CONNECT WITH US  

ಪೊಲೀಸರಿಗೆ ಬರೀ ಕಷ್ಟ ಪರಿಹಾರ ಭತ್ಯೆ ಭಾಗ್ಯ

ಗೃಹ-ಆರ್ಥಿಕ ಇಲಾಖೆಗಳ ಸಂಘರ್ಷದಿಂದ ಕನಸು ಭಗ್ನ

ಸಾಂದರ್ಭಿಕ ಚಿತ್ರ.

ಬೆಂಗಳೂರು: ರಾಜ್ಯ ಬಜೆಟ್‌ನಲ್ಲಿ ಪೊಲೀಸ್‌ ಪೇದೆಗಳಿಗೆ ಘೋಷಿಸಿರುವ ಕಷ್ಟ ಪರಿಹಾರ ಭತ್ಯೆ 69,785 ಮಂದಿಗೆ ದೊರೆಯಲಿದ್ದು, ಔರಾದ್ಕರ್‌ ಸಮಿತಿ ಶಿಫಾರಸ್ಸಿನಂತೆ ಇಡೀ ಇಲಾಖೆಯ ಸಿಬ್ಬಂದಿಯ ವೇತನ ಪರಿಷ್ಕರಣೆಯಾಗಬೇಕಿತ್ತಾ ದರೂ ಗೃಹ ಇಲಾಖೆ ಹಾಗೂ ಹಣಕಾಸು ಇಲಾಖೆ ನಡುವಿನ ಸಂಘರ್ಷದಿಂದ 'ಕಷ್ಟ ಪರಿಹಾರ ಭತ್ಯೆ' ಭಾಗ್ಯವಷ್ಟೇ ಸಿಕ್ಕಂತಾಗಿದೆ.

ಈ ಮೊದಲು ವೈದ್ಯಕೀಯ, ಆಹಾರ, ಸಮವಸ್ತ್ರ, ಕಷ್ಟ ಪರಿಹಾರ ಭತ್ಯೆ ಹಾಗೂ ಇತರೆ ಸೌಲಭ್ಯ ಸೇರಿ ಎರಡು ಸಾವಿರ ರೂ.ಗಳನ್ನು ಕಾನ್‌ಸ್ಟೇಬಲ್‌ ಹಂತದಿಂದ ಸಬ್‌ ಇನ್‌ಸ್ಪೆಕ್ಟರ್‌ವರೆಗೆ ನೀಡಲಾಗುತ್ತಿತ್ತು. ಆದರೆ, ಈ ಬಾರಿಯ ಬಜೆಟ್‌ನಲ್ಲಿ ಪೊಲೀಸ್‌ ಪೇದೆಗಳಿಗೆ 'ಕಷ್ಟ ಪರಿಹಾರ ಭತ್ಯೆ' ಹೆಚ್ಚಳ ಎಂದು ಉಲ್ಲೇಖೀಸಿರುವುದರಿಂದ ಈ ಸೌಲಭ್ಯ ಪೇದೆ ಹಾಗೂ ಮುಖ್ಯಪೇದೆ ಹಂತದ ಸಿಬ್ಬಂದಿಗೆ ಮಾತ್ರ ದೊರೆಯಲಿದೆ. ಐಪಿಎಸ್‌ ಅಧಿಕಾರಿಗಳ ಮನೆಗಳಲ್ಲಿ ಕೆಲಸ ಮಾಡುವ ಆರ್ಡರ್ಲಿ(ಅನುಯಾಯಿಗಳು)ಗಳಿಗೆ ಅನ್ವಯವಾಗುವುದಿಲ್ಲ.

ಪ್ರಸ್ತುತ ಪೊಲೀಸ್‌ ಪೇದೆಗೆ ಎಲ್ಲ ರೀತಿಯ ಭತ್ಯೆ ಸೇರಿ 28,000 ರೂ.ವರೆಗೆ, ಮುಖ್ಯ ಪೇದೆಗೆ 38,000 ರೂ. ವೇತನ ಸಿಗುತ್ತಿದ್ದು, ಬಜೆಟ್‌ನಲ್ಲಿ ಘೋಷಣೆಯಿಂದ ಒಂದು ಸಾವಿರ ರೂ. ಮಾತ್ರ ಹೆಚ್ಚಳವಾಗಲಿದೆ. ಆದರೆ, ಔರಾದ್ಕರ್‌ ಸಮಿತಿ ಶೇ. 30 ರಿಂದ 35 ರಷ್ಟು ವೇತನ ಪರಿಷ್ಕರಣೆಗೆ ಶಿಫಾರಸು ಮಾಡಿತ್ತು. ಆದರೆ, ಬಜೆಟ್‌ನಲ್ಲಿ ವೇತನ ಪರಿಷ್ಕರಣೆಯಾಗಿಲ್ಲ.

