CONNECT WITH US  

ಹಣ ಸಂಪಾದನೆ: ಆನ್‌ಲೈನ್‌ನಲ್ಲಿದೆ ಹಲವು ಮಾರ್ಗ

ಉದ್ಯೋಗವೊಂದನ್ನೇ ನೆಚ್ಚಿಕೊಂಡು ಬದುಕು ಕಳೆಯಲು ಇಂದು ಸಾಧ್ಯವಾಗುವುದಿಲ್ಲ ಎನ್ನುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ದುಬಾರಿಯಾಗುತ್ತಿರುವ ಅಗತ್ಯ ವಸ್ತುಗಳ ಜತೆಗೆ ಸಣ್ಣಪುಟ್ಟ ಆಸೆ ಆಕಾಂಕ್ಷೆಗಳನ್ನು ಈಡೇರಿಸುವಲ್ಲೇ ತಿಂಗಳ ಸಂಬಳ ಪೂರ್ತಿ ಖರ್ಚಾಗಿರುತ್ತದೆ. ಹೀಗಾಗಿ ಪುಟ್ಟದೊಂದು ಮನೆ, ಕಾರು ಖರೀದಿಯ ಆಸೆ ದೂರವೇ ಉಳಿದಿರುತ್ತದೆ. ಹೀಗಾಗಿ ಕೆಲವರು ಫ‌ುಲ್‌ ಟೈಮ್‌ ಜಾಬ್‌ ನೊಂದಿಗೆ ಪಾರ್ಟ್‌ ಟೈಮ್‌ ಜಾಬ್‌ನ ಹುಡುಕಾಡುತ್ತಲೇ ಇರುತ್ತಾರೆ.

ಸಂಬಳವನ್ನು ನಂಬಿಕೊಂಡು ಜೀವನ ನಡೆಸುವುದು ಸ್ವಲ್ಪ ಕಷ್ಟದ ಕೆಲಸ. ಇದೇ ಕಾರಣದಿಂದ ಅನೇಕ ಮಂದಿ ಪಾರ್ಟ್ ಟೈಂ ಕೆಲಸ ಮಾಡಿಕೊಂಡು ಸಾವಿರಾರು ರೂಪಾಯಿ ಸಂಪಾದಿಸುತ್ತಿದ್ದಾರೆ. ಅದರಲ್ಲೂ, ಶಾಲಾ ಕಾಲೇಜಿಗೆ ತೆರಳುವ ಕೆಲವು ವಿದ್ಯಾರ್ಥಿಗಳಲ್ಲಿ ಬೆಳ್ಳಂಬೆಳಗ್ಗೆ ಮನೆ ಮನೆಗಳಿಗೆ ಪೇಪರ್‌ ಹಾಕಿ ಹಣ ಕೂಡಿಟ್ಟು ವಿದ್ಯಾಭ್ಯಾಸದ ಇಚ್ಛೆ ನೆರವೇರಿಸುವ ಹಲವಾರು ಉದಾಹರಣೆ ಕಣ್ಣ ಮುಂದಿದೆ.

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಕ್ಷೇತ್ರ ಮುಂದುವರಿದಿದ್ದು, ಹೆಚ್ಚಿನ ಮಂದಿ ಇಂಟರ್‌ನೆಟ್‌ ಬಳಕೆ ಮಾಡುತ್ತಿದ್ದಾರೆ. ಇದೇ ಕಾರಣದಿಂದಾಗಿ ಆನ್‌ಲೈನ್‌ ಮೂಲಕ ಹಣ ಸಂಪಾದನೆ ಮಾಡುವ ಟ್ರೆಂಡ್‌ ಬಂದುಬಿಟ್ಟಿದೆ. ಅದಕ್ಕೆಂದು ಆನ್‌ ಲೈನ್‌ನಲ್ಲಿ ಹೆಚ್ಚಿನ ಅವಕಾಶಗಳು ಕೂಡ ಇದೆ. ಅದೇ ರೀತಿ ಇಂದಿನ ಯುವಜನತೆ ಅತ್ತವಾಲುತ್ತಿದ್ದಾರೆ.

