CONNECT WITH US  

ಕಲಾಪದಿಂದ ಹೊರಗುಳಿಯಲು ತೀರ್ಮಾನ

ಬೆಂಗಳೂರು: "ವಕೀಲರ ರಕ್ಷಣೆ ಕಾಯ್ದೆ'ಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತರಲು ಒತ್ತಾಯಿಸಿ ಭಾರತೀಯ ವಕೀಲರ ಪರಿಷತ್‌ (ಬಾರ್‌ ಕೌನ್ಸಿಲ್‌ ಆಫ್ ಇಂಡಿಯಾ) ಫೆ.12ರಂದು ನಡೆಸಲಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ಬೆಂಬಲಿಸಿ ಮಂಗಳವಾರ ಕೋರ್ಟ್‌ ಕಲಾಪಗಳಿಂದ ಹೊರಗುಳಿಯಲು ಬೆಂಗಳೂರು ವಕೀಲರ ಸಂಘ ತೀರ್ಮಾನಿಸಿದೆ.

ಈ ಕುರಿತು ಸೋಮವಾರ ನಡೆದ ಸಂಘದ ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಭಾರತೀಯ ವಕೀಲರ ಪರಿಷತ್‌ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ವಕೀಲರ ಸಂಘವು ಫೆ.12ರಂದು ನ್ಯಾಯಾಲಯಗಳ ಕಲಾಪಗಳಿಂದ ಹೊರಗುಳಿದು ಪ್ರತಿಭಟಿಸಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಸಿಟಿ ಸಿವಿಲ್‌ ಕೋರ್ಟ್‌ನಿಂದ ಕೆ.ಆರ್‌. ಸರ್ಕಲ್‌, ಹೈಕೋರ್ಟ್‌ ಮಾರ್ಗವಾಗಿ ಶಾಂತಿಯುತ ಮೆರವಣಿಗೆಯ ಮೂಲಕ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು.

ಇದೇ ವೇಳೆ ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ವಕೀಲರ ಸಂಘಗಳಿಗೂ ಸಹ ಮಂಗಳವಾರ (ಫೆ.12) ಕೋರ್ಟ್‌ ಕಲಾಪಗಳಿಂದ ಹೊರಗುಳಿದು ಪ್ರತಿಭಟನೆ ನಡೆಸುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Trending videos

Back to Top