CONNECT WITH US  

ಹೋರಾಟದ ಬದುಕು... 

ಸಸ್ಪೆನ್ಸ್‌ ಸುತ್ತಿಕೊಂಡಿರುವ ಟೆರರಿಸ್ಟ್‌

ಇದು ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟ ಕುರಿತ ಚಿತ್ರವಾ..?
- ಇಂಥದ್ದೊಂದು ಪ್ರಶ್ನೆಗೆ ಕಾರಣವಾಗಿದ್ದು ರಾಗಿಣಿ ಅಭಿನಯದ "ದಿ ಟೆರರಿಸ್ಟ್‌' ಚಿತ್ರ. ಹೌದು, ಅ.18 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿರುವ ಈ ಚಿತ್ರ ಒಂದಷ್ಟು ಪ್ರಶ್ನೆಗಳಿಗೆ ಕಾರಣವಾಗಿದೆ. ಅಂತಹ ಪ್ರಶ್ನೆಗಳಿಗೆ ಒಂದೊಂದಾಗಿಯೇ ಉತ್ತರ ಕೊಡಲು ಮುಂದಾದರು ನಿರ್ದೇಶಕ ಪಿ.ಸಿ.ಶೇಖರ್‌. ಮೊದಲ ಪ್ರಶ್ನೆಗೆ ಉತ್ತರಿಸಿದ ಅವರು, "ಖಂಡಿತವಾಗಿಯೂ ಇಲ್ಲಿ ಬೆಂಗಳೂರಿನ ಸರಣಿ ಬಾಂಬ್‌ ಸ್ಫೋಟ ಕುರಿತ ಕಥೆ ಇಲ್ಲ. ಆದರೆ, ಅದರ ಹಿನ್ನೆಲೆ ಇಟ್ಟುಕೊಂಡು ಚಿತ್ರ ಮಾಡಲಾಗಿದೆ. ಭಯೋತ್ಪಾದನೆ ಎಂಬುದು ವಿಶ್ವದಲ್ಲೇ ದೊಡ್ಡ ಪಿಡುಗು. ಇದನ್ನು ಹೋಗಲಾಡಿಸುವುದು ಸುಲಭವಲ್ಲ. ಹಾಗಂತ, ಸಿನಿಮಾ ಮೂಲಕ ಪರಿಹಾರ ಕೊಡಲು ಸಾಧ್ಯವೂ ಇಲ್ಲ. ಇಲ್ಲೊಂದು ಮಾನವೀಯತೆ ಗುಣವಿದೆ. ಅದೇ ಚಿತ್ರದ ಹೈಲೆಟ್‌. ಟೆರರಿಸ್ಟ್‌ ಯಾರು ಎಂಬುದೇ ಸಸ್ಪೆನ್ಸ್‌. ನನ್ನ ನಿರ್ದೇಶನದ ಎಂಟನೇ ಚಿತ್ರ ಇದಾಗಿರುವುದರಿಂದ ಎಲ್ಲಾ ಚಿತ್ರಕ್ಕಿಂತಲೂ ಈ ಚಿತ್ರಕ್ಕೆ ಹೆಚ್ಚು ಎಫ‌ರ್ಟ್‌ ಹಾಕಿದ್ದೇನೆ. ಕಾರಣ, ನಾಯಕಿ ಪ್ರಧಾನ ಚಿತ್ರ ಎಂಬುದು. ನಾನಷ್ಟೇ ಅಲ್ಲ, ಸಂಗೀತ ನಿರ್ದೇಶಕರು ದಿನದ 24 ತಾಸು ಇದಕ್ಕಾಗಿಯೇ ಮೀಸಲಾಗಿ ಕೆಲಸ ಮಾಡಿದ್ದಾರೆ. ರಾಗಿಣಿ ಅವರ ಸಹಕಾರ, ಪ್ರೋತ್ಸಾಹದಿಂದ "ದಿ ಟೆರರಿಸ್ಟ್‌' ನಿರೀಕ್ಷೆ ಮೀರಿ ಮೂಡಿಬಂದಿದೆ. ಇಲ್ಲಿ ಉಗ್ರ ಎನಿಸುವ ಅಂಶಗಳಿಲ್ಲ. ಆದರೆ, ಇನ್ನೊಬ್ಬರಿಗೆ ತೊಂದರೆ ನೀಡಿ, ಹೋರಾಟ ಮಾಡುವುದು ಎಷ್ಟು ಸರಿ ಎಂಬ ಸಂದೇಶ ಕೊಡಲಾಗಿದೆ. ಸೆನ್ಸಾರ್‌ನಿಂದ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ನಿಮ್ಮೆಲ್ಲರ ಸಹಕಾರ ಇರಲಿ' ಎಂಬ ಮನವಿ ಇಟ್ಟರು ಪಿ.ಸಿ.ಶೇಖರ್‌.

