CONNECT WITH US  

ನೋವು, ನಲಿವು ಉತ್ತರವಿಲ್ಲದ ಪ್ರಶ್ನೆಗಳು

ರಾಮಕೃಷ್ಣ  ಮೋಸ ಮಾಡಿದರಾ?

"ಮಹನೀಯರಿಗೆ ಅವಮಾನ ಮಾಡ್ತಿದ್ದೀನಿ, ದ್ರೋಹ ಬಗೆಯುತ್ತಿದ್ದೀನಿ ಅಂತ ಗಿಲ್ಟ್ ಕಾಡುತ್ತಿದೆ ...' ಬಹಳ ದುಃಖದಿಂದ ಹೇಳಿಕೊಂಡರು ಹಿರಿಯ ನಟ ರಾಮಕೃಷ್ಣ. ಅವರು ಅವಮಾನ ಮಾಡಿದ್ದು ಯಾರಿಗೆ, ದ್ರೋಹ ಬಗೆದಿದ್ದು ಯಾರಿಗೆ ಎಂಬ ಪ್ರಶ್ನೆ ತಕ್ಷಣವೇ ಬಂತು. "ಹುಣಸೂರು ಕೃಷ್ಣಮೂರ್ತಿ,
ಡಾ. ರಾಜಕುಮಾರ್‌, ಪುಟ್ಟಣ್ಣ ಕಣಗಾಲ್‌, ಕೆ. ಬಾಲಚಂದರ್‌ ಹೀಗೆ ಎಲ್ಲರಿಗೂ ಅವಮಾನ ಮಾಡುತ್ತಿದ್ದೀನಿ ನಾನು. ಮರ್ಯಾದೆ ತೆಯುತ್ತಿದ್ದೀನಿ. ಈ ಹುಡುಗ ಬೆಳೆಯುತ್ತಾನೆ, ಚಿತ್ರರಂಗಕ್ಕೆ ಏನೋ ಮಾಡುತ್ತಾನೆ ಅಂತ ಅವರೆಲ್ಲಾ ನನ್ನ ಮೇಲೆ ನಂಬಿಕೆ ಇಟ್ಟು ಬೆಳೆಸಿದ್ದರು. ನಾನು ನೋಡಿದರೆ, ಏನೂ ಮಾಡದೆ ಅವರಿಗೆಲ್ಲಾ ಮೋಸ ಮಾಡುತ್ತಿದ್ದೀನಿ. ನನ್ನ ಕೈಯಲ್ಲಿ ಏನೂ ಇಲ್ಲ. ಈಗಲೂ ಜನ ಸಿಕ್ಕಾಗೆಲ್ಲಾ, ನನ್ನ ಅಭಿನಯದ ಬಗ್ಗೆ ಮೆಚ್ಚಿ ಮಾತಾಡುತ್ತಾರೆ. ಎಲ್ಲೇ ಸಿಕ್ಕರೂ ನಮಸ್ಕಾರ ಮಾಡುತ್ತಾರೆ. ಇನ್ನು ನಿರ್ಮಾಪಕರು ಮತ್ತು ನಿರ್ದೇಶಕರು ಕೈ ತುಂಬಾ ದುಡ್ಡು ಕೊಟ್ಟು, ಹೊಟ್ಟೆ ತುಂಬಾ ಊಟ ಹಾಕಿ ಕಳಿಸಿಕೊಡ್ತಾರೆ. ಆದರೆ, ಪಾತ್ರ ...'

