CONNECT WITH US  

ಹದಿಹರೆಯದ ಪ್ರೀತಿಗೆ  ಮೊಡವೆ ಸಾಕ್ಷಿ

ಶಶಿಕುಮಾರ್‌ ಮಗ ಹೀರೋ ಆದ್ರು

ನಿರ್ದೇಶಕ ಸಿದ್ಧಾರ್ಥ್ ಕಥೆ ಮಾಡಿ­ಕೊಂಡು ಹೀರೋಗಾಗಿ ಹುಡುಕಾಡುತ್ತಿದ್ದರಂತೆ. ಆಗ ಅವರ ಗೆಳೆಯರೊಬ್ಬರು, "ಶಶಿಕುಮಾರ್‌ ಮಗನನ್ನು ಒಮ್ಮೆ ನೋಡಿ' ಎಂದರಂತೆ. ಕಟ್‌ ಮಾಡಿದರೆ, ಸಿದ್ಧಾರ್ಥ್ ಹಿರಿಯ ನಟ ಶಶಿಕುಮಾರ್‌ ಅವ­ರಿಗೆ ಫೋನ್‌ ಮಾಡಿ, "ನಿಮ್ಮ ಮಗನನ್ನು ಹೀರೋ ಮಾಡಬೇಕೆಂದಿದ್ದೇವೆ. ಒಮ್ಮೆ ಕಥೆ ಕೇಳಿ' ಎಂದರಂತೆ. "ಆಯ್ತು' ಎಂದು ಫೋನ್‌ ಇಟ್ಟ ಶಶಿಕುಮಾರ್‌ ಅವರಿಂದ ಒಂದು ತಿಂಗಳು ಯಾವುದೇ ಪ್ರತಿಕ್ರಿಯೆ ಬರಲಿಲ್ಲವಂತೆ. ಕೊನೆಗೂ ಒಂದು ದಿನ ಬಿಡುವು ಮಾಡಿಕೊಂಡು ಕಥೆ ಕೇಳಿದ ಶಶಿಕುಮಾರ್‌, ಮಗನಿಗೆ ನಟಿಸಲು ಗ್ರೀನ್‌ ಸಿಗ್ನಲ್‌ ಕೊಟ್ಟರಂತೆ. ಹೀಗೆ ತಮ್ಮ "ಮೊಡವೆ' ಸಿನಿಮಾ ಆರಂಭವಾದ ಬಗ್ಗೆ ಹೇಳಿಕೊಂಡರು ನಿರ್ದೇಶಕ ಸಿದ್ಧಾರ್ಥ್. ಶಶಿಕುಮಾರ್‌ ಅವರ ಪುತ್ರ ಆದಿತ್ಯ "ಮೊಡವೆ' ಚಿತ್ರದ ಮೂಲಕ ನಾಯಕರಾಗಿ ಲಾಂಚ್‌ ಆಗಿದ್ದಾರೆ. ಶ್ರೀಕೃಷ್ಣ ಜನ್ಮಾಷ್ಟಮಿಯಂದು ಕಂಠೀರವ ಸ್ಟುಡಿಯೋದಲ್ಲಿ ಚಿತ್ರಕ್ಕೆ ಮುಹೂರ್ತ ನಡೆದಿದ್ದು, ಶಿವರಾಜಕುಮಾರ್‌ ಹಾಗೂ ದರ್ಶನ್‌ ಕ್ಲಾಪ್‌ ಮಾಡಿ, ಶುಭಕೋರಿದ್ದಾರೆ. 

