CONNECT WITH US  

ಪಾರ್ವತಮ್ಮನ ಖಡಕ್‌ ಮಗಳು

ಸೆಂಟಿಮೆಂಟ್‌, ಆ್ಯಕ್ಷನ್‌ನಲ್ಲಿ ಹರಿಪ್ರಿಯಾ

"ಈ ಚಿತ್ರಕ್ಕೂ ಪಾರ್ವತಮ್ಮ ರಾಜಕುಮಾರ್‌ ಅವರಿಗೂ ಯಾವುದೇ ಸಂಬಂಧವಿಲ್ಲ'

- ಹೀಗೆ ಹೇಳಿ ನಟಿ ಹರಿಪ್ರಿಯಾ ಪೋಸ್ಟರ್‌ನತ್ತ ಮುಖ ಮಾಡಿದರು. ಅಲ್ಲಿ ದೊಡ್ಡದಾಗಿ "ಡಾಟರ್‌ ಆಫ್ ಪಾರ್ವತಮ್ಮ' ಎಂದು ಬರೆದಿತ್ತು. ಹರಿಪ್ರಿಯಾ ಸ್ಪಷ್ಟನೆ ಕೊಡಲು ಕೂಡಾ ಅದೇ ಕಾರಣ. "ಡಾಟರ್‌ ಆಫ್ ಪಾರ್ವತಮ್ಮ' ಎಂಬ ಚಿತ್ರದಲ್ಲಿ ಹರಿಪ್ರಿಯಾ ನಟಿಸಿದ್ದಾರೆ. ಕನ್ನಡದಲ್ಲಿ ಇದು ಅವರ 25ನೇ ಸಿನಿಮಾ. ಸಹಜವಾಗಿಯೇ ಹರಿಪ್ರಿಯಾ ಎಕ್ಸೆ„ಟ್‌ ಆಗಿದ್ದರು. "ಈ ಟೈಟಲ್‌ನಡಿ ನಟಿಸಲು ಅವಕಾಶ ಸಿಕ್ಕಿರೋದು ನನ್ನ ಪುಣ್ಯ. ಪಾರ್ವತಮ್ಮ ರಾಜ್‌ಕುಮಾರ್‌ ಅವರು ಅನೇಕರಿಗೆ ಸ್ಫೂರ್ತಿ. ನಾನು ಕೂಡಾ ಚಿತ್ರರಂಗಕ್ಕೆ  ಬಂದ ಸಮಯದಲ್ಲಿ ಅವರ ಆಶೀರ್ವಾದ ಪಡೆದಿದ್ದೆ. ಈಗ ಅವರ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಹಾಗಂತ ಅವರಿಗೂ ಈ ಸಿನಿಮಾದಕ್ಕೂ ಯಾವುದೇ ಸಂಬಂಧವಿಲ್ಲ. ಇದು ತಾಯಿ-ಮಗಳ ಬಾಂಧವ್ಯದ ಕಥೆಯಷ್ಟೇ' ಎಂದು ಹೇಳಿಕೊಂಡರು ಹರಿಪ್ರಿಯಾ. ಹರಿಪ್ರಿಯಾ ಅವರಿಗೆ ಇದು 25ನೇ ಸಿನಿಮಾ ಎಂಬುದು ಗೊತ್ತಿರಲಿಲ್ಲವಂತೆ. ಆದರೆ, ಚಿತ್ರತಂಡ ಲೆಕ್ಕ ಹಾಕಿ, 25ನೇ ಸಿನಿಮಾವಿದು ಎಂದಾಗ ಖುಷಿಯಾಯಿತಂತೆ. ಇಲ್ಲಿ ಹರಿಪ್ರಿಯಾ ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. "ಆರಂಭದಿಂದಲೂ ವಿಭಿನ್ನ ಪಾತ್ರಗಳನ್ನು ಆಯ್ಕೆಮಾಡಿಕೊಂಡು ಬರುತ್ತಿದ್ದೇನೆ. ಆ ಹಾದಿಯಲ್ಲಿ ಸಿಕ್ಕ ಪಾತ್ರ ಪಾರ್ವತಮ್ಮ. ಈ ಸಿನಿಮಾದಲ್ಲಿ ನನಗೆ ಜವಾಬ್ದಾರಿ ಜಾಸ್ತಿ ಇದೆ. ಹಾಗಾಗಿ, ಭಯ ಕೂಡಾ ಇದೆ' ಎಂದು ಸಿನಿಮಾ ಬಗ್ಗೆ ಹೇಳಿಕೊಂಡರು.

