CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಗರುಡ ಪುರಾಣ : ರೆಬೆಲ್‌ ಹುಡುಗನ ಫ್ಯಾಮಿಲಿ ಡ್ರಾಮಾ

ಸಿದ್ಧಾರ್ಥ್ ಮಹೇಶ್‌ ನಾಯಕರಾಗಿದ್ದ ಚೊಚ್ಚಲ ಸಿನಿಮಾ 'ಸಿಪಾಯಿ' ಇನ್ನೂ ಬಿಡುಗಡೆಯಾಗಿರದ ಸಮಯ. ಆಗ ನಿರ್ಮಾಪಕ ಪ್ರಸಾದ್‌ ರೆಡ್ಡಿಯವರಿಗೆ ಸಿದ್ಧಾರ್ಥ್ ಅವರನ್ನು ನೋಡಿ ಅವರಿಗೊಂದು ಸಿನಿಮಾ ಮಾಡಬೇಕೆಂದೆನಿಸಿದೆ. ನೇರವಾಗಿ ಸಿದ್ಧಾರ್ಥ್ ಮಹೇಶ್‌ ಬಳಿ ಬಂದವರು, 'ನಿಮ್ಮ ಜೊತೆ ಸಿನಿಮಾ ಮಾಡಬೇಕೆಂದಿದ್ದೇನೆ. 'ಸಿಪಾಯಿ'ಯ ಫ‌ಲಿತಾಂಶ ಏನೇ ಆಗಿರಲಿ, ನಾವು ಸಿನಿಮಾ ಮಾಡುವ' ಎಂದು ಫಿಕ್ಸ್‌ ಆಗುತ್ತಾರಂತೆ. 'ಸಿಪಾಯಿ' ಚಿತ್ರ ಬಿಡುಗಡೆಗೆ ಮುನ್ನ ನಡೆದ ಮಾತುಕತೆಯ ಪರಿಣಾಮವಾಗಿ ಈಗ ಸಿದ್ಧಾರ್ಥ್ ಮಹೇಶ್‌ ಅವರ ಎರಡನೇ ಸಿನಿಮಾ ಸೆಟ್ಟೇರಿದೆ. ಅದು 'ಗರುಡ'. ಇತ್ತೀಚೆಗೆ ಈ ಸಿನಿಮಾಕ್ಕೆ ಮುಹೂರ್ತ ನಡೆದಿದೆ.

ತಮ್ಮ ಎರಡನೇ ಸಿನಿಮಾ ಆರಂಭವಾದ ಖುಷಿಯಲ್ಲಿದ್ದರು ಸಿದ್ಧಾರ್ಥ್. ಎರಡನೇ ಸಿನಿಮಾಕ್ಕೂ ಸಿದ್ಧಾರ್ಥ್ ಮಹೇಶ್‌ ಅವರದ್ದೇ ಕಥೆ ಇದೆ. 'ನನ್ನ ಮೊದಲ ಚಿತ್ರ 'ಸಿಪಾಯಿ' ಇನ್ನೂ ಬಿಡುಗಡೆಯಾಗಿರಲಿಲ್ಲ. ನಾನು ಆ ಸಿನಿಮಾಕ್ಕೆ ಪಡುತ್ತಿದ್ದ ಶ್ರಮ ನೋಡಿ ಪ್ರಸಾದ್‌ ರೆಡ್ಡಿಯವರಿಗೆ ನನ್ನ ಜೊತೆ ಸಿನಿಮಾ ಮಾಡಬೇಕು ಎನಿಸಿತಂತೆ. ಅದರಂತೆ ನಾನೇ ಮಾಡಿಕೊಂಡಿದ್ದ ಕಥೆಯೊಂದನ್ನು ಹೇಳಿದೆ. ತುಂಬಾ ಇಷ್ಟಪಟ್ಟರು. ಕಥೆ ಓಕೆ ಆಯಿತು. ನಿರ್ದೇಶನ ಯಾರಿಂದ ಮಾಡಿಸೋದು ಎಂದು ಆಲೋಚಿಸುತ್ತಿದ್ದಾಗ ನಮಗೆ ನೆನಪಾಗಿದ್ದು ನೃತ್ಯ ನಿರ್ದೇಶಕ ಧನಕುಮಾರ್‌. ಅವರು ಸಿನಿಮಾ ಮಾಡಬೇಕೆಂದು ಆಲೋಚಿಸಿದ್ದರು. ಹಾಗಾಗಿ, ಅವರನ್ನು ಕರೆದು ಈ ಆಫ‌ರ್‌ ಕೊಟ್ಟೆವು' ಎಂದು ಸಿನಿಮಾ ಬಗ್ಗೆ ವಿವರ ನೀಡಿದರು ಸಿದ್ಧಾರ್ಥ್.

