CONNECT WITH US  

ಈ ತಿಂಗಳಾಂತ್ಯಕ್ಕೆ ಪಡೀಲ್‌ ರೈಲ್ವೇ ಮೇಲ್ಸೇತುವೆ ಕಾಮಗಾರಿ ಪೂರ್ಣ

ಭರದಿಂದ ನಡೆಯುತ್ತಿರುವ ಪಡೀಲ್‌ ರೈಲ್ವೇ ಮೇಲ್ಸೇತುವೆ ನಿರ್ಮಾಣ ಕಾಮಗಾರಿ.

ಪಡೀಲ್‌: ಕೆಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಾ.ಹೆ. 75ರ ಪಡೀಲ್‌ ರೈಲ್ವೇ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಕೊನೆಗೂ ಮುಗಿಯುತ್ತಿದ್ದು, ತಿಂಗಳಾಂತ್ಯಕ್ಕೆ ಇಲ್ಲಿನ ನೂತನ ರಸ್ತೆ ಸಿದ್ಧಗೊಳ್ಳುವ ನಿರೀಕ್ಷೆ ಇದೆ. ರೈಲ್ವೇ ಅಧಿಕಾರಿಗಳು ಬುಧವಾರ ಈ ಮಾರ್ಗದ ತಪಾಸಣ ಕಾರ್ಯ ನಡೆಸಿದರು. ಶೀಘ್ರವೇ ಅನುಮತಿ ದೊರೆಯುವ ನಿರೀಕ್ಷೆಯಿದೆ. ನಂತೂರು-ಬಿ.ಸಿ.ರೋಡ್‌ 75ರ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಸುಮಾರು 10 ವರ್ಷಗಳ ಹಿಂದೆ ಆರಂಭಗೊಂಡಿತ್ತು. ಆ ಕಾಮಗಾರಿ ಜತೆಗೇ ಪಡೀಲ್‌ ರೈಲ್ವೇ ಮೇಲ್ಸೇತುವೆ ಕಾಮಗಾರಿಯೂ ನಡೆಯಬೇಕಿತ್ತು. ಆದರೆ ರೈಲ್ವೇ ಇಲಾಖೆಯಿಂದ ತಡವಾಗಿ ಅನುಮತಿ ದೊರಕಿದ್ದರಿಂದ ಕಾಮಗಾರಿ ನಡೆಸಲು ಸಾಧ್ಯವಾಗಿರಲಿಲ್ಲ. ಒಂದು ವರ್ಷದ ಹಿಂದೆ ಒಪ್ಪಿಗೆ ದೊರೆತು, ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ನಂತೂರು-ಬಿ.ಸಿ ರೋಡ್‌ವರೆಗೆ ರಾ.ಹೆ. ಚತುಷ್ಪಥ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಪಡೀಲ್‌ನ ಸುಮಾರು 450 ಮೀಟರ್‌ನಷ್ಟು ವ್ಯಾಪ್ತಿಯಲ್ಲಿ ಹಳೆಯ ದ್ವಿಪಥ ರಸ್ತೆಯನ್ನು ಸದ್ಯ ಬಳಸಲಾಗುತ್ತಿದೆ.

