CONNECT WITH US  

ಶಿವಗಿರಿಯಲ್ಲಿ ಗುರುಗಳ ಧ್ಯಾನ

ಶಿವಗಿರಿಗೆ ಹೋಗುವ ಪ್ಲ್ರಾನ್‌ ಒಂದೆರಡು ದಿನ ತಡವಾಗಿದ್ದರೂ ನಾವು ಕೇರಳದ ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಬೇಕಿತ್ತು. ನಾವು ಅಲ್ಲಿದ್ದಾಗಲೇ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಮಳೆ ಅನಂತರ ತನ್ನ ಉಗ್ರ ಪ್ರತಾಪವನ್ನು ತೋರುತ್ತದೆ ಎಂದು ನಾವ್ಯಾರೂ ಏಣಿಸಿರಲಿಲ್ಲ. ಮಳೆ ಹನಿಗಳ ನಡುವೆ ಬೆಟ್ಟದ ಮೇಲೆ ಮೌನ ದಿಂದ ಕುಳಿತಿದ್ದ ನಾರಾಯಣ ಗುರುಗಳ ದರ್ಶನ ಪಡೆದು ಬಂದಾಗ ಮನಸ್ಸು ಶಾಂತವಾಗಿತ್ತು.

ಕಳೆದ ಎರಡು ವರ್ಷಗಳಿಂದ ಮುಂದೂಡಿಕೊಂಡು ಬಂದಿದ್ದ ಕೇರಳದಲ್ಲಿರುವ ಶಿವಗಿರಿಯ ಯಾತ್ರೆಗೆ ಕೊನೆಗೂ ಕಾಲ ಕೂಡಿ ಬಂದಿತ್ತು. ಆ. 6ರಂದು ಸಂಜೆ 4 ಗಂಟೆಗೆ ಮಂಗಳೂರಿಗೆ ಹೊರಟಿತು ನಮ್ಮ ಆರು ಜನರ ತಂಡ. ಸಂಜೆ 5.45ಕ್ಕೆ ಮಂಗಳೂರಿನಿಂದ ರೈಲಿನ ಮೂಲಕ ನಮ್ಮ ಪ್ರಯಾಣ ಆರಂಭಗೊಂಡಿತ್ತು. 

ಸಂಜೆ ಆರು ಗಂಟೆ ವೇಳೆಗೆ ಮನೆಯಿಂದ ಕಟ್ಟಿ ತಂದಿದ್ದ ಎರಡೆರಡು ಚಪಾತಿ, ಬಾಜಿ, ವೆಜ್‌ ಬಿರಿಯಾನಿಯನ್ನು ಸವಿದು ಮಾತು, ಹರಟೆ, ಟೂರ್‌ ಪ್ಲ್ರಾನ್‌ ಬಗ್ಗೆ ಚರ್ಚೆ ನಡೆಸುತ್ತ ಹಾಗೂ ಜತೆಯಲ್ಲೊಂದು ಪುಟ್ಟ ಮಗುವೂ ಇದ್ದುದರಿಂದ ಅದರ ಜತೆ ಆಡುತ್ತ ನಮ್ಮ ಪ್ರಯಾಣ ಸಾಗುತ್ತಿತ್ತು. ರಾತ್ರಿಯ ಉಪಾಹಾರ ಮುಗಿಸಿ ಎಲ್ಲರೂ ತಮ್ಮ ತಮ್ಮ ಸೀಟ್‌ ಹತ್ತಿ ಮಲಗಿದೆವು. ಮಧ್ಯ ರಾತ್ರಿ ವೇಳೆ ನಮ್ಮ ಹತ್ತಿರದಲ್ಲಿದ್ದ ಒಂದಿಬ್ಬರು ಪ್ರಯಾಣಿಕರು ಗೊರಕೆ ಹೊಡೆಯಲು ಆರಂಭಿಸಿದ್ದರಿಂದ ಮತ್ತೆ ನಮಗ್ಯಾರಿಗೂ ಸರಿಯಾಗಿ ನಿದ್ದೆಯೇ ಬರಲಿಲ್ಲ. ಯಾವಾಗ ನಾವು ನಮ್ಮ ತಾಣವನ್ನು ತಲುಪುತ್ತೇವೆ ಎಂದು ಕಾಯುವಂತೆ ಮಾಡಿತ್ತು.