 ನಿರ್ದೇಶಕ ಸಿದ್ಧಾರ್ಥ್ ಅವರಿಗೂ ಇದು ಚೊಚ್ಚಲ ಸಿನಿಮಾ. ನಾಗಶೇಖರ್‌ ಸೇರಿದಂತೆ ಹಲವು ನಿರ್ದೇಶಕರ ಜೊತೆ ಕೆಲಸ ಮಾಡಿರುವ ಅನುಭವವಿರುವ ಸಿದ್ಧಾರ್ಥ್, ಈಗ "ಮೊಡವೆ' ಮೂಲಕ ಲವ್‌ಸ್ಟೋರಿ­ಯೊಂದನ್ನು ಹೇಳಲು ಹೊರ­ಟಿ­ದ್ದಾರೆ. ಕಥೆಯ ಬಗ್ಗೆ ಹೆಚ್ಚಿನ ವಿವರ ಬಿಟ್ಟುಕೊಡದ ಸಿದ್ಧಾರ್ಥ್, ಇದೊಂದು ಮಾಸ್‌ ಅಂಶಗಳಿಂದ ಸಾಗುವ ಲವ್‌ಸ್ಟೋರಿ ಎಂದಷ್ಟೇ ಹೇಳುತ್ತಾರೆ. ನೈಜ ಘಟನೆಯೊಂದನ್ನು ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದೆಯಂತೆ. ಟೀನೇಜ್‌ನಲ್ಲಿ ಮೊಡವೆ ಬೀಳು­ವುದು ಸಾಮಾನ್ಯ­ವಾದ್ದರಿಂದ ಆ ಟೈಟಲ್‌ ಇಟ್ಟಿ­ದ್ದಾಗಿ ಹೇಳುವ ಸಿದ್ಧಾರ್ಥ್, ಕಥೆಯಲ್ಲಿ "ಮೊಡವೆ' ಬಗ್ಗೆ ಏನೂ ಇಲ್ಲ ಎನ್ನುತ್ತಾರೆ. ಚಿತ್ರದಲ್ಲಿ ನಾಯಕ ತಮಟೆ ಬಡಿದುಕೊಂಡು ಊರೆಲ್ಲಾ ಸುದ್ದಿಮುಟ್ಟಿಸುವ ಕಾಯಕ ಮಾಡಿ­ಕೊಂಡಿರುವ ಹುಡುಗನಾಗಿ ಕಾಣಿಸಿ­ಕೊಳ್ಳಲಿದ್ದಾರಂತೆ. ಹಂಪಿ, ಬಾದಾಮಿ, ಐಹೊಳೆ ಸುತ್ತಮುತ್ತ ಚಿತ್ರೀಕರಣ ನಡೆಯಲಿರುವುದರಿಂದ ಚಿತ್ರದಲ್ಲೂ ಅಲ್ಲಿನ ಭಾಷೆಯನ್ನೇ ಬಳಸಲಾಗುತ್ತದೆಯಂತೆ.

ನಾಯಕ ಆದಿತ್ಯ ಹೆಚ್ಚೇನು ಮಾತನಾಡಲಿಲ್ಲ. ಈ ಚಿತ್ರಕ್ಕಾಗಿ ಡ್ಯಾನ್ಸ್‌, ಫೈಟ್‌ ಕಲಿಯುತ್ತಿದ್ದು, ಜೊತೆಗೆ ಇಂಜಿನಿಯರಿಂಗ್‌ ಓದುತ್ತಿದ್ದಾರಂತೆ. ಓದಿಗೆ ತೊಂದರೆಯಾಗದ ರೀತಿಯಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸುವ ವಿಶ್ವಾಸ ಅವರಿಗಿದೆ. "ನಾನು ಒಂದು ದಿನ ಕೂಡಾ ಡ್ಯಾಡಿಯ ಜೊತೆ ಶೂಟಿಂಗ್‌ ಸ್ಪಾಟ್‌ಗೆ ಹೋದವನಲ್ಲ. ಓದಿನ ಕಡೆ ಗಮನಕೊಟ್ಟಿದ್ದೆ. ಈಗ ಹೀರೋ ಆಗುವ ಅವಕಾಶ ಬಂದಿದೆ. ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದೇನೆ' ಎನ್ನುವುದು ಆದಿತ್ಯ ಮಾತು. 

ಚಿತ್ರದಲ್ಲಿ ಅಪೂರ್ವ ನಾಯಕಿಯಾಗಿ ನಟಿಸುತ್ತಿದ್ದು, ಮೊದಲ ಬಾರಿಗೆ ಹಳ್ಳಿ ಹುಡುಗಿಯಾಗಿ ನಟಿಸುತ್ತಿರುವ ಖುಷಿ ಹಂಚಿಕೊಂಡರು. ಚಿತ್ರಕ್ಕೆ ಶ್ರೀಧರ್‌ ಸಂಭ್ರಮ್‌ ಸಂಗೀತವಿದೆ. ಶಿವಾನಂದ ಹಾಗೂ ಕೃಷ್ಣಮೂರ್ತಿ ಜೊತೆಯಾಗಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ.


Trending videos

Back to Top