CONNECT WITH US  

Tour ಸರ್ಕಲ್ : ಸೌಂದರ್ಯದ ಖನಿ ಬಾದಾಮಿ

ಬಾದಾಮಿ ಬಾಗಲಕೋಟೆಯ ಒಂದು ಸುಂದರ ಊರು. ಶಾಲೆಯಲ್ಲಿ ಅಲ್ಲಿರುವ ಗುಹಾಂತರ ದೇವಾಲಯದ ಬಗ್ಗೆ ಓದಿದ್ದೆ. ಅದರೊಂದಿಗೆ ಸದಾ ಕೂಡಿಕೊಂಡು ಬರುವ ಐಹೊಳೆ, ಪಟ್ಟದಕಲ್ಲು ದೇವಸ್ಥಾನಗಳ ಚಿತ್ರಗಳನ್ನು ನೋಡಿದಾಗ ಬಹಳ ಖುಷಿ ನೀಡಿತ್ತು. ಗುಹಾಂತರ ದೇವಾಲಯ ಒಂದು ದೊಡ್ಡ ಬಂಡೆ ಕಲ್ಲು ಎನಿಸಿದ್ದು ಆಗ ನಿಜ. ಆದರೆ, ಪಟ್ಟದಕಲ್ಲು ದೇವಾಲಯ ಆಕರ್ಷಣೀಯವಾಗಿತ್ತು. ಯಾವಾಗಲೂ ಹೋಗಬೇಕೆಂಬ ಹಂಬಲಕ್ಕೆ ಕೊನೆ ಇರಲಿಲ್ಲ. ನಮ್ಮ ಇಡೀ ಕುಟುಂಬ ಬಾದಾಮಿ ನೋಡಲು ಹೊರಟಾಗ ನನ್ನ ಅಕ್ಕನ ಮಗಳು ವಿಜಯಪುರದ (ವಿಜಾಪುರ) ಗೋಲಗುಂಬಜನ್ನು ಪಟ್ಟಿಗೆ ಸೇರಿಸಿದಳು. ಎಲ್ಲವೂ ಸೇರಿ ಒಂದು ಪಟ್ಟಿ ಸಿದ್ಧಗೊಂಡಿತು. ಒಟ್ಟು ನಾಲ್ಕು ದಿನಗಳ ಟೂರು. ಮಂಗಳೂರಿನಿಂದ ಪ್ರಯಾಣ. 

ಬಾಡಿಗೆ ವಾಹನ ಮಾಡಿಕೊಂಡು ಬಾದಾಮಿ ಮುಟ್ಟಿದಾಗ ಸಂಜೆಯಾಗಿತ್ತು. ಬನಶಂಕರಿ ದೇವಿಯ ದೇವಸ್ಥಾನಕ್ಕೆ ಹೋದೆವು. ಅಲ್ಲಿ ದಾರಗಳನ್ನು ಕಟ್ಟುತ್ತಿದ್ದ ಜಾಗ, ದೇವಸ್ಥಾನದೊಳಗಿನ ಜನ ಸಂದಣಿ ಎಲ್ಲ ಕಂಡು ವಿಶಿಷ್ಟವೆನಿಸಿದ್ದು ನಿಜ. ಈ ದೇವಸ್ಥಾನಕ್ಕೆ ಸುತ್ತಮುತ್ತಲಿನ ಹಲವಾರು ಗ್ರಾಮಗಳಿಂದ ಜನರು ಬರುವುದಿದೆ. ದೇವಸ್ಥಾನದ ದರ್ಶನ ಮುಗಿಸಿಕೊಂಡು ಅಲ್ಲೆದುರು ಇದ್ದ ಅಂಗಡಿಗಳನ್ನೆಲ್ಲ ಒಮ್ಮೆ ನೋಡಿದೆವು. ಏನನ್ನೂ ಕೊಳ್ಳಲಿಲ್ಲ. ನಮ್ಮ ಪುಟ್ಟಿ (ಅಕ್ಕನ ಮಗಳು) ಬಳೆಗೆ ಹಠ ಮಾಡಿದಳು. ಹೇಗೋ ಸಂಭಾಳಿಸಿದವೆನ್ನಿ. ಅಲ್ಲಿಂದ ಉಳಿದುಕೊಂಡಿದ್ದ ಹೊಟೇಲ್‌ ಗೆ ಹೋದೆವು. ನಮ್ಮ ಬಾವ ರಾತ್ರಿ ಊಟಕ್ಕೆ ಹೋಗುವ ಹೊಟೇಲ್‌ ಅನ್ನು ಗೊತ್ತುಮಾಡಿಕೊಂಡು ಬಂದ. ರಾತ್ರಿ ಊಟದ ಸಮಯದಲ್ಲೇ ಮರುದಿನದ ಬೆಳಗ್ಗೆಯ ಪ್ರಯಾಣದ ನಕ್ಷೆ ಸಿದ್ಧವಾಯಿತು.