ಮುಂಜಾನೆ 6 ಗಂಟೆಗೆ ವರ್ಕಳ ರೈಲು ನಿಲ್ದಾಣದಲ್ಲಿ ಇಳಿದಾಗ ಭಾಷೆ ಬಾರದ ನಾಡಿಗೆ ಬಂದ ಸಂಭ್ರಮ ಒಂದೆಡೆಯಾದರೆ, ಅಲ್ಲಲ್ಲಿ ಕಾಣುವ ವ್ಯಕ್ತಿಗಳು ನಮ್ಮವರೇ ತಾನೆ ಎಂದೆನಿಸಿತು. ರೈಲು ನಿಲ್ದಾಣದಿಂದ ಶಿವಗಿರಿ ದೇವಸ್ಥಾನದ ಗೆಸ್ಟ್‌ ಹೌಸ್‌ಗೆ ಬಂದಾಗ ಜೋರು ಮಳೆ ಸುರಿಯಲಾರಂಭಿಸಿತು. ರೂಮ್‌ಗೆ ಹೋಗಿ ಫ್ರೆಶ್‌ ಆಗಿ ಸುಮಾರು 8 ಗಂಟೆ ವೇಳೆಗೆ ದೇವಸ್ಥಾನಕ್ಕೆ ಹೊರಟೆವು.

ಹಚ್ಚಹಸುರು, ಸಣ್ಣ ಬೆಟ್ಟದ ನಡುವೆ ಸುಂದರವಾದ ಮೆಟ್ಟಿಲಿನ ದಾರಿ. ನಡೆಯಲು ಸಾಧ್ಯವಾಗದವರಿಗೆ ರಸ್ತೆ ದಾರಿಯೂ ಇದೆ. ನಾವು ಮೆಟ್ಟಿಲುಗಳನ್ನು ಹತ್ತುತ್ತ ಮುಂದೆ ಸಾಗುತ್ತಿದ್ದೆವು. ದಾರಿಯಲ್ಲಿ ನಾರಾಯಣ ಗುರುಗಳ ಸಂದೇಶಗಳನ್ನು ಅಲಲ್ಲಿ ಮರಗಳಿಗೆ ತೂಗು ಹಾಕಲಾಗಿತ್ತು. ಬಹುತೇಕ ಎಲ್ಲವೂ ಮಲೆಯಾಳಂ ಭಾಷೆಯಲ್ಲಿದ್ದುದರಿಂದ ಓದಲು ಸಾಧ್ಯವಾಗಲಿಲ್ಲ. ನಮ್ಮ ಜತೆಯಿದ್ದ ಹಿರಿಯರೊಬ್ಬರು ಅಲ್ಲಿನ ಸ್ಥಳದ ಹಿನ್ನೆಲೆಯ ಜತೆಗೆ ಆಗಿರುವ ಬದಲಾವಣೆಗಳ ಕುರಿತು ವಿವರಿಸುತ್ತಿದ್ದರು. ಹೀಗಾಗಿ ಮೆಟ್ಟಿಲೇರಿ ಮೇಲೆ ಬಂದದ್ದೇ ತಿಳಿಯಲಿಲ್ಲ.

ನಾರಾಯಣ ಗುರುಗಳು ಸಮಾಧಿಯಾದ ಸ್ಥಳದಲ್ಲಿ ನಿರ್ಮಾಣವಾಗಿರುವ ಸುಂದರ ದೇಗುಲ, ಅವರು ನೆಟ್ಟಿ ರುವ ಹಲಸಿನ ಮರ ಹಾಗೂ ಸುತ್ತಮುತ್ತಲಿನ ಸುಂದರ ಪರಿಸರವನ್ನು ನೋಡುವುದೇ ಕಣ್ಣಿಗೆ ಹಬ್ಬ ಎಂದೆನಿಸುತ್ತಿತ್ತು. ನಾರಾಯಣ ಗುರುಗಳ ಬೃಹತ್‌ ಪ್ರತಿಮೆಯ ದರ್ಶನ ಪಡೆದು ಮರಳಿ ಬಂದಾಗ ಹನಿಹನಿಯಾಗಿ ಮಳೆ ಬರುತ್ತಿದ್ದರೂ ಹೊಟ್ಟೆ ಹಸಿವಿನ ನಡುವೆ ಯಾರೂ ಅದನ್ನೂ ಲೆಕ್ಕಿಸಲಿಲ್ಲ. ದೇವಾಲಯದ ವತಿಯಿಂದ ನಮಗಾಗಿಯೇ ಇಡ್ಲಿ, ಸಾಂಬಾರ್‌, ಕಟ್ಟಂ ಕಾಫಿಯನ್ನು ಇರಿಸಲಾಗಿತ್ತು. ಅದನ್ನು ಸವಿದು ಬಳಿಕ ಅಲ್ಲೇ ಹತ್ತಿರದಲ್ಲಿ ನಾರಾಯಣ ಗುರುಗಳು ಪ್ರತಿಷ್ಠಾಪಿಸಿದ ಶಾರದಾ ದೇವಿಯ ದೇಗುಲಕ್ಕೆ ಭೇಟಿ ನೀಡಿ ಗೆಸ್ಟ್‌ ಹೌಸ್‌ಗೆ ಮರಳಿ ಬಂದಾಗ ಗಂಟೆ 9.30 ಕಳೆದಿತ್ತು.