ಅಷ್ಟಕ್ಕೂ 'ಗರುಡ' ಎಂದರೇನು, ಕಥೆಗೂ ಟೈಟಲ್‌ಗ‌ೂ ಏನು ಸಂಬಂಧ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. 'ಇದೊಂದು ಫ್ಯಾಮಿಲಿ ಡ್ರಾಮಾ. ಆರಾಮವಾಗಿ ಓಡಾಡಿಕೊಂಡಿರುವ ಹುಡುಗನೊಬ್ಬನ ಫ್ಯಾಮಿಲಿಗೆ ಏನಾದರೂ ತೊಂದರೆಯಾದರೆ ಆತ ಯಾವ ರೀತಿ ರೆಬೆಲ್‌ ಆಗುತ್ತಾನೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ. ಇಲ್ಲಿ ನಾಯಕನ ಆ್ಯಟಿಟ್ಯೂಡ್‌ಗೂ ಗರುಡದ ವರ್ತನೆಗೂ ಸಾಮ್ಯತೆ ಇದೆ. ಹಾಗಾಗಿ, 'ಗರುಡ' ಎಂಬ ಟೈಟಲ್‌ ಇಟ್ಟಿದ್ದಾಗಿ ಹೇಳಿಕೊಂಡರು ಸಿದ್ಧಾರ್ಥ್. ನಾಯಕ ಸಿದ್ಧಾರ್ಥ್ಗೆ ಇದು ಎರಡನೇ ಸಿನಿಮಾ. ಅವರಿಗೆ ಒಂದಂತೂ ಸ್ಪಷ್ಟವಾಗಿ ಗೊತ್ತಿದೆ. ಈಗಷ್ಟೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ತನ್ನ ಮುಖ ನೋಡಿಕೊಂಡು ಥಿಯೇಟರ್‌ಗೆ ಜನ ಬರೋದಿಲ್ಲ ಎಂಬುದು. ಹಾಗಾಗಿಯೇ ಚಿತ್ರದಲ್ಲಿ ಸಾಕಷ್ಟು ಅನುಭವಿ ನಟರಿದ್ದಾರೆ. ನಾಯಕಿಯರಾಗಿ ಆಶಿಕಾ ಹಾಗೂ ದೀಪಾ ಸನ್ನಿಧಿ ನಟಿಸಿದರೆ, ಉಳಿದಂತೆ ಆದಿ ಲೋಕೇಶ್‌, ರಂಗಾಯಣ ರಘು, ಮುಖ್ಯಮಂತ್ರಿ ಚಂದ್ರು, ಆನಂದ್‌, ಸುಜಯ್‌, ಭರತ್‌ ಸಿಂಗ್‌ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.