ಇಷ್ಟವಾಯಿತು ಕೆರೆ
ಬೆಳಗ್ಗೆ ಬೇಗನೆ ಹೊರಟದ್ದು ಬಾದಾಮಿ ದೇವಸ್ಥಾನಕ್ಕೆ. ಅಲ್ಲಿಗೆ ಹೋದ ಮೇಲೆ ಅದರ ವೈಭವ ಕಂಡು ನನ್ನ ತಪ್ಪಿನ ಅರಿವಾಯಿತು. ಬರೀ ಬಂಡೆಯೆಂದುಕೊಂಡಿದ್ದ ನನಗೆ ಅದರಲ್ಲಿನ ಒಂದೊಂದು ಕೆತ್ತನೆಯೂ ಅದ್ಭುತವೆನಿಸಿದ್ದು ಸತ್ಯ. ಹರಿಹರ, ಅರ್ಧ ನಾರೀಶ್ವರ, ನಟರಾಜ ಶಿಲ್ಪಗಳು ವಿಶಿಷ್ಟೆನಿಸಿದವು. ಮೇಲಿನವರೆಗೂ ನಡೆದು ಹೋಗುವುದು ಸ್ವಲ್ಪ ತ್ರಾಸವೆನಿಸಿದರೂ, ಮಧ್ಯದಲ್ಲಿ ನಿಂತು ಇಡೀ ಊರನ್ನೇ ನೋಡುವಾಗ ಸಿಗುವ ವಿಹಂಗಮ ನೋಟ ಅನುಪಮ. ಬಳಿಕ ಪಕ್ಕದಲ್ಲೆ ಇದ್ದ ಕೆರೆಯನ್ನು ಕಂಡು, ಅದರ ತಟದಲ್ಲಿದ್ದ ದೇವಾಲಯಕ್ಕೂ ಹೋಗಿ ಬಂದೆವು. ನಮ್ಮ ಪ್ರಾಚೀನ ಶಿಲ್ಪಕಲೆಯ ಮಹತ್ವವೂ ಇದರಿಂದ ತಿಳಿಯಿತು. ನಮ್ಮ ಕನ್ನಡಿಗರದ್ದೇ ಪರಂಪರೆಯಿದು ಎಂಬುದು ಮತ್ತಷ್ಟು ಹೆಮ್ಮೆಗೆ ಕಾರಣವಾಯಿತು. ಅಂದ ಹಾಗೆ ನಮ್ಮ ಪುಟ್ಟಿ ಅರ್ಧದವರೆಗೆ ಹತ್ತಿ, ಆಮೇಲೆ ಮೇಲಕ್ಕೆ ಬರುವುದಿಲ್ಲವೆಂದು ಹಠ ಹಿಡಿದಳು. ಕಾರಣವೆಂದರೆ ಅವಳ ಕೈಯಲ್ಲಿದ್ದ ಬಾಳೆಹಣ್ಣಿಗೆ ಎರಡು ಮಂಗಗಳು ದಾರಿಗೆ ಅಡ್ಡ ನಿಂತು ಗಲಾಟೆ ಮಾಡುತ್ತಿದ್ದವು. ಆಮೇಲೆ ಮಂಗಗಳನ್ನು ಓಡಿಸಿದ ಮೇಲೂ ಪುಟ್ಟಿ ಮೇಲೆ ಬರಲು ಒಪ್ಪಲೇ ಇಲ್ಲ. ಆ ಕೆರೆಯ ಆಗಾಧತೆ, ತಟದ ಮೇಲಿನ ವಾತಾವರಣ ಸಿಕ್ಕಾಪಟ್ಟೆ ಇಷ್ಟವಾಯಿತು. ಇತ್ತೀಚೆಗಷ್ಟೇ ಮತ್ತೂಮ್ಮೆ ಬಾದಾಮಿಗೆ ಹೋಗುವ ಅವಕಾಶ ಸಿಕ್ಕಿದಾಗಲೂ ಆ ಕೆರೆಯ ತಟದಲ್ಲಿ ಕುಳಿತುಕೊಳ್ಳಲೆಂದೇ ಹೋಗಿದ್ದೆ. 