ಚಿತ್ರದಲ್ಲಿ ಸುಮಲತಾ ಅಂಬರೀಶ್‌ ಅವರು ತಾಯಿ ಪಾತ್ರ ಮಾಡಿದ್ದಾರೆ. ಸಿನಿಮಾದ ಕಥೆ, ಪಾತ್ರ ಇಷ್ಟವಾಗಿ ಒಪ್ಪಿಕೊಂಡರಂತೆ. "ಆ ಟೈಟಲ್‌ನಲ್ಲಿ ಶಕ್ತಿ, ಪ್ರೀತಿ ಹಾಗೂ ಒಂದು ಆಕರ್ಷಣೆ ಇದೆ. ಕಥೆಯೂ ಅದಕ್ಕೆ ತಕ್ಕಂತೆ ಮಾಡಿಕೊಂಡಿದ್ದಾರೆ. ನಾನಿಲ್ಲಿ ಮಗಳಿಗೆ ಬೆಂಬಲವಾಗಿ ನಿಲ್ಲುವ ತಾಯಿಯ ಪಾತ್ರ ಮಾಡಿದ್ದೇನೆ. ಇದು ಮಹಿಳಾ ಪ್ರಧಾನ ಚಿತ್ರ' ಎಂದರು. 

ಚಿತ್ರದಲ್ಲಿ ಸೂರಜ್‌ ಗೌಡ ಹಾಗೂ ಪ್ರಭು ನಾಯಕರಾಗಿ ನಟಿಸಿದ್ದಾರೆ. ಸೂರಜ್‌ ಇಲ್ಲಿ ದೇವಸ್ಥಾನದ ಪೂಜಾರಿ ಮಗನಾಗಿ ಕಾಣಿಸಿಕೊಂಡಿದ್ದಾರೆ. ತಂದೆಯ ವೃತ್ತಿಯಲ್ಲೇ ಮುಂದುವರೆಯುವ ಪಾತ್ರವಂತೆ. ಇನ್ನು, ಪ್ರಭು ಮಾತನಾಡಿ, "ನಾವಿಲ್ಲಿ ನಾಯಕರಲ್ಲ. ನಾಯಕಿಯರು ಎನ್ನಬಹುದು. ಇಡೀ ಸಿನಿಮಾದ ನಾಯಕ ಹರಿಪ್ರಿಯಾ ಅವರು' ಎಂದರು. ಅವರಿಲ್ಲಿ ಡೆಲಿವರಿ ಬಾಯ್‌ ಆಗಿ ನಟಿಸಿದ್ದಾರೆ. ಚಿತ್ರದಲ್ಲಿ ತರಂಗ ವಿಶ್ವ ಕೂಡಾ ನಟಿಸಿದ್ದಾರೆ. ಸಣ್ಣ ಪಾತ್ರವಂತೆ. ಆದರೆ, ನಿರ್ದೇಶಕರು ಕಥೆ ಹೇಳಿದ ನಂತರ ಈ ಸಿನಿಮಾ ಮತ್ತು ಪಾತ್ರವನ್ನು ಮಿಸ್‌ ಮಾಡಿಕೊಳ್ಳಬಾರದು ಎಂದು ಒಪ್ಪಿಕೊಂಡರಂತೆ. ಅಂದಹಾಗೆ, ಈ ಪಾತ್ರಕ್ಕೆ ತರಂಗ ವಿಶ್ವ ಇದ್ದರೆ ಚೆಂದ ಎಂದು ಸೂಚಿಸಿದ್ದು ಹರಿಪ್ರಿಯಾ ಅವರಂತೆ.

