CONNECT WITH US  

ಭಯದ ಬಣ್ಣ

ವರ್ಣಮಯ ಹಾರರ್‌

ಚಂದನವನದ ಕದ ತಟ್ಟುತ್ತಿರುವ ಬಹುತೇಕ ಹೊಸ ಪ್ರತಿಭೆಗಳು ಹಾರರ್‌ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿ ಗೆಲ್ಲುತ್ತಿದ್ದಾರೆ. ಹೀಗಾಗಿ ಹೊಸದಾಗಿ ಚಿತ್ರರಂಗಕ್ಕೆ ಪ್ರವೇಶ ಪಡೆಯುವವರಿಗೆ ಹಾರರ್‌ ಚಿತ್ರಗಳು ಹಾಟ್‌ ಫೇವರೆಟ್‌ ಚಿತ್ರಗಳು ಎಂಬಂತಾಗಿ ಬಿಟ್ಟಿದೆ. ಈ ವರ್ಷಾಂತ್ಯಕ್ಕೆ ಇನ್ನಷ್ಟು ಹಾರರ್‌ ಚಿತ್ರಗಳು ತೆರೆಗೆ ಬರಲು ತುದಿಗಾಲಿನಲ್ಲಿ ನಿಂತಿದ್ದು, ಸದ್ಯ ಕನ್ನಡದಲ್ಲಿ ಹಾರರ್‌ ಚಿತ್ರಗಳ ಪರ್ವ ಮುಂದುವರೆಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಇತ್ತೀಚೆಗೆ "ವರ್ಣಮಯ' ಎಂಬ ಅಂಥದ್ದೆ ಹಾರರ್‌ ಚಿತ್ರವೊಂದರ ಟ್ರೇಲರ್‌ ಬಿಡುಗಡೆಯಾಗಿದೆ.

ಈ ಹಿಂದೆ "ಪುಟಾಣಿ ಸಫಾರಿ' ಎನ್ನುವ ಮಕ್ಕಳ ಚಿತ್ರವನ್ನು ನಿರ್ದೇಶಿಸಿದ್ದ ರವೀಂದ್ರ ವೆಂಶಿ "ವರ್ಣಮಯ' ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ತಮ್ಮ ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡುವ ರವೀಂದ್ರ ವೆಂಶಿ, "ಕನ್ನಡದಲ್ಲಿ ಹಾರರರ್‌ ಚಿತ್ರಗಳಿಗೆ ಬರವಿಲ್ಲ. ತಿಂಗಳಿಗೆ ಕನಿಷ್ಠ ಮೂರ್‍ನಾಲ್ಕು ಹಾರರ್‌ ಚಿತ್ರಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಒಂದು ಬಂಗಲೆ ಅಥವಾ ನಿಗೂಢ ಜಾಗಕ್ಕೆ ಒಂದಷ್ಟು ಜನ ಹೋಗುವುದು. ಅಲ್ಲಿ ಅವರಿಗೆ ದೆವ್ವದ ಕಾಟ ಶುರುವಾಗುವುದು, ಅದಕ್ಕೊಂದು ಹಿನ್ನೆಲೆ, ಇವು ಸದ್ಯ ಬರುತ್ತಿರುವ ಹಾರರ್‌ ಚಿತ್ರಗಳ ಒಂದು ಎಳೆ. ಬಹುತೇಕ ಹಾರರ್‌ ಚಿತ್ರಗಳು ಇದೇ ಸಿದಟಛಿಸೂತ್ರವನ್ನು ಪಾಲಿಸುತ್ತಿವೆ. ಆದರೆ
ಇದನ್ನು ಹೊರತುಪಡಿಸಿ, ವೈಜ್ಞಾನಿಕವಾಗಿ ಪ್ಯಾರಾನಾರ್ಮಲ್‌ ಘಟನೆಗಳನ್ನು ಆಧರಿಸಿ "ವರ್ಣಮಯ' ಚಿತ್ರವನ್ನು ತೆರೆಗೆ ತರುತ್ತಿದ್ದೇವೆ' ಎನ್ನುತ್ತಾರೆ ನಿರ್ದೇಶಕ ರವೀಂದ್ರ ವೆಂಶಿ.

