CONNECT WITH US  

ಕಟ್ಟು ಮಸ್ತಾದ ಶರೀರಕ್ಕೆ ಕೆಲವು ಸೂತ್ರಗಳು

ಶರೀರವನ್ನು ಕಟ್ಟುಮಸ್ತಾಗಿ ಇಟ್ಟುಕೊಳ್ಳಬೇಕೆಂದರೆ ಮೈ ಮನ ಎರಡೂ ಆರೋಗ್ಯ ಪೂರ್ಣವಾಗಿರಬೇಕು. ಆದ ಕಾರಣ, ಎರಡರ ಆರೋಗ್ಯವನ್ನೂ ಕಾಪಾಡುವಂತಹ, ಹೆಚ್ಚಿಸುವಂಥ ಆಹಾರ, ವ್ಯಾಯಾಮ ಅಗತ್ಯವಾಗಿಬೇಕು.

ಬಾಯಿಯ ಚಪಲತೆಗೆ ಕೈಗೆ ಸಿಕ್ಕದ್ದನ್ನೆಲ್ಲಾ ನಾವು ಚಪ್ಪರಿಸಿ ತಿನ್ನುತ್ತೇವೆಯಾದರೂ ದೇಹದ ಗಾತ್ರ ಹೆಚ್ಚಾದಂತೆ ತಲೆಬಿಸಿ ಮಾಡಿಕೊಳ್ಳಲು ಪ್ರಾರಂಭಿಸುತ್ತೇವೆ. ತೆಳ್ಳಗಿದ್ದವರಿಗೆ ತಾವು ದಪ್ಪವಾಗಬೇಕೆಂಬ ಆಸೆ, ದಪ್ಪವಿದ್ದವರಿಗೆ ತಾವು ಸಪೂರವಾಗಬೇಕೆಂಬ ಆಸೆ. ಒಟ್ಟಿನಲ್ಲಿ ದೇಹದ ಫಿಟ್‌ನೆಸ್‌ ಬಗ್ಗೆಯೇ ಯೋಚನೆ ಮಾಡುತ್ತಾ ಪರ್ಸ್‌ ಖಾಲಿ ಮಾಡಿಯೋ ಇಲ್ಲವೇ ಹೊಟ್ಟೆಯನ್ನು ಖಾಲಿಯಿಟ್ಟು ರೋಗಗಳನ್ನು ಆಹ್ವಾನಿಸುತ್ತೇವೆಯೇ ಹೊರತು ಫಿಟ್‌ನೆಸ್‌ ಪ್ರಶ್ನೆಯಾಗಿಯೇ ಉಳಿದಿರುತ್ತದೆ.

ದೇಹದ ಫಿಟ್‌ನೆಸ್‌ ಕಾಯ್ದುಕೊಳ್ಳುವುದರಲ್ಲಿ ಆಹಾರ, ವ್ಯಾಯಾಮ ಹಾಗೂ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳನ್ನು ಪಾಲಿಸದೇ ಕೇವಲ ಜಾಹೀರಾತುಗಳಲ್ಲಿ ಬರುವ ಉತ್ಪನ್ನಗಳನ್ನು ಬಳಸಿದರೆ ಏನೂ ಆಗದು. ಅದು ಬರೀ ಕನಸಾಗಿಯೇ ಉಳಿಯತ್ತದೆಯೇ ಹೊರತು ಮತ್ತೇನೂ ಅಲ್ಲ. ಫಿಟ್‌ನೆಸ್‌ ಕಾಯ್ದುಕೊಂಡವರು ಹೆಚ್ಚು ಆರೋಗ್ಯವಂತರಾಗಿರುತ್ತಾರಲ್ಲದೇ, ಆಕರ್ಷಕ ದೇಹ-ವ್ಯಕ್ತಿತ್ವಗಳನ್ನು ಹೊಂದಿರುತ್ತಾರೆ. 

