CONNECT WITH US  

ಕನ್ನಡಕ್ಕೆ ಕ್ಲಾಸ್‌ ನಿರ್ದೇಶಕರು ಬೇಕು

ನಟರಾಗಿ ಬಂದು ನಿರ್ದೇಶಕರಾಗಿ ಈಗ ನಿರ್ಮಾ ಪಕರೂ ಆಗಿರುವ ರಕ್ಷಿತ್‌ ಶೆಟ್ಟಿ ಈಗ "ಕಿರಿಕ್‌' ಧ್ಯಾನದಲ್ಲಿದ್ದಾರೆ. "ಕಿರಿಕ್‌ ಪಾರ್ಟಿ' ಮೂಲಕ ಮತ್ತೂಮ್ಮೆ ಯೂತ್ಸ್ ಸೆಳೆಯಲು ಹೊರಟಿರುವ ರಕ್ಷಿತ್‌ಗೆ ಆ ಸಿನಿಮಾ ಬಗ್ಗೆ ನಿರೀಕ್ಷೆ ಇದೆ. ಸದ್ಯ ಚಿತ್ರದ ಟ್ರೇಲರ್‌ ಹಾಗೂ ಹಾಡುಗಳು ಸೌಂಡ್‌ ಮಾಡುತ್ತಿದ್ದು, ಆ ಸೌಂಡಿನ ಬಗ್ಗೆ ರಕ್ಷಿತ್‌ ಮಾತನಾಡಿದ್ದಾರೆ.... 

ನಿಮ್ಮ "ಕಿರಿಕ್‌' ಸೌಂಡ್‌ ಜೋರಾಗಿದೆ?
- ಹೌದು, ಸಿನಿಮಾದ ಟ್ರೇಲರ್‌ಗೆ ಎಲ್ಲಾ ಕಡೆಯಿಂದಲೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಟ್ರೇಲರ್‌ನಲ್ಲಿ ಹೊಸತನವಿದೆ ಎಂದು ಮೆಚ್ಚುಗೆ ಸೂಚಿಸಿದರು. ಈಗ ಬಿಟ್ಟಿರುವ ಚಿತ್ರದ ಹಾಡನ್ನು ಕೂಡಾ ಇಷ್ಟಪಟ್ಟಿದ್ದಾರೆ. "ತಿಬೋìಕಿ ಜೀವನ' ಹಾಡು ಬಿಡುಗಡೆ ಮಾಡಿದ ಎರಡೇ ದಿನಕ್ಕೆ ಅದನ್ನು ನೋಡಿದವರ ಸಂಖ್ಯೆ ಲಕ್ಷ ದಾಟಿದೆ. ಪಕ್ಕಾ ಯೂತ್‌ಫ‌ುಲ್‌ ಆಗಿರುವ ಹಾಡಿದು.

ಏನಿದು "ಕಿರಿಕ್‌ ಪಾರ್ಟಿ'?
- ಪಕ್ಕಾ ಯೂತ್‌ಫ‌ುಲ್‌ ಸಿನಿಮಾ. ಇಂಜಿನಿಯರಿಂಗ್‌ ಕಾಲೇಜೊಂದರಲ್ಲಿ ನಡೆಯುವ ಕಥೆ. ಫ‌ಸ್ಟ್‌ ಇಯರ್‌ನಿಂದ ಫೈನಲ್‌ ಇಯರ್‌ವರೆಗಿನ ವಿದ್ಯಾರ್ಥಿಗಳ ನಡುವೆ ನಡೆಯುವ ಕಥೆ. ನಾನು ಕೂಡಾ ಇಂಜಿನಿಯರಿಂಗ್‌ ಓದಿರುವುದರಿಂದ ಇದು ನನ್ನ ಅನುಭವ ಎಂದರೆ ತಪ್ಪಲ್ಲ. "ಉಳಿದವರು ಕಂಡಂತೆ' ಮೊದಲೇ ಈ ಕಥೆಯನ್ನು ನಾನು ಸಿದ್ಧಪಡಿಸಿದ್ದೆ. ಆದರೆ, ಕಾರಣಾಂತರಗಳಿಂದ ಬದಿಗಿಟ್ಟು ಆ ಸಿನಿಮಾ ಮಾಡಿದೆ. ಈಗ ಗೆಳೆಯ ರಿಷಭ್‌ ನಿರ್ದೇಶಿಸಿದ್ದಾನೆ.