ಸಂಸತ್ತಿನ ಮಾದರಿ
ಇಡೀ ದಿನ ಬಾದಾಮಿಯನ್ನು ನೋಡಿ, ಮಾರನೆಯ ದಿನ ಐಹೊಳೆಗೆ ಹೊರಟೆವು. ಐಹೊಳೆಯ ದೇವಸ್ಥಾನ ಕಂಡಾಗ ಮೊದಲಿಗೆ ಅನಿಸಿದ್ದು ದೂರದರ್ಶನದಲ್ಲಿ ಬರುತ್ತಿದ್ದ ಸಂಸತ್ತಿನ ಫೋಟೋ. ಅದರಂತೆಯೇ ತೋರುತ್ತಿದ್ದ ಐಹೊಳೆ ದೇವಸ್ಥಾನ ತನ್ನ ವಾಸ್ತುಶಿಲ್ಪ ಶೈಲಿಯಿಂದ ವಿಖ್ಯಾತಗೊಂಡಿದೆ. ಇದನ್ನೂ ಬದಾಮಿ ಚಾಲುಕ್ಯರೇ ಕಟ್ಟಿಸಿದ್ದು. ಜತೆಗೆ ಐಹೊಳೆ ಇವರ ಮೊದಲ ರಾಜಧಾನಿಯಾಗಿದ್ದಂತೆ. ಇಲ್ಲಿಯ ದೇವಾಲಯ, ಶಿಲಾಕೋಟೆ ಎಲ್ಲವೂ ವಿಶಿಷ್ಟವಾದುದು. ಎಲ್ಲೂ ಗಾರೆ, ಮರಳನ್ನು ಕೋಟೆ ಕಟ್ಟಲು ಬಳಸಿದ್ದಾರೆ ಎನ್ನಿಸುವುದೇ ಇಲ್ಲ. ಆಮೇಲೆ ಅಲ್ಲಿದ್ದ ಮಾರ್ಗದರ್ಶಿಯೊಬ್ಬರು, ಗಾರೆ ಇತ್ಯಾದಿ ಮಾಡದೇ ಈ ಕೋಟೆಯನ್ನು ಕಟ್ಟಿದರು ಎಂದು ಮಾಹಿತಿ ಕೊಟ್ಟರು.

ಪಟ್ಟದಕಲ್ಲು
ಅಲ್ಲಿನ ದೇವಸ್ಥಾನವೂ ವಿಶಿಷ್ಟವೆನಿಸಿದ್ದು ಆದರ ಕಲೆಯಿಂದ. ವಿರೂಪಾಕ್ಷ ದೇವಾಲಯ ಮತ್ತು ಮಲ್ಲಿಕಾರ್ಜುನ ದೇವಾಲಯಗಳನ್ನು ಎಷ್ಟು ನೋಡಿದರೂ ಮನ ತಣಿಯದು. ಇದೂ ಸಹ ಚಾಲುಕ್ಯರ ರಾಜಧಾನಿಯಾಗಿತ್ತಂತೆ. ನಾನು ಒಂದೆರಡು ಕಂಬಗಳ ಮೇಲಿದ್ದ ಕೆತ್ತನೆಯನ್ನು ನೋಡುತ್ತಾ ಕುಳಿತುಕೊಂಡೆ. ಸುಮಾರು ಅರ್ಧ ಗಂಟೆ ಕಳೆದರೂ ನೋಡಿ ಮುಗಿಯಲಿಲ್ಲ. ಅಷ್ಟರೊಳಗೆ ಎಲ್ಲರೂ ದೇವಸ್ಥಾನ ಸುತ್ತು ಹಾಕಿ ಬಂದಿದ್ದರು. ಅಲ್ಲಿಂದ ಹೊರಟದ್ದು ವಿಜಾಪುರದ ಕಡೆಗೆ. ಗೋಲಗುಂಬಜ್‌ ಕುತೂಹಲ ಹುಟ್ಟಿಸಿದ್ದ ಸ್ಥಳ. ಅದರಲ್ಲೂ ನಮ್ಮ ಧ್ವನಿ  ಪ್ರತಿಧ್ವನಿಯಾಗಿ ಹೊಮ್ಮುವ ಬಗೆಯನ್ನು ಕೇಳಬೇಕೆನಿಸಿತ್ತು. ಅದರೆ, ಮೇಲೆ ಹತ್ತಿ ಹೋಗುವ ಸ್ಥಳ ಬಹಳ ಕಿರಿದಾಗಿದ್ದರಿಂದ, ತೀರಾ ಕಷ್ಟವೆನಿಸಿತ್ತು. ಯಾಕಾದರೂ ಬಂದೆವೆನೋ ಎನ್ನಿಸಿದ್ದೂ ನಿಜ. ದುರದೃಷ್ಟವಶಾತ್‌, ಮೇಲೆ ಹತ್ತಲು ಶುರು ಮಾಡಿದರೆ ವಾಪಸ್‌ ಹೋಗುವುದೂ ಸಹ ತೊಂದರೆಯೇ ಎನ್ನಿಸಿದ್ದು ಆಗಲೇ. ಅದೂ ರಜೆಯ ಸಂದರ್ಭ. ಸಾವಿರಾರು ಮಂದಿ ಪ್ರವಾಸಿಗರಿದ್ದರು. ಸಂಜೆಯಷ್ಟೊತ್ತಿಗೆ ತಂಗಾಳಿ ಸೇವಿಸಿಕೊಂಡು ಗೋಲ್‌ಗ‌ುಂಬಜ್‌ ಮುಗಿಸಿದೆವು. ಅಂದು ರಾತ್ರಿ ಮಲಗಿದಾಗ ನಿದ್ದೆ ಬಂದದ್ದೇ ತಿಳಿದಿರಲಿಲ್ಲ. ಅಷ್ಟೊಂದು ಸುಸ್ತಾಗಿತ್ತು. ಒಳ್ಳೆಯ ಪ್ರವಾಸದ ಅನುಭವ ಕೊಟ್ಟಂಥ ಊರುಗಳಿವು ಎನ್ನುವುದರಲ್ಲಿ ಅಚ್ಚರಿಯಿಲ್ಲ.