ಇನ್ನು, ನಿರ್ದೇಶಕ ಧನಕುಮಾರ್‌ಗೆ ನಿರ್ದೇಶಕರಾಗಿ ಇದು ಚೊಚ್ಚಲ ಸಿನಿಮಾ. 'ಅವಕಾಶಕ್ಕಾಗಿ ಸಾಕಷ್ಟು ಮಂದಿ ಓಡಾಡುತ್ತಿರೋದನ್ನು ನಾವು ನೋಡಿದ್ದೇವೆ. ಆದರೆ, ನನಗೆ ಸಿದ್ಧಾರ್ಥ್ ಅವರು ಕರೆದು ಈ ಅವಕಾಶ ಕೊಟ್ಟಿದ್ದಾರೆ. ಅವರಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ಚಿತ್ರದಲ್ಲಿ ಆ್ಯಕ್ಷನ್‌, ಕಾಮಿಡಿಗೆ ಹೆಚ್ಚು ಮಹತ್ವ ಕೊಟ್ಟಿದ್ದೇವೆ' ಎಂದಷ್ಟೇ ಹೇಳಿದರು ಧನಕುಮಾರ್‌. ನಾಯಕಿ ಆಶಿಕಾ ಒಳ್ಳೆಯ ಪಾತ್ರ ಸಿಕ್ಕ ಖುಷಿ ವ್ಯಕ್ತಪಡಿಸುವಷ್ಟಕ್ಕೆ ಅವರು ಮಾತು ಮುಗಿದು ಹೋಗಿತ್ತು. ಚಿತ್ರಕ್ಕೆ ರಘು ದೀಕ್ಷಿತ್‌ ಸಂಗೀತ ನೀಡುತ್ತಿದ್ದಾರೆ. ಇದು ಅವರು ಸಂಗೀತ ನೀಡುತ್ತಿರುವ ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾವಂತೆ. ಜೊತೆಗೆ ಒಳ್ಳೆಯ ಸಂಭಾವನೆ ಸಿಕ್ಕ ಸಿನಿಮಾವಂತೆ. 'ಈ ಸಿನಿಮಾ ಎರಡು ವಿಷಯಕ್ಕಾಗಿ ಮುಖ್ಯವಾಗುತ್ತದೆ. ಸಂಭಾವನೆ ಹಾಗೂ ಕಮರ್ಷಿಯಲ್‌ ಅಂಶಗಳಿಂದ. ಚಿತ್ರತಂಡ ಮನೆಗೆ ಬಂದು 'ನೀವೇ ಸಂಗೀತ ನೀಡಬೇಕು' ಎಂದಿತು. ನಾನು ನನ್ನ ಸಂಭಾವನೆ ಹೇಳಿದೆ. ಏನೂ ಮರುಮಾತನಾಡದೇ ನಿರ್ಮಾಪಕರು ಒಂದು ಚೆಕ್‌ ಬರೆದು ಕೊಟ್ಟರು. ಒಳ್ಳೆಯ ಮೊತ್ತವೇ. ತಕ್ಷಣ ನನ್ನ ಅಮ್ಮನಿಗೆ ಫೋನ್‌ ಮಾಡಿ, 'ಅಮ್ಮ ಕೊನೆಗೂ ಇಂಡಸ್ಟ್ರಿಯಿಂದ ಒಂದು ಒಳ್ಳೆಯ ಸಂಪಾದನೆ ಬಂತಮ್ಮಾ...' ಎಂದೆ. ಇದು ಒಂದು ಅಂಶವಾದರೆ ನಾನು ಮಾಡುತ್ತಿರುವ ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾವಿದು. ರಘುದೀಕ್ಷಿತ್‌ ಕಮರ್ಷಿಯಲ್‌ ಸಿನಿಮಾ ಮಾಡ್ತಾರಾ ಅನ್ನೋ ಅನುಮಾನ ಅನೇಕರಿಗಿತ್ತು. ಅವೆಲ್ಲವೂ ಈ ಸಿನಿಮಾ ಮೂಲಕ ಹೋಗಲಿದೆ' ಎಂದರು. ಚಿತ್ರಕ್ಕೆ ಜೈ ಆನಂದ್‌ ಛಾಯಾಗ್ರಹಣವಿದೆ.

ಇಂದು ಹೆಚ್ಚು ಓದಿದ್ದು

Back to Top