CONNECT WITH US  

ಐ ಲವ್‌ ಯೂ ಹೇಳದೆಯೇ ಲವ್‌ ಆಗೋಯ್ತು

"ಮೀಡಿಯಾ ನನಗೆ ತುಂಬಾ ಸಹಾಯ ಮಾಡಿತು. ಇಲ್ಲದಿದ್ದರೆ ಇಷ್ಟು ಬೇಗ ಯಾವುದೂ ಆಗುತ್ತಿರಲಿಲ್ಲ ...' ಹೀಗೆ ಹೇಳಿ ಒಂದು ಕ್ಷಣ ನಕ್ಕರು ರಕ್ಷಿತ್‌ ಶೆಟ್ಟಿ.ಅವರಿಗೆ ಮೀಡಿಯಾ ಮಾಡಿದ ಸಹಾಯವಾದರೂ ಏನು, ಇಷ್ಟು ಬೇಗ ಯಾವುದು ಆಗುತ್ತಿರಲಿಲ್ಲ ಎಂದರೇನು ಎಂದು ನೀವು ಆಲೋಚಿಸುತ್ತಿರಬಹುದು. ಅದು ರಕ್ಷಿತ್‌ ಶೆಟ್ಟಿ ಲವ್‌ ಕಂ ಎಂಗೇಜ್‌ಮೆಂಟ್‌ ಸ್ಟೋರಿ. ರಕ್ಷಿತ್‌ ಶೆಟ್ಟಿ ಹಾಗೂ "ಕಿರಿಕ್‌ ಪಾರ್ಟಿ' ನಾಯಕಿ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಜುಲೈ 3 ರಂದು ನಡೆಯಲಿದೆ. ಪ್ರೇಮಾಂಕುರವಾದ ಒಂದೇ ವರ್ಷಕ್ಕೆ ಇಬ್ಬರು ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಘೋಷಿಸಿಕೊಂಡು, ಎರಡೂ ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. ಮೀಡಿಯಾದಲ್ಲಿ ಶುರುವಾದ ರಕ್ಷಿತ್‌ ಲವ್‌ ಗಾಸಿಪ್‌ನಿಂದ ಎರಡೂ ಮನೆಯಲ್ಲೂ ಇವರ ನಡುವೆ ಏನೋ ಇದೆ ಎಂಬ ಸಂದೇಹ ಬಂದಿತ್ತಂತೆ. ಆ ಕೂಡಲೇ ಎಚ್ಚೆತ್ತ ರಕ್ಷಿತ್‌, ಇದು ಇನ್ನೇನೋ ಟರ್ನ್ ತೆಗೆದುಕೊಳ್ಳೋದು ಬೇಡ ಎಂದು ನಿರ್ಧರಿಸಿ, ಧೈರ್ಯಮಾಡಿ ತನ್ನ ಹಾಗೂ ರಶ್ಮಿಕಾ ಮನೆಯಲ್ಲಿ ಪ್ರೀತಿ ವಿಷಯ ಹಂಚಿಕೊಂಡರಂತೆ. ಮೀಡಿಯಾದಲ್ಲಿ ಬಾರದಿದ್ದರೆ ಇಷ್ಟು ಬೇಗ ನಿಶ್ಚಿತಾರ್ಥ ಆಗುತ್ತಿರಲಿಲ್ಲ ಎನ್ನುವ ರಕ್ಷಿತ್‌, ಇಲ್ಲಿ ತಮ್ಮ ಲವ್‌ಸ್ಟೋರಿಯನ್ನು ಬಿಚ್ಚಿಟ್ಟಿದ್ದಾರೆ ....