ಹಲವು ದಾರಿ
ಆನ್‌ಲೈನ್‌ನಲ್ಲಿಯೇ ಹಣ ಸಂಪಾದಿಸಲು ಹಲವು ದಾರಿಗಳಿವೆ. ಅವುಗಳಲ್ಲಿ ಪ್ರಮುಖ ಮಾರ್ಗಗಳಲ್ಲೊಂದು ಸ್ವಂತ ವೆಬ್‌ಸೈಟ್‌ ಸ್ಥಾಪನೆ ಮಾಡುವುದು. ವೆಬ್‌ ಸೈಟ್‌ ಸ್ಥಾಪನೆ ಮಾಡುವ ಮೂಲಕ ಹಣ ಸಂಪಾದನೆ ಮಾಡಲು ವಿಪುಲ ಅವಕಾಶಗಳಿವೆ. ವೆಬ್‌ಸೈಟ್‌ ತಾಣಕ್ಕೆ ಗೂಗಲ್‌ ಆಡ್‌ಸೆನ್ಸ್‌ ಅನ್ನು ಉಚಿತವಾಗಿ ಹೊಂದಿಕೆ ಮಾಡಬಹುದು. ಇದರ ಮೂಲಕ ಗೂಗಲ್‌ ಜಾಹಿರಾತು ಪಡೆಯಬಹುದು. ಒಂದು ಕ್ಲಿಕ್‌ಗೆ ಇಂತಿಷ್ಟು ಸಂಭಾವನೆ ಪಡೆದುಕೊಳ್ಳಬಹುದು.

ಆನ್‌ಲೈನ್‌ನಲ್ಲಿಯೇ ಶಾಪಿಂಗ್‌ ಮಾರುಕಟ್ಟೆ ತಾಣವನ್ನು ಸ್ಥಾಪಿಸಿ ಸಾವಿರಾರು ರೂಪಾಯಿ ಗಳಿಸಿದವರಿದ್ದಾರೆ. ಅದರಲ್ಲಿಯೂ ಪ್ಲಿಪ್‌ಕಾರ್ಟ್‌, ಅಮೆಜಾನ್‌ ಸಹಿತ ಮತ್ತಿತರ ಆನ್‌ಲೈನ್‌ ಅಂತರ್ಜಾಲ ತಾಣದಲ್ಲಿ ಒಪ್ಪಂದ ಮಾಡಿಕೊಂಡು ನಾವು ತಯಾರಿಸುವ ವಸ್ತುಗಳನ್ನು ಮಾರಾಟ ಮಾಡಲು ಕೂಡ ಅವಕಾಶವಿದೆ.

ಬರವಣಿಗೆ ಒಂದು ಕಲೆ, ಬರವಣಿಗೆಯಲ್ಲಿ ಆಸ್ತಿ ಹೊಂದಿದವರು ಮನೆಯಲ್ಲಿಯೇ ಕುಳಿತು ಅನೇಕ ತಾಣಗಳಿಗೆ ಬರೆದು ಸಾವಿರಾರು ರೂಪಾಯಿ ಸಂಪಾದಿಸಬಹುದು. ಇತ್ತೀಚೆಗೆ ಇ- ಪುಸ್ತಕಕ್ಕೆ ಬೇಡಿಕೆ ಬರುತ್ತಿದ್ದು, ಇದಕ್ಕೂ ಮನೆಯಲ್ಲೇ ಕೂತು ಬರೆಯಲು ಸಾಧ್ಯ. ಆನ್‌ಲೈನ್‌ನಲ್ಲಿ ಮಧ್ಯವರ್ತಿ ಕೆಲಸ ಮಾಡಲು ಅವಕಾಶವಿದೆ. ಉದಾಹರಣೆಗೆ ಮನೆ ಬಾಡಿಗೆಗೆ ಬೇಕು ಎಂದಾದರೆ ಅದಕ್ಕೆಂದೇ ಅನೇಕ ಅಂತರ್ಜಾಲ ತಾಣಗಳಿವೆ. ಅದರಲ್ಲಿ ಹೆಸರು ನೋಂದಣಿ ಮಾಡಿಕೊಂಡು ಗ್ರಾಹಕರಿಗೆ ಅವರ ಇಚ್ಛಾನುಸಾರದ ಮನೆ ಹುಡುಕಿಕೊಡಲು ಅವಕಾಶವಿದೆ.

ಇವಿಷ್ಟೇ ಅಲ್ಲದೆ, ಅಂತರ್ಜಾಲ ಡೊಮೈನ್‌ಗಳನ್ನು ಖರೀದಿ ಮಾಡಿ ಮಾರಾಟ ಮಾಡಬಹುದಾಗಿದೆ. ಡೊಮೈನ್‌ ಖರೀದಿ ಮಾಡಲು ಒಂದು ಬಾರಿ ಹಣ ಹೊಂದಿಸಬೇಕಾದ ಅವಶ್ಯಕತೆ ಇದೆ ಆದರೂ, ಆ ಬಳಿಕ ಹೆಚ್ಚಿನ ಹಣಕ್ಕೆ ಅದನ್ನು ಮಾರಾಟ ಮಾಡಬಹುದಾಗಿದೆ.

