CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಟೈಮ್‌ ಬದಲಾಗುತ್ತೆ ಗುರು! ಟೋರ ಟೋರದಲ್ಲಿ ಹೊಸಬರು

ಕನ್ನಡದಲ್ಲಿ ಹೊಸ ಹೊಸ ಜಾನರ್‌ನ ಸಿನಿಮಾಗಳು ಬರುತ್ತಲೇ ಇವೆ. ಅದರಲ್ಲೂ ಚಿತ್ರರಂಗಕ್ಕೆ ಬರುವ ಹೊಸಬರ ಹೊಸ ಬಗೆಯನ್ನು ಪ್ರಯತ್ನಿಸುತ್ತಾರೆ. ಈಗ ಆ ಸಾಲಿಗೆ "ಟೋರ ಟೋರ' ಎಂಬ ಚಿತ್ರವೂ ಸೇರುತ್ತದೆ. ಇದು ಕೂಡಾ ಹೊಸಬರೇ ಸೇರಿ ಮಾಡಿರುವ ಚಿತ್ರ. ಟೈಮ್‌ ಮೆಷಿನ್‌ ಕುರಿತು "ಟೋರ ಟೋರ' ಚಿತ್ರ ಮಾಡಿದ್ದು, ಕನ್ನಡಕ್ಕೆ ಇದು ಹೊಸ ಕಾನ್ಸೆಪ್ಟ್ ಎಂಬುದು ನಿರ್ದೇಶಕ ಹರ್ಷ್‌ ಗೌಡ ಅವರ ಮಾತು. 

"ಕನ್ನಡಕ್ಕೆ ಇದು ಹೊಸ ಬಗೆಯ ಸಿನಿಮಾ. ಟೈಮ್‌ ಟ್ರಾವೆಲ್‌ ಕಾನ್ಸೆಪ್ಟ್ನಲ್ಲಿ ಈ ಸಿನಿಮಾ ಮಾಡಿದ್ದೇವೆ. ಟೈಮ್‌ ಮೆಷಿನ್‌ನೊಂದಿಗೆ ಈ ಸಿನಿಮಾ ಸಾಗುತ್ತದೆ. ಐದು ಜನ ಹುಡುಗರು ಹಾಗೂ ಇಬ್ಬರು ಹುಡುಗಿಯರಿಗೆ ಅಚಾನಕ್‌ ಆಗಿ ಸಿಗುವ ಟೈಮ್‌ ಮೆಷಿನ್‌ನಿಂದ ಏನೆಲ್ಲಾ ಆಗುತ್ತದೆ, ಅವರ ಜೀವನವನ್ನು ಹೇಗೆಲ್ಲಾ ರಿವೈಂಡ್‌ ಮಾಡಿ ನೋಡುತ್ತಾರೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ' ಎಂದು ಚಿತ್ರದ ಬಗ್ಗೆ ವಿವರ ನೀಡುತ್ತಾರೆ ಹರ್ಷ್‌ ಗೌಡ. 

ಅಂದಹಾಗೆ, ಹರ್ಷ್‌ ಗೌಡಗೆ ಇದು ಮೊದಲ ಸಿನಿಮಾ. ಸುಮಾರು 10 ವರ್ಷಗಳಿಂದ ಸಿನಿಮಾ ಮಾಡಬೇಕೆಂದು ಓಡಾಡಿಕೊಂಡಿದ್ದ ಹರ್ಷ್‌ ಅವರ ಕನಸು ಈಗ ಈಡೇರಿದೆ. ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರನ್ನು ಆಡಿಷನ್‌ ಮೂಲಕವೇ ಆಯ್ಕೆ ಮಾಡಿದರಂತೆ. ಪಕ್ಕಾ ಯೂತ್‌ ಓರಿಯೆಂಟೆಡ್‌ ಆಗಿರುವ ಈ ಚಿತ್ರ ಫ‌ನ್ನಿಯಾಗಿ ಸಾಗುವ ಮೂಲಕ ಇಂದಿನ ಟ್ರೆಂಡ್‌ಗೆ ತಕ್ಕಂತಿದೆ ಎನ್ನಲು ಅವರು ಮರೆಯಲಿಲ್ಲ. 

ಚಿತ್ರದಲ್ಲಿ ಸಿದ್ದು ಮೂಲೀಮನಿ, ಸನಿಹ ಯಾದವ್‌, ಪೂಜಾ ರಾಜು, ಸನತ್‌, ಮಂಜು ಹೆದ್ದೂರು, ಅನಿರುದ್ಧ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಸಿದ್ದು ಹೇಳುವಂತೆ ಇದು ರೆಗ್ಯುಲರ್‌ ಪ್ಯಾಟರ್ನ್ ಸಿನಿಮಾವಲ್ಲ. ಇಡೀ ಸ್ಕ್ರಿಪ್ಟ್ ಅನ್ನು ನಿರ್ದೇಶಕ ಹರ್ಷ್‌ ಬೇರೆ ರೀತಿಯೇ ಮಾಡಿಕೊಂಡಿದ್ದು, ಫ‌ನ್ನಿಯಾಗಿ ಸಿನಿಮಾ ಸಾಗುತ್ತದೆ. ಹರ್ಷ್‌ ಅವರ ಕಲಾವಿದರಿಗೆ ಸಂಪೂರ್ಣ ಸ್ವತಂತ್ರ ಕೊಟ್ಟಿದ್ದರಿಂದ ಪಾತ್ರ ಕೂಡಾ ಚೆನ್ನಾಗಿ ಮೂಡಿಬಂದಿದೆ ಎಂಬುದು ಸಿದ್ದು ಮಾತು. ಉಳಿದಂತೆ ಚಿತ್ರದಲ್ಲಿ ನಟಿಸಿರುವ ಸನಿಹ ಅವರಿಗೆ ಇದು ಮೊದಲ ಚಿತ್ರ. ಟೋರ ಟೋರ ಯಾವ ರೀತಿ ಖುಷಿ ಕೊಡುತ್ತೋ ಈ ಸಿನಿಮಾ ಕೂಡಾ ಅದೇ ರೀತಿ ಮನರಂಜನೆ ನೀಡುವುದರಿಂದ "ಟೋರ ಟೋರ' ಎಂದು ಟೈಟಲ್‌ ಇಡಲಾಗಿದೆಯಂತೆ.

ಚಿತ್ರದಲ್ಲಿ ಸನತ್‌ ನಾಯಕರಾಗಿ ನಟಿಸಿದ್ದಾರೆ. ಅವರ ಪ್ರಕಾರ ಚಿತ್ರದಲ್ಲಿ ಗ್ರಾಫಿಕ್‌ ಕೂಡಾ ಹೆಚ್ಚಿದ್ದು, ಅಚ್ಚುಕಟ್ಟಾಗಿ ಗ್ರಾಫಿಕ್‌ ಮಾಡಿರುವ ವಿಎಫ್ಎಕ್ಸ್‌ ತಂಡ ನಿಜವಾದ ಹೀರೋ ಅಂತೆ. ಉಳಿದಂತೆ ಪೂಜಾ, ಮಂಜು, ಅನಿರುದ್ಧ ಕೂಡಾ ತಮ್ಮ ಅನಿಸಿಕೆ ಹಂಚಿಕೊಂಡರು. ಚಿತ್ರಕ್ಕೆ ಸಿದ್ಧಾರ್ಥ್ ಕಾಮತ್‌ ಸಂಗೀತ ನೀಡಿದ್ದಾರೆ.

Back to Top