ಸಿನಿಮಾಕ್ಕೆ "ಕಿರಿಕ್‌ ಪಾರ್ಟಿ' ಟೈಟಲ್‌ ಹೇಗೆ ಸೂಕ್ತ?
- ಕಾಲೇಜು ಎಂದ ಮೇಲೆ ಅಲ್ಲಿ ವಿದ್ಯಾರ್ಥಿಗಳ ನಡುವೆ ಕಿರಿಕ್‌ ಆಗೋದು ಸಹಜ. ನಮ್ಮ ಸಿನಿಮಾ ಕಾಲೇಜು ಬ್ಯಾಕ್‌ಡ್ರಾಪ್‌ನಲ್ಲಿ ನಡೆಯೋದರಿಂದ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಅದಕ್ಕಿಂತ ಹೆಚ್ಚಾಗಿ ದಿನನಿತ್ಯ ಕೂಡಾ "ಕಿರಿಕ್‌' ಎಂಬ ಪದವನ್ನು ಬಳಸುತ್ತಲೇ ಇರುತ್ತವೆ. ಚಿತ್ರಕ್ಕೆ ಕ್ಯಾಚಿ ಟೈಟಲ್‌ ಬೇಕೆಂಬ ಕಾರಣಕ್ಕೆ ಅದನ್ನೇ ಇಟ್ಟೆವು.

ಮೊದಲ ಬಾರಿಗೆ ನಿರ್ಮಾಣ ಕೂಡಾ ಮಾಡಿದ್ದೀರಿ?
- ಮೊದಲೇ ಹೇಳಿದಂತೆ "ಕಿರಿಕ್‌ ಪಾರ್ಟಿ ಕಥೆಯನ್ನು ನಾನು "ಉಳಿದವರು ಕಂಡಂತೆ' ಮುಂಚೆಯೇ ಬರೆದಿದ್ದೆ. ಆಗ ನಿರ್ಮಾಪಕರು ಸಿಗಲಿಲ್ಲ ಎಂಬ ಕಾರಣಕ್ಕೆ ಬದಿಗಿಟ್ಟಿದ್ದೆ. ಆದರೆ ಯಾವತ್ತಿಗಾದರೂ ಆ ಕಥೆಯನ್ನು ಸಿನಿಮಾ ಮಾಡಬೇಕೆಂಬ ಆಸೆ ಇತ್ತು. ಈ ಸಿನಿಮಾವನ್ನು ಆರಂಭಿಸಲು ಯೋಚಿಸಿದಾಗ ನಿರ್ಮಾಣವನ್ನೂ ನಾವೇ ಮಾಡುವ ಎಂದು ನಿರ್ಧರಿಸಿದೆವು. ಅದಕ್ಕೆ ಕಾರಣ ಫ್ರೀಡಂ. ಕಥೆ ತುಂಬಾ ಭಿನ್ನವಾಗಿದೆ. ಈ ಕಥೆಯನ್ನು ನಮಗೆ ಬೇಕಾದಂತೆ ಮಾಡಬೇಕಾದರೆ ನಾವೇ ನಿರ್ಮಾಣ ಮಾಡಬೇಕೆಂದು ತೀರ್ಮಾನಿಸಿದೆವು. ನಮ್ಮ ಬ್ಯಾನರ್‌ನಡಿ ಸಿನಿಮಾ ಮಾಡಿದರೂ ನಾನು ನಿರ್ಮಾಣದಲ್ಲಿ ಹೆಚ್ಚು ಇನ್ವಾಲ್‌ ಆಗಿಲ್ಲ. ಗೆಳೆಯರು ನಿರ್ಮಾಣದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು. 

"ಕಿರಿಕ್‌ ಪಾರ್ಟಿ' ಮೂಲಕ ಕೊರಿಯೋಗ್ರಾಫ‌ರ್‌ ಕೂಡಾ ಆಗಿದ್ದೀರಿ?
- ಚಿತ್ರದ ಎಂಟು ಹಾಡುಗಳನ್ನು  ಕೊರಿಯೋಗ್ರಾಫ್ ಮಾಡಿದ್ದೇನೆ. ಕೊರಿಯೋಗ್ರಾಫ್ ಎಂದಾಕ್ಷಣ ಇಲ್ಲಿ ಭರ್ಜರಿ ಡ್ಯಾನ್ಸ್‌ ಇದೆ ಎಂದಲ್ಲ. ಸನ್ನಿವೇಶಕ್ಕನುಗುಣವಾಗಿ ಈ ಹಾಡುಗಳನ್ನು ಚಿತ್ರೀಕರಿಸಿದ್ದೇನೆ. ಪ್ರತಿ ಹಾಡು ಕೂಡಾ ಸಿನಿಮಾದ ಕಥೆಯನ್ನು ಹೇಳುವಂಥದ್ದು. ಹಾಗಾಗಿ ಆ ಹಾಡುಗಳು ಹೀಗೆಯೇ ಮೂಡಿಬರಬೇಕೆಂಬ ಆಸೆ ನನಗಿತ್ತು. ಈಗ ಅದರಂತೆ ಆಗಿದೆ ಕೂಡಾ. 

