CONNECT WITH US  

ಅದ್ಭುತ ಶಕ್ತಿ : ಪರಿವ್ರಾಜಕನಾಗಿ ಕುಟುಂಬ ಕಟ್ಟಿದವ

ಭಾರತ‌ ರತ್ನದೊಡಲು ಎಂದು ಜಗತ್ತಿಗೆ ಪರಿಚಿತವಾದದ್ದು ಸ್ವಾಮಿ ವಿವೇಕಾನಂದರಿಂದ. ಅದುವರೆಗೆ ಬಡವರು, ದರಿದ್ರರ ದೇಶವೆಂದು ಬರೀ ಭೌತಿಕ ಅಸ್ತಿತ್ವದಲ್ಲಿ ಅಳೆಯುತ್ತಿದ್ದ ಜಗತ್ತು, ಬಳಿಕ ವ್ಯಕ್ತಿತ್ವದಿಂದ ಅಳೆಯತೊಡಗಿತು. ಆಮೂಲಕ ನಮಗೊಂದು ಅಸ್ತಿತ್ವ ತಂದುಕೊಟ್ಟವರು ಅವರು. ಇಲ್ಲದಿದ್ದರೆ ನಾವಿಂದಿಗೂ ಶೂನ್ಯ.

ನರೇಂದ್ರರು ವಿವೇಕಾನಂದರಾದದ್ದು 
1. ಕೋಲ್ಕೊತಾದಲ್ಲಿ ಸುರೇಂದ್ರನಾಥ
ಮಿತ್ರರ ಮನೆಗೆ 1881ರ ನವೆಂಬರ್‌ನಲ್ಲಿ ನರೇಂದ್ರ (ಸ್ವಾಮಿ ವಿವೇಕಾನಂದ) ತೆರಳಿದ್ದಾಗ ಅಲ್ಲಿ ಮೊತ್ತ ಮೊದಲ ಬಾರಿಗೆ ಅವರು ರಾಮಕೃಷ್ಣ ಪರಮಹಂಸರನ್ನು ಭೇಟಿಯಾಗುತ್ತಾರೆ. ಅಲ್ಲಿ ರಾಮಕೃಷ್ಣ ಅವರ ಗಾಯನ ಪ್ರತಿಭೆಯನ್ನು ಮೆಚ್ಚಿ ದಕ್ಷಿಣೇಶ್ವರಕ್ಕೆ ಬರಲು ಹೇಳುತ್ತಾರೆ. ಆದರೆ, ಆಗ ಅವರು ಆ ಬಗ್ಗೆ ಅಷ್ಟು ಉತ್ಸಾಹ  ತೋರುವುದಿಲ್ಲ. 1881ರ ಡಿಸೆಂಬರ್‌ನಲ್ಲಿ ಸ್ನೇಹಿತರೊಂದಿಗೆ ದಕ್ಷಿಣೇಶ್ವರಕ್ಕೆ ಬಂದ ನರೇಂದ್ರನಿಗೆ ರಾಮಕೃಷ್ಣ ಪರಮಹಂಸ ಅವರ ವ್ಯಕ್ತಿತ್ವದಲ್ಲಿ ವಿಶೇಷತೆ ಕಾಣುತ್ತದೆ. ಅವರಿಗೆ ಗುರುಗಳು ದೇವರನ್ನು ನೋಡಿದ್ದೀಯಾ ಎಂದಾಗ ಹೌದು ಎಂದದ್ದು  ಅವರ ಜೀವನಕ್ಕೊಂದು ದೊಡ್ಡ ತಿರುವು ನೀಡಿತು.

2. 1882ರ ಜನವರಿಯಲ್ಲಿ ಎರಡನೇ ಬಾರಿ ನರೇಂದ್ರನಿಗೆ ರಾಮಕೃಷ್ಣ ಪರಮಹಂಸರ ವಿಶೇಷ ಶಕ್ತಿಯ ಅನುಭವವಾಗುತ್ತದೆ. ತಮ್ಮ ಎದೆಯ ಮೇಲೆ ಅವರು ಪಾದವನ್ನು ಇರಿಸಿದಾಗ ಹಿಂದಿನ ಎಲ್ಲ ಘಟನೆಗಳು ಅವರಿಗೆ ಮರೆತು ಹೋಗುತ್ತದೆ. ಅಲ್ಲದೇ ಇವರು ಸಾಮಾನ್ಯ ವ್ಯಕ್ತಿಯಲ್ಲ ಎಂಬ ಅರಿವಾಗುತ್ತದೆ. ಅನಂತರ ನಿರಂತರವಾಗಿ ಅವರು ರಾಮಕೃಷ್ಣ ಅವರ ಪ್ರವಚನವನ್ನು ಕೇಳಲು ದಕ್ಷಿಣೇಶ್ವರಕ್ಕೆ ಬರುತ್ತಿರುತ್ತಾರೆ. ಅಲ್ಲದೇ ಗುರುಗಳು ಕೆಲವೊಮ್ಮೆ ನರೇಂದ್ರನನ್ನು ಭೇಟಿಯಾಗಲೇಂದೇ ಕೋಲ್ಕೊತಾಕ್ಕೆ ಬರುತ್ತಿದ್ದುದು ಅವರಿಗೆ ಇಷ್ಟವಾಗುತ್ತಿತ್ತು.