ಲವ್‌ಸ್ಟೋರಿ ಅಂದರೇನೇ ಕುತೂಹಲ. ಅದರಲ್ಲೂ ನಟ-ನಟಿಯರ ಲವ್‌ಸ್ಟೋರಿಗಳ ಬಗ್ಗೆ ಸ್ವಲ್ಪ ಹೆಚ್ಚೇ ಆಸಕ್ತಿ. ಹೀಗಿರುವಾಗಲೇ ಕನ್ನಡ ಚಿತ್ರರಂಗದಲ್ಲಿ ಬೇಗನೇ ಮಿಂಚಿದ, ಮಿಂಚುತ್ತಿರುವ ಜೋಡಿಯೊಂದು ಲವ್‌ನಲ್ಲಿ ಬಿದ್ದಿದೆ. ಅದು ರಕ್ಷಿತ್‌ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ. "ಕಿರಿಕ್‌ ಪಾರ್ಟಿ' ಚಿತ್ರದಲ್ಲಿ ಕರ್ಣ-ಸಾನ್ವಿಯಾಗಿ ಪ್ರೇಕ್ಷಕರನ್ನು ಮೋಡಿ ಮಾಡಿದ ಈ ಜೋಡಿ ಪರಸ್ಪರ ಮೋಡಿಗೊಳಗಾಗಿದ್ದಾರೆ.

ಸಿನಿಮಾ ಬಿಡುಗಡೆಯಾದ ಒಂದು ವರ್ಷದೊಳಗಡೆ ನಿಶ್ಚಿತಾರ್ಥ ಕೂಡಾ ಮಾಡಿಕೊಳ್ಳುತ್ತಿದ್ದಾರೆ. ಸಹಜವಾಗಿಯೇ 
ಅನೇಕರಿಗಿರುವ ಕುತೂಹಲ ಇವರ ಲವ್‌ ಹೇಗೆ ಶುರುವಾಯಿತೆಂದು. ಈ ಪ್ರಶ್ನೆಯನ್ನು ರಕ್ಷಿತ್‌ ಶೆಟ್ಟಿಯಲ್ಲಿ ಕೇಳಿದರೆ ನಾಚಿಕೊಂಡು ಮುಖ ಕೆಂಪಗೆ ಮಾಡಿಕೊಳ್ಳುತ್ತಾರೆ. ""ಕಿರಿಕ್‌ ಪಾರ್ಟಿ' ಚಿತ್ರದ ಸಾನ್ವಿ ನನ್ನ ಡ್ರೀಮ್‌ ಗರ್ಲ್. ನನ್ನ ಜೀವನದಲ್ಲಿ ಈ ತರಹದ್ದೇ ಹುಡುಗಿ ಬರಬೇಕೆಂದು ಕನಸು ಕಂಡಿದ್ದೆ. ಅದೇ ಕನಸಿನೊಂದಿಗೆ ಆ ಪಾತ್ರ ಬರೆದಿದ್ದೆ ಕೂಡಾ. ಆ ಪಾತ್ರಕ್ಕಾಗಿ ಸಾಕಷ್ಟು ಮಂದಿಯನ್ನು ಆಡಿಷನ್‌ ಕೂಡಾ ಮಾಡಿದೆವು. ಆಗ ಸಿಕ್ಕಿದ್ದು ರಶ್ಮಿಕಾ. 