ಈ ಚಿತ್ರವನ್ನು ಶಶಿಧರ್‌ ಅವರು ತಮ್ಮ ಸ್ನೇಹಿತರೊಂದಿಗೆ ಸೇರಿ ನಿರ್ಮಿಸಿದ್ದಾರೆ. ಬ್ಯಾಂಕ್‌ ಉದ್ಯೋಗಿಯಾಗಿದ್ದ ಶಶಿಧರ್‌, "ನಟರಾಜ ಸರ್ವೀಸ್‌'ನಲ್ಲಿ ಸಣ್ಣ ಪಾತ್ರ ಮಾಡಿದ್ದರಂತೆ. ಅಲ್ಲಿಂದ ಸುಮಾರು 11 ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ ಶಶಿಧರ್‌ ಈಗ ನಿರ್ಮಾಪಕರಾಗಿದ್ದಾರೆ. "ನಾನು ಚಿತ್ರರಂಗಕ್ಕೆ ಬರೋಕೆ ಕಾರಣ ನಿರ್ದೇಶಕ ಪವನ್‌ ಒಡೆಯರ್‌. ಅವರಿಂದಾಗಿ ಇವತ್ತು ನಿರ್ಮಾಣದ ಕಡೆಗೆ ವಾಲಿದ್ದೇನೆ. "ಪಾರ್ವತಮ್ಮ' ಒಂದು ಥ್ರಿಲ್ಲರ್‌ ಸಬೆjಕ್ಟ್ ಆಗಿದ್ದರಿಂದ ಬೇರೆ ತರಹ ಮಾಡಬೇಕೆಂದು ಪ್ಲ್ರಾನ್‌ ಮಾಡಿಕೊಂಡು ಈ ಸಿನಿಮಾ ಮಾಡಿದ್ದೇವೆ. ಆರಂಭದಲ್ಲಿ ಹರಿಪ್ರಿಯಾ ಅವರು, "ಈ ಪಾತ್ರಕ್ಕೆ ಅವರಿದ್ದರೆ ಓಕೆ, ಇವರಿದ್ದರೆ ಓಕೆ' ಎನ್ನುತ್ತಿದ್ದಾಗ ನಮಗೆ ಸ್ವಲ್ಪ ಕಿರಿಕಿರಿ ಅನಿಸಿತ್ತು. ಆದರೆ, ಅಂತಿಮವಾಗಿ ಸಿನಿಮಾ ಮೂಡಿಬಂದ ರೀತಿ ನೋಡಿ ಹರಿಪ್ರಿಯಾ ಅವರ ನಿರ್ಧಾರ ಎಷ್ಟು ಸರಿಯಾಗಿದೆ‌ ಎಂದು ಗೊತ್ತಾಯಿತು' ಎನ್ನುತ್ತಾ ಹರಿಪ್ರಿಯಾಗೆ ಥ್ಯಾಂಕ್ಸ್‌ ಹೇಳಿದರು. ಈ ಚಿತ್ರವನ್ನು ಶಂಕರ್‌ ನಿರ್ದೇಶಿಸಿದ್ದು, ಅವರು ಚಿತ್ರದ ಬಗ್ಗೆ ಹೆಚ್ಚು ಮಾತನಾಡಲಿಲ್ಲ. ಚಿತ್ರಕ್ಕೆ ಮಿಥುನ್‌ ಮುಕುಂದನ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ. ಇತ್ತೀಚೆಗೆ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ವಿನಯ್‌ ರಾಜ್‌ಕುಮಾರ್‌ ಚಾಲನೆ ನೀಡಿದರು. 


Trending videos

Back to Top