CONNECT WITH US  

ಮೂರು ತಿಂಗಳಲ್ಲಿ ಸಿನಿಮಾ ಮುಗಿಸಿ ನನಗೆ ಗೊತ್ತಿಲ್ಲ...

ದಿ ವಿಲನ್‌ ತಡ ಆಗುವುದಕ್ಕೆ ಪ್ರೇಮ್‌ ಕೊಟ್ಟ ನಾಲ್ಕು  ಕಾರಣಗಳು

ಪ್ರೇಮ್‌ ಅವರ "ದಿ ವಿಲನ್‌' ಚಿತ್ರ ತಡವಾಗುತ್ತಿರುವುದರಿಂದ ಸುದೀಪ್‌ ಅವರ ಇತರ ಪ್ರಾಜೆಕ್ಟ್ಗಳು ಮುಂದೆ ಹೋಗುತ್ತಲೇ ಇವೆ. ಇಷ್ಟೊತ್ತಿಗೆ ಮುಗಿಯಬೇಕಿದ್ದ "ದಿ ವಿಲನ್‌' ಇನ್ನೂ ಮುಗಿದಿಲ್ಲ. ಪರಿಣಾಮ ಡಿಸೆಂಬರ್‌ನಲ್ಲಿ ಆರಂಭವಾಗಬೇಕಿದ್ದ "ಪೈಲ್ವಾನ್‌' ಆರಂಭವಾಗಿಲ್ಲ. ಈ ಬಾರಿ ಸುದೀಪ್‌ "ಪೈಲ್ವಾನ್‌' ಹಾಗೂ "ಕೋಟಿಗೊಬ್ಬ-3'ಗೆ ತಮ್ಮ ಡೇಟ್‌ ಹಂಚಿದ್ದಾರೆ. ಎರಡೂ ಸಿನಿಮಾಗಳು ಈ ವರ್ಷವೇ ಆರಂಭವಾಗಲಿವೆ. ಆದರೆ, ಪ್ರೇಮ್‌ "ದಿ ವಿಲನ್‌' ಮುಗಿಸದೇ, ಸುದೀಪ್‌ ಅವರ ಬೇರೆ ಸಿನಿಮಾಗಳು ಶುರುವಾಗುವಂತಿಲ್ಲ. ಕಾರಣ, "ದಿ ವಿಲನ್‌' ಚಿತ್ರದಲ್ಲಿನ ಸುದೀಪ್‌ ಅವರ ಗೆಟಪ್‌. ಹಾಗಾಗಿ ಮೊದಲು ಪ್ರೇಮ್‌ ಚಿತ್ರ ಮುಗಿಸಿದ ಮೇಲಷ್ಟೇ, ಬೇರೆಯವರಿಗೆ ಸುದೀಪ್‌ ಸಿಗುವುದಕ್ಕೆ ಸಾಧ್ಯ. ಪ್ರೇಮ್‌, ಸುದೀಪ್‌ ಅವರನ್ನು ಯಾವತ್ತು ಬಿಟ್ಟುಕೊಡುತ್ತಾರೋ, ಅವರು ಯಾವತ್ತೂ ಹೇಳಿದ ಸಮಯಕ್ಕೆ ಚಿತ್ರ ಮುಗಿಸುವುದಿಲ್ಲ, ಒಂದು ವರ್ಷ ಅಂತ ಹೇಳಿ ಎರಡು ವರ್ಷ ಮಾಡುತ್ತಾರೆ ... ಎಂಬ ಆರೋಪಗಳು ಸಹಜವಾಗಿಯೇ ಪ್ರೇಮ್‌ ಕುರಿತು ಗಾಂಧಿನಗರದಲ್ಲಿ ಕೇಳಿಬರುತ್ತಿವೆ. ಈ ಬಗ್ಗೆ ಪ್ರೇಮ್‌ ಏನು ಹೇಳುತ್ತಾರೆ ಗೊತ್ತಾ?