ಹಾಗಾದರೆ, ರಾಮಕೃಷ್ಣರಿಗೆ ಒಳ್ಳೆಯ ಪಾತ್ರ ಸಿಗುತ್ತಿಲ್ಲ ಎಂಬ ಬೇಸರವಿದೆಯಾ? ಹೌದು ಎಂದು ಅವರು ನೇರವಾಗಿ ಹೇಳುವುದಿಲ್ಲವಾದರೂ, ಆ ನೋವನ್ನು ಅವರ ಮಾತುಗಳಲ್ಲೇ ಅರ್ಥ ಮಾಡಿಕೊಳ್ಳಬಹುದು. "ಕೆಲವು ಚಿತ್ರಗಳಲ್ಲಿನ ನನ್ನ ಅಭಿನಯ ನೋಡಿ, ಯಾಕೆ ಇಂಥ ಪಾತ್ರ ಮಾಡುತ್ತೀರಾ ಎಂದು ಸಾರ್ವಜನಿಕರು ಕೇಳ್ತಾರೆ. ಅವರಿಗೆ ನಾನೇನು ಉತ್ತರ ಕೊಡಲಿ. ಉತ್ತರ ನನಗೂ ಗೊತ್ತಿಲ್ಲ. ಮಾಧ್ಯಮದವರೆಲ್ಲಾ ಆಗಲೇ ನನಗೆ ಭವಿಷ್ಯ ಇಲ್ಲ, ನಾನು ಯೂಸ್‌ಲೆಸ್‌ ಅಂದುಬಿಟ್ಟಿದ್ದರೆ, ನಾನು ಎಲ್ಲೋ ಕೆಲಸ ಮಾಡಿಕೊಂಡು ಇದ್ದುಬಿಡುತ್ತಿದ್ದೆ. ಆದರೆ, ಮಾಧ್ಯಮದವರು ಎಲ್ಲಿಗೋ ತೆಗೆದುಕೊಂಡು ಹೋದ್ರಿ. ಈಗ ಏನಾಯ್ತು? ಇಷ್ಟಕ್ಕೂ ಯಾರನ್ನ ನಾನು ಧೂಷಣೆ ಮಾಡಬೇಕು. ಇದ್ಯಾವ ಪ್ರಶ್ನೆಗೂ ನನ್ನಲ್ಲಿ ಉತ್ತರ ಇಲ್ಲ. ಒಟ್ಟಾರೆ, ನಾನು ಮೋಸ ಮಾಡ್ತಿದ್ದೀನಿ ಅಂತ ಅನಿಸುತ್ತೆ. ಹಾಗೆ ನೋಡಿದರೆ, ನಾನು ಆಶಾವಾದ ತೋರಿಸಬೇಕು. ಭಗವಂತ ನನ್ನನ್ನ ಚೆನ್ನಾಗಿ ಇಟ್ಟಿದ್ದಾನೆ.