3. 1884ರ ಫೆಬ್ರಧಿವರಿ 25ರಂದು ತಂದೆ ಸತ್ತಾಗ ನರೇಂದ್ರನಿಗೆ ರಾಮಕೃಷ್ಣರು ಸಾಂತ್ವನ ನೀಡಿದರು. ಮುಂದೆ ಅವರು ರಾಮಕೃಷ್ಣ ಅವರನ್ನು ಗುರುಗಳನ್ನಾಗಿ ಸ್ವೀಕರಿಸಿದರು. ಅದು ವಿವೇಕಾನಂದರ ಬದುಕಿನ ಭಾಗ್ಯದ ಬಾಗಿಲು ತೆರೆಯಿತು. 1886ರ ಜನವರಿಯಲ್ಲಿ ರಾಮಕೃಷ್ಣರು ತಮ್ಮ 12 ಮಂದಿ ಶಿಷ್ಯರಿಗೆ ಸನ್ಯಾಸತ್ವ ಸ್ವೀಕರಿಸಲು ಬಟ್ಟೆಗಳನ್ನು ವಿತರಿಸುತ್ತಾರೆ. 12 ಮಂದಿ ಶಿಷ್ಯರ ಹೆಸರು ಬದಲಾವಣೆ ಮಾಡಲಾಗುತ್ತದೆ. ನರೇಂದ್ರನ ಹೆಸರು ಸ್ವಾಮಿ ವಿವೇಕಾನಂದ ಎಂದಾಗುತ್ತದೆ.

4. 1886ರ ಆಗಸ್ಟ್‌ 16ರಂದು ರಾಮಕೃಷ್ಣ ಪರಮಹಂಸರು ನಿಧನ ಹೊಂದುತ್ತಾರೆ. ಒಂದನು ತಿಂಗಳ ಅನಂತರ ಬಾರನಗೋರದಲ್ಲಿ ಶಿಥಿಲವಾದ ಮನೆಯನ್ನು ಖರೀದಿಸುತ್ತಾರೆ.ಅದನ್ನೇ ಮಠವನ್ನಾಗಿ ಪರಿವರ್ತಿಸಲು ಯೋಚಿಸುತ್ತಾರೆ. ಮುಂದೆ ಆ ಮನೆಯೇ ರಾಮಕೃಷ್ಣಮಠದ ಮೊದಲ ಶಾಖೆಯಾಯಿತು. ಈಗ ವಿಶ್ವಾದ್ಯಂತ ತನ್ನ ಶಾಖೆಗಳನ್ನು ಹೊಂದಿ ಹೆಮ್ಮರವಾಗಿದೆ. 1888ರಲ್ಲಿ ಮೊದಲ ಬಾರಿಗೆ ಸಹಚರರೊಂದಿಗೆ ವಾರಾಣಸಿಗೆ ಪ್ರಯಾಣವನ್ನು  ಕೈಗೊಳ್ಳುತ್ತಾರೆ.