"ನಿಮ್ಮಿಂದಾಗಿ ಸುದೀಪ್‌ ಅವರ ಇತರ ಪ್ರಾಜೆಕ್ಟ್ಗಳು ತಡವಾಗುತ್ತಿವೆಯಂತೆ. ಏನ್‌ ಸಮಾಚಾರ, ಯಾಕ್‌ ಲೇಟು, ಸುದೀಪ್‌ ಅವರನ್ನು ವಿಲನ್‌ನಿಂದ ಯಾವತ್ತೂ ಬಿಟ್ಟುಕೊಡುತ್ತೀರಿ' ಎಂದು ಪ್ರೇಮ್‌ ಅವರನ್ನು ಕೇಳಿದರೆ ಈ ಮೇಲಿನ ಕಾರಣಗಳನ್ನು ನೀಡುತ್ತಾರೆ ಪ್ರೇಮ್‌. ಸಿನಿಮಾ ತಡವಾಗಿದ್ದನ್ನು ಹಾಗೂ ಅದರಿಂದ ಸುದೀಪ್‌ ಅವರಿಗೆ ತೊಂದರೆಯಾಗಿದ್ದನ್ನು ಒಪ್ಪಿಕೊಳ್ಳುತ್ತಲೇ "ದಿ ವಿಲನ್‌' ಯಾಕೆ ತಡವಾಗುತ್ತಿದೆ ಎಂಬುದಕ್ಕೆ ಕಾರಣ ಕೊಡುತ್ತಾರೆ ಪ್ರೇಮ್‌. 

"ಸಿನಿಮಾ ತಡವಾಗಿದೆ ನಿಜ. ಸುದೀಪ್‌ ಅವರಿಗೂ ನಮ್ಮಿಂದ ತೊಂದರೆ ಆಗಿದೆ ಎಂದು ಗೊತ್ತು. ಈ ಚಿತ್ರಕ್ಕೆ ಅವರು ಸಹಕರಿಸುತ್ತಿರುವ ರೀತಿಯನ್ನು ನಾವು ಮೆಚ್ಚಲೇಬೇಕು. ಈ ತಿಂಗಳಿಗೆ ಸುದೀಪ್‌ ಅವರ ಚಿತ್ರೀಕರಣ ಮುಗಿಸುತ್ತೇನೆ. ಮಾತಿನ ಭಾಗದ ಹಾಗೂ ಶಿವಣ್ಣ-ಸುದೀಪ್‌ ಕಾಂಬಿನೇಶನ್‌ನ ಚಿತ್ರೀಕರಣ ಮುಗಿಸಿದ್ದೇನೆ. ಈ ತಿಂಗಳಲ್ಲಿ ಸುದೀಪ್‌ ಅವರ ಹಾಡಿನ ಚಿತ್ರೀಕರಣ ಮುಗಿಸುತ್ತೇನೆ. ಅಲ್ಲಿಗೆ ಸುದೀಪ್‌ ಅವರ ಭಾಗದ ಚಿತ್ರೀಕರಣ ಮುಗಿದಂತೆ. ಮುಂದೆ ಶಿವರಾಜಕುಮಾರ್‌ ಅವರ ಹಾಡುಗಳನ್ನು ಚಿತ್ರೀಕರಿಸುತ್ತೇನೆ' ಎನ್ನುತ್ತಾರೆ ಪ್ರೇಮ್‌.

