CONNECT WITH US  

ಅಣ್ಣಪ್ಪ ನೊಟ್ಟುಗು ಏರಾ ಉಲ್ಲೆರ್‌ಗೆ...!

ಒಂದು ದಿನ- ಎರಡು ಸಿನೆಮಾ

ತುಳು ಸಿನೆಮಾ ಪ್ರೇಮಿಗಳಿಗೆ ಮಾ. 23 ನೆನಪಿರಬಹುದು. ತುಳು ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ 'ಅಪ್ಪೆ ಟೀಚರ್‌' ಮತ್ತು 'ತೊಟ್ಟಿಲು' ಸಿನೆಮಾಗಳು ಒಂದೇ ದಿನ ಬಿಡುಗಡೆಯಾಗುವ ಮೂಲಕ ಸಾಕಷ್ಟು ಚರ್ಚೆಗೆ ಕಾರಣವಾದ ದಿನವದು.

ಅಂದು ಯಾರಿಗೆ ಲಾಭವಾಯಿತು? ಯಾರಿಗೆ ನಷ್ಟವಾಯಿತು? ಎಂಬ ಲೆಕ್ಕಾಚಾರಕ್ಕಿಂತಲೂ ತುಳು ಪ್ರೇಕ್ಷಕ ವರ್ಗ ಗೊಂದಲಕ್ಕೆ ಒಳಗಾಗಿ ನಮ್ಮಲ್ಲೂ ಹೀಗೆ ಯಾಕಾಯಿತು? ಎಂದು ಪ್ರಶ್ನಿಸುವ ಹಾಗಾಯಿತು. ಜತೆಗೆ, ಒಂದೇ ದಿನ ಎರಡು ಸಿನೆಮಾ ರಿಲೀಸ್‌ ಆಗುವ ಸನ್ನಿವೇಶಗಳು ತುಳುವಿನಲ್ಲಿ ಮುಂದೆಂದೂ ನಡೆಯಕೂಡದು ಎಂದು ತುಳು ಚಲನಚಿತ್ರ ಲೋಕವೇ ಅಂದು ಅಭಿಪ್ರಾಯಪಟ್ಟಿತ್ತು. ಆದರೆ, ಕೋಸ್ಟಲ್‌ವುಡ್‌ನ‌ಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೆ ಈಗ ಸಾಬೀತಾಗುತ್ತಿದೆ. ಯಾಕೆಂದರೆ ಮತ್ತೆ ಈಗ ಎರಡು ಸಿನೆಮಾ ಒಟ್ಟೊಟ್ಟಿಗೆ ರಿಲೀಸ್‌ ಆಗಲಿದೆ.

ಬಹುನಿರೀಕ್ಷಿತ ದೇವದಾಸ್‌ ಕಾಪಿಕಾಡ್‌ ಅವರ 'ಏರಾ ಉಲ್ಲೆರ್‌ಗೆ' ಹಾಗೂ ಕುತೂಹಲ ಮೂಡಿಸಿದ ಮಯೂರ್‌ ಶೆಟ್ಟಿ ನಿರ್ದೇಶನದ 'ಮೈ ನೇಮ್‌ ಈಸ್‌ ಅಣ್ಣಪ್ಪ' ಸಿನೆಮಾವು ಹೆಚ್ಚಾ ಕಡಿಮೆ ಒಂದೇ ದಿನ ತೆರೆಕಾಣುವ ನಿರೀಕ್ಷೆ ಇದೆ. ಎರಡೂ ಚಿತ್ರತಂಡ ಒಂದೇ ದಿನ ಸಿನೆಮಾ ರಿಲೀಸ್‌ಗೆ ಡೇಟ್‌ ಫಿಕ್ಸ್‌ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ತುಳು ಚಲನಚಿತ್ರ ನಿರ್ಮಾಪಕರ ಸಂಘ ಹಾಗೂ ಹೊಸದಾಗಿ ಆರಂಭಿಸಲಾದ ಸ್ಕ್ರೀನಿಂಗ್‌ ಕಮಿಟಿಯು ಈ 'ಡೇಟ್‌ ಪ್ರಾಬ್ಲೆಮ್‌' ಅನ್ನು ಸರಿಪಡಿಸುವ ನೆಲೆಯಲ್ಲಿ ಮಾತುಕತೆಗೆ ಮುಂದಾಗಿದೆ.