ಇತಿಹಾಸ
ಗುಡ್ಡದ ಬದಿಯನ್ನು ಕೊರೆದು ನಿರ್ಮಿಸಿದ್ದು ಬಾದಾಮಿಯ ಗುಹಾಂತರ (ಗುಹಾಲಯ) ದೇವಾಲಯಗಳು. ಚಾಲುಕ್ಯರ ರಾಜಧಾನಿಯಾಗಿದ್ದ ಊರಿದು. ಕನ್ನಡಿಗರ ಮೊದಲ ಸಾಮ್ರಾಜ್ಯ ಕದಂಬರ ಆಳ್ವಿಕೆಯಲ್ಲಿ ದಂಡಾಧಿಕಾರಿಯಾಗಿದ್ದ ಜಯಸಿಂಹ ಕ್ರಿ.ಶ. 500 ರಲ್ಲಿ ಪ್ರತ್ಯೇಕಗೊಂಡು ಹೊಸ ತಂಡವನ್ನು ಕಟ್ಟಿ ಬಾದಾಮಿಯಲ್ಲಿ ಹೊಸ ರಾಜ್ಯವನ್ನೇ ಸ್ಥಾಪಿಸಿದ. ಇದೇ ಮನೆತನ ಚಾಲುಕ್ಯರಾಜವಂಶವಾಯಿತು. ಇಲ್ಲಿ ಒಟ್ಟು ನಾಲ್ಕು ಗುಹಾಂತರ ದೇವಾಲಯಗಳಿವೆ. ಶೈವ, ವೈಷ್ಣವ, ಬೌದ್ಧ ಹಾಗೂ ಜೈನ ಧರ್ಮವನ್ನು ಸಾರುತ್ತವಂತೆ. ಕಪ್ಪೆ ಅರಭಟ್ಟನ ಶಾಸನವೂ ಇಲ್ಲೇ ಇದೆ.

ರೂಟ್‌ಮ್ಯಾಪ್‌
- ಮಂಗಳೂರಿನಿಂದ ಬಾದಾಮಿ 459 ಕಿ.ಮೀ.  

- ಸ್ವಂತ ವಾಹನದಲ್ಲಿ ಹೋದರೆ ಸುಮಾರು 9 ರಿಂದ 10 ಗಂಟೆ ಪ್ರಯಾಣ

- ಮಂಗಳೂರು- ಕಾರವಾರ- ಬಾದಾಮಿಗೆ ತಲುಪಬಹುದು ಮಂಗಳೂರು- ಗದಗ- ಬಾದಾಮಿಗೆ ತಲುಪಬಹುದು

- ಶ್ರೀನಾಥ್‌,  ಮಂಗಳೂರು

ಇಂದು ಹೆಚ್ಚು ಓದಿದ್ದು

Trending videos

Back to Top