ನಾನು ಬರೆದ ಪಾತ್ರಕ್ಕೆ ಸೂಕ್ತವಾದ ನಾಯಕಿ ಸಿಕ್ಕಳೆಂಬ ಖುಷಿ ಇತ್ತೆ ಹೊರತು, ಆಗ ಯಾವ ಆಸೆ, ಆಲೋಚನೆ, ಕನಸು ಇರಲಿಲ್ಲ. ಸಹಜವಾಗಿ ಚಿತ್ರೀಕರಣ ನಡೆಯುತ್ತಿತ್ತು. ಕೆಲವರು ಹೇಳಿದಂತೆ ಶೂಟಿಂಗ್‌ ನಡೀತಾ ಇರುವಾಗಲೇ ಲವ್‌ ಏನೂ ಇರಲಿಲ್ಲ. ನಮ್ಮ ಪಾಡಿಗೆ ನಾವು ಶೂಟಿಂಗ್‌ ಮಾಡುತ್ತಿದ್ದೆವು' ಎಂದು ತಾವು ಬರೆದ ಡ್ರೀಮ್‌ ಗರ್ಲ್ ಪಾತ್ರದ ಬಗ್ಗೆ ಹೇಳುತ್ತಾರೆ ರಕ್ಷಿತ್‌. ಎಲ್ಲಾ ಓಕೆ, ರಕ್ಷಿತ್‌ಗೆ ಫಿಲಿಂಗ್‌ ಶುರುವಾಗಿದ್ದು, ಇವಳೇ ನನ್ನ ಲೈಫ್ ಪಾರ್ಟ್‌ ನರ್‌ ಆಗಬೇಕೆಂಬ ಆಸೆ ಹುಟ್ಟಿದ್ದು ಯಾವಾಗ ಎಂಬುದನ್ನು ಕೇಳಬೇಕೆಂಬ ಕುತೂಹಲ ಈಗ ನಿಮ್ಮದು. "ಫಿಲಿಂಗ್‌, ಲವ್‌ ಆರಂಭವಾಗಿದ್ದು ರಶ್ಮಿಕಾಳ ಚಿತ್ರೀಕರಣದ ಭಾಗ ಮುಗಿದ ನಂತರ. ಶೂಟಿಂಗ್‌ ಮುಗಿದ ನಂತರ ಆಗಾಗ ವಾಟ್ಸಾಪ್‌ ನಲ್ಲಿ ಮೆಸೇಜ್‌ ಮಾಡುತ್ತಿದ್ದೆವು. 

ಅವಳ ಚಿತ್ರೀಕರಣ ಮುಗಿದು, ಆರ್ಯ (ಸಂಯುಕ್ತಾ) ಭಾಗದ ಚಿತ್ರೀಕರಣವಾಗುತ್ತಿತ್ತು. ಆಗ ರಶ್ಮಿಕಾ ಒಮ್ಮೊಮ್ಮೆ "ನಿಮ್ಮನ್ನು ನೋಡಬೇಕು' ಎಂದು ಸೆಟ್‌ಗೆ ಬರುತ್ತಿದ್ದಳು. ಆಗಲೇ ನಮ್ಮಿಬ್ಬರಿಗೂ ಒಂದು ಡೌಟು ಶುರುವಾಗಿತ್ತು. ನಾನು ಅವಳನ್ನು ಇಷ್ಟಪಡುತ್ತಿರಬಹುದೆಂದು ಅವಳಿಗೆ, ಅವಳು ನನ್ನನ್ನು ಇಷ್ಟಪಡುತ್ತಿರಬಹುದೆಂಬ ಸಂದೇಹ ನನಗೆ ಇತ್ತು. ಇಂತಹ ಸಂದೇಹದೊಂದಿಗೆ ನಾವು ಪರಸ್ಪರ ಇಷ್ಟಪಡಲಾರಂಭಿಸಿದೆವು. ನಮ್ಮಿಬ್ಬರ ಒಡನಾಟ ಜಾಸ್ತಿಯಾಗಿದ್ದು, ಚಿತ್ರದ ಪ್ರಮೋಶನ್‌ ಟೈಮ್‌ನಲ್ಲಿ. ಎಲ್ಲಿ ಹೋದರೂ ಜೊತೆಗೇ ಹೋಗ್ತಾ ಇದ್ವಿ. ಖುಷಿ ಖುಷಿಯಾಗಿರುತ್ತಿದ್ವಿ. ಹಾಗಂತ ನಾನಾಗಲಿ, ಅವಳಾಗಲಿ, ಐ ಲವ್‌ ಯೂ ಅಂತಹ ಪ್ರಫೋಸ್‌ ಮಾಡಲೇ ಇಲ್ಲ' ಎಂದು ಪ್ರೇಮಾಂಕುರವಾದ ಬಗ್ಗೆ ಹೇಳುತ್ತಾರೆ ರಕ್ಷಿತ್‌.