ನಿಮ್ಮ ಕಥೆಯ ಆಯ್ಕೆ ಹೇಗೆ?
- ಚಿತ್ರೀಕರಣಕ್ಕೆ ಹೋಗುವ ಮುನ್ನ ಸ್ಕ್ರಿಪ್ಟ್ ಫೈನಲ್‌ ಆದರೆ ಆ ನಂತರ ತಾಂತ್ರಿಕವಾಗಿ ಏನು ಬೇಕಾದರೂ ಮಾಡಬಹುದೆಂಬ ನಂಬಿಕೆ ನನ್ನದು. ಹಾಗಾಗಿ, ಕಥೆ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುತ್ತೇನೆ. ನಮ್ಮದೊಂದು ತಂಡವಿದೆ. ಏಳು ಮಂದಿ ಬರಹಗಾರರ ಆ ತಂಡದಲ್ಲಿ ಕಥೆಯ ಬಗ್ಗೆ ಚರ್ಚಿಸುತ್ತೇವೆ. ಆಗ ಹೊಸ ಹೊಸ ಅಂಶಗಳು ಹೊಳೆಯುತ್ತವೆ ಕೂಡಾ. ನನಗೆ ಯಾರಾದರೂ ಕಥೆ ಹೇಳಿದರೂ ನಾನು ಅದನ್ನು ನನ್ನ ತಂಡದ ಜೊತೆ ಡಿಸ್ಕಸ್‌ ಮಾಡುತ್ತೇನೆ. ಆ ಕಥೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸುತ್ತೇವೆ. 

ರಕ್ಷಿತ್‌ ಶೆಟ್ಟಿ ಕ್ಲಾಸ್‌ ಹೀರೋ ಆಗಿಯಷ್ಟೇ ಗುರುತಿಸಿಕೊಳ್ಳುತ್ತಿದ್ದಾರೆ?
- ನನಗೆ ಕ್ಲಾಸ್‌ -ಮಾಸ್‌ ಅನ್ನೋದಕ್ಕಿಂತ ಹೊಸ ತರಹದ ಕಥೆ, ಸಿನಿಮಾ ಇಷ್ಟ. ಲಾಜಿಕ್‌ ಇಲ್ಲದ ಕಮರ್ಷಿಯಲ್‌ ಸಿನಿಮಾಗಳಲ್ಲಿ ಮಾಡಲು ನನಗೆ ಇಷ್ಟವಿಲ್ಲ. ಅದಕ್ಕಿಂತ ಜಾಸ್ತಿ ಕಮರ್ಷಿಯಲ್‌ ಸಿನಿಮಾ ಮಾಡಲು ದೊಡ್ಡ ಬಜೆಟ್‌, ದೊಡ್ಡ ಆಡಿಯನ್ಸ್‌ ಬಳಗ ಕೂಡಾ ಬೇಕು. ನನಗೆ ಸದ್ಯ ಮಾಸ್‌ಗಿಂತ ಕ್ಲಾಸ್‌ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಖುಷಿ ಇದೆ. "ಕಿರಿಕ್‌ ಪಾರ್ಟಿ' ಮೂಲಕ "ಬಿ', "ಸಿ' ಸೆಂಟರ್‌ಗಳನ್ನೂ  ತಲುಪುವ ಭರವಸೆ ಇದೆ.

ಇತ್ತೀಚೆಗೆ ಬಂದ ಹೊಸಬರ ಸಿನಿಮಾ ನೋಡುತ್ತಿದ್ದೀರ?
- ಚಿತ್ರರಂಗಕ್ಕೆ ಬರುತ್ತಿರುವ ಸಾಕಷ್ಟು ಮಂದಿ ಹೊಸಬರು ಹೊಸ ಚಿಂತನೆಗಳೊಂದಿಗೆ ಸಿನಿಮಾ ಮಾಡುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ "ರಾಮಾ ರಾಮಾ ರೇ' ಒಂದು ವಿಭಿನ್ನ ಪ್ರಯೋಗದ ಚಿತ್ರವಾಗಿ ಗುರುತಿಸಿಕೊಂಡಿತು. ಕನ್ನಡದಲ್ಲಿ ಹತ್ತಾದರೂ ಕ್ಲಾಸ್‌ ಸಿನಿಮಾ ಡೈರೆಕ್ಟರ್ ಬೇಕು. ಆಗ ಕ್ಲಾಸ್‌ ಆಡಿಯನ್ಸ್‌ಗೆ ವರ್ಷಪೂರ್ತಿ ಸಿನಿಮಾ ನೋಡಲು ಸಿಗುತ್ತದೆ. 

ಮತ್ತೆ ನಿರ್ದೇಶನಕ್ಕೆ?
- ಮೇನಲ್ಲಿ ನನ್ನ ನಿರ್ದೇಶನದ ಸಿನಿಮಾ ಆರಂಭವಾಗಲಿದೆ. ಸುದೀಪ್‌ರವರು ನಾಯಕ. ಸದ್ಯ "ಥಗ್ಸ್‌ ಆಫ್ ಮಾಲ್ಗುಡೀಸ್‌' ಎಂದು ಹೆಸರಿಡಲಾಗಿದೆ. 

ಹೊಸ ಸಿನಿಮಾ?
- "ರಂಗಿತರಂಗ' ನಿರ್ಮಾಪಕರ ಸಿನಿಮಾ ಒಪ್ಪಿಕೊಂಡಿದ್ದೇನೆ. ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ.

- ರವಿಪ್ರಕಾಶ್‌ ರೈ

Trending videos

Back to Top