CONNECT WITH US  

ತಂತ್ರಜ್ಞಾನದ ಬಳಕೆಯೊಂದಿಗೆ ನಾಳೆಗಳ ಸೃಷ್ಟಿ

ವಿದ್ಯಾಗಿರಿ: ಪ್ರಸ್ತುತ ಕನ್ನಡಕ್ಕೆ ಸೀಮಿತ ಮಾರುಕಟ್ಟೆಯಿದ್ದು, ತಂತ್ರಜ್ಞಾನದ ಬಳಕೆಯೊಂದಿಗೆ ಕನ್ನಡದ ನಾಳೆಗಳನ್ನು ಸೃಷ್ಟಿಸುವ ಕೆಲಸಗಳಾಗಬೇಕು ಎಂದು ಅಂಕಣಗಾರ ಟಿ.ಜಿ. ಶ್ರೀನಿಧಿ ಹೇಳಿದರು. ರವಿವಾರ ತಂತ್ರಜ್ಞಾನದ ಕುರಿತ ವಿಚಾರ ಗೋಷ್ಠಿಯಲ್ಲಿ ಮಾತನಾಡಿ, ಕನ್ನಡದಂಥ ಸೀಮಿತ ಮಾರುಕಟ್ಟೆಯಲ್ಲಿ ಹೆಚ್ಚು ಬಳಕೆದಾರರು ಸೃಷ್ಟಿಯಾಗಬೇಕಿದೆ. ಲಭ್ಯ ತಂತ್ರಜ್ಞಾನವನ್ನು ಬಳಸಿ ಭಾಷೆಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು. ಕನ್ನಡದ ಬೆಳವಣಿಗೆಗೆ ಹೆಚ್ಚು ಉಪಯುಕ್ತವಾಗುವಂತಹ ಸಾಫ್ಟ್ವೇರ್‌ಗಳ ನಿರ್ಮಾಣದತ್ತವೂ ಕ್ರಿಯಾಶೀಲವಾಗಬೇಕಿದೆ ಎಂದರು.

1980ರಲ್ಲಿ ನಾಡೋಜ ಕೆ.ಪಿ. ರಾವ್‌ ಅವರು ಕನ್ನಡ ತಂತ್ರಾಂಶ ರೂಪಿಸಿ ಅದನ್ನು ಉಚಿತವಾಗಿ ನೀಡಿದರಲ್ಲದೇ, ಭಾಷೆಯ ಬೆಳವಣಿಗೆಗೂ ಪ್ರಯತ್ನ ನಡೆಸಿದರು. ರಾಜ್ಯದಲ್ಲಿರುವ ಎಂಜಿನಿಯರಿಂಗ್‌ ಕಾಲೇಜುಗಳ ಪೈಕಿ ಒಂದರಷ್ಟು ಭಾಗ ಕನ್ನಡ ತಂತ್ರಾಂಶ ಅಭಿವೃದ್ಧಿಗೆ ಮುಂದಡಿಯಿಟ್ಟಲ್ಲಿ ದೊಡ್ಡಮಟ್ಟದಲ್ಲಿ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಹಿಂದೆ ಗೂಗಲ್‌ನಲ್ಲಿ ಭಾಷಾಂತರವನ್ನು ಅಳವಡಿಸಿದ್ದಾಗಲೂ ಕೆಲವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಇನ್ನು ಕೆಲವರು ಋಣಾತ್ಮಕವಾಗಿ ಸ್ಪಂದಿಸಿದ್ದರು. ಕನ್ನಡ ಸೀಮಿತ ಮಾರುಕಟ್ಟೆ  ಹೊಂದಿರುವುದರಿಂದ ಬೆಳೆಯಲು ಸಮಯದ ಅಗತ್ಯವಿದೆ ಎಂದರು. 

ಭಾಷಾ ಬೆಳವಣಿಗೆಗೆ ಸರಕಾರಿ ಹಾಗೂ ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮುಕ್ತವಾಗಿ ಹರಿಯಬಿಡಬೇಕು. ಇಂದು ಅನೇಕ ತಂತ್ರಜ್ಞಾನಗಳು ಸೃಷ್ಟಿಯಾಗಿದ್ದು, ಕನ್ನಡವೂ ಡಿಜಿಟಲ್‌ ತಂತ್ರಜ್ಞಾನವಾಗಿ ಮಾರ್ಪಾಡಾಗಿದೆ. ಕನ್ನಡದಲ್ಲೇ ವಿಂಡೊಸ್‌ ಹಾಗೂ ಕೀ ಬೋರ್ಡ್‌ ನಿರ್ಮಾಣದ ಪ್ರಯತ್ನಗಳು ನಡೆದಿದ್ದರೂ ಅಷ್ಟೇನೂ ಸಫ‌ಲತೆ ದೊರಕಿಲ್ಲ. ಆದರೆ, ಪ್ರಸ್ತುತ ಮೊಬೈಲ್‌ ತಂತ್ರಜ್ಞಾನದ ಮೂಲಕ ಎಲ್ಲವೂ ನೇರವಾಗಿ ಜನರ ಕೈಯಲ್ಲಿ ಸಿಗುವಂತಾಗಿದ್ದು, ವಿದ್ಯಾಭ್ಯಾಸ ಹಾಗೂ ಇಂಗ್ಲಿಷ್‌ ಗೊತ್ತಿದ್ದವರಿಗೆ ಮಾತ್ರ ಸೀಮಿತವಾಗಿದೆ. ಇಂದು ಮೊಬೈಲ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಕನ್ನಡದಲ್ಲಿ ಮಾಡಲು ಅವಕಾಶಗಳಿವೆ ಹಾಗೂ ಯಾವುದೇ ವೆಬ್‌ಸೈಟ್‌ ಅನ್ನು ಕನ್ನಡದಲ್ಲಿ ಗುರುತಿಸಲು ಸಾಧ್ಯವಾಗುವಂತಾಗಿದೆ. ಕನ್ನಡ ಭಾಷೆಯಲ್ಲಿ  ಅಂತರ್ಜಾಲದಲ್ಲಿ ಪಠ್ಯಪುಸ್ತಕಗಳನ್ನು ಅಳವಡಿಸಲಾಗಿದ್ದು, 6 ತಿಂಗಳಲ್ಲಿ 66,000 ಬಾರಿ ಪಠ್ಯಪುಸ್ತಕಗಳನ್ನು ಬಳಸಿಕೊಳ್ಳಲಾಗಿದೆ. ಕನ್ನಡ ಬೆಳೆಸುವಲ್ಲೂ ಉತ್ತಮ ಕೆಲಸಗಳನ್ನು ಮಾಡುತ್ತಿದೆ. ಒಟ್ಟಿನಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನದೊಂದಿಗೆ ಕನ್ನಡದ ಮತ್ತಷ್ಟು ಅಭಿವೃದ್ಧಿಗೆ ನಾವು ಕೊಡುಗೆ ನೀಡಬೇಕಾಗಿದೆ ಎಂದರು.

ಇಂದು ಹೆಚ್ಚು ಓದಿದ್ದು

Trending videos

Back to Top