ಐ ಲವ್‌ ಯೂ ಹೇಳದೆಯೇ ಹುಟ್ಟಿಕೊಂಡ ಪ್ರೀತಿ ಗಟ್ಟಿಯಾಗಿದ್ದು, ಕನ್‌ಫ‌ರ್ಮ್ ಆಗಿದ್ದು, ಮದುವೆಯಾದರೆ ಇವಳನ್ನೇ ಮದುವೆಯಾಗಬೇಕೆಂದು ಕಮಿಟ್‌ ಆಗಿದ್ದು ಯಾವಾಗ ಎಂದರೆ ಕಳೆದ ವರ್ಷದ ನನ್ನ ಹುಟ್ಟುಹಬ್ಬ ಸಂದರ್ಭದಲ್ಲಿ ಎನ್ನುತ್ತಾರೆ ರಕ್ಷಿತ್‌. ಕಳೆದ ವರ್ಷ ರಕ್ಷಿತ್‌ ಹುಟ್ಟುಹಬ್ಬದಂದು ರಶ್ಮಿಕಾ ವಿಭಿನ್ನವಾದ ಗಿಫ್ಟ್ಗಳನ್ನು ಕೊಟ್ಟರಂತೆ. ಅದು ಒಂದಲ್ಲ, ಎರಡಲ್ಲ ಬರೋಬ್ಬರಿ 20 ಗಿಫ್ಟ್ ಎಂದರೆ ನೀವು ನಂಬಲೇಬೇಕು. "ಲಾಸ್ಟ್‌ ಇಯರ್‌ ನನ್ನ ಬರ್ತ್‌ಡೇಗೆ ಅವಳು 20 ಗಿಫ್ಟ್ ತಂದುಕೊಟ್ಟಳು. ಅದು ವೆರೈಟಿಯಾಗಿತ್ತು. ಅದಕ್ಕಾಗಿ ಆಕೆ ಸಾಕಷ್ಟು ಸಮಯ ಕೂಡಾ ವ್ಯಯಿಸಿದ್ದಳು. ನನಗೆ ಅಷ್ಟೊಂದು ತಾಳ್ಮೆ ಇಲ್ಲ. ಅವಳು ಅಷ್ಟೆಲ್ಲಾ ನನ್ನ ಬರ್ತ್‌ಡೇಗೆ ಕೊಟ್ಟಿದ್ರೂ, ನಾನು ಅವಳ ಬರ್ತ್‌ಡೇಗೆ ಕೊಟ್ಟಿದ್ದು ಒಂದು ಉಂಗುರ ಅಷ್ಟೇ.

ಅಷ್ಟೊತ್ತಿಗೆ ಒಂದು ಕನ್‌ಫ‌ರ್ಮ್ ಆಗಿತ್ತು, ನಾವಿಬ್ಬರು ಇಷ್ಟಪಡುತ್ತಿದ್ದೇವೆ ಎಂದು. ಅದರ ಪ್ರತೀಕದಂತೆ ನಾನು ಉಂಗುರ ಕೊಟ್ಟಿದ್ದು' ಎನ್ನುತ್ತಾರೆ ಶೆಟ್ರಾ. ಹೀಗೆ ದಿನದಿಂದ ದಿನಕ್ಕೆ ಫೋನ್‌ ಮಾತುಕತೆ ಜಾಸ್ತಿಯಾಗುತ್ತದೆ. ಈ ಮಾತುಕತೆಯಲ್ಲಿ ರಕ್ಷಿತ್‌ ಮತ್ತು ರಶ್ಮಿಕಾ ಜೀವನದ ಬಗ್ಗೆ ಮಾತನಾಡುತ್ತಾರೆ. ಮುಂದಿನ ಸಿನಿ ಕೆರಿಯರ್‌, ಮದುವೆಯಾದ ನಂತರ ಸಿನಿಮಾ ಮಾಡುವ ಬಗ್ಗೆ, ಮದುವೆಯಾಗುವುದಾದರೆ ಯಾವಾಗ ... ಇಂತಹ ಮಾತುಗಳ ಮೂಲಕ ರಕ್ಷಿತ್‌-ರಶ್ಮಿಕಾ ತಮ್ಮ ಲವ್‌ ಗಟ್ಟಿಮಾಡಿಕೊಳ್ಳುತ್ತಾರೆ. ಹೀಗೆ ರಕ್ಷಿತ್‌ ಲವ್‌ನಲ್ಲಿ ಬೀಳುತ್ತಿದ್ದಂತೆ ಅತ್ತ ರಕ್ಷಿತ್‌ ಮನೆಯವರಿಗೆ ಮಗನ ಮದುವೆ ಚಿಂತೆಯೂ ಶುರುವಾಗಿಬಿಟ್ಟಿದೆ. ಹಾಗಂತ ರಶ್ಮಿಕಾ ಜೊತೆಗಲ್ಲ. ಏಕೆಂದರೆ, ಮಗನ ಹಾರ್ಟಲ್ಲಿ ಸುಂದರಿಯೊಬ್ಬಳು ಬಂದು ಕುಳಿತಿದ್ದಾಳೆಂಬ ಎಂಬ ವಿಚಾರ ಅವರಿಗೆ ಇನ್ನೂ ಮುಟ್ಟಿರಲಿಲ್ಲ. ಅವರಿಗೆ ಆ ವಿಷಯ ಗೊತ್ತಾಗಿದ್ದು ಮಾಧ್ಯಮಗಳಲ್ಲಿ ಬಂದ ನಂತರ.

