CONNECT WITH US  

ಅಪ್ಪಾ ಐ ಲವ್‌ ಯು ಪಾ

ಚಾಮಯ್ಯ ಮೇಷ್ಟ್ರು ಇಲ್ಲದ 8 ವರ್ಷಗಳು

ಕೆ.ಎಸ್‌. ಅಶ್ವತ್ಥ್

ಬಹುಶಃ ಕನ್ನಡದಲ್ಲಿ ಅತೀ ಹೆಚ್ಚು ಹೀರೋಗಳಿಗೆ ತಂದೆಯಾಗಿ ಅಭಿನಯಿಸಿದ ಏಕೈಕ ನಟರೆಂದರೆ ಅದು ದಿವಂಗತ ಕೆ.ಎಸ್‌. ಅಶ್ವತ್ಥ್.
ಡಾ ರಾಜಕುಮಾರ್‌ ಅವರಿಂದ ಮೊದಲ್ಗೊಂಡು, ನಂತರ ಬೇರೆ ಬೇರೆ ತಲೆಮಾರಿನ ಹಲವು ಹೀರೋಗಳಿಗೆ ತಂದೆಯಾಗಿ ಅಭಿನಯಿಸಿದವರು ಅಶ್ವತ್ಥ್. ತಂದೆಯ ಪಾತ್ರಗಳಷ್ಟೇ ಅಲ್ಲ, ಎಲ್ಲಾ ತರಹದ ಪಾತ್ರಗಳನ್ನೂ ಮಾಡಿ ಮಿಂಚಿದವರು ಅಶ್ವತ್ಥ್. ಒಂದು ಕಾಲಕ್ಕೆ ಪ್ರತಿ ಚಿತ್ರದಲ್ಲೂ ಅಶ್ವತ್ಥ್ ಅವರು ಇರಲೇಬೇಕು ಎಂದು ಕನ್ನಡ ಚಿತ್ರರಂಗದವರಷ್ಟೇ ಅಲ್ಲ, ಚಿತ್ರಪ್ರೇಮಿಗಳು ಸಹ ಆಸೆಪಡುತ್ತಿದ್ದರು.ಅಂತಹ ಒಬ್ಬ ಅದ್ಭುತ ನಟ ತೀರಿಕೊಂಡು ಈ 18ಕ್ಕೆ ಎಂಟು ವರ್ಷಗಳಾಗುತ್ತವೆ.  ಈ ಬಾರಿಯ "ಸುಚಿತ್ರಾ'ದಲ್ಲಿ ಅವರನ್ನು ನೆನಪಿಸಿಕೊಳ್ಳುವ ಒಂದು ಪುಟ್ಟ ಪ್ರಯತ್ನವನ್ನು ಮಾಡಲಾಗಿದೆ.

ಕನ್ನಡ ಚಿತ್ರರಂಗಕ್ಕೆ ಮತ್ತು ಚಿತ್ರಪ್ರೇಮಿಗಳಿಗೆ ಅಶ್ವತ್ಥ್ ಎಂದರೆ ಮೊದಲಿಗೆ "ನಾಗರಹಾವು' ಚಿತ್ರದ ಚಾಮಯ್ಯ ಮೇಷ್ಟ್ರು ಪಾತ್ರ ನೆನಪಿಗೆ ಬರುತ್ತದೆ. ಆದರೆ, ಇದಲ್ಲದೆ ಅವರು ಇನ್ನೂ ಹಲವು ಅದ್ಭುತ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಬಹುಶಃ ಅವರು ನಿರ್ವಹಿಸಿದಷ್ಟು ತಂದೆಯ ಪಾತ್ರಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಬೇರೆ ಯಾವ ನಟರೂ ಕಾಣಿಸಿಕೊಂಡಿಲ್ಲ ಎನ್ನುವುದು ವಿಶೇಷ. ಆ ಮಟ್ಟಿಗೆ ಅವರು ಡಾ. ರಾಜಕುಮಾರ್‌ರಿಂದ ಹಿಡಿದು ಶಿವರಾಜಕುಮಾರ್‌ವರೆಗೂ ಮೂರ್‍ನಾಲ್ಕು ತಲೆಮಾರಿನ ಬಹುತೇಕ ಕಲಾವಿದರ ತಂದೆಯಾಗಿ ಕಾಣಿಸಿಕೊಂಡಿದ್ದಾರೆ.