ಆಹಾರ 
ನಾಲಗೆಗೆ ಉತ್ತಮ ರುಚಿ ನೀಡುವ ಜಂಕ್‌ ಫುಡ್‌ ಸಾಕಷ್ಟು ಲಭ್ಯವಿವೆ. ಹಸಿವು ನೀಗಿಸಲೆಂದು ತಿನ್ನಲಾಗುವ ಈ ಆಹಾರ ಗಳಿಂದ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ದೇಹದ ಫಿಟ್‌ನೆಸ್‌ಗಾಗಿ ಸಮಯೋಚಿತ - ಪೌಷ್ಟಿಕಾಂಶಯುಕ್ತ ಆಹಾರ ಉತ್ತಮವಾಗಿದ್ದು, ತರಕಾರಿ, ಹಣ್ಣುಗಳು, ಜ್ಯೂಸ್‌, ಧಾನ್ಯಗಳು, ನೀರಿಗೆ ಹೆಚ್ಚಿನ ಆದ್ಯತೆ ನೀಡಬೇಕು. 

ತರಕಾರಿ ಹಾಗೂ ಹಣ್ಣುಗಳಿಗೂ ಕೆಮಿಕಲ್‌ ಮಿಶ್ರಣ ಮಾಡುತ್ತಿರುವುದರಿಂದ ತರಕಾರಿಗಳನ್ನು ಬೇಯಿಸಿ, ಹಣ್ಣುಗಳನ್ನು ತೊಳೆದು ತಿನ್ನಲು ಮರೆಯಬಾರದು. 

ಕೆಲವು ಮಾಲ್‌, ಅಂಗಡಿಗಳಲ್ಲಿ ಪ್ಲಾಸ್ಟಿಕ್‌ನಿಂದ ಸುತ್ತಿದ ಚಿಕನ್‌, ತರಕಾರಿ, ಹಣ್ಣುಗಳು ಹಾಗೂ ರೆಡಿಮೇಡ್‌ ಆಹಾರಗಳು ದೊರೆಯುತ್ತವೆ. ಅವುಗಳಲ್ಲಿ ಪ್ಲಾಸ್ಟಿಕ್‌ ಅಂಶಗಳು ಒಳಗೊಳ್ಳುವ ಕಾರಣ ಅವುಗಳನ್ನು ಸೇವಿಸಬಾರದು. 

ಹಣ್ಣುಗಳನ್ನು ಹೊರದೇಶಗಳಿಂದ ಆಮದು ಮಾಡಲ್ಪಟ್ಟವು ಎಂದೂ ಹೇಳುವುದಿದೆ. ಆದರೆ, ಇವುಗಳನ್ನು ಅಲ್ಲಿಂದ ಇಲ್ಲಿಯವರೆಗೆ ಸಾಗಿಸುವಾಗ ಸಾಕಷ್ಟು ಬಾರಿ ರಾಸಾಯನಿಕ ಸಿಂಪಡಣೆ ಮಾಡಿ ಹಾಳಾಗದಂತೆ ಇಟ್ಟಿರುತ್ತಾರೆ. ಇಂಥವುಗಳ ಸೇವನೆಯಿಂದ, ಆರೋಗ್ಯವಂತೂ ಹಾಳಾಗುತ್ತದೆ.

ಆದಷ್ಟು ಫ್ರೆಶ್‌ ಆಹಾರ ವಸ್ತು, ಹಾಲು. ಮೊಟ್ಟೆ ಹಾಗೂ ಇತರ ಪೌಟ್ಟಿಕಾಂಶಯುಕ್ತ ಆಹಾರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.

ಒತ್ತಡ ನಿವಾರಣಾ ಕ್ರಮ ಒತ್ತಡ ನಿವಾರಣೆಗೆ ಧ್ಯಾನ, ಪ್ರಾಣಾಯಾಮ ಒಂದು ಉತ್ತಮ ಪ್ರಕ್ರಿಯೆ. 

ಒಬ್ಬ ವ್ಯಕ್ತಿಯು ದಿನಕ್ಕೆ ಕನಿಷ್ಠ 6ರಿಂದ 8 ಗಂಟೆ ನಿದ್ರೆ ಮಾಡಬೇಕು. 

ವ್ಯಾಯಾಮ ನಡೆಸುವಾಗ ಲಘುವಾದ ಹದವಿರುವ ಸಂಗೀತ ಉತ್ತಮ. ಇವುಗಳು ಮನಸ್ಸನ್ನು ಕೇಂದ್ರೀಕರಿಸಿ, ಒತ್ತಡವನ್ನು ನಿವಾರಿಸಲು ಹೆಚ್ಚು ಪೂರಕ.