5. ಕೊಲಂಬಿಯಾ, ಹಾಂಕಾಂಗ್‌, ಒಸಾಕೋ, ಕ್ಯೂಟೋ, ಟೋಕಿಯೋದಲ್ಲಿ ವಿವೇಕಾನಂದರು ನೀಡಿದ ಪ್ರವಚನದಿಂದ ಪ್ರಭಾವಿತಗೊಂಡ ಹಲವರು ಚಿಕಾಗೋದದಲ್ಲಿ ನಡೆಯಲಿರುವ ಧರ್ಮಗಳ ಸಂಸತ್ತಿನ ಅಧಿವೇಶನದಲ್ಲಿ ಮಾತನಾಡಲು ಅವಕಾಶ ಸಿಗುತ್ತದೆ. 1893ರ ಸೆಪ್ಟಂಬರ್‌ 11ರಂದು ಚಿಕಾಗೋ ಅಧಿವೇಶನದಲ್ಲಿ ವಿವೇಕಾನಂದರು ಮಾಡಿದ ಭಾಷಣ ಇಂದಿಗೂ ಪ್ರಮುಖ ದಾಖಲೆಯಾಗಿ ಉಳಿದಿದ್ದು, ಈ ಸಮ್ಮೇಳನದಲ್ಲಿ ಭಾರತೀಯರ ಸಂಸ್ಕೃತಿ ಮತ್ತು ಭಾರತದ ಮಹತ್ವವನ್ನು ಜಗತ್ತಿಗೆ ಸಾರಿದರು. ಅಂದಿನಿಂದ ಭಾರತ ರತ್ನನಿಧಿಯಾಗಿ ಶೋಭಿಸತೊಡಗಿತು.

6. ನಡೆದುಕೊಂಡು, ಎತ್ತಿನ ಗಾಡಿ, ರೈಲಿನಲ್ಲೇ ಹೆಚ್ಚಾಗಿ ಭಾರತದ ಬಹುತೇಕ ಎಲ್ಲ ಪ್ರದೇಶಗಳಲ್ಲಿ ಸ್ವಾಮಿ ವಿವೇಕಾನಂದರು ಸಂಚರಿಸಿದ್ದರು. ಹಾಗಾಗಿ ಪರಿವ್ರಾಜಕ ಸನ್ಯಾಸಿಯೆಂದೇ ಪ್ರಸಿದ್ಧರಾಗಿದ್ದರು. 1892ರ ಡಿಸೆಂಬರ್‌ನಲ್ಲಿ ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಗೆ ಭೇಟಿ ನೀಡಿದ್ದು, ಟ್ರಿವೆಂಡ್ರಮ್ ನಲ್ಲಿ ಕೆಲವು ದಿನ ಕಳೆಯುತ್ತಾರೆ. ಕನ್ಯಾಕುಮಾರಿಯಲ್ಲಿ ಪಾರ್ವತಿ ದೇವರ ದರ್ಶನ ಪಡೆದು, ಕೆಲ ಕಾಲ ಧ್ಯಾನ ಮಾಡಿ,  ಸಮುದ್ರವನ್ನೇ ವೀಕ್ಷಿಸುತ್ತ ಹೆಚ್ಚು ಕಾಲ ಕಳೆದಿದ್ದರು. ಮುಂದೆ ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾನಂದರ ಮೂರ್ತಿಯನ್ನು ಸ್ಥಾಪಿಸಲಾಯಿತು.

ವಿವೇಕವಾಣಿ:
- ನಿಮ್ಮ ಹೃದಯ ಮತ್ತು ಮೆದುಳುಗಳ (ಮನಸ್ಸು ಮತ್ತು ಬುದ್ಧಿ ) ನಡುವೆ ಸಂಘರ್ಷವೇರ್ಪಟ್ಟರೆ ಹೃದಯದ ಮಾತನ್ನೇ ಕೇಳಿ

- ಕೆಲಸ ಯಾವುದು ಮೇಲಲ್ಲ, ಕೀಳಲ್ಲ ಎಲ್ಲ ಕೆಲಸವೂ ಒಂದು ಪ್ರಾರ್ಥನೆ, ಪೂಜೆಯಂತೆ.

- ನೀವು ಕೆಲಸಕ್ಕೆ ಬಾರದವರೆಂದು ತಿಳಿದುಕೊಳ್ಳಬೇಡಿ. ಭಗವಂತನ ಮಕ್ಕಳು ನೀವು. ಮಹಾಶಕ್ತಿ ನಮ್ಮ ಹಿಂದೆ ಇದೆ. ಅದನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ಅರಿಯಬೇಕು.