ನನಗೆ ಯಾವ ತಾಪತ್ರಯವೂ ಇಲ್ಲ, ಯಾವ ಜವಾಬ್ದಾರಿಯೂ ಇಲ್ಲ. ಆದರೂ ಎಷ್ಟೊಂದು ಸಮಯ ಹಾಳಾಗುತ್ತಿದೆ. ನಾನೇನಾದರೂ ಮಾಡಬೇಕಿತ್ತಲ್ಲ ಅನಿಸುತ್ತದೆ' ಎಂದು ಮತ್ತೂಮ್ಮೆ ಬೇಸರ ಹೊರಹಾಕಿದರು ರಾಮಕೃಷ್ಣ. ಯಾಕೆ ನೀವು ಬೇರೆ ಭಾಷೆಗಳಲ್ಲಿ ಟ್ರೈ ಮಾಡಬಾರದು? ಹಾಗೊಂದು ಪ್ರಶ್ನೆ ಬರುತ್ತಿದ್ದಂತೆಯೇ, "ಬೇರೆ ಕಡೆ ಆಗಲೇ ಹೋಗಬೇಕಿತ್ತು. ಆದರೆ, ಭಾಷೆ ಗೊತ್ತಿಲ್ಲದೆ ಯಾಕೆ ಅಂತ ಸುಮ್ಮನಾದೆ. ಕೆ. ಬಾಲಚಂದರ್‌ ನನ್ನ ಬಗ್ಗೆ ಬಹಳ ಭರವಸೆ ಇಟ್ಟುಕೊಂಡಿದ್ದರು. 1984ರಲ್ಲೇ ಅವರು, "ಕಮಲ್‌ ಹಾಸನ್‌ ಬಿಟ್ಟರೆ ನನಗೆ ಬಹಳ ಇಷ್ಟವಾದ ಹುಡುಗ ಈ ರಾಮಕೃಷ್ಣ' ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಆಗ ನಾನು ಅವರ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದೆ. ಆ ಸಂದರ್ಭದಲ್ಲಿ ಅಲ್ಲಿನ ಪತ್ರಕರ್ತರೊಬ್ಬರು, "ಯಾಕೆ ಕನ್ನಡಿಗನನ್ನು ಕರೆದುಕೊಂಡು ಬಂದಿರಿ' ಎಂದು ಕೇಳಿದಾಗ, "ಅವನು ನನಗೆ ಹಿಡಿಸಿದ, ಅದಕ್ಕೆ ಕರೆದುಕೊಂಡು ಬಂದೆ' ಎಂದಿದ್ದರು. "ನಾನು ಇದುವರೆಗೆ ಎಷ್ಟೋ ಜನರನ್ನು ಪರಿಚಯಿಸಿದ್ದೇನೆ, ನನಗೆ ಪ್ರತಿಭೆ ಮುಖ್ಯ, ಸಿನಿಮಾದಲ್ಲಿ ರಾಜಕೀಯವನ್ನು ಎಳೆದು ತರಬೇಡಿ' ಎಂದು ಸ್ಪಷ್ಟವಾಗಿ ಹೇಳಿದ್ದರು.  ಮರುದಿನ ದೊಡ್ಡ ಸುದ್ದಿಯಾಗಿತ್ತು. ಅದನ್ನು ನೋಡಿ ಅಶ್ವತ್ಥ್ ಅವರು ನನ್ನನ್ನು ಅಪ್ಪಿಕೊಂಡು, "ಕನ್ನಡಿಗನಿಗೆ ಎಂಥಾ ಮರ್ಯಾದೆ ನೋಡಯ್ಯ' ಎಂದು ಖುಷಿಪಟ್ಟಿದ್ದರು. ಅಶ್ವತ್ಥ್ ಅವರ ಮಾತಿಗಿಂಥ ನನಗೆ ಪ್ರಶಸ್ತಿ ಬೇಕಾ? ಜಿ.ಎಸ್‌. ಶಿವರುದ್ರಪ್ಪನವರು ಒಮ್ಮೆ, "ನಾನು ಮೆಚ್ಚುವ ಕೆಲವೇ ನಟರಲ್ಲಿ ನೀವು ಒಬ್ಬರು ಅಂತ ಹೇಳಿದ್ದರು. ಅದಕ್ಕಿಂತ ಪ್ರಶಸ್ತಿ ಬೇಕಾ? ಆದರೆ, ನಾನೇನು ಮಾಡಿದೆ? ಅವರಿಗೂ ಮೋಸ ಮಾಡಿದೆ' ಎಂದರು ರಾಮಕೃಷ್ಣ.