"ಮಾಧ್ಯಮಗಳಲ್ಲಿ ಬಂದ ನಂತರ ನಮ್ಮಿಬ್ಬರ ಮನೆಗೂ ಗೊತ್ತಾಯಿತು. ರಶ್ಮಿಕಾ ಮನೆಯಲ್ಲಿ "ಏನು ವಿಷಯ' ಎಂದು
ಕೇಳಿದ್ದಾರೆ. ಆಗ ಅವಳು, "ನಮ್ಮಿಬ್ಬರಿಗೂ ಲವ್‌ ಇಂಟರೆಸ್ಟ್‌ ಇರೋದು ನಿಜ ಎಂದಿದ್ದಾಳೆ. ನನ್ನನ್ನು ಬರೋಕೆ ಹೇಳಿದರು. ಅವರ ಅಪ್ಪ-ಅಮ್ಮ ಕೂಡಾ ನಾನು ಅವರ ಮನೆಗೆ ಹೋಗುವವರೆಗೂ ಇವೆಲ್ಲಾ ಸಾಧ್ಯನೇ ಇಲ್ಲ ಎಂಬಂತಿದ್ದರು. ಆದರೆ, ನಾನು ಇಲ್ಲಿಂದ ಕೂರ್ಗ್‌ವರೆಗೆ ಹೋಗಿ ಮಾತನಾಡಿದ ನಂತರ ಅವರ ಮನಸ್ಸು ಬದಲಾಯಿತು. ಅವರೂ ನನ್ನನ್ನ ಒಪ್ಪಿದರು.

ನಂತರ ನಮ್ಮಿಬ್ಬರ ಕುಟುಂಬದವರು ಮಾತನಾಡಿ ಎರಡು ವರ್ಷಗಳ ನಂತರ ಮದುವೆ ಅಂತ ನಿರ್ಧರಿಸಿದೆವು. ರೂಮರ್ಗಳಿಗೆ ಬ್ರೇಕ್‌ ಹಾಕಲು ಎಂಗೇಜ್‌ಮೆಂಟ್‌ ಆಗುವ ನಿರ್ಧಾರವಾಯಿತು' ಎಂದು ತಮ್ಮ ಲವ್‌ಸ್ಟೋರಿ ಬಿಚ್ಚಿಡುತ್ತಾರೆ ರಕ್ಷಿತ್‌.

