CONNECT WITH US  

ಮನೆಯಂಗಳದಲ್ಲಿ ಮಾತುಕಥೆ

ರಾಘಣ್ಣಗೆ ಬಣ್ಣ ಅನ್ನೋದೇ ಚಿಕಿತ್ಸೆ

ನಿರ್ದೇಶಕ ನಿಖೀಲ್‌ ಮಂಜು,ರಾಘವೇಂದ್ರ ರಾಜಕುಮಾರ್‌,ನಿರ್ಮಾಪಕ ಕುಮಾರ್‌.

ನಂದೊಂದು ಬೇಡಿಕೆ ಇದೆ ...'

ಬಹಳ ಸಂಕೋಚದಿಂದಲೇ ಹೇಳಿಕೊಂಡರು ರಾಘವೇಂದ್ರ ರಾಜಕುಮಾರ್‌. ಅವರು ಏನು ಬೇಡಿಕೆ ಇಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಆ ಕುತೂಹಲದಿಂದಲೇ ಕಾಯುತ್ತಿದ್ದಾಗ, ರಾಘವೇಂದ್ರ ರಾಜಕುಮಾರ್‌ ಮಾತು ಮುಂದುವರೆಸಿದರು. "14 ವರ್ಷಗಳ ನಂತರ ನಾನು ಬಣ್ಣ ಹಚ್ಚುತ್ತಿದ್ದೀನಿ, ಇದು ನನ್ನ ಕಂಬ್ಯಾಕ್‌ ಸಿನಿಮಾ ಅಂತೆಲ್ಲಾ ಸುದ್ದಿ ಮಾಡೋದು ಬೇಡ. ಒಂದೊಳ್ಳೆಯ ಸಿನಿಮಾದಲ್ಲಿ ನಾನಿದ್ದೇನೆ ಅಷ್ಟೇ. ಕಥೆ ಬಹಳ ಚೆನ್ನಾಗಿದೆ. ನಾನು ಅನಾರೋಗ್ಯದಿಂದ ಮಲಗಿದ್ದಾಗ, ನಾನು ಮತ್ತೆ ನಟಿಸಬಹುದಾ ಎಂದು ವೈದ್ಯರ ಹತ್ತಿರ ನನ್ನ ಹೆಂಡತಿ ಹೇಳುತ್ತಿರುವುದನ್ನು ಕೇಳಿದ್ದೆ.ಅದಕ್ಕೆ ಅವರು, "ಮೊದಲು ಅವರು ಬದುಕಿ ಬರಲಿ'ಅಂತ ಹೇಳುತ್ತಿದ್ದರು. ಹೀಗಿರುವಾಗಲೇ ಈ ಪಾತ್ರ ಮತ್ತು ಚಿತ್ರ ನನ್ನ ಪಾಲಿಗೆ ಬಂದಿದೆ. ಭಕ್ತಿಯಿಂದ ಮಾಡುತ್ತೀನಿ. ಪಾತ್ರಕ್ಕಾಗಿ ಯಾವುದೇ ತಯಾರಿ ಮಾಡಿಕೊಂಡಿಲ್ಲ. ಖಾಲಿ ಕಾಗದದ ತರಹ ಹೋಗ್ತಿàನಿ. ಅವರು ಬರೆದಂಗೆ ಬರೆಸಿಕೊಳ್ತೀನಿ' ಎಂದು ಹೇಳಿದರು.

ರಾಘವೇಂದ್ರ ರಾಜಕುಮಾರ್‌ ಮಾತನಾಡಿದ್ದು ತಮ್ಮದೇ ಹೊಸ ಚಿತ್ರವಾದ "ಅಮ್ಮನ ಮನೆ' ಮುಹೂರ್ತ ಸಮಾರಂಭದಲ್ಲಿ.
ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ನಡೆಯಿತು. ಮುಹೂರ್ತ ಸಮಾರಂಭಕ್ಕೆ ಶುಭ ಹಾರೈಸುವುದಕ್ಕೆ ಶಿವರಾಜಕುಮಾರ್‌, ಪುನೀತ್‌ ರಾಜಕುಮಾರ್‌ ಮುಂತಾದವರು ಬಂದಿದ್ದರು. ಮೊದಲ ದೃಶ್ಯದ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ, ಚಿತ್ರತಂಡದವರೆಲ್ಲಾ ಚಿತ್ರದ ಬಗ್ಗೆ ಮಾತನಾಡಿದರು.