ಒಳ್ಳೆಯ ಪಾತ್ರ ಸಿಗದಿದ್ದರೆ ಬೇಡ, ನಿರ್ದೇಶನದ ಕಡೆಯಾದರೂ ತೊಡಗಿಸಿಕೊಳ್ಳಬಹುದಲ್ಲ ಎಂಬ ಸಲಹೆಯನ್ನು ಅವರು ಒಪ್ಪುವುದಿಲ್ಲ. "ನಾನು ಕೆಲಸ ಮಾಡಿರುವ ಮಹನೀಯರ ಸಿನಿಮಾಗಳಿಂದ ಒಂದೊಂದು ಸೀನ್‌ ಕಟ್‌ ಮಾಡಿದರೂ, ಒಂದು ಸಿನಿಮಾ ಮಾಡಬಹುದಿತ್ತು. ಅದೊಂದು ಅದ್ಭುತ ಸಿನಿಮಾ ಆಗಿರೋದು. ನಿಜ ಹೇಳಬೇಕೆಂದರೆ, ಹೋರಾಟ ಮಾಡುವ ಶಕ್ತಿಯನ್ನೇ ಕಳೆದುಕೊಂಡಿದ್ದೀನಿ. ವಜ್ರಮುನಿಯಂತವರಿಗೇ ಇಲ್ಲಿ ಸಿನಿಮಾ ಮಾಡಿ, ನಿಲ್ಲಿಸುವುದು ಕಷ್ಟ ಆಯ್ತು. ನನಗಂತೂ ಖಂಡಿತಾ ಆಗುವುದಿಲ್ಲ. ಸಿನಿಮಾ ಮಾಡೋದು ಬೇರೆ, ಬಿಝಿನೆಸ್‌ ಬೇರೆ. ಚಿತ್ರ ಮಾಡಿಬಿಡಬಹುದು. ನಾಳೆ ನಿರ್ಮಾಪಕರು ಹಾಕಿದ ದುಡ್ಡನ್ನು ಕಳೆದುಕೊಂಡರೆ? ಇವತ್ತು 20 ಪರ್ಸೆಂಟ್‌ ಮಾತ್ರ ಸಿನಿಮಾ. ಇನ್ನೂ 80% ಮಾರ್ಕೆಟಿಂಗ್‌. ಮಹಾನಗರ ಪಾಲಿಕೆ ಆಫೀಸಿಗೆ ಹೋಗಿ ಪೋಸ್ಟರ್‌ ಅಂಟಿಸ್ಲಾ ಅಂತ ಕೇಳಬೇಕಾ? ಖಂಡಿತಾ ಬೇಡ. ನಟನೆ ಮಾಡಿದರೆ ಸಾಕು. ನನ್ನನ್ನು ಪರಿಚಯಿಸಿದವರ ಮರ್ಯಾದೆ ಹೆಚ್ಚಿಸುವಂತಹ ಕೆಲಸ ಮಾಡಿದರೆ ಸಾಕು. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೀತಿದ್ದೀನಿ. ಅದಕ್ಕೆ ಚ್ಯುತಿ ಬರದಿದ್ದರೆ ಸಾಕು. ಅದೇ ನಾನು ಅವರಿಗೆ ಕೊಡುವ ದೊಡ್ಡ ಮರ್ಯಾದೆ' ಎನ್ನುತ್ತಾರೆ ರಾಮಕೃಷ್ಣ.

ಯಾವ ಕಲಾವಿದನಿಗೆ ಸಿಗುತ್ತೆ ಹೇಳಿ?
ಇದುವರೆಗೂ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ರಾಮಕೃಷ್ಣ, ಒಂದು ಕಾಲದಲ್ಲಿ ಅದ್ಭುತ ದಿನಗಳನ್ನು ಕಂಡಿದ್ದರಂತೆ. "ನಾನು ಮೊದಲು ಬಣ್ಣ ಹಚ್ಚಿದ್ದು 76ರಲ್ಲಿ. "ಬಬ್ರು­ ವಾಹನ'ದಲ್ಲಿ ನಟಿಸಿದ್ದು 1977ರಲ್ಲಿ. ಆ ಚಿತ್ರದಲ್ಲಿ ನನ್ನದು ಕೃಷ್ಣನ ಪಾತ್ರ. ಡಾ. ರಾಜಕುಮಾರ್‌, ಬಿ. ಸರೋಜಾದೇವಿ, ಕಾಂಚನಾರಂಥ ಹಿರಿಯ ಕಲಾವಿದರೆಲ್ಲಾ ಇದ್ದಾರೆ. ನನಗೇನೂ ಗೊತ್ತಿಲ್ಲ. ಮೊದಲ ದಿನ ಮೇಕಪ್‌ ಹಾಕಿಸಿ, ಅಂತಹ ದಿಗ್ಗಜರೆದುರು ಕರೆದುಕೊಂಡು ಬಂದು ಬಿಟ್ಟರು ಹುಣಸೂರು ಕೃಷ್ಣಮೂರ್ತಿಗಳು. "ಎಲ್ಲಿ, ಕಲ್ಯಾಣಮಸ್ತು ಅಂತ ಹೇಳು' ಎಂದರು. ಅಷ್ಟೇನಾ ಅಂತ ಕೇಳಿದೆ. "ಇವತ್ತಿಗೆ ಇಷ್ಟೇ. ಕಲ್ಯಾಣಮಸ್ತು, ಕಲ್ಯಾಣಮಸ್ತು, ಕಲ್ಯಾಣಮಸ್ತು ಅಂತ ಮೂರು ಸಾರಿ ಹೇಳಬೇಕು. ಇವತ್ತೆಲ್ಲಾ ಇಷ್ಟೇ. ಹೇಗೆ ಹೇಳಬೇಕು ಅಂತ ರಾಜಕುಮಾರ್‌ ತೋರಿಸ್ತಾರೆ' ಅಂತ ಅವರ ಬಳಿ ಕಳಿಸಿದರು. ಅಂತಹ ದಿಗ್ಗಜ ಕಲಾವಿದರನ್ನ ಫೇಸ್‌ ಮಾಡೋದಕ್ಕೆ ನಿಜಕ್ಕೂ ಭಯ ಆಗೋದು' ಎಂದು ನೆನಪಿಸಿಕೊಳ್ಳುತ್ತಾರೆ ರಾಮಕೃಷ್ಣ.

