ಬಟಾಣಿ ಇಡ್ಲಿಯ ರುಚಿ ನೋಡಿದ್ದೀರಾ?
Team Udayavani, Jul 14, 2018, 2:50 PM IST
ದೇಶದ ಪ್ರಮುಖ ತಿಂಡಿಗಳಲ್ಲಿ ಇಡ್ಲಿ ಕೂಡ ಒಂದು. ಹೆಚ್ಚಿನ ಹೊಟೇಲ್, ರೆಸ್ಟೋರೆಂಟ್, ಮನೆಗಳಲ್ಲೂ ಇದನ್ನು ತಯಾರಿಸಲಾಗುತ್ತದೆ. ರವಾ ಇಡ್ಲಿ, ಪೋಹಾ ಇಡ್ಲಿ, ಮಲ್ಲಿಗೆ ಇಡ್ಲಿ, ಓಟ್ಸ್ ಇಡ್ಲಿ, ರಾಗಿ ಇಡ್ಲಿ ನೋಡಿರಬಹುದು ಅಥವಾ ತಿಂದಿರಬಹುದು. ಆದರೆ ಇದ್ಯಾವುದಪ್ಪಾ ಹೊಸ ಬಟಾಣಿ ಇಡ್ಲಿ ಎಂಬ ಪ್ರಶ್ನೆ ಕಾಡುತ್ತಿದೆಯೇ? ಹಾಗಿದ್ದರೆ ಮಾಡಿ ರುಚಿ ನೋಡಿ. ಸಾಮಾನ್ಯ ಇಡ್ಲಿ ತಿಂದು ಬೋರ್ ಆಗಿದ್ದರೆ ವಾರದಲ್ಲೊಮ್ಮೆ ಇದನ್ನೂ ಟ್ರೈ ಮಾಡಿ ನೋಡಬಹುದು.
ಬಟಾಣಿ ಇಡ್ಲಿ ತಯಾರಿಸಲು ಒಂದು ಕಪ್ ಬಟಾಣಿಯನ್ನು ಸುಮಾರು 4 ಗಂಟೆಗಳ ಕಾಲ ಬಿಸಿ ನೀರಿನಲ್ಲಿ ನೆನೆಸಿಡಬೇಕು. ಅನಂತರ ಮಿಕ್ಸಿಯಲ್ಲಿ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ಎರಡು ಕಪ್ ರವೆಗೆ ಸ್ವಲ್ಪ ನೀರು ಸೇರಿಸಿ ಮಿಶ್ರಮ ಮಾಡಿ. ಇದಕ್ಕೆ ಅರ್ಧ ಕಪ್ ಹೆಚ್ಚಿದ ಮೆಂತೆ ಸೊಪ್ಪು, ಅರ್ಧ ಕಪ್ ಕೊತ್ತಂಬರಿ ಸೊಪ್ಪು 2 ಚಮಚ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ರುಬ್ಬಿದ ಬಟಾಣಿ, ಶುಂಠಿ, ಹಸಿಮೆಣಸು ಪೇಸ್ಟ್ ನ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲಸಿ. ಅನಂತರ ಅರ್ಧ ಕಪ್ ಮೊಸರು ಹಾಕಿ ಮಿಶ್ರಣ ಮಾಡಿ 15- 20 ನಿಮಿಷ ಬಿಡಿ. ಅನಂತರ ಇಡ್ಲಿ ತಟ್ಟೆಗೆ ಎಣ್ಣೆ ಸವರಿ ಇಡ್ಲಿಯಂತೆ ಬೇಯಿಸಿದರೆ ಬಟಾಣಿ ಇಡ್ಲಿ ಸಿದ್ಧಗೊಳ್ಳುತ್ತದೆ. ಇದನ್ನು ಕೆಂಪು ಚಟ್ನಿ, ಹಸಿ ಮೆಣಸಿನ ಚಟ್ನಿಯೊಂದಿಗೆ ಸವಿಯಬಹುದು.
ಜಿ.ಕೆ