- ನೀವು ಯಾವುದೇ ಕೆಲಸವನ್ನು ಮಾಡುವಾಗಲೂ ನಿಮ್ಮ ಮನಸ್ಸು , ಹೃದಯ, ನಿಮ್ಮ ಸರ್ವಸ್ವವನ್ನೂ ಅದಕ್ಕೆ ಒಪ್ಪಿಸಿಕೊಳ್ಳಿ. ಬೇರೇನನ್ನೂ ಯೋಚಿಸಬೇಡಿ. ಆಗ ನಿಜವಾದ ಯಶಸ್ಸಿನ ಅನುಭವವಾಗುತ್ತದೆ. ನಾನೊಮ್ಮೆ ಒಬ್ಬ ಸಾಧು ಮಹಾತ್ಮನನ್ನು ನೋಡಿದ್ದೆ. ಆತ ಪೂಜೆ, ಧ್ಯಾನಗಳನ್ನು ಎಷ್ಟು ಏಕಾಗ್ರತೆ, ಶ್ರದ್ಧೆಗಳಿಂದ ಮಾಡುತ್ತಿದ್ದನೋ ಅಷ್ಟೇ ಸಾವಧಾನದಿಂದ ತನ್ನ ಅಡುಗೆ ಮಾಡುವ ಹಿತ್ತಾಳೆ ಪಾತ್ರೆಗಳನ್ನು ಫ‌ಳ ಫ‌ಳನೆಹೊಳೆಯುವ ಚಿನ್ನದಂತೆ ತೊಳೆದಿಡುತ್ತಿದ್ದನು.

- ನೀವು ಸ್ವತಂತ್ರರಾಗಿ, ಯಾರಿಂದಲೂ ಏನನ್ನೂ ನಿರೀಕ್ಷಿಸಬೇಡಿ. ಇದುವರೆಗೆ ನಿಮಗೆ ಆದದ್ದನ್ನು ಪರೀಕ್ಷಿಸಿಕೊಂಡರೆೆ, ಎಂದೆಂದಿಗೂ ಬಾರದ ಇನ್ನೊಬ್ಬರ ಸಹಾಯಕ್ಕಾಗಿ ನೀವು ನೆಚ್ಚಿ ಕುಳಿತದ್ದು ನಿರರ್ಥಕವೆಂದು ಗೊತ್ತಾಗುವುದರಲ್ಲಿ ನನಗೆ ಸಂದೇಹವೇ ಇಲ್ಲ. ಬಂದ ಸಹಾಯವೆಲ್ಲವೂ ಕೂಡ ನಿಮ್ಮಿಂದಲೇ. 

- ಯಶಸ್ಸಿಗೆ ಅತ್ಯದ್ಭುತವಾದ ಇಚ್ಛಾಶಕ್ತಿ, ಛಲ ಇವುಗಳು ಬೇಕು. 'ಸಾಗರವನ್ನೇ ಕುಡಿಯುತ್ತೇನೆ, ಪರ್ವತಗಳು ಧೂಳಿದೂಸರವಾಗುವವು ನನ್ನ ಇಚ್ಛಾಶಕ್ತಿಯಿಂದ' ಎನ್ನುವವನು ಛಲಗಾರ. ಅಂತಹ ಶಕ್ತಿ ಇರಲಿ, ಅಂತಹ ಶಪಥವಿರಲಿ. ಕಷ್ಪಪಟ್ಟು ಸಾಧಿಸಿ. ನೀವು ಗುರಿಯನ್ನು ಸೇರಿಯೇ ಸೇರುತ್ತೀರಿ.

- ಜಗತ್ತು ಈಗ ಇರುವ ಸ್ಥಿತಿಗೆ ನಮ್ಮ ಮನೋಭಾವವೇ ಕಾರಣ. ನಮ್ಮ ಆಲೋಚನೆಯೇ ಒಂದು ವಸ್ತುವನ್ನು ಸುಂದರವಾಗಿ ಮಾಡಬಲ್ಲದು. ಹಾಗೆಯೇ ವಿಕಾರವಾಗಿಯೂ ಮಾಡುವುದು. ಈ ಪ್ರಪಂಚವೆಲ್ಲ ನಮ್ಮ ಮನಸ್ಸಿನಲ್ಲಿದೆ. ವಸ್ತುಗಳನ್ನು ಸರಿಯಾದ ರೀತಿಯಲ್ಲಿ ನೋಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

- ದುರದೃಷ್ಟವಶಾತ್‌ ಜೀವನದಲ್ಲಿ ಬಹುಮಂದಿ ಜನರು ಯಾವ ಆದರ್ಶವೂ ಇಲ್ಲದೆ ಅಜ್ಞಾನಾಂಧಕಾರದಲ್ಲಿ ತೊಳಲುತ್ತಿರುವರು. ಆದರ್ಶವಿರುವ ಮನುಷ್ಯ ಸಾವಿರ ತಪ್ಪುಗಳನ್ನು ಮಾಡಿದರೆ, ಆದರ್ಶ ಇಲ್ಲದವನು ಐವತ್ತು ಸಾವಿರ ತಪ್ಪುಗಳನ್ನು ಮಾಡುವನು. ಆದಕಾರಣ ಒಂದು ಆದರ್ಶವಿರುವುದು ಮೇಲು.