ಯಾವ ಕ್ಷಣದಲ್ಲಿ ಕೃಷ್ಣನ ಪಾತ್ರದಲ್ಲಿ ಕಾಣಿಸಿ­ಕೊಂಡೆನೋ, ಜನ ನನ್ನಲ್ಲಿ ಕೃಷ್ಣನ ಅಂಶ ಕಂಡರು ಎಂದು ನೆನಪಿಸಿಕೊಳ್ಳುವ ರಾಮಕೃಷ್ಣ ಅವರು, "ಇಂಥ ಭಾಗ್ಯ ಯಾವ ಕಲಾವಿದರಿಗೆ ಸಿಗತ್ತೋ ಗೊತ್ತಿಲ್ಲ. "ಬಬ್ರುವಾಹನ' ಚಿತ್ರದ ನಂತರ ಅದೆಷ್ಟೋ ಜನ, ನನ್ನನ್ನು ಮನೆಗೆ ಕರೆದು ಹಾಲು-ಬೆಣ್ಣೆ ಕೊಡೋರು. ನನ್ನ ಜೀವನದಲ್ಲಿ ಎರಡು ಪ್ರಮುಖ ಹಂತಗಳೆಂದರೆ ಒಂದು "ಬಬ್ರುವಾಹನ', ಇನ್ನೊಂದು "ರಂಗನಾಯಕಿ". "ರಂಗನಾಯಕಿ' ನಂತರ ಅದೆಷ್ಟೋ ಹೆಂಗಸರು, ನನ್ನ ಮಗ ಅಂತ ಊಟ ಹಾಕೋರು. ಎಷ್ಟೋ ಮನೆಗಳಿಗೆ ಹೋಗಿ ಊಟ ಮಾಡಿಕೊಂಡು ಬಂದಿದ್ದೀನಿ. ಇನ್ನು ರಾಶಿರಾಶಿ ಪತ್ರಗಳು ಬರೋದು. ಬೆಳ್ಳಿ ಕಡಗ, ರಿಂಗು, ಟೋಪಿ, ಗಾಗಲ್ಸ್‌ ಎಲ್ಲಾ ಉಡುಗೊರೆಯಾಗಿ ಕಳಿ ಸೋರು. ಈ ತರಹದ ಭಾಗ್ಯ ಯಾರಿಗೆ ಸಿಗುತ್ತದೆ ಹೇಳಿ' ಎಂದು ಪ್ರಶ್ನಿಸುತ್ತಾರೆ ರಾಮಕೃಷ್ಣ.

ಚೇತನ್‌ 


Trending videos

Back to Top