ಸಿನಿಮಾ ತಡವಾಗುತ್ತಿರುವ ಬಗ್ಗೆಯೂ ಪ್ರೇಮ್‌ ಮಾತನಾಡುತ್ತಾರೆ. "ಸಿನಿಮಾ ತಡವಾಗುತ್ತಿದೆ ಎಂದರೆ ಅದಕ್ಕೆ ಸಾಕಷ್ಟು ಕಾರಣಗಳಿವೆ. ಮುಖ್ಯವಾಗಿ ಇದು ಇಬ್ಬರು ಬಿಗ್‌ ಸ್ಟಾರ್‌ಗಳ ಸಿನಿಮಾ. ಇಬ್ಬರು ಸ್ಟಾರ್‌ಗಳ ಡೇಟ್ಸ್‌ ಅನ್ನು ಹೊಂದಿಸಬೇಕು. ಅದಕ್ಕಿಂತ ಹೆಚ್ಚಾಗಿ ತಡ ಅನ್ನುತ್ತಾರಲ್ಲ, ನನ್ನ ಯಾವುದೇ ಸಿನಿಮಾವಾದರೂ ಅದು ಒಂದು ವರ್ಷ ಆಗಿಯೇ ಆಗುತ್ತದೆ. ನನಗೆ ಮೂರು ತಿಂಗಳಿಗೆ ಸಿನಿಮಾ ಮಾಡಿ ಮುಗಿಸಿ ಗೊತ್ತಿಲ್ಲ. ನಾನು ಆ ತರಹ ಮಾಡಿಲ್ಲ, ಮಾಡೋದು ಇಲ್ಲ. ಆ ತರಹ ಮೂರು ತಿಂಗಳಿಗೆ ಸಿನಿಮಾ ಮಾಡೋದಿದ್ದರೆ ಇಷ್ಟೊತಿಗೆ 50 ಸಿನಿಮಾ ಮಾಡಿ, ದುಡ್ಡು ಮಾಡಿಕೊಂಡು ಆರಾಮವಾಗಿ ಮನೆಯಲ್ಲಿರಬಹುದಿತ್ತು. ನಾನು ಪ್ಯಾಶನೇಟ್‌ ಆಗಿ ಸಿನಿಮಾ ಮಾಡುತ್ತೇನೆ. "ದಿ ವಿಲನ್‌' ಬಗ್ಗೆ ಹೇಳುವುದಾದರೆ ಇದು ದೊಡ್ಡ ಕ್ಯಾನ್ವಸ್‌ ಇರುವ ಸಿನಿಮಾ. ದೊಡ್ಡ ತಾರಾಬಳಗವಿದೆ. ಎಲ್ಲರ ಡೇಟ್ಸ್‌ ಹೊಂದಿಸಿ ಚಿತ್ರೀಕರಣ ಮಾಡಬೇಕು. ಇಲ್ಲಿ ವಿಭಿನ್ನ ಗೆಟಪ್‌ಗ್ಳಿವೆ. ಸುಖಾಸುಮ್ಮನೆ ಶೋಕಿಗಾಗಿ ನಾವು ಸಿನಿಮಾವನ್ನು ಉದ್ದ ಎಳೆಯುತ್ತಿಲ್ಲ. ನನ್ನ ಕೆಲಸವನ್ನು ನಾನು ಮಾಡುತ್ತಲೇ ಇದ್ದೇನೆ' ಎಂಬುದು ಪ್ರೇಮ್‌ ಮಾತು. ಮೊದಲೇ ಹೇಳಿದಂತೆ ಇದು ಮಲ್ಟಿಸ್ಟಾರ್‌ ಸಿನಿಮಾ. ಜೊತೆಗೆ ಪ್ರೇಮ್‌ ತಮ್ಮದೇ ಶೈಲಿಯ ಕಥೆ ಮಾಡಿಕೊಂಡಿದ್ದಾರೆ. ಅವರ ಕಲ್ಪನೆಯನ್ನು ಚಿತ್ರೀಕರಣ ಮಾಡಲು ಸಾಕಷ್ಟು ಸಮಯ ಹಿಡಿದಿದೆ. "ಇಲ್ಲಿ ಒಂದು ವಿಷಯವನ್ನು ನಾನು ಹೇಳಲೇಬೇಕು. ನನ್ನ ಸಿನಿಮಾದಲ್ಲಿ 13 ರಿಂದ 14 ಲೊಕೇಶನ್‌ಗಳಿವೆ. ಎಲ್ಲವೂ ದೂರದ ಊರುಗಳಲ್ಲಿರುವ ಲೊಕೇಶನ್‌. ಯಾವುದೋ ಒಂದು ಮನೆಯಲ್ಲಿ ಚಿತ್ರೀಕರಣ ಮುಗಿಸಿಬಿಡಲು ನನ್ನದು ಫ್ಯಾಮಿಲಿ ಸೆಂಟಿಮೆಂಟ್‌ ಸಿನಿಮಾವಲ್ಲ. ಇಲ್ಲಿನ ಕಥೆ ಸಾಕಷ್ಟು ಲೊಕೇಶನ್‌ಗಳನ್ನು ಡಿಮ್ಯಾಂಡ್‌ ಮಾಡುತ್ತದೆ. ನಿರ್ದೇಶಕನಾಗಿ ನಾನು ಅದನ್ನು ಪೂರೈಸಬೇಕು. ಅಷ್ಟು ಜಾಗಗಳಲ್ಲಿ ಚಿತ್ರೀಕರಣ ಮಾಡುವಾಗ ಸಹಜವಾಗಿಯೇ ಚಿತ್ರೀಕರಣದ ಅವಧಿ ಕೂಡಾ ಹೆಚ್ಚಾಗಿಯೇ ಆಗುತ್ತದೆ. "ದಿ ವಿಲನ್‌' ತಡವಾಗಲು ಮತ್ತೂಂದು ಕಾರಣವೆಂದರೆ ನಾಯಕಿ ಆ್ಯಮಿ ಜಾಕ್ಸನ್‌ ಅವರ ವೀಸಾ ಸಮಸ್ಯೆ. ಸುಮಾರು ಮೂರು ತಿಂಗಳು ನಾಯಕಿಯಿಂದ ತಡವಾಯಿತು. ವೀಸಾ ಸಮಸ್ಯೆ ಹಾಗೂ ಅವರ ತಮಿಳು ಸಿನಿಮಾವೆಂದು ನಾವು ನಮ್ಮ ಚಿತ್ರೀಕರಣವನ್ನು ಮುಂದೆ ಹಾಕಬೇಕಾಯಿತು. ದೊಡ್ಡ ಸಿನಿಮಾ ಮಾಡುವಾಗ ಒಂಚೂರು ಹೆಚ್ಚುಕಮ್ಮಿಯಾಗುತ್ತದೆ. ಯಾರು ಕೂಡಾ ಇಲ್ಲಿ ಬೇಕೆಂದು ಸಿನಿಮಾವನ್ನು ಮುಂದೂಡುತ್ತಿಲ್ಲ' ಎಂದು ಖಡಕ್‌ ಆಗಿ ಹೇಳುತ್ತಾರೆ ಪ್ರೇಮ್‌. 