ಸಂಗೀತ ನಿರ್ದೇಶಕ ಪ್ರದೀಪ್‌ ವರ್ಮ ಅವರು ಇಂಡಸ್ಟ್ರಿಗೆ ಬಂದು ಒಂದು ದಶಕ ಕಳೆದಿದೆ. ಅವರಿಗೆ ಸಿಕ್ಕ ವಿಭಿನ್ನ ಚಿತ್ರವಂತೆ ಇದು. ಕೇವಲ ದೃಶ್ಯಗಳನ್ನು ವೀಕ್ಷಿಸಿ, ಸಂಗೀತ ಸಂಯೋಜಿಸಿ ಹಾಡು ಕಟ್ಟಿಕೊಡುವುದು ಸುಲಭವಾಗಿರಲಿಲ್ಲ. ಇಲ್ಲಿ ಹಿನ್ನೆಲೆ ಸಂಗೀತ ಹೈಲೆಟ್‌ ಆಗಿದೆ. ನನಗಷ್ಟೇ ಅಲ್ಲ, ಇಡೀ ತಂಡಕ್ಕೆ "ದಿ ಟೆರರಿಸ್ಟ್‌' ಬೆಸ್ಟ್‌ ಸಿನಿಮಾ ಆಗಲಿದೆ' ಎಂದರು ಪ್ರದೀಪ್‌ ವರ್ಮ. 

ರಾಗಿಣಿ ಇಲ್ಲಿ ರೇಷ್ಮಾ ಹೆಸರಿನ ಮುಸ್ಲಿಂ ಪಾತ್ರ ನಿರ್ವಹಿಸಿದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು. "ಫ್ಯಾಮಿಲಿ ಜೊತೆಗೆ ಪ್ರೀತಿ ವಿಷಯವನ್ನೂ ಇಲ್ಲಿ ಪ್ರಸ್ತಾಪಿಸಲಾಗಿದೆ. ಭಾವನಾತ್ಮಕ ಅಂಶಗಳು ಚಿತ್ರದ ಜೀವಾಳ. ಇಲ್ಲಿ ನಾನೂ ಫೈಟ್‌ ಮಾಡಿದ್ದೇನೆ. ಆದರೆ, ಯಾಕೆ ಆ ಹೋರಾಟ ಎಂಬುದು ಸಸ್ಪೆನ್ಸ್‌. ರಾಗಿಣಿ ಟೆರರಿಸ್ಟ್‌ ಆಗಿದ್ದಾರಾ ಅಥವಾ ಇಲ್ಲಿ ಯಾರು ಭಯೋತ್ಪಾದಕರು ಎಂಬ ಪ್ರಶ್ನೆಗೆ ಸಿನಿಮಾ ನೋಡಿ; ಅಂದರು ರಾಗಿಣಿ.

ನಿರ್ಮಾಪಕ ಅಲಂಕಾರ ಸಂತಾನ ಅವರಿಗೆ ಬಜೆಟ್‌ಗಿಂತ ಚಿತ್ರದ ಕಥೆ ಮುಖ್ಯವಾಗಿರುವುದರಿಂದ ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ ಚಿತ್ರ ಮಾಡಿದ್ದಾಗಿ ಹೇಳಿಕೊಂಡರು. ಸುಮಾರು 100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಜಯಣ್ಣ ವಿತರಣೆ ಮಾಡಲಿದ್ದಾರೆ ಎಂಬ ವಿವರ ಕೊಟ್ಟರು ನಿರ್ಮಾಪಕರು. ಚಿತ್ರಕ್ಕೆ ಸಚಿನ್‌ ಸಂಭಾಷಣೆ ಬರೆದಿದ್ದಾರೆ.


Trending videos

Back to Top