ ಮೂಡಿಸಿದೆ.

ಜತೆಗೆ, ಸಮ್ಮಿಶ್ರ ಸರ್ಕಾರ ಪತನಗೊಳಿಸುವ ವಿಚಾರದಲ್ಲಿ ಒಲ್ಲದ ಮನಸ್ಸು ಹೊಂದಿದ್ದ ಬಿಜೆಪಿ ಶಾಸಕರಿಗೆ ಗಾಳ ಹಾಕಲಾಗಿದೆ. ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ರಿವರ್ಸ್‌ ಆಪರೇಷನ್‌ ಸಾಧ್ಯತೆಯೂ ಇಲ್ಲದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ವ್ಯವಸ್ಥಿತ ಕಾರ್ಯತಂತ್ರ: ಆಡಿಯೋ ಪ್ರಕರಣ ರಾಜಕೀಯವಾಗಿ ಯಾವ ಹಂತಕ್ಕೆ ತೆಗೆದುಕೊಂಡು ಹೋಗಬೇಕೆಂಬ ಬಗ್ಗೆ ಭಾನುವಾರ ಇಡೀ ದಿನ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಸುದೀರ್ಘ‌ ಸಮಾಲೋಚನೆ ನಡೆಸಿದ್ದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸೇರಿ ಎಲ್ಲರ ಜತೆ ಮಾತನಾಡಿಯೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಸ್ತ್ರ ಸಿದ್ಧಪಡಿಸಿಕೊಂಡಿದ್ದರು.

ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಗಮನಕ್ಕೂ ವಿಷಯ ತರಲಾಗಿತ್ತು. ಸಂಸತ್‌ನಲ್ಲಿ ವಿಷಯ ಪ್ರಸ್ತಾಪಿಸಿ ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಮುಜುಗರ‌ ಉಂಟುಮಾಡುವಂತೆ ಕಾಂಗ್ರೆಸ್‌ ಹೈಕಮಾಂಡ್‌ ಸಹ ಸೂಚಿಸಿತ್ತು ಎಂದು ಮೂಲಗಳು ತಿಳಿಸಿವೆ.

ಹೀಗಾಗಿಯೇ ಎಲ್ಲರೂ ವಿಷಯದ ಬಗ್ಗೆ ಮಾತನಾಡದೆ ಸೋಮವಾರ ಸದನದಲ್ಲಿ ಕೃಷ್ಣ ಬೈರೇಗೌಡ, ದಿನೇಶ್‌ ಗುಂಡೂರಾವ್‌, ಎಚ್.ಕೆ.ಪಾಟೀಲ್‌ ಸೇರಿ ಕೆಲವರಿಗೆ ಸೂಚನೆ ನೀಡಲಾಗಿತ್ತು. ಸ್ಪೀಕರ್‌ ವಿರುದ್ಧದ ಆಪಾದನೆ ವಿಷಯ ಪ್ರಮುಖವಾಗಿಟ್ಟುಕೊಂಡು ತನಿಖೆಗೆ ಒತ್ತಾಯಿಸಿ ಇಡೀ ಪ್ರಕರಣ ಅದರ ವ್ಯಾಪ್ತಿಗೆ ತರುವುದು. ಬಿಜೆಪಿಯಲ್ಲೂ ಯಡಿಯೂರಪ್ಪ ಅವರನ್ನು ಏಕಾಂಗಿಯಾಗಿಸುವುದು ಕಾರ್ಯತಂತ್ರದ ಭಾಗವಾಗಿತ್ತು ಎಂದು ಹೇಳಲಾಗಿದೆ.

ಇಡೀ ಪ್ರಹಸನದಲ್ಲಿ ಬಿಜೆಪಿ ಹಾಗೂ ಯಡಿಯೂರಪ್ಪ ಅವರನ್ನು ವಿಲನ್‌ನಂತೆ ಬಿಂಬಿಸುವಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಯಶಸ್ಸು ಸಾಧಿಸಿವೆ. ಈ ಪ್ರಕರಣದಿಂದ ಹೊರಬರಲು ಹಾಗೂ ತಮ್ಮ ಇಮೇಜ್‌ ಕಾಪಾಡಿಕೊಳ್ಳಲು ಬಿಜೆಪಿ ಯಾವ 'ಬಾಣ' ಪ್ರಯೋಗಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

ಬಿಎಸ್‌ವೈಗೆ ತಾಕೀತು
ಲೋಕಸಭೆ ಚುನಾವಣೆ ಮುಗಿಯುವವರೆಗೂ ಆಪರೇಷನ್‌ ಕಮಲ ತಂಟೆಗೆ ಹೋಗದಿರಿ. ಎರಡೂ ಪಕ್ಷಗಳ ಆಂತರಿಕ ಕಚ್ಚಾಟದಿಂದಲೇ ಸರ್ಕಾರ ಅಸ್ಥಿರವಾಗಬಹುದು. ನೀವು ಪ್ರತಿಪಕ್ಷವಾಗಿ ಜವಾಬ್ದಾರಿಯುತವಾಗಿ ಕೆಲಸ ಮಾಡಿ ಲೋಕಸಭೆ ಚುನಾವಣೆಗೆ ಹೆಚ್ಚು ಸೀಟು ಗೆಲ್ಲುವತ್ತ ಗಮನಹರಿಸಿ ಎಂದು ಬಿಜೆಪಿ ಕೇಂದ್ರ ನಾಯಕರು ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದ್ದಾರೆ. ಹುಬ್ಬಳ್ಳಿಗೆ ಬಂದಿದ್ದ ಪ್ರಧಾನಿ ನರೇಂದ್ರಮೋದಿ ಸಹ ರಾಜ್ಯದ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆದು ಬೇಸರ ಹೊರಹಾಕಿದ್ದರು. ಹೀಗಾಗಿಯೇ ಆಪರೇಷನ್‌ ಕಮಲ ಕಾರ್ಯಾಚರಣೆಯ ಆಡಿಯೋ ಪ್ರಕರಣದಿಂದ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನ್ನಡೆಯುಂಟಾಗದಂತೆ ಎಚ್ಚರಿಕೆ ವಹಿಸಿ ಎಂದು ತಾಕೀತು ಮಾಡಿದ್ದಾರೆಂದು ಮೂಲಗಳು ತಿಳಿಸಿವೆ.

- ಎಸ್‌. ಲಕ್ಷ್ಮಿನಾರಾಯಣ


Trending videos

Back to Top