ಅಂದಹಾಗೆ, ಕಳೆದ ಎರಡು ವರ್ಷಗಳ ಹಿಂದೆ ತುಳು ಚಲನಚಿತ್ರ ನಿರ್ಮಾಪಕರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಈಗಾಗಲೇ ಅನೇಕ ಮಂದಿ ನಿರ್ದೇಶಕರು ಸದಸ್ಯರಾಗಿದ್ದಾರೆ. ಸಂಘದ ಅನೇಕ ಮಂದಿ ಹಿರಿಯರು ಈಗಾಗಲೇ ಕೆಲ ನಿಯಮಗಳನ್ನು ರೂಪಿಸಿದ್ದಾರೆ. ಇದರ ಪ್ರಕಾರವು ತುಳು ಭಾಷೆಯಲ್ಲಿ ಮೂರು ವಾರಕ್ಕೊಂದು ಸಿನೆಮಾ ಬಿಡುಗಡೆಯಾಗಲಿ ಎಂಬ ನಿಯಮ ಮಾಡಲಾಗಿತ್ತು. ಯಾವ ಚಲನಚಿತ್ರ ಮೊದಲು ಸೆನ್ಸಾರ್‌ ಆಗಿದೆಯೋ ಆ ಚಿತ್ರ ಬಿಡುಗಡೆಗೆ ಪ್ರಾಶಸ್ತ್ಯ ನೀಡಬೇಕು ಎಂಬ ನಿಯಮ ಮಾಡಿತ್ತು. ಪ್ರಸ್ತುತ ತುಳುವಿನಲ್ಲಿ ಹಲವು ಸಿನೆಮಾ ತಯಾರಾಗುತ್ತಿರುವ ಕಾರಣದಿಂದ ಮೂರು ವಾರದ ಗಡುವು ಸಮಸ್ಯೆ ಆಗಲಿದೆ ಎಂದು ತಿಳಿದುಕೊಂಡ ಸಂಘ ಎರಡು ವಾರಕ್ಕೊಮ್ಮೆ ಎಂದು ತನ್ನ ನಿಯಮವನ್ನು ಇಳಿಸಿತ್ತು. ಜತೆಗೆ ಖ್ಯಾತ ನಿರ್ಮಾಪಕರಾದ ದೇವದಾಸ್‌ ಪಾಂಡೇಶ್ವರ ಅವರ ಅಧ್ಯಕ್ಷತೆಯಲ್ಲಿ ಸ್ಕ್ರೀನಿಂಗ್‌ ಕಮಿಟಿ ಮಾಡಿ ಅಲ್ಲಿ ಸಿನೆಮಾ ಬಿಡುಗಡೆಯ ದಿನಾಂಕದ ಬಗ್ಗೆ ಫಿಕ್ಸ್‌ ಮಾಡಲು ನಿರ್ಧರಿಸಲಾಗಿತ್ತು. ಅದರಂತೆ ಏರಾ ಉಲ್ಲೆರ್‌ಗೆ ಹಾಗೂ ಮೈ ನೇಮ್‌ ಈಸ್‌ ಅಣ್ಣಪ್ಪ ಸಿನೆಮಾ ಬಿಡುಗಡೆಯ ದಿನಾಂಕ ಚರ್ಚೆಗೆ ಬಂದಿದೆ. ಮೊನ್ನೆ ರವಿವಾರ ಈ ಕುರಿತು ಎರಡೂ ಚಿತ್ರತಂಡದವರನ್ನು ಕರೆದು ಸ್ಕ್ರೀನಿಂಗ್‌ ಕಮಿಟಿಯಲ್ಲಿ ಸಭೆ ನಡೆಸಿ ಮಾತುಕತೆ ನಡೆಸಲಾಗಿತ್ತು.

ಈ ಬಗ್ಗೆ 'ಕುಡ್ಲ ಟಾಕೀಸ್‌' ಜತೆಗೆ ಮಾತನಾಡಿದ ಕಮಿಟಿ ಅಧ್ಯಕ್ಷ ದೇವದಾಸ್‌ ಪಾಂಡೇಶ್ವರ, 'ಮೊದಲು ಸೆನ್ಸಾರ್‌ ಯಾರಿಗೆ ಆಗಿದೆ ಎಂಬುದನ್ನಷ್ಟೇ ಮುಖ್ಯ ನೆಲೆಯಲ್ಲಿ ಪರಿಗಣಿಸಿ ಸಿನೆಮಾ ಬಿಡುಗಡೆಗೆ ಕಮಿಟಿಯು ನಿರ್ಧಾರ ತೆಗೆದುಕೊಳ್ಳಲಿದೆ. ಈ ಸಂಬಂಧ ಮೈ ನೇಮ್‌ ಈಸ್‌ ಅಣ್ಣಪ್ಪ ಹಾಗೂ ಏರಾ ಉಲ್ಲೆರ್‌ಗೆ ಸಿನೆಮಾ ತಂಡವನ್ನು ಕರೆದು ಸೌಹಾರ್ದಯುತವಾಗಿ ಮಾತುಕತೆ ನಡೆಸಲಾಗಿದೆ. ತುಳು ಚಲನಚಿತ್ರ ಕ್ಷೇತ್ರಕ್ಕೆ ಯಾವುದೇ ಸಮಸ್ಯೆ ಆಗದಂತೆ ಹಾಗೂ ಸೆನ್ಸಾರ್‌ ಪ್ರಕಾರವಾಗಿ ಸಿನೆಮಾ ಬಿಡುಗಡೆಗೆ ಅವಕಾಶ ಕಲ್ಪಿಸುವಂತೆ ಮಾತುಕತೆ ನಡೆಸಲಾಗಿದೆ. ನಿಯಮದ ಪ್ರಕಾರ ಏರಾ ಉಲ್ಲೆರ್‌ಗೆ ಸಿನೆಮಾಕ್ಕೆ ಮೊದಲು ಸೆನ್ಸಾರ್‌ ಆಗಿದೆ. ಹೀಗಾಗಿ ಎರಡೂ ಚಿತ್ರತಂಡದ ಜತೆಗೆ ಸೌಹಾರ್ದಯುತವಾಗಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದಿದ್ದಾರೆ.