ಮುಂದಿನ ನಮ್ಮ ಯೋಜನೆಯಂತೆ ಕೇರಳದ ಸುಪ್ರಸಿದ್ಧ ಅನಂತೇಶ್ವರ ದೇವಾಲಯಕ್ಕೆ ಹೋಗಲು ರೆಡಿಯಾಗಬೇಕಿತ್ತು. ಆದರೆ ಕೇರಳದಲ್ಲಿ ಪ್ರತಿಭಟನೆ ಇದ್ದುದರಿಂದ ವಾಹನಗಳ ಸಂಚಾರ ನಿಷೇಧವಾಗಿತ್ತು. ಹೀಗಾಗಿ ಇಡೀ ದಿನ ಗೆಸ್ಟ್‌ ಹೌಸ್‌ ನಲ್ಲೇ ಕಳೆಯಬೇಕಲ್ಲ ಎಂಬ ಬೇಸರದಲ್ಲಿದ್ದಾಗ ರಿಕ್ಷಾ ಚಾಲಕನೊಬ್ಬ ವರ್ಕಳ ಸುತ್ತಮುತ್ತ ತಿರುಗಾಡಲು ಒಪ್ಪಿಕೊಂಡ.

ಸುಮಾರು 10 ಗಂಟೆಗೆ ರಿಕ್ಷಾ ಮೂಲಕ ವರ್ಕಳದ ಸಮೀಪದಲ್ಲೇ ಜಗನ್ನಾಥೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟೆವು. ಕಲ್ಲಿನಿಂದ ನಿರ್ಮಾಣಗೊಂಡಿರುವ ಸುಂದರ ದೇಗುಲವದು. ಅಲ್ಲಿ ಸುತ್ತ ಮುತ್ತ ಸ್ವಲ್ಪ ಸಮಯ ಕಳೆದು ಹೊರಟಾಗ ಮತ್ತೆ ಭಾರೀ ಗಾಳಿ ಮಳೆಯ ದರ್ಶನವಾಯಿತು. ಅಲ್ಲಿಂದ ಮರಳಿ ಮಾರುಕಟ್ಟೆಗೆ ಬಂದೆವು. ಕೇರ ಳದ ಹೆಚ್ಚು ಖ್ಯಾತಿ ಪಡೆದಿರುವ ಹಲ್ವ, ಚಿಪ್ಸ್‌ ನಂತಹ ತಿಂಡಿಗಾಗಿ ಮಾರುಕಟ್ಟೆ ಪೂರ್ತಿ ಸುತ್ತಾಡಿ ಬಂದೆವು.

