CONNECT WITH US  

ಕನ್ನಡದಲ್ಲಿ  ಧೂಮ್‌ ಮಚಾಲೆ

ಸಿನಿಮಾಗೆ 20 ಕೋಟಿ ಬಜೆಟ್‌

ಸಂಪೂರ್ಣ ಹೊಸಬರ ಚಿತ್ರ. ಆದರೆ, ಬಜೆಟ್‌ 17 ರಿಂದ 20 ಕೋಟಿ!
-ಹಾಗಂತ ನಾವು ಹೇಳುತ್ತಿಲ್ಲ. ಚಿತ್ರತಂಡವೊಂದು ಹೇಳಿಕೊಂಡಿದೆ. ಸಾಮಾನ್ಯವಾಗಿ ಹೊಸಬರ ಚಿತ್ರವೆಂದರೆ ಎರಡರಿಂದ 3 ಕೋಟಿಯೊಳಗಿನ ಬಜಟ್‌ನಲ್ಲಿ ಸಿನಿಮಾ ಮಾಡಿರುತ್ತಾರೆ. ಆದರೆ, ಇಲ್ಲೊಂದು ಚಿತ್ರತಂಡ ಬರೋಬ್ಬರಿ 20 ಕೋಟಿ ಹಾಕಿ, ಹೊಸಬರ ಸಿನಿಮಾ ಮಾಡಲು ಮುಂದಾಗಿದೆ. ಅದು "ಧೂಮ್‌'. ಹಿಂದಿಯಲ್ಲಿ "ಧೂಮ್‌' ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿರೋದು ನಿಮಗೆ ಗೊತ್ತೇ ಇದೆ. ಈಗ ಅದೇ ಟೈಟಲ್‌ನಡಿ ಕನ್ನಡದಲ್ಲಿ ಸಿನಿಮಾ ಮಾಡಲು ಹೊಸಬರ ತಂಡ ಮುಂದಾಗಿದೆ. ರಾಜೇಶ್‌ ವರ್ಮಾ ಈ ಸಿನಿಮಾದ ನಿರ್ದೇಶಕರು. ಈ ಹಿಂದೆ ಓಂಪ್ರಕಾಶ್‌ ರಾವ್‌ ಸೇರಿದಂತೆ ಅನೇಕರು ಜೊತೆ ಕೆಲಸ ಮಾಡಿರುವ ರಾಜೇಶ್‌ ವರ್ಮಾ "ಧೂಮ್‌' ಮಾಡಲು ಮುಂದಾಗಿದ್ದಾರೆ. ಚಿತ್ರದಲ್ಲಿ ನಾಲ್ವರು ಹೊಸ ಹುಡುಗರು ನಟಿಸುತ್ತಿದ್ದಾರೆ. ಆ ನಾಲ್ವರು ಯಾರೆಂಬುದನ್ನು ನಿರ್ದೇಶಕರು ಸಸ್ಪೆನ್ಸ್‌ ಆಗಿಟ್ಟಿದ್ದು, ಸದ್ಯ ಅವರು ತರಬೇತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಅದ್ಧೂರಿಯಾಗಿ ಲಾಂಚ್‌ ಮಾಡಲಾಗುವುದು ಎಂಬುದು ಅವರ ಮಾತು. ಇತ್ತೀಚೆಗೆ ಸ್ಟಾಕ್‌ಶಾಟ್‌ಗಳನ್ನೊಳಗೊಂಡ ಟೀಸರ್‌ ತೋರಿಸಿ, ಸಿನಿಮಾ ಇದೇ ರೀತಿ ಮೂಡಿಬರುತ್ತದೆ ಎಂದರು ರಾಜೇಶ್‌. ಎಲ್ಲಾ ಓಕೆ, ಹೊಸಬರಿಗೆ ಅಷ್ಟೊಂದು ಬಜೆಟ್‌ ಯಾಕೆ ಎಂದರೆ, ಚಿತ್ರದಲ್ಲಿ ಟರ್ಕಿ ಸೇರಿದಂತೆ ಅನೇಕ ದೇಶಗಳಿಗೆ ಕಥೆ ಸಾಗುತ್ತದೆಯಂತೆ. ಜೊತೆಗೆ ಬೈಕ್‌ ರೇಸ್‌ ಕೂಡಾ ಇರುವುದರಿಂದ ಬಜೆಟ್‌ ಬೇಕಾಗುತ್ತದೆ ಎಂಬುದು ಅವರ ಮಾತು. ಬೈಕ್‌ ರೇಸ್‌ ಜೊತೆಗೆ ಅಂಧ ಹಾಗೂ ಕ್ಯಾನ್ಸರ್‌ಗೆ ತುತ್ತಾದ ಮಕ್ಕಳಿಗೆ ಸಹಾಯ ಮಾಡಿ ಎಂಬ ಸಂದೇಶ ಕೂಡಾ ಚಿತ್ರದಲ್ಲಿದೆಯಂತೆ.

ಚಿತ್ರವನ್ನು ದೆಹಲಿ ಮೂಲದ ಮುನ್ನ ಎನ್ನುವವರು ನಿರ್ಮಿಸುತ್ತಿದ್ದಾರೆ. ಕಥೆ ಇಷ್ಟವಾಗುವ ಜೊತೆಗೆ ಯುವ ತಂಡದ ಮೇಲೆ ಭರವಸೆ ಇಟ್ಟು ದೊಡ್ಡ ಬಜೆಟ್‌ನಲ್ಲಿ ನಿರ್ಮಿ­ಸಲು ಮುಂದಾಗಿದ್ದಾಗಿ ಹೇಳಿಕೊಂಡರು. ಉಳಿದಂತೆ ಚಿತ್ರದಲ್ಲಿ ಪಾಟಲಿ ಎಂಬ ನವನಟಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಚಿತ್ರಕ್ಕೆ ಗುರುಕಿರಣ್‌ ಸಂಗೀತ ನೀಡುತ್ತಿದ್ದಾರೆ. ಹೊಸಬರ ಜೊತೆ ಕೆಲಸ ಮಾಡುವುದರಿಂದ ಹೊಸತನ ನೀಡಲು ಸಾಧ್ಯವಾಗುತ್ತದೆ ಎನ್ನುವುದು ಗುರುಕಿರಣ್‌ ಮಾತು.


Trending videos

Back to Top