ಸಂಘರ್ಷ: ಮುಖ್ಯಮಂತ್ರಿಯವರು ಔರಾದ್ಕರ್‌ ಸಮಿತಿ ವರದಿ ಜಾರಿಗೆ ಒಪ್ಪಿದ್ದರೂ ಗೃಹ ಇಲಾಖೆಯಲ್ಲಿನ ಅಧಿಕಾರಿಗಳ ಆಂತರಿಕ ಸಂಘರ್ಷದಿಂದ ಸಕಾಲದಲ್ಲಿ ಸ್ಪಷ್ಟ ಮಾಹಿತಿ ಸಲ್ಲಿಕೆಯಾಗದಿರುವುದ ರಿಂದ ಬಜೆಟ್‌ನಲ್ಲಿ ತೀರ್ಮಾನ ಪ್ರಕಟವಾಗಿಲ್ಲ ಎಂಬ ಅಸಮಾಧಾನ ಪೊಲೀಸ್‌ ವಲಯದಲ್ಲಿ ಕೇಳಿಬರುತ್ತಿದೆ.

ಆದರೆ, ಸಾವಿರಾರು ಪೊಲೀಸ್‌ ಸಿಬ್ಬಂದಿಯ ವೇತನ ಹೆಚ್ಚಳ ಮಾಡುವುದರಿಂದ ಸರ್ಕಾರಕ್ಕೆ ಮಾಸಿಕ ನೂರಾರು ಕೋಟಿ ರೂ. ಹೊರೆಯಾಗುತ್ತದೆ. ಜತೆಗೆ ಸಮಾನ ವೇತನ, ಸಮಾನ ಶ್ರೇಣಿಗೆ ಅನುಗುಣವಾಗಿ ಸಂಬಳ ನಿಗದಿ ಮಾಡುವುದು ಕಷ್ಟದಾಯಕ. ಹೀಗಾಗಿ ಪ್ರಸ್ತುತ ಔರಾದ್ಕರ್‌ ವರದಿಯ ಶಿಫಾರಸನ್ನು ಕೈಬಿಟ್ಟು 'ಕಷ್ಟ ಪರಿಹಾರ ಭತ್ಯೆ' ಹೆಚ್ಚಳ ಮಾಡುವುದು ಒಳಿತು ಎಂದು ಹಣಕಾಸು ಇಲಾಖೆಯ ಉನ್ನತ ಅಧಿಕಾರಿಗಳು ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ವೇತನ ಹೆಚ್ಚಳ ಮಾಡದೆ, ಭತ್ಯೆಯನ್ನಷ್ಟೇ ಏರಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜಿ.ಪರಮೇಶ್ವರ್‌ ಅವರು ಈ ಹಿಂದೆ ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಹೆಚ್ಚು ಆಸಕ್ತಿ ವಹಿಸಿ, ವೇತನ ಪರಿಷ್ಕರಣೆ ಕುರಿತು ಸಂಪೂರ್ಣ ಮಾಹಿತಿ ಪರಿಶೀಲಿಸಿ ಮುಖ್ಯಮಂತ್ರಿಗಳಿಗೂ ಸಲ್ಲಿಸಿದ್ದರು. ಈ ವೇಳೆ ಗೃಹ, ಪೊಲೀಸ್‌ ಇಲಾಖೆಯಲ್ಲಾಗಲಿ, ಹಣ ಕಾಸು ಇಲಾಖೆಯಲ್ಲಾಗಲಿ ಯಾವುದೇ ಗೊಂದಲ ಗಳಿರಲಿಲ್ಲ. ಇದೀಗ ಏಕಾಏಕಿ ಗೊಂದಲ ಸೃಷ್ಟಿಯಾ ಗಿರುವುದು ಯಾಕೆ? ಯಾರು ಗೊಂದಲ ಮಾಡು ತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಗೃಹ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಸಿಬ್ಬಂದಿ ಕೊರತೆ
ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಐಪಿಎಸ್‌ ಅಧಿಕಾರಿಗಳು ಸೇರಿ 1,08,069 ಮಂದಿ ನೇಮಕಾತಿಗೆ ಮಂಜೂರಾತಿ ದೊರಕಿದ್ದು, 148 ಐಪಿಎಸ್‌ ಅಧಿಕಾರಿಗಳು ಸೇರಿ 83,125 ಸಿಬ್ಬಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 25,944 ಮಂದಿ ಸಿಬ್ಬಂದಿ ಕೊರತೆ ಇದೆ.

- ಮೋಹನ್‌ ಭದ್ರಾವತಿ


Trending videos

Back to Top