ಎಲ್ಲಾ ಓಕೆ, ರಶ್ಮಿಕಾ ಬಗ್ಗೆ ರಕ್ಷಿತ್‌ ಅಪ್ಪ-ಅಮ್ಮ ಏನಂತಾರೆ ಎಂದರೆ ತುಂಬಾ ಖುಷಿಯಾಗಿದ್ದಾರೆ ಎನ್ನುತ್ತಾರೆ. "ರಶ್ಮಿಕಾ ಬಗ್ಗೆ ಮನೆಯವರಿಗೂ ಖುಷಿ ಇದೆ. ಸಿನಿಮಾ ಬಂದ ಸಮಯದಲ್ಲಿ, ಆ ನಂತರ ರಿಷಭ್‌ ಮದುವೆಗೆ ಆಕೆ ಕುಂದಾಪುರಕ್ಕೆ ಬಂದಾಗ, "ರಕ್ಷಿತ್‌ಗೆ ಈ ತರಹದ ಹುಡುಗಿ ಸಿಗಬೇಕು' ಎಂದು ನಮ್ಮ ಅಣ್ಣ-ಅತ್ತಿಗೆ, ಅಮ್ಮ-ಮಾವ ಎಲ್ಲಾ ಮಾತನಾಡಿಕೊಂಡಿದ್ದರಂತೆ. ಹೀಗಿರುವಾಗಲೇ ನಾವು ಇಷ್ಟಪಡುತ್ತಿರುವುದು ಗೊತ್ತಾಗಿ ಖುಷಿಯಿಂದ ಒಪ್ಪಿದರು. ಆರಂಭದಲ್ಲಿ ನಮ್ಮ ಮನೆಯವರಿಗೆ ಬಂಟ ಸಮುದಾಯದ ಹುಡುಗಿಯೇ ಬೇಕೆಂಬ ಆಸೆ ಇತ್ತು. ಆದರೆ, ರಶ್ಮಿಕಾ ಸೊಸೆಯಾಗುತ್ತಾಳೆಂದಾಗ ಖುಷಿಯಿಂದ ಒಪ್ಪಿಕೊಂಡರು' ಎಂದು ಅಪ್ಪ-ಅಮ್ಮನ ಇಷ್ಟದ ಬಗ್ಗೆ ಮಾತನಾಡುತ್ತಾರೆ.

ನಟಿಯರಿಗೆ ಮದುವೆ ನಿಶ್ಚಯವಾದಾಗ ಬರುವ ಪ್ರಶ್ನೆ ಎಂದರೆ ಮದುವೆ ನಂತರ ನಟಿಸುತ್ತಾರಾ ಎಂದು. ಈಗ ರಶ್ಮಿಕಾ
ವಿಷಯದಲ್ಲೂ ಅದೇ ಆಗಿದೆ. ಆದರೆ, ರಕ್ಷಿತ್‌ ಮದುವೆ ನಂತರನೂ ರಶ್ಮಿಕಾ ನಟಿಸುತ್ತಾಳೆ ಎನ್ನುತ್ತಾರೆ. "ರಶ್ಮಿಕಾಗೆ
ನಟಿಸುವ ಆಸಕ್ತಿ ಇತ್ತು. ಆ ಕಾರಣದಿಂದ ಅವಳ ಅಪ್ಪ-ಅಮ್ಮ ಕೂಡಾ ಎರಡೂ¾ರು ಸಿನಿಮಾ ಮಾಡಿದರೇನೇ ಸಾಕು
ಎಂದುಕೊಂಡೆ ಕಳುಹಿಸಿದ್ದರು. ಆದರೆ ಈಗ ಆಕೆ ಜನರಿಗೆ ಇಷ್ಟವಾಗಿದ್ದಾಳೆ. ಒಳ್ಳೆಯ ಅವಕಾಶ ಬರುತ್ತಿದೆ. ಯಾಕೆ
ನಟಿಸಬಾರದು. ಮದುವೆ ನಂತರನೂ ನಟಿಸಲಿ. ಇನ್ನು, ಮದುವೆಯಾದ ನಂತರ ಅವಕಾಶ ಕಮ್ಮಿಯಾಗುತ್ತದೆ ಎಂಬ
ಮಾತಿದೆ. ಒಂದು ವೇಳೆ ಆ ತರಹ ಆದರೆ, ನಮ್ಮದೇ ನಿರ್ಮಾಣ ಸಂಸ್ಥೆ ಇದೆ. ಅಲ್ಲೂ ನಟಿಸಬಹುದು. ಮುಂದೆ ಮಹಿಳಾ ಪ್ರಧಾನ ಚಿತ್ರ ಮಾಡುವ ಆಲೋಚನೆ ಕೂಡಾ ಇದೆ. ಅವಳಿಗೆ ಎಷ್ಟು ದಿನ ನಟಿಸಬೇಕು ಎನ್ನುವ ಆಸೆ ಇದೆಯೋ ಅಷ್ಟು ದಿನ ನಟಿಸಲಿ' ಎನ್ನುವುದು ರಕ್ಷಿತ್‌ ಮಾತು.