ಇನ್ನು ಈ ಚಿತ್ರದಲ್ಲಿ ಗ್ರಾಫಿಕ್ಸ್‌ ಇದೆ. ಆದರೆ ದೆವ್ವದ ಚಿತ್ರಣ ಬೇರೆಯದೇ ಶೈಲಿಯಲ್ಲಿದೆ, ತಲೆ ಕೆದರಿಕೊಂಡು ಭಯಾನಕ ದೆವ್ವ ಇಲ್ಲಿಲ್ಲ, ಏಕೆಂದರೆ ದೆವ್ವದ ಪರಿಕಲ್ಪನೆ ಪುರಾತನವಾದರೂ ಅದರ ಪ್ರಾತ್ಯಕ್ಷತೆ ಯಾರಿಗೂ ಗೊತ್ತಿಲ್ಲ. ಅದರ ಆಕಾರ, ರೂಪದ ಬಗ್ಗೆ ಸ್ಪಷ್ಟವಾದ ಮಾಹಿತಿ ನಿದರ್ಶನಗಳಿಲ್ಲ. ಹಾಗಾಗಿಯೇ ಇಂದಿನ ಜಗತ್ತಿನಲ್ಲಿ ಹೇಗೆ ಪರಿಕಲ್ಪನೆ ಮೂಡಿದೆಯೋ ಹಾಗೆಯೇ ಚಿತ್ರಿಸಲಾಗಿದ್ದು, ಇಡೀ ಚಿತ್ರದಲ್ಲಿ  ಮಾಟ-ಮಂತ್ರ, ಮಂತ್ರವಾದಿಗಳ ಅಬ್ಬರವಿಲ್ಲ. ಹಾಗಾಗಿಯೇ ಕತೆ ವಿಶೇಷ ಎನ್ನುವುದು ವರ್ಣಮಯ ಚಿತ್ರತಂಡದ ಮಾತು. 

ಚಿತ್ರಕ್ಕೆ ಶ್ರೀಗುರು ಹಿನ್ನೆಲೆ ಸಂಗೀತ ಸಂಯೋಜಿಸುತ್ತಿದ್ದರೆ, ಹಾಡುಗಳಿಗೆ ಹೊಸ ಪ್ರತಿಭೆಗಳಾದ ಸುಧಾಂಶು-ವಿನೋದ್‌ ರಾಗ ಸಂಯೋಜನೆ ಮಾಡಿದ್ದಾರೆ. ಜೀವನ ಗೌಡ ಛಾಯಾಗ್ರಹಣ, ಸಿ.ರವಿಚಂದ್ರನ್‌ ಅವರ ಸಂಕಲನ ಚಿತ್ರಕ್ಕಿದೆ. ರಾಜ್‌ ಎಂಬ ನವ ಪ್ರತಿಭೆ "ವರ್ಣಮಯ' ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ನಾಯಕಿಯರಾಗಿ ಶಕ್ತಿ ಎಸ್‌. ಶೆಟ್ಟಿ, ಸುನೀತಾ ಮರಿಯಾ ಪಿಂಟೋ, ಆರಾಧ್ಯ ಅಟ್ಟಾವರ ಅಭಿನಯಿಸುತ್ತಿದ್ದಾರೆ. 

ಉಳಿದಂತೆ ಮಂಡ್ಯ ಜಗ, ಹರೀಶ್‌ ಕುಂದೊರು, ಉಮೇಶ್‌ ಸಿಂಧನೂರು ಇತರೆ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. "ವರ್ಣಮಯ' ಚಿತ್ರವನ್ನು ದೀಪ್ತಿ ದಾಮೋದರ್‌ ನಿರ್ಮಿಸುತ್ತಿದ್ದಾರೆ.  
 

Trending videos

Back to Top