ತಡರಾತ್ರಿವರೆಗೆ ಟಿವಿ ನೋಡುತ್ತಾ ಕೂರುವುದು, ತಡವಾಗಿ ಊಟ ಮಾಡುವುದು, ತತ್‌ಕ್ಷಣ ಮಲಗುವುದು ಒಳ್ಳೆಯ ಕ್ರಮವಲ್ಲ. 

ಊಟ ಮಾಡಿ ಒಂದು ಗಂಟೆಯ ನಂತರ ನಿದ್ರೆ ಮಾಡಬೇಕು. ಬೆಳಗ್ಗೆ ಬೇಗ ಎದ್ದಲ್ಲಿ ಆರೋಗ್ಯ ಉತ್ತಮವಾಗಿದ್ದು, ಹೆಚ್ಚು ಕ್ರಿಯಾಶೀಲವಾಗಿರಲು ಸಾಧ್ಯ. ಇದರಿಂದ ದೇಹಕ್ಕುಂಟಾಗುವ ಹಲವು ಆರೋಗ್ಯ ಸಂಬಂಧಿ ಕಾಯಿಲೆಗಳನ್ನು ತಡೆಯಬಹುದು.

ವ್ಯಾಯಾಮ
ಉತ್ತಮ ಆಹಾರ ಸೇವನೆಯೊಂದಿಗೆ ಪೂರಕ ವ್ಯಾಯಾಮವೂ ದೇಹದ ಫಿಟ್‌ನೆಸ್‌ಗೆ ಅಗತ್ಯವಾಗಿದೆ. 

ದಿನಾಲೂ 1 ಅಥವಾ 2 ಗಂಟೆಗಳ ಕಾಲ ಮಿತವಾದ ವ್ಯಾಯಾಮ, ಸೂರ್ಯ ನಮಸ್ಕಾರ, ಯೋಗ, ಪ್ರಾಣಾಯಾಮ, ಧ್ಯಾನವನ್ನು ಮಾಡಬೇಕು. ಯುವಕರು ಜಿಮ್‌ ಅಥವಾ ಗ್ರೌಂಡ್‌ ಎಕ್ಸರ್‌ಸೈಸ್‌ ಅನ್ನು ನಡೆಸಬಹುದಾಗಿದ್ದು, ಯಾವುದನ್ನೂ ಮಿತಿ ಮೀರಿ ನಡೆಸಬಾರದು. 

ದೇಹಕ್ಕೆ ಹೆಚ್ಚು ವ್ಯಾಯಾಮ ನೀಡಲು ಹೆಚ್ಚು ಭಾರವನ್ನು ಒಮ್ಮೆಗೆ ಎತ್ತುವ ಸಾಹಸಕ್ಕೆ ಕೈ ಹಾಕಬಾರದು. ಇದರಿಂದ ದೇಹದ ಮೇಲೆ ಹೆಚ್ಚು ಒತ್ತಡ ಬೀಳುವುದಲ್ಲದೇ, ಸ್ನಾಯು ಸೆಳೆತದಂತಹ ಸಮಸ್ಯೆಗಳು ಉಂಟಾಗುತ್ತವೆ.  

ಗಂಟು ನೋವುಗಳ ಸಮಸ್ಯೆಯುಳ್ಳವರು ಓಡುವ ಬದಲು ವಾಕಿಂಗ್‌ ಮಾಡಬಹುದು.

ಸಮತೋಲನ ಆಹಾರ, ವ್ಯಾಯಾಮ ಹಾಗೂ ಒತ್ತಡ ನಿವಾರಣಾ ಪ್ರಕ್ರಿಯೆಗಳ ಮೂಲಕ ದೇಹದ ಫಿಟ್‌ನೆಸ್‌ ಕಾಯ್ದುಕೊಳ್ಳಬಹುದಾಗಿದೆ.

- ಡಾ| ಅಶ್ವಿ‌ನಿ ಶೆಟ್ಟಿ, ಖ್ಯಾತ ವೈದ್ಯರು

ಇಂದು ಹೆಚ್ಚು ಓದಿದ್ದು

Trending videos

Back to Top