ಪಡೀಲ್‌ ರೈಲ್ವೇ ಮೇಲ್ಸೇತುವೆಯ ಅಕ್ಕ ಪಕ್ಕದಲ್ಲಿ (ಬಿ.ಸಿ. ರೋಡ್‌ಗೆ ತೆರಳುವ ಭಾಗ) ಸುಮಾರು 300 ಮೀಟರ್‌ ಹಾಗೂ (ಮಂಗಳೂರು ಕಡೆಗೆ) 150 ಮೀಟರ್‌ ರಸ್ತೆಯ ಚತುಷ್ಪಥ ಕಾಮಗಾರಿ ಪ್ರಗತಿಯಲ್ಲಿದ್ದು, 15 ದಿನದೊಳಗೆ ಒಟ್ಟು 450 ಮೀಟರ್‌ವರೆಗಿನ ಕಾಮಗಾರಿ ಪೂರ್ಣಗೊಳ್ಳಲಿದೆ.
ಈ ಮೇಲ್ಸೇತುವೆ ಕಾಮಗಾರಿಯನ್ನು ಬಾಕ್ಸ್‌ ಪುಶಿಂಗ್‌ ತಂತ್ರಜ್ಞಾನ ಮೂಲಕ ನಡೆಸಲಾಗಿದೆ. 10 ಮೀ. ಅಗಲದ ಸಿಂಗಲ್‌ ಬಾಕ್ಸ್‌ಗಳನ್ನು ನಿರ್ಮಿಸಿ, ಹಳಿಯಲ್ಲಿ ರೈಲು ಓಡಾಟ ನಡೆಯುತ್ತಿದ್ದಂತೆ, ಬಾಕ್ಸ್‌ ಅನ್ನು ಅತ್ಯಾಧುನಿಕ ಹೈ ಪವರ್‌ ಹೈಡ್ರಾಲಿಕ್‌ ಜಾಕ್‌ ತಂತ್ರಜ್ಞಾನ ಮೂಲಕ ನಿಧಾನವಾಗಿ ದೂಡಿ ರೈಲ್ವೇ ಟ್ರ್ಯಾಕ್‌ಗೆ ಸಮನಾಗಿ ನಿಲ್ಲಿಸಲಾಗಿದೆ. ಬಾಕ್ಸ್‌ ದೂಡುವ ಸಂದರ್ಭದಲ್ಲಿ ಎರಡು ರೈಲುಗಳ ಓಡಾಟದ ನಡುವಿನ ಅಂತರದ ಅವಧಿ ನೋಡಿಕೊಂಡು ಸಮಯ ಹೊಂದಾಣಿಕೆ (ಬ್ಲಾಕೇಜ್‌ ಟೈಮ್‌ಟೇಬಲ್‌) ಮಾಡಲಾಗಿತ್ತು. ರೈಲಿನ ವೇಗ ತಗ್ಗಿಸಲಾಗಿತ್ತು. ಹೈಡ್ರಾಲಿಕ್‌ ಜಾಕ್‌ ತಂತ್ರಜ್ಞಾನದ ಮೂಲಕ ಬಾಕ್ಸ್‌ ಮುಂದೆ ಹೋಗುತ್ತಿದ್ದಂತೆ, ಮಧ್ಯೆ ಜೆಸಿಬಿ ಬಳಸಿ ಲಾರಿಯಲ್ಲಿ ಮಣ್ಣು ಅಗೆದು ದಾರಿ ಮಾಡಿಕೊಡಲಾಗಿದೆ. ಬಾಕ್ಸ್‌ನ ಒಳಗೆ ದ್ವಿಪಥ ಹೆದ್ದಾರಿ ಜತೆಗೆ ಹಾರ್ಡ್‌ ಶೋಲ್ಡರ್‌ (ಕಾಲು ದಾರಿ) ನಿರ್ಮಾಣವೂ ಪ್ರಗತಿಯಲ್ಲಿದೆ. ಬಾಕ್ಸ್‌ ಪುಶಿಂಗ್‌ ತಂತ್ರಜ್ಞಾನದ ಮೂಲಕವೇ ಮಂಗಳೂರು ಜಂಕ್ಷನ್‌ ರೈಲ್ವೇ ನಿಲ್ದಾಣ ಬಳಿ ಬಜಾಲ್‌-ಪಡೀಲ್‌ ರೈಲ್ವೇ ಕ್ರಾಸಿಂಗ್‌ನಲ್ಲಿ ರೈಲ್ವೇ ಕೆಳಸೇತುವೆ ನಿರ್ಮಿಸಲಾಗಿತ್ತು. 

3 ಸೇತುವೆ - 36 ಕೋ.ರೂ.
ಚೆನ್ನೈ ಸದರ್ನ್ ರೈಲ್ವೇ ಅಧೀನದ ಬೈಕಂಪಾಡಿ ಸೇತುವೆ ಮತ್ತು ಹುಬ್ಬಳ್ಳಿಯ ಸೌತ್‌ ವೆಸ್ಟರ್ನ್ ರೈಲ್ವೇ ಅಧೀನದ ಬಿ.ಸಿ.ರೋಡ್‌, ಪಡೀಲ್‌ ಸೇತುವೆಗಳ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿತ್ತು. ಈ ಮೂರು ಸೇತುವೆಗಳನ್ನು 36.89 ಕೋ.ರೂ. ವೆಚ್ಚದಲ್ಲಿ ನಿರ್ಮಿಸುವ ಗುರಿ ಹೊಂದಲಾಗಿದೆ. 

ನಂತೂರು ಫ್ಲೈ ಓವರ್‌; ಅನುಮೋದನೆ ನಿರೀಕ್ಷೆ
ನಂತೂರು ಜಂಕ್ಷನ್‌ನಲ್ಲಿ ವಾಹನದ ಒತ್ತಡ ನಿಭಾಯಿಸಲು ಕೆಳಸೇತುವೆ ನಿರ್ಮಾಣಕ್ಕೆ ಮೊದಲು ನಿರ್ಧರಿಸಲಾಗಿತ್ತು. ಆದರೆ ಭೂಸ್ವಾಧೀನ ಸಮಸ್ಯೆ, ನ್ಯಾಯಾಲಯದ ಪ್ರಕರಣಗಳು ಹಾಗೂ 33 ಕೆವಿ, ಯುಜಿ ಕೇಬಲ್‌ಗ‌ಳ ಸ್ಥಳಾಂತರ ಸಹಿತ ವಿವಿಧ ಕಾರಣಗಳಿಂದ ಕೈಬಿಡಲಾಯಿತು. ಇಲ್ಲಿ ಓವರ್‌ ಪಾಸ್‌ (ಫ್ಲೈ ಓವರ್‌) ನಿರ್ಮಿಸಲು 86.05 ಕೋ.ರೂ ವೆಚ್ಚದ ಪ್ರಸ್ತಾವನೆಯನ್ನು ಈಗಾಗಲೇ ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಮಂತ್ರಾಲಯಕ್ಕೆ ಕಳುಹಿಸಲಾಗಿದೆ. ಶೀಘ್ರವೇ ಅನುಮೋದನೆ ದೊರೆಯುವ ಸಾಧ್ಯತೆ ಇದೆ ಎಂದು ರಾ.ಹೆ. ಪ್ರಾಧಿಕಾರದ ಮೂಲಗಳು ತಿಳಿಸಿವೆ.

- ದಿನೇಶ್‌ ಇರಾ

ಇಂದು ಹೆಚ್ಚು ಓದಿದ್ದು

Trending videos

Back to Top