CONNECT WITH US  

ಗೋವಿಯ ಹಾಡುಂಟು

ಮಹನೀಯರ ನಡುವಲ್ಲಿ ಸ್ಮರಣೀಯ ಕಾರ್ಯಕ್ರಮ

ಕೃತಿಕಾ, ಲೇಖಾ ಚಂದ್ರ, ಪ್ರಶಾಂತ್‌, ಅದಿತಿ ರಾವ್‌

"ಪಾರು ವೈಫ್ ಆಫ್ ದೇವದಾಸ್‌' ನಂತರ ಕಿರಣ್‌ ಗೋವಿಯಾವೊಂದು ಚಿತ್ರವನ್ನೂ ಮಾಡಿರಲಿಲ್ಲ. ಕಾರಣ ತಂದೆಯ
ಅನಾರೋಗ್ಯ. ತಂದೆಯವರು ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ ಅವರಿಗೆ ದಾಸರ "ಯಾರಿಗೆ ಯಾರುಂಟು' ನೆನಪಾಯಿತಂತೆ. ಈಗ ಅದೇ ಹೆಸರಿನಲ್ಲಿ ಅವರು ಸದ್ದಿಲ್ಲದೆ ಒಂದು ಸಿನಿಮಾ ಮಾಡಿದ್ದಾರೆ. "ಒರಟ' ಪ್ರಶಾಂತ್‌, ಕೃತಿಕಾ, ಲೇಖಾ ಚಂದ್ರ, ಅದಿತಿ ರಾವ್‌ ಮುಂತಾದವರು ನಟಿಸಿರುವ ಈ ಚಿತ್ರದ ಚಿತ್ರೀಕರಣ ಮುಗಿದು, ಬಿಡುಗಡೆಯ ಹಂತಕ್ಕೆ ಬಂದಿದೆ. ಅದಕ್ಕೂ ಮುನ್ನ ಇತ್ತೀಚೆಗೆ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಶೈಕ್ಷಣಿಕ ಮತ್ತು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಅಂಕೇಗೌಡ ಮತ್ತು ಆಟೋ ರಾಜ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಿರಣ್‌ ಗೋವಿ,"ಇದೊಂದು ರೊಮ್ಯಾಂಟಿಕ್‌ ಕಾಮಿಡಿ ಚಿತ್ರ. ಎಚ್‌.ಸಿ.ರಘುನಾಥ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅವರು ನಮ್ಮ ಚಿಕ್ಕಪ್ಪ.ನನ್ನ ಕಷ್ಟದಲ್ಲಿ ನಿಂತು ತಮ್ಮ ಸ್ನೇಹಿತರೊಟ್ಟಿಗೆ ಚಿತ್ರ ನಿರ್ಮಿಸಿದ್ದಾರೆ. ಇನ್ನು ಪ್ರಶಾಂತ್‌ ಸಹ ಕೈಜೋಡಿಸಿದ್ದಾರೆ. ಬಿ.ಜೆ. ಭರತ್‌ ಸಂಗೀತ ಸಂಯೋಜಿಸಿದರೆ, ರಾಕೇಶ್‌ ಛಾಯಾಗ್ರಹಣ ಮಾಡಿದ್ದಾರೆ' ಎಂದು ಮಾಹಿತಿ ಕೊಟ್ಟರು. ನಿರ್ಮಾಪಕರಿಗೆ ಕಥೆ ಬಹಳ ಇಷ್ಟವಾಯಿತಂತೆ. ಅದೇ ಕಾರಣಕ್ಕೆ ಅವರು ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆದರೆ, ಸಿನಿಮಾ ಮಾಡುತ್ತಾ ಮಾಡುತ್ತಾ ಅವರಿಗೆ ಚಿತ್ರರಂಗ ಏನು ಅಂತ ಗೊತ್ತಾಗಿದೆ. ಆದರೂ ಒಂದೊಳ್ಳೆಯ ಚಿತ್ರ ನಿರ್ಮಾಣ ಮಾಡಿದ ಖುಷಿ ಇದೆ ಎಂದು ರಘುನಾಥ್‌ ಹೇಳಿಕೊಂಡರು.