ಅದರಲ್ಲೂ ಡಾ ರಾಜಕುಮಾರ್‌ ಮತ್ತು ಡಾ ವಿಷ್ಣುವರ್ಧನ್‌ ಅವರ ಚಿತ್ರಗಳೆಂದರೆ ಅಶ್ವತ್ಥ್ ಅವರು ಇರಲೇಬೇಕು ಎನ್ನುವಷ್ಟರ ಮಟ್ಟಿಗೆ ಕಡ್ಡಾಯವಾಗಿ ಅಶ್ವತ್ಥ್ ಅವರು ಇರುತ್ತಿದ್ದರು. ಅಶ್ವತ್ಥ್ ಅವರು ನಟಿಸಿದ 350ಕ್ಕೂ ಹೆಚ್ಚು ಚಿತ್ರಗಳ ಪೈಕಿ ಡಾ. ರಾಜಕುಮಾರ್‌ ಅವರ ಸುಮಾರು 100 ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ತಂದೆಯಾಗಿ, ಸ್ನೇಹಿತನಾಗಿ, ಮಾವನಾಗಿ, ಬಾವನಾಗಿ, ಗುರುವಾಗಿ, ಆಳಾಗಿ ... ಹೀಗೆ ಹಲವು ರೀತಿಯ ಪಾತ್ರಗಳಲ್ಲಿ ಅಶ್ವತ್ಥ್ ಅವರು ಅಭಿನಯಿಸಿದ್ದರು. ಇನ್ನು ಅವರಿಬ್ಬರು ತಂದೆ-ಮಗನಾಗಿ "ಕಾಮನಬಿಲ್ಲು', "ಶ್ರುತಿ ಸೇರಿದಾಗ', "ಜೀವನ ಚೈತ್ರ', "ಶ್ರಾವಣ ಬಂತು' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಹಾಗೆ ನೋಡಿದರೆ ಡಾ. ರಾಜಕುಮಾರ್‌ ಮತ್ತು ಅಶ್ವತ್ಥ್ ಅವರ ಜೊತೆಯಾಟದ ಬಗ್ಗೆಯೇ ಸಾಕಷ್ಟು ಬರೆಯಬಹುದು. 50ರ ದಶಕದ ಕೊನೆಯಲ್ಲಿ ಮೊದಲ ಬಾರಿಗೆ ಜೊತೆಯಾಗಿ ನಟಿಸಿದ ಡಾ ರಾಜಕುಮಾರ್‌ ಮತ್ತು ಅಶ್ವತ್ಥ್, ನಂತರ ಸುಮಾರು ನಾಲ್ಕು ದಶಕಗಳ ಕಾಲ ಒಟ್ಟಾಗಿ ಹಲವು ಚಿತ್ರಗಳಲ್ಲಿ ನಟಿಸಿದರು. ಒಂದು ಹಂತದಲ್ಲಿ ಚಿತ್ರರಂಗದಿಂದ ದೂರವಿದ್ದ ಅಶ್ವತ್ಥ್ ಅವರು, ಡಾ. ರಾಜಕುಮಾರ್‌ ಅಭಿನಯದ "ಶಬ್ಧವೇಧಿ' ಚಿತ್ರದಲ್ಲಿ ನಟಿಸುವ ಮೂಲಕ ವಾಪಸ್ಸು ಬಂದು, ಮುಂದಿನ ದಿನಗಳಲ್ಲಿ ಮತ್ತೆ ಅಭಿನಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.

