CONNECT WITH US  

ಪೋಲಿ ಹುಡುಗರ ದೇಶಪ್ರೇಮದ ಕಥೆ

ರಂಗು ರಂಗಿನ ಹುಡುಗರು

ಜವಾಬ್ದಾರಿ ಇಲ್ಲದೇ, ಪೋಲಿಗಳಂತೆ ಸುತ್ತಾಡಿಕೊಂಡಿರುವ ಹುಡುಗರು ಒಂದು ಹಂತದಲ್ಲಿ ಒಳ್ಳೆಯವರಾಗಿ ಸಮಾಜ, ದೇಶಸೇವೆ ಮಾಡಲು ಮುಂದಾಗಿರುವ ಅನೇಕ ಕಥೆಗಳನ್ನು ನಮ್ಮ ಕನ್ನಡ ಪ್ರೇಕ್ಷಕರು ನೋಡಿಬಿಟ್ಟಿದ್ದಾರೆ. ಈಗಾಗಲೇ ಈ ತರಹದ ಅನೇಕ ಸಿನಿಮಾಗಳು ಬಂದಿವೆ. ಈಗ ಈ ಸಾಲಿಗೆ ಹೊಸ ಸೇರ್ಪಡೆ "ರಂಗಾದ ಹುಡುಗರು'. ಸಂಪೂರ್ಣ ಹೊಸಬರೇ ಸೇರಿಕೊಂಡು  "ರಂಗಾದ ಹುಡುಗರು' ಎಂಬ ಸಿನಿಮಾ ಮಾಡಿದ್ದಾರೆ. ಜವಾಬ್ದಾರಿ ಇಲ್ಲದೇ, ಅಡ್ಡ ದಾರಿಯಲ್ಲಿ ಕಾಸು ಮಾಡಬೇಕೆಂಬ ಕನಸು ಕಂಡಿರುವ ಹುಡುಗರು ಒಂದು ಹಂತದಲ್ಲಿ ಬದಲಾಗಿ ದೇಶ ಸೇವೆಗೆ ಮುಂದಾಗುವ ಕಥಾ ಹಂದರವನ್ನು ಈ ಸಿನಿಮಾ ಹೊಂದಿದೆ. 

ತೇಜಸ್‌ ಕುಮಾರ್‌ ಈ ಚಿತ್ರದ ನಿರ್ದೇಶಕರು. ಸುಮಾರು 20 ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ತೇಜಸ್‌ ಈಗ ಆ ಎಲ್ಲಾ ಅನುಭವಗಳನ್ನು ಸೇರಿಸಿ "ರಂಗಾದ ಹುಡುಗರು' ಚಿತ್ರ ಮಾಡಿದ್ದಾರೆ. ಚಿತ್ರದಲ್ಲಿ ಭಯೋತ್ಪಾದನೆಯ ಸನ್ನಿವೇಶಗಳು ಕೂಡಾ ಇದ್ದು, ಹಿರಿಯ ಐಪಿಎಸ್‌ ಅಧಿಕಾರಿಗಳ ಸಲಹೆ ಪಡೆದುಕೊಂಡು ಈ ದೃಶ್ಯಗಳನ್ನು ಹೆಣೆಯಲಾಗಿದೆಯಂತೆ. ಈ ಚಿತ್ರದ ಮೂಲಕ ಕಲಾ ನಿರ್ದೇಶಕ ಈಶ್ವರಿ ಕುಮಾರ್‌ ಅವರ ಪುತ್ರ ಸಾಗರ್‌ ನಾಯಕರಾಗಿ ಎಂಟ್ರಿಕೊಡುತ್ತಿದ್ದಾರೆ. ಸಿನಿಮಾಕ್ಕೆ ಬರುವ ಮುನ್ನ ಸಿನಿಮಾ ಬಗ್ಗೆ ತಿಳಿದುಕೊಳ್ಳಬೇಕೆಂಬ ಕಾರಣಕ್ಕೆ ಸಾಗರ್‌ ಕೆಲವು ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವ ಪಡೆದುಕೊಂಡಿದ್ದಾರೆ. ಈಗ "ರಂಗಾದ ಹುಡುಗರು' ಚಿತ್ರದ ಮೂವರು ಹೀರೋಗಳಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದಾರೆ ಸಾಗರ್‌. ಉಳಿದಂತೆ ಚಿತ್ರದಲ್ಲಿ ಮನು ಹೆಗಡೆ, ಹಾಗೂ ಸಂದೀಪ್‌, ಅಮಿತಾ, ಸಹನ ಪೊನ್ನಮ್ಮ, ಜ್ಯೋತಿ ಸೇರಿದಂತೆ ಅನೇಕರು ನಟಿಸಿದ್ದಾರೆ.

ಬೆಂಗಳೂರು ಸುತ್ತಮುತ್ತ ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ಪಳನಿ ಸೇನಾಪತಿ ಸಂಗೀತ, ಸಿನಿಟೆಕ್‌ ಸೂರಿ ಛಾಯಾಗ್ರಹಣ, ಆರ್‌.ಡಿ.ರವಿ ಸಂಕಲನವಿದೆ. ರುದ್ರೇಶ್‌ ನಾಗಸಂದ್ರ ಚಿತ್ರಕಥೆ, ಸಂಭಾಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ
ಚಿತ್ರವನ್ನು ಬಸವರಾಜ್‌ ಹಾಗೂ ಸುಮಾ ಬಸವರಾಜ್‌ ನಿರ್ಮಿಸಿದ್ದಾರೆ. ಚಿತ್ರಕ್ಕೆ ದಿಲ್ಸೆ ದಿಲೀಪ್‌ ಸಾಹಿತ್ಯವಿದೆ.

ರವಿ ರೈ

Trending videos

Back to Top