ಅಲ್ಲಿಂದ ಮರಳಿ ಗೆಸ್ಟ್‌ ಹೌಸ್‌ಗೆ ಬಂದಾಗ 12.30 ಆಗಿತ್ತು. ಬಳಿಕ ನೇರ ವಾಗಿ ಊಟದ ಹಾಲ್‌ಗೆ ಹೋಗಿ ಊಟ ಮುಗಿಸಿ 2 ಗಂಟೆ ವೇಳೆಗೆ ಮರಳಿ ವಿಶ್ರಾಂತಿ ಪಡೆಯಲು ಬಂದೆವು. ಸಂಜೆ 4 ಗಂಟೆವರೆಗೆ ವಿಶ್ರಾಂತಿ ಪಡೆದು ಬಳಿಕ ಸಂಜೆಯ ಪೂಜೆಗೆ ಹೊರಡಲು ಸಿದ್ಧತೆ ಮಾಡಲಾರಂಭಿಸಿದೆವು. ಸಂಜೆ 6 ಗಂಟೆಗೆ ನಾರಾಯಾಣ ಗುರುಗಳ ಸಮಾಧಿ ಸ್ಥಳದಲ್ಲಿ ಪೂಜೆ ಇದ್ದುದರಿಂದ ಎಲ್ಲರೂ 6 ಗಂಟೆಗೆ ಸ್ಥಳದಲ್ಲಿ ಹಾಜರಾದೆವು. ಸ್ವಲ್ಪ ಹೊತ್ತು ಮಂತ್ರ ಪಠಣ, ಪೂಜೆ ಬಳಿಕ ಪ್ರಸಾದ ಪಡೆದು ದೇವಾಲಯದಿಂದ ಹೊರಬರುವಾಗ ಗಂಟೆ 7 ಕಳೆದಿತ್ತು. ಅಲ್ಲಿಂದ ಕೆಳಗೆ ಇಳಿದು ಬರುವಾಗ ನಾರಾಯಣ ಗುರುಗಳು ಬಳಕೆ ಮಾಡುತ್ತಿದ್ದ ಸೈಕಲ್‌, ಕುರ್ಚಿ, ಮಂಚ ಸಹಿತ ಇನ್ನಿತರ ಸಾಮಗ್ರಿಗಳನ್ನು ನೋಡಿ ಬಂದೆವು. ಬಳಿಕ ಶಾರದೆಯ ದರ್ಶನ ಪಡೆದು, ಅಲ್ಲಿಯೂ ಪ್ರಸಾದ ಸ್ವೀಕರಿಸಿ ಗೆಸ್ಟ್‌ ಹೌಸ್‌ ನಿಂದ ಲಗೇಜ್‌ ಕಟ್ಟಿಕೊಂಡು ರೈಲು ನಿಲ್ದಾಣಕ್ಕೆ ಬಂದಾಗ ಗಂಟೆ 7.45 ಆಗಿತ್ತು. 

ಸಂಜೆ ಯಾರೂ ಏನೂ ತಿನ್ನದೇ ಇದ್ದುದರಿಂದ ಎಲ್ಲರಿಗೂ ಜೋರು ಹಸಿವಾಗುತ್ತಿತ್ತು. ರೈಲು ನಿಲ್ದಾಣದಲ್ಲೇ ದೋಸೆ, ಚಪಾತಿ ತಿಂದು 8.15ಕ್ಕೆ ರೈಲಿನಲ್ಲಿ ಮರಳಿ ಊರಿನತ್ತ ಪ್ರಯಾಣ ಬೆಳೆಸಿದೆವು.

ರೂಟ್‌ ಮ್ಯಾಪ್‌
· ಮಂಗಳೂರಿನಿಂದ 477 ಕಿ.ಮೀ. ದೂರ.
· ವರ್ಕಳದವರೆಗೆ ಬಸ್‌, ರೈಲು ಸಂಪರ್ಕ ವ್ಯವಸ್ಥೆಯಿದೆ.
· ವರ್ಕಳ ರೈಲು ನಿಲ್ದಾಣದಿಂದ 2 ಕಿ.ಮೀ. ದೂರ.
· ಸ್ಥಳೀಯವಾಗಿ ತಿರುಗಾಡಲು ರಿಕ್ಷಾ , ಖಾಸಗಿ ವಾಹನ ಸೌಲಭ್ಯ ಸಿಗುವುದು.
· ಊಟ, ವಸತಿಗೆ ಸಮಸ್ಯೆಯಿಲ್ಲ. ಮೊದಲೇ ಬುಕ್ಕಿಂಗ್‌ ಮಾಡಿದರೆ ದೇವಸ್ಥಾನದ ವತಿಯಿಂದಲೇ ವ್ಯವಸ್ಥೆಯಿದೆ.
· ಹತ್ತಿರದಲ್ಲಿ ಜನಾರ್ಧನ ಸ್ವಾಮಿ ದೇವಾಲಯ, ವರ್ಕಳ ಬೀಚ್‌ ಇದೆ.

ವಿದ್ಯಾ ಕೆ. ಇರ್ವತ್ತೂರು

ಇಂದು ಹೆಚ್ಚು ಓದಿದ್ದು

Trending videos

Back to Top