ಮೈ ನೇಮ್‌ ಈಸ್‌ ಅಣ್ಣಪ್ಪ ಚಿತ್ರದ ನಿರ್ಮಾಪಕರಾದ ರೋಹನ್‌ ಶೆಟ್ಟಿ ಮಾತನಾಡಿ, 'ಲಕುಮಿ ಬ್ಯಾನರ್‌ನಡಿಯಲ್ಲಿ ಸಿದ್ಧವಾಗಿರುವ ಮೈ ನೇಮ್‌ ಈಸ್‌ ಅಣ್ಣಪ್ಪೆ ಸಿನೆಮಾವನ್ನು ರಿಲೀಸ್‌ ಮಾಡುವ ದಿನದ ಬಗ್ಗೆ ಈ ಹಿಂದೆಯೇ ನಿರ್ಧರಿಸಲಾಗಿತ್ತು. ಅದರಂತೆ ಸಿದ್ಧತೆ ನಡೆಸಲಾಗಿದೆ. ಮುಂದೆ ಚಿತ್ರತಂಡದ ಜತೆಗೆ ಮಾತನಾಡಿ, ಶೀಘ್ರ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಏರಾ ಉಲ್ಲೆರ್‌ಗೆ ಸಿನೆಮಾ ನಿರ್ದೇಶಕ ದೇವದಾಸ್‌ ಕಾಪಿಕಾಡ್‌, ನಮ್ಮ ಸಿನೆಮಾ ಬಿಡುಗಡೆಯ ಬಗ್ಗೆ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ವಿವರ ನೀಡಿ ದಿನಾಂಕ ಫಿಕ್ಸ್‌ ಮಾಡಲಾಗಿದೆ. ಸೆನ್ಸಾರ್‌ನ ಎಲ್ಲ ಪ್ರಕ್ರಿಯೆಯನ್ನು ಮೊದಲು ನಮ್ಮ ಸಿನೆಮಾವೇ ಮಾಡಿದೆ. ಹೀಗಾಗಿ ನಮಗೆ ಅವಕಾಶ ದೊರೆಯುವ ವಿಶ್ವಾಸವಿದೆ ಎನ್ನುತ್ತಾರೆ.

ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್‌ ಬ್ರಹ್ಮಾವರ ಮಾತನಾಡಿ, ಎರಡೂ ಸಿನೆಮಾದ ಬಿಡುಗಡೆ ದಿನಾಂಕದ ಬಗ್ಗೆ ಸ್ವಲ್ಪ ಗೊಂದಲ ಆಗಿದೆ. ಆದರೆ, ಇದನ್ನು ಸಂಘ ಹಾಗೂ ಸ್ಕ್ರೀನಿಂಗ್‌ ಕಮಿಟಿ ನೇತೃತ್ವದಲ್ಲಿ ಸೌಹಾರ್ದಯುತವಾಗಿ ಬಗೆಹರಿಸಲಿದ್ದೇವೆ. ಕಿಶೋರ್‌ ಡಿ. ಶೆಟ್ಟಿ ಅವರು ತುಳು ಚಲನಚಿತ್ರ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದು, ದೇವದಾಸ್‌ ಕಾಪಿಕಾಡ್‌ ಅವರು ಕೂಡ ತುಳು ಚಿತ್ರರಂಗಕ್ಕೆ ಮಹತ್ತರವಾದ ಸೇವೆ ನೀಡಿದ್ದಾರೆ. ಎರಡೂ ಚಿತ್ರತಂಡಗಳ ಮೂಲಕವಾಗಿ ತುಳು ಚಿತ್ರರಂಗ ಇನ್ನಷ್ಟು ಸಾಧನೆಯನ್ನ ಕಾಣುವ ನಿರೀಕ್ಷೆಯಿದೆ. ಹೀಗಾಗಿ ಸೌಹಾದರ್ತೆಯುತವಾಗಿ ಸಮಸ್ಯೆ ಬಗೆಹರಿಸಲಾಗುವುದು ಎಂದಿದ್ದಾರೆ.

ದಿನೇಶ್‌ ಇರಾ

ಇಂದು ಹೆಚ್ಚು ಓದಿದ್ದು

Trending videos

Back to Top