ಏಜ್‌ ಗ್ಯಾಪ್‌ ಇದ್ದರೇನು?
ರಕ್ಷಿತ್‌ ಹಾಗೂ ರಶ್ಮಿಕಾ ಮಂದಣ್ಣ ಮದುವೆಯಾಗುತ್ತಾರೆಂಬುದು ಕನ್‌ಫ‌ರ್ಮ್ ಆಗುತ್ತಿದ್ದಂತೆ ಸೋಶಿಯಲ್‌ ಮೀಡಿಯಾಗಳ ಟ್ರಾಲ್‌ ಪೇಜ್‌ ಗಳಲ್ಲಿ ಇವರಿಬ್ಬರ ನಡುವಿನ ವಯಸ್ಸಿನ ಅಂತರದ ಬಗ್ಗೆ ಚರ್ಚೆಯಾಗುತ್ತಿದೆ. ಇಬ್ಬರ ನಡುವಿನ 13 ವರ್ಷ ಅಂತರವನ್ನೇ ಇಟ್ಟುಕೊಂಡು ಟ್ರಾಲ್‌ ಮಾಡುತ್ತಿದ್ದಾರೆ. ಈ ಬಗ್ಗೆ ರಕ್ಷಿತ್‌ ತಲೆಕೆಡಿಸಿಕೊಳ್ಳುವುದಿಲ್ಲವಂತೆ. "ನಾನು ಅವೆಲ್ಲವನ್ನು ನೋಡೋಕೆ ಹೋಗುವುದಿಲ್ಲ. ಮೈಂಡ್‌ ಹಾಳಾಗುತ್ತೆ.
ರಶ್ಮಿಕಾಗೂ ಅದೇ ಹೇಳುತ್ತೇನೆ. ಅವೆಲ್ಲ ನೋಡೋಕೆ ಹೋಗಬೇಡ ಎಂದು. ಆ ತರಹದ ಟ್ರಾಲ್‌ ಮಾಡೋರು ಇರೋದೇ ಬೇರೆಯವರ ಕಾಲೆಳೆಯಲು ಎಂದು ನನಗೆ ಚೆನ್ನಾಗಿ ಗೊತ್ತಿದೆ. ಅವರಿಗೂ ನಮಗೂ ಸಂಬಂಧವೇ ಇರೋದಿಲ್ಲ. ಎಲ್ಲೋ ಕೂತ್ಕೊಂಡು ಟ್ರಾಲ್‌ ಮಾಡುವ ಅವರಿಗೆ ನಾವ್ಯಾಕೆ ಮನ್ನಣೆ ಕೊಡಬೇಕು. ನನ್ನ ಅಪ್ಪ-ಅಮ್ಮನಿಗೂ 13 ವರ್ಷ ಗ್ಯಾಪ್‌ ಇದೆ, ಅವಳ ಅಪ್ಪ-ಅಮ್ಮನಿಗೂ ಗ್ಯಾಪ್‌ ಇದೆ. ಅದು ನಮ್ಮ ವೈಯಕ್ತಿಕ ವಿಚಾರ. ಇಲ್ಲಿ ದೊಡ್ಡ ದೊಡ್ಡ ನಟರನ್ನೇ ಬಿಟ್ಟಿಲ್ಲ. ಇನ್ನು, ನಾವ್ಯಾರು?' ಎನ್ನುತ್ತಾರೆ ರಕ್ಷಿತ್‌. 


Trending videos

Back to Top