ಮೊದಲು ಮಾತನಾಡಿದ್ದು ನಿರ್ದೇಶಕ ನಿಖೀಲ್‌ ಮಂಜು. ಅವರು ಇದುವರೆಗೂ ಪರ್ಯಾಯ ಸಿನಿಮಾ ಮಾಡಿದ್ದೇ ಹೆಚ್ಚು. ಈಗ ಮೊದಲ ಬಾರಿಗೆ ಬೇರೆ ತರಹದ ಪ್ರಯೋಗ ಮಾಡುತ್ತಿದ್ದಾರೆ.  "ಇದುವರೆಗೂ ಪ್ರಶಸ್ತಿ, ಚಿತ್ರೋತ್ಸವಕ್ಕೆ ಚಿತ್ರ ಮಾಡುತ್ತಿದ್ದೆ. ಈಗ ಜನರಿಗೂ ರೀಚ್‌ ಆಗಬೇಕೆಂದುಈಚಿತ್ರಮಾಡುತ್ತಿದ್ದೇನೆ. ರಾಘವೇಂದ್ರ ರಾಜಕುಮಾರ್‌ ಅವರ ಜೊತೆಗೆ ಚಿತ್ರ ಮಾಡುವ ಆಸೆ ಇತ್ತು. ನಿರ್ಮಾಪಕ ಕುಮಾರ್‌ ಅವರಿಗೆ ಹೇಳಿದೆ. ಇಬ್ಬರೂ ಅವರನ್ನು ಭೇಟಿ ಮಾಡಿ ಕಥೆ ಹೇಳಿದೆವು. ಕಥೆ ಮತ್ತು ಹೆಸರು ಕೇಳಿ ರಾಘಣ್ಣ ನಟಿಸುವುದಕ್ಕೆ ಒಪ್ಪಿಕೊಂಡರು. ಇದೊಂದು ಸಮಾಜಮುಖೀ ಚಿತ್ರ. ನಾವು ಹಿರಿಯರನ್ನು ನಿರ್ಲಕ್ಷ್ಯ ಮಾಡುತ್ತಿದ್ದೇವೆ. ನಮಗೂ ಮುಂದೊಂದು ದಿನ ವಯಸ್ಸಾಗುತ್ತದೆ ಎನ್ನುವುದನ್ನು ಮರೆಯುತ್ತಿದ್ದೇವೆ. ಇಲ್ಲಿ ಮಗನೊಬ್ಬ ತನ್ನ ತಾಯಿಯನ್ನು ಅನೇಕ ಸಮಸ್ಯೆಗಳ ಮಧ್ಯೆಯೂ ಹೇಗೆ ನೋಡಿಕೊಳ್ಳುತ್ತಾನೆ ಎನ್ನುವುದು ಚಿತ್ರದ ಕಥೆ. ಇಲ್ಲಿ ರಾಘಣ್ಣ ಪಿಟಿ ಮಾಸ್ಟರ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಮೂರು ತಿಂಗಳಿನಿಂದ ಸಾಕಷ್ಟು ಸುಧಾರಿಸಿಕೊಂಡಿದ್ದಾರೆ. ಈಗ ಮುಂಚಿಗಿಂತಲೂ ಚುರುಕಾಗಿ ನಡೆಯುತ್ತಾರೆ. ಚಿತ್ರ ಮುಗಿಯುವುದರೊಳಗೆ ಇನ್ನೂ ವೇಗವಾಗಿ ನಡೆಯುತ್ತಾರೆ ಎಂಬ ನಂಬಿಕೆ ಇದೆ. ಬಣ್ಣ ಅನ್ನೋದೇ ಚಿಕಿತ್ಸೆ' ಎಂದರು ನಿಖೀಲ್‌ ಮಂಜು.

ನಿರ್ಮಾಪಕ ಕುಮಾರ್‌ ಮತ್ತು ಛಾಯಾಗ್ರಾಹಕ ಸ್ವಾಮಿ ಇಬ್ಬರೂ ರಾಘವೇಂದ್ರ ರಾಜಕುಮಾರ್‌ ಜೊತೆಗೆ ಚಿತ್ರ ಮಾಡುತ್ತಿರುವುದೇ ಖುಷಿಯ ವಿಚಾರವಂತೆ. ಅಂಥದ್ದೊಂದು ಅವಕಾಶ ಸಿಕ್ಕಿದ್ದಕ್ಕೆ ಥ್ಯಾಂಕ್ಸ್‌ ಹೇಳುತ್ತಾ ಮಾತು ಮುಗಿಸಿದರು.

- ಚೇತನ್‌ ನಾಡಿಗೇರ್‌


Trending videos

Back to Top