ಎಲ್ಲಾ ಓಕೆ, ಪ್ರತಿ ಬಾರಿಯೂ ಪ್ರೇಮ್‌ ಸಿನಿಮಾಗಳು ತಡವಾಗುತ್ತವೆ ಯಾಕೆ ಎಂದರೆ, "ಎಲ್ಲಿ ಬ್ರದರ್‌ ತಡ' ಎಂಬ ಉತ್ತರ ಪ್ರೇಮ್‌ರಿಂದ ಬರುತ್ತದೆ. "ತಡವಾಗುತ್ತದೆ ಎಂಬುದನ್ನು ನಾನು ನಂಬೋದಿಲ್ಲ. ಮೊದಲೇ ಹೇಳಿದಂತೆ ಆರಂಭದಿಂದಲೂ ನಾನು ಒಂದು ಸಿನಿಮಾ ಆರಂಭಿಸಿ, ರಿಲೀಸ್‌ ಮಾಡಲು ಒಂದು ವರ್ಷ ತೆಗೆದುಕೊಳ್ಳುತ್ತೇನೆ. ನಾನು ಸಿನಿಮಾವನ್ನು ತುಂಬಾ ಪ್ರೀತಿಸಿ ಮಾಡುತ್ತೇನೆ. ಸಿನಿಮಾ ಮಾಡಲು ಇಳಿದರೆ ನಾನು ಊಟ, ತಿಂಡಿಯ ಬಗ್ಗೆಯೂ ಗಮನಹರಿಸೋದಿಲ್ಲ. ಇತ್ತೀಚೆಗೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಮಂಡ್ಯ ರಮೇಶ್‌ ಹೇಳುತ್ತಿದ್ದರು, "ಈ ತರಹ ಊಟ, ತಿಂಡಿ ಬಿಟ್ಟು ಸಿನಿಮಾ ಮಾಡುವವರನ್ನು ಇಷ್ಟರವರೆಗೆ ನಾನು ನೋಡಿಲ್ಲ' ಎಂದು. ನನ್ನ ಕೆಲಸವನ್ನು ನಾನು ನಿಯತ್ತಾಗಿ ಮಾಡುತ್ತಲೇ ಇದ್ದೇನೆ' ಎಂಬ ಉತ್ತರ ಪ್ರೇಮ್‌ರಿಂದ ಬರುತ್ತದೆ.  ಅಂತಿಮ ಹಂತಕ್ಕೆ ಬಂದಿರುವ "ದಿ ವಿಲನ್‌' ಯಾವಾಗ ಬಿಡುಗಡೆಯಾಗುತ್ತದೆ ಎಂದರೆ, "ಗೊತ್ತಿಲ್ಲ' ಎನ್ನುತ್ತಾರೆ ಪ್ರೇಮ್‌. ಅದಕ್ಕೆ ಕಾರಣ ಗ್ರಾಫಿಕ್‌. "ಸಿನಿಮಾ ಮೇಕಿಂಗ್‌ ನಮ್ಮ ಕೈಯಲ್ಲಿರಬಹುದು. ಆದರೆ, ಗ್ರಾಫಿಕ್‌ ವರ್ಕ್‌ ನಮ್ಮ ಕೈಯಲ್ಲಿ ಇಲ್ಲ. ನಾವು ಅದಕ್ಕೆ ಕಾಯಲೇಬೇಕು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಚಿತ್ರದ ಟೀಸರ್‌ ಬಿಡುಗಡೆಯಾಗಬೇಕಿತ್ತು. ಆದರೆ, ಗ್ರಾಫಿಕ್‌ ಕಾರಣದಿಂದ ಆಗಿಲ್ಲ. ಸಿನಿಮಾದಲ್ಲಿ ಸಾಕಷ್ಟು ಗ್ರಾಫಿಕ್‌ ಕೆಲಸವಿದೆ. ನಾವು ಏಪ್ರಿಲ್‌ನಲ್ಲಿ ಸಿನಿಮಾ ಬಿಡುಗಡೆ ಮಾಡಬೇಕು ಅಂದುಕೊಂಡಿದ್ದೆವು. ಆದರೆ, ಎಲ್ಲವೂ ಗ್ರಾಫಿಕ್‌ ಮೇಲೆ ನಿಂತಿದೆ. ಅದು ಯಾವಾಗ ನಮ್ಮ ಕೈಗೆ ಸಿಗುತ್ತೋ ಅದರ ಮೇಲೆ ಚಿತ್ರದ ಬಿಡುಗಡೆ ನಿಂತಿರುತ್ತದೆ' ಎನ್ನುತ್ತಾರೆ ಪ್ರೇಮ್‌. 