ಅಂದು ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಕೆ. ಕಲ್ಯಾಣ್‌ ಬಂದಿದ್ದರು. "ಇಲ್ಲಿ "ಯಾರಿಗೆ ಯಾರುಂಟು' ಎಂಬ ಕ್ವೆಶ್ಚನ್‌ ಮಾರ್ಕ್‌ ಬೇಡ. ಯಾರಿಗೇ ಆದರೂ ಒಬ್ಬರಲ್ಲ ಒಬ್ಬರು ಇದ್ದೇ ಇರುತ್ತಾರೆ. ಹಾಗಾಗಿ ಪ್ರಶ್ನಾರ್ಥಕ ಚಿಹ್ನೆಯಾಗಲೀ, ದುಃಖದ ಛಾಯೆಯಾಗಲೀ ಬೇಡ. ಇದೊಂದು ಕಲರ್‌ಫ‌ುಲ್‌ ಚಿತ್ರವಾಗುತ್ತದೆ ಎಂಬ ನಂಬಿಕೆ ನನಗಿದೆ. ಜೊತೆಗೆ ಈ ವೇದಿಕೆಯ ಮೇಲೆ ಶೈಕ್ಷಣಿಕ,ಮಾನವೀಯ ಮತ್ತು ವೈದ್ಯಕೀಯ ವಲಯದಲ್ಲಿ ಗುರುತಿಸಿಕೊಂಡ ಮೂವರು ಮಹನೀಯರನ್ನು ಸ್ಮರಿಸಿಕೊಳ್ಳಲಾಯಿತು. ಅದೊಂದು ಸಾರ್ಥಕ ಪ್ರಯತ್ನ. ಕಿರಣ್‌ ಗೋವಿ ಅವರ ಹಿಂದಿನ ಚಿತ್ರಗಳು ಮ್ಯೂಸಿಕಲ್‌ ಹಿಟ್‌ ಆಗಿದ್ದವು. ಈ ಚಿತ್ರ ಸಹ ಮ್ಯೂಸಿಕಲ್‌ ಹಿಟ್‌ ಆಗಲಿ'ಎಂದು ಹಾರೈಸಿದರು.

ಇನ್ನು ಚಿತ್ರದಲ್ಲಿ ನಟಿಸಿದ ಪ್ರಶಾಂತ್‌, ಕೃತಿಕಾ, ಲೇಖ ಚಂದ್ರ, ಅದಿತಿ ರಾವ್‌ ಮುಂತಾದವರು ಹಾಜರಿದ್ದರು. "ಚಿತ್ರದ ಟೈಟಲ್‌
ಎಷ್ಟು ಅರ್ಥಗರ್ಭಿತವಾಗಿದೆಯೋ, ಈ ಆಡಿಯೋ ಬಿಡುಗಡೆ ಸಹ ಅಷ್ಟೇ ಅರ್ಥಗರ್ಭಿತವಾಗಿದೆ. ಇದು ನನ್ನ ಕಂಬ್ಯಾಕ್‌ ಚಿತ್ರ. ಕಿರಣ್‌ ಗೋವಿ ಒಳ್ಳೆಯ ಕಥೆ ಮಾಡಿದ್ದಾರೆ. ಮೂವರು ನಾಯಕಿಯರಿದ್ದಾರೆ.

ಒಂದೊಳ್ಳೆಯ ತಂಡ ಸೇರಿಕೊಂಡು ಈ ಚಿತ್ರದ ಮಾಡಿದೆ' ಎಂದು ಖುಷಿಪಟ್ಟರು. ನಂತರ ಚಿತ್ರದ ಮೂರೂ ನಾಯಕಿಯರು ಚಿತ್ರದ ಬಗ್ಗೆ ಮಾತನಾಡಿದರು.

Trending videos

Back to Top