"ನಾಗರಹಾವು' ಚಿತ್ರದಲ್ಲಿ ಅಶ್ವತ್ಥ್ ಮತ್ತು ವಿಷ್ಣುವರ್ಧನ್‌ ಮೊದಲ ಬಾರಿಗೆ ಒಟ್ಟಾಗಿ ಅಭಿನಯಿಸಿದ್ದರು. ಇಲ್ಲಿ ಅವರು ಚಾಮಯ್ಯ ಮೇಷ್ಟ್ರಾಗಿ ನಟಿಸಿದರೆ, ಅವರ ಮೆಚ್ಚಿನ ಶಿಷ್ಯ ರಾಮಾಚಾರಿಯಾಗಿ ವಿಷ್ಣುವರ್ಧನ್‌ ಕಾಣಿಸಿಕೊಂಡಿದ್ದರು. ಅಲ್ಲಿಂದ ಶುರುವಾದ ಅವರಿಬ್ಬರ ಜೊತೆಯಾಟ, "ಸಿರಿವಂತ' ಚಿತ್ರದವರೆಗೂ ಮುಂದುವರೆಯಿತು. 

ಆ ನಂತರ ಅವರಿಬ್ಬರೂ ಹಲವು ಚಿತ್ರಗಳಲ್ಲಿ ನಟಿಸುವುದಷ್ಟೇ ಅಲ್ಲ, "ಕರ್ಣ', "ಕರುಣಾಮಯಿ', "ಜನನಾಯಕ', "ನಾನೆಂದು ನಿಮ್ಮವನೇ', "ಮುತ್ತಿನ ಹಾರ' ಮುಂತಾದ ಹಲವು ಚಿತ್ರಗಳಲ್ಲಿ ಡಾ. ವಿಷ್ಣುವರ್ಧನ್‌ ಅವರ ತಂದೆಯ ಪಾತ್ರದಲ್ಲಿ ಅಶ್ವತ್ಥ್ ನಟಿಸಿದ್ದರು. ಇದಲ್ಲದೆ ಅಂಬರೀಶ್‌, ಅನಂತ್‌ ನಾಗ್‌, ಶ್ರೀನಾಥ್‌, ಶಿವರಾಜಕುಮಾರ್‌ ಸೇರಿದಂತೆ ಹಲವು ಕಲಾವಿದರ ಚಿತ್ರಗಳಲ್ಲಿ ಅಶ್ವತ್ಥ್ ಅವರು ತಂದೆಯಾಗಿ ನಟಿಸಿದ್ದರು. ತಂದೆಯಲ್ಲದಿದ್ದರೂ ಒಂದು ಪ್ರಮುಖ ಪಾತ್ರದಲ್ಲಿ ಅವರು ಇದ್ದೇ ಇರುತ್ತಿದ್ದರು. ಅದರಲ್ಲೂ ಒಳ್ಳೆಯ, ಸಾತ್ವಿಕ, ಗುಣವಂತನ ಪಾತ್ರ ಎಂದರೆ ಚಿತ್ರರಂಗದವರಿಗೆ ಮೊದಲು ನೆನಪಾಗುತ್ತಿದ್ದುದೇ ಅಶ್ವತ್ಥ್ ಎಂದರೆ ತಪ್ಪಿಲ್ಲ. ಅದಲ್ಲದೆ ಸ್ವಲ್ಪ ನೆಗೆಟಿವ್‌ ಶೇಡ್‌ ಇರುವ ಪಾತ್ರಗಳಲ್ಲೂ ಅಶ್ವತ್ಥ್ ಅವರು ಕಾಣಿಸಿಕೊಂಡು, ತಾವೊಬ್ಬ ವರ್ಸಟೈಲ್‌ ನಟ ಎಂದು ತೋರಿಸಿದ್ದರು. ಆದರೆ, ಅದ್ಯಾಕೋ ಕನ್ನಡಿಗರು ಅವರನ್ನು ಅಂತಹ ಪಾತ್ರಗಳಿಗಿಂತ ಸಾತ್ವಿಕ ಪಾತ್ರಗಳಲ್ಲೇ ಹೆಚ್ಚಾಗಿ ಇಷ್ಟಪಡುತ್ತಿದ್ದರು. ಅದೇ ಕಾರಣಕ್ಕೆ ಅವರಿಗೆ ಸಾಲು ಸಾಲು ಚಿತ್ರಗಳಲ್ಲಿ ಸಾಲುಸಾಲು ಅಂತಹ ಪಾತ್ರಗಳೇ ಸಿಕ್ಕಿದ್ದವು. ಇಂಥ ಒಬ್ಬ ಅಭಿಜಾತ ಕಲಾವಿದ ತೀರಿಕೊಂಡು ಎಂಟು ವರ್ಷಗಳಾಗಿವೆ. ಇಷ್ಟು ದಿನಗಳಲ್ಲಿ ಕನ್ನಡಿಗರು ಅವರನ್ನು ಮರೆತಿಲ್ಲ, ಮರೆಯುವುದಕ್ಕೆ ಸಾಧ್ಯವೂ ಇಲ್ಲ. ಏಕೆಂದರೆ, ತೆರೆಯ ಮೇಲೆ ಅವರನ್ನೂ ಕಂಡಾಗಲೆಲ್ಲಾ ಅಶ್ವತ್ಥ್ ಈಗಷ್ಟೇ ಮೇಕಪ್‌ ಮಾಡಿಸಿಕೊಂಡು ಅಭಿನಯಿಸಿ ಎದ್ದು ಹೋಗಿದ್ದಾರೆ. ನಾಳೆ ಮತ್ತೂಂದು ಸಿನಿಮಾದಲ್ಲೂ ಬಣ್ಣ ಹಚ್ಚುತ್ತಾರೆ ಎಂದು ಮನಸ್ಸು ಸುಳ್ಳು ಸುಳ್ಳೇ ಸಂಭ್ರಮಿಸುತ್ತದೆ. ಜೊತೆಗೆ, ಅವರ ಹಲವು ಚಿತ್ರಗಳು ಮತ್ತು ಪಾತ್ರಗಳ ಮೂಲಕ ಒಂದು ಮಧುರ ಸ್ಮರಣೆಯಾಗಿ ಅಶ್ವತ್ಥ್ ಕನ್ನಡಿಗರಿಗೆ ಪದೇಪದೇ ನೆನಪಾಗುತ್ತಲೇ ಇದ್ದಾರೆ, ಮಗುವಿನ ಹಾಗೆ, ನಗುವಿನ ಹಾಗೆ 
ಮಗುವನ್ನು, ನಗುವನ್ನು ಮರೆತು ಬದುಕಲು ಸಾಧ್ಯವೇ?