- ಮನುಷ್ಯನಿಂದತಾನೆ ಹಣವು ಸಂಪಾದಿಸಲ್ಪಡುವುದು? ಹಣದಿಂದ ಎಂದಾದರೂ ಮನುಷ್ಯನಾಗುತ್ತಾನೆಂಬ ಮಾತನ್ನು ಯಾರಿಂದಲಾದರೂ ಕೇಳಿದ್ದೀರೇನು? ನೀವು ಬಾಯಲ್ಲಿ ಆಡುವುದೂ ಮನಸ್ಸಿನಲ್ಲಿ ಯೋಚಿಸುವುದೂ ಒಂದೇ ಆಗುವುದಾದರೆ, ಆಗ ಹಣವು ತನ್ನಷ್ಟಕ್ಕೆ ತಾನೆ ನೀರಿನಂತೆ ನಿಮ್ಮ ಹತ್ತಿರ ಬಂದು ಸುರಿಯುವುದು. 

- ದ್ವೇಷ, ಅಸೂಯೆಗಳನ್ನು ನೀವು ತೋರಿದರೆ ಅದು ಚಕ್ರಬಡ್ಡಿ ಸಹಿತ ನಿಮಗೆ ಹಿಂದಿರುಗಿ ಬರುವುದು. ಯಾವ ಶಕ್ತಿಯೂ ಅದನ್ನು ತಪ್ಪಿಸಲಾರದು. ಒಂದು ಸಲ ಅದನ್ನು ಚಲಿಸುವಂತೆ ಮಾಡಿದರೆ ಅದರ ಫ‌ಲವನ್ನು ಅನುಭವಿಸಬೇಕು. ಇದನ್ನು ನೆನಪಿನಲ್ಲಿಟ್ಟರೆ ನೀವು ಕೆಟ್ಟದನ್ನು ಮಾಡುವುದನ್ನು ತಪ್ಪಿಸುತ್ತದೆ. 

- ನಮ್ಮ ಜೀವನ ಒಳ್ಳೆಯದಾಗಿದ್ದರೆ, ಶುದ್ಧವಾಗಿದ್ದರೆ ಆಗ ಮಾತ್ರ ಜಗತ್ತು ಒಳ್ಳೆಯದಾಗುವುದು; ಶುದ್ಧವಾಗುವುದು. ಅದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಇದೊಂದು ಪರಿಣಾಮ; ನಾವು ಅದಕ್ಕೆ ಕಾರಣ. ಆದ್ದರಿಂದ ಮೊದಲು ನಾವು ಶುದ್ಧರಾಗೋಣ! ಪೂರ್ಣರಾಗೋಣ!

- ಒಂದು ಭಾವನೆಯನ್ನು ತೆಗೆದುಕೊಳ್ಳಿ. ಅದನ್ನು ನಿಮ್ಮ ಜೀವನದಲ್ಲಿ ಅಭ್ಯಾಸ ಮಾಡಿ, ಅದನ್ನೇ ಆಲೋಚನೆ ಮಾಡಿ, ಅದನ್ನೇ ಕನಸು ಕಾಣಿ. ಆ ಒಂದು ಭಾವನೆಯೇ ನಿಮ್ಮಲ್ಲಿ ತುಂಬಿ ತುಳುಕಾಡಲಿ. ಉಳಿದ ಆಲೋಚನೆಗಳನ್ನೆಲ್ಲ ಅವುಗಳ ಪಾಡಿಗೆ ಇರಲಿ ಬಿಡಿ. ಜಯ ಪಡೆಯುವುದಕ್ಕೆ ಇದೊಂದೇ ದಾರಿ.

-- ಪರಿಕಲ್ಪನೆ - ವಿನ್ಯಾಸ: ಸುದಿನ ಟೀಮ್‌

ಸ್ವಾಮಿ ವಿವೇಕಾನಂದರ ಜೀವನದ ಸ್ಮರಣೀಯ ಕ್ಷಣಗಳ ಚಿತ್ರ ಸಂಚಯ:

ಇಂದು ಹೆಚ್ಚು ಓದಿದ್ದು

Trending videos

Back to Top