1. ಒಂದೇ ಮನೆಯೊಳಗೆ ಚಿತ್ರೀ ಕರಣ ಮಾಡಿಮುಗಿಸಲು "ದಿ ವಿಲನ್‌' ಫ್ಯಾಮಿಲಿ ಸೆಂಟಿಮೆಂಟ್‌ ಸಿನಿಮಾವಲ್ಲ
2. ನನ್ನ ಸಿನಿಮಾದಲ್ಲಿ 13 ರಿಂದ 14 ಲೊಕೇಶನ್‌ಗಳಿವೆ. ಸಹಜವಾಗಿಯೇ ಚಿತ್ರೀಕರಣ ತಡವಾಗುತ್ತಿದೆ
3. ಚಿತ್ರದಲ್ಲಿ ಇಬ್ಬರು ದೊಡ್ಡ ಸ್ಟಾರ್ ನಟಿಸುತ್ತಿದ್ದಾರೆ. ಇಬ್ಬರ ಡೇಟ್ಸ್‌ ಹೊಂದಿಸಬೇಕು
4. ಚಿತ್ರದ ನಾಯಕಿ ಆ್ಯಮಿ ಜಾಕ್ಸನ್‌ ಅವರು ವಿದೇಶಿ ಬೆಡಗಿ. ಅವರ ವೀಸಾ ಸಮಸ್ಯೆಯಿಂದಲೂ ಚಿತ್ರ ತಡವಾಯಿತು

ರವಿಪ್ರಕಾಶ್‌ ರೈ

Trending videos

Back to Top