ಇನ್ನು ಹೆಚ್ಚು ಓದಿಲ್ಲ, ಬರೆದಿಲ್ಲ ಎನ್ನುವವರಿಗೂ ಇಲ್ಲಿ ಅವಕಾಶಗಳಿವೆ. ಕೆಲವೊಂದು ಪೇಪರ್‌ ವರ್ಕ್‌, ಅಸೈನ್‌ ಮೆಂಟ್‌ ಮಾಡಿಕೊಟ್ಟರೆ ಸಾಕು ಎನ್ನುವಂಥ ಉದ್ಯೋಗಗಳೂ ಇವೆ. ಗೃಹಿಣಿಯರು, ನಿರುದ್ಯೋಗಿಗಳು, ಪಾರ್ಟ್‌ ಟೈಮ್‌ ಉದ್ಯೋಗ ಬೇಕು ಎನ್ನುವವರು ಇದರಲ್ಲಿಯೂ ತೊಡಗಿಸಿಕೊಳ್ಳಬಹುದು. 

ಆನ್‌ಲೈನ್‌ ಕೋಚಿಂಗ್‌
ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಕೋಚಿಂಗ್‌ ಎನ್ನುವಂತಹ ಹೊಸ ಪದ್ಧತಿ ಪ್ರಾರಂಭವಾಗಿದೆ. ಬಾಡಿ ಬಿಲ್ಡಿಂಗ್‌, ಕ್ರಿಕೆಟ್‌ ಸಹಿ ತ ಇನ್ನಿತರ ಕ್ರೀಡೆ ಮಾತ್ರವ ಲ್ಲದೇ ಎಸೆಸೆಲ್ಸಿ, ಪಿಯುಸಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಆನ್‌ಲೈನ್‌ನಲ್ಲಿಯೇ ಮಾರ್ಗದರ್ಶನ ನೀಡುವಂತಹ ನುರಿತರು ಅನೇಕ ಮಂದಿ ಇದ್ದಾರೆ. ಇದರ ಲಾಭವನ್ನು ಹೆಚ್ಚಿನ ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಪಡೆಯುತ್ತಿದ್ದಾರೆ. ಯಾವುದೇ ವಿಷಯದಲ್ಲಿ ತಜ್ಞರಾಗಿದ್ದರೆ ಈ ಮೂಲಕವೂ ಹಣ ಸಂಪಾದನೆಗೊಂದು ದಾರಿ ಮಾಡಿಕೊಳ್ಳಬಹುದು. 

ಎಚ್ಚರಿಕೆ ಅಗತ್ಯ 
ಆನ್‌ ಲೈನ್‌ ವಹಿವಾಟಿನ ಬಗ್ಗೆ ಸಂಪೂರ್ಣ ಮಾಹಿತಿ ಪಡೆದೇ ಇಲ್ಲಿ ವ್ಯವಹರಿಸುವುದು ಉತ್ತಮ. ಉದ್ಯೋಗದ ಹುಡುಕಾಟದಲ್ಲಿ ಮೋಸ ಮಾಡುವವರೂ ಹೆಚ್ಚಾಗಿರುತ್ತಾರೆ. ಹೀಗಿರುವಾಗ ಗುರುತು ಪರಿಚಯವಿಲ್ಲದವರೊಂದಿಗೆ ವ್ಯವಹರಿಸುವಾಗ ಹೆಚ್ಚು ಜಾಗೃತರಾಗಿರಬೇಕು. ವಂಚನೆ, ಮೋಸ ಹೋಗುವ ಸಾಧ್ಯತೆ  ಇದೆ ಎಂದು ಕಂಡು ಬಂದ ತತ್‌ ಕ್ಷಣವೇ ಪೊಲೀಸರಿಗೆ ದೂರು ನೀಡಬೇಕು.

ಜಾಗರೂಕತೆ ಅಗತ್ಯ
ಇತ್ತೀಚಿನ ದಿನಗಳಲ್ಲಿ ಆನ್‌ ಲೈನ್‌ನಲ್ಲಿ ಮನೆಯಲ್ಲಿಯೇ ಕೂತು ಹಣ ಗಳಿಸಲು ಹೆಚ್ಚಿನ ಅವಕಾಶವಿದೆ. ಅಂತರ್ಜಾಲ ವ್ಯಾಪ್ತಿ ಬೆಳೆದಿದ್ದು, ಜಾಗರೂಕತೆಯಿಂದ ಕೆಲಸ ನಿರ್ವಹಿಸಬೇಕಿದೆ.
- ಯಶವಂತ್‌ ಕುಮಾರ್‌
ಉದ್ಯೋಗಿ

ನವೀನ್‌ ಭಟ್‌ ಇಳಂತಿಲ

ಇಂದು ಹೆಚ್ಚು ಓದಿದ್ದು

Trending videos

Back to Top