ಅಶ್ವತ್ಥ್ ಅವರ ಅವಿರಸ್ಮರಣೀಯ ಪಾತ್ರಗಳು
ಚಾಮಯ್ಯ ಮೇಷ್ಟ್ರು  (ನಾಗರಹಾವು)
ರಾಮಯ್ಯ (ಕಸ್ತೂರಿ ನಿವಾಸ)
ಅಚ್ಚಪ್ಪ (ಮುತ್ತಿನ ಹಾರ)
ವಸಿಷ್ಠ ಮಹರ್ಷಿ (ಸತ್ಯ ಹರಿಶ್ಚಂದ್ರ)
ಸಜಾನನ ಶರ್ಮ (ಮಯೂರ)

ರಾಜಕುಮಾರ್‌ ಮತ್ತು ಅಶ್ವತ್ಥ್ ಕಾಂಬಿನೇಷನ್‌ನ ಚಿತ್ರಗಳು
ರಣಧೀರ ಕಂಠೀರವ, ಸಿಪಾಯಿ ರಾಮು, ದಾರಿ ತಪ್ಪಿದ ಮಗ, ಬಂಗಾರದ ಪಂಜರ, ರಾಜ ನನ್ನ ರಾಜ, ಕಾಮನ ಬಿಲ್ಲು, ಹೊಸ ಬೆಳಕು, ಶ್ರಾವಣ ಬಂತು, ಅನುರಾಗ ಅರಳಿತು, ಶ್ರುತಿ ಸೇರಿದಾಗ, ಜೀವನ ಚೈತ್ರ

ಚೇತನ್‌ ನಾಡಿಗೇರ್
ಚಿತ್ರಕೃಪೆ: ಡಿ.ಸಿ.ನಾಗೇಶ್‌

Trending videos

Back to Top