CONNECT WITH US  

ಥೈರಾಯ್ಡ್ ತರಾವಳಿ ತವಕಗಳು...!

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಲ್ಲಿ ಕಂಡುಬರುತ್ತಿರುವ ಸಮಸ್ಯೆ ಥೈರಾಯ್ಡ್. ಸಕಾಲದ ಚಿಕಿತ್ಸೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಥೈರಾಯ್ಡ್ ನಿಯಂತ್ರಣ ಸಾಧ್ಯವಿದೆ. ಸಾಮಾನ್ಯವಾಗಿ ಆಯೋಡಿನ್‌ ಕೊರತೆಯಿಂದ ಕಾಣಿಸಿಕೊಳ್ಳುವ ಥೈರಾಯ್ಡ್ ಗೆ ಸರಿಯಾದ ಚಿಕಿತ್ಸೆ ಸಿಗದೇ ಹೋದರೆ ಕ್ಯಾನ್ಸ್‌ರ್‌ಗೂ ಕಾರಣವಾಗುತ್ತದೆ.

ಮಾನವನ ತಲೆಯಿಂದ ಕಾಲಿನವರೆಗೆ ಒಂದೊಂದು ಅಂಗಗಳಿಗೆ ಒಂದೊಂದು ತರಹದ ಆರೋಗ್ಯ ಸಮಸ್ಯೆಗಳು ಇದ್ದೇ ಇರುತ್ತವೆ. ಒಂದೊಂದು ಸಮಸ್ಯೆಗೂ ಒಂದೊಂದು ಹೆಸರು, ಬೇರೆ ಬೇರೆ ಚಿಕಿತ್ಸೆಗಳಿವೆ. ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷ್ಯಿಸಿದರೆ ಜೀವಕ್ಕೆ ಅಪಾಯ ಹೌದಾದರೂ, ಕೆಲವು ದೀರ್ಘ‌ ಕಾಲಿನ ಸಮಸ್ಯೆಗಳಾಗಿ ಕಾಡಿದರೆ, ಇನ್ನೂ ಕೆಲವು ಜೀವನವನ್ನೇ ನರಕ ಮಾಡಿಬಿಡುತ್ತದೆ.

ಇಂತಹುದರಲ್ಲಿ ಆಹಾರ ನುಂಗಲಾರದೆ, ಧ್ವನಿಯ ಬದಲಾಗಿ, ಉಸಿರಾಟಕ್ಕೆ ತೊಂದರೆ ನೀಡಬಲ್ಲ ಹಾಗೂ ಕ್ಯಾನ್ಸರ್‌ಗೂ ಕಾರಣವಾಗಬಹುದಾದ ಸಮಸ್ಯೆ ಥೈರಾಯ್ಡ್. ಮನುಷ್ಯನ ಕುತ್ತಿಗೆ ಭಾಗದ ಗಂಟಲಿನ ಸಮೀಪವಿರುವ ಶ್ವಾಸನಾಳದ ಅಕ್ಕಪಕ್ಕದಲ್ಲಿ ಇರುವುದೇ ಥೈರಾಯ್ಡ್ ಗ್ರಂಥಿ. ಶರೀರದ ಬಹುಮುಖ್ಯ ಗ್ರಂಥಿ ಇದಾಗಿದೆ. ಇದು ಉತ್ಪತ್ತಿ ಮಾಡುವ ಥೈರಾಯ್ಡ್ ಹಾರ್ಮೋನುಗಳನ್ನು ರಕ್ತ ಪ್ರವಾಹದಲ್ಲಿ ಕಳುಹಿಸಿ ಶರೀರದ ಬೆಳವಣಿಗೆ ಹಾಗೂ ವಿವಿಧ ಜೀವನಕ್ರಿಯೆಗಳನ್ನು ನಿರ್ವಹಿಸುತ್ತದೆ. 

ಸಹಜವಾಗಿ ಗಂಟಲಿನ ಕೆಳಗಡೆ ಇರುವ ಥೈರಾಯ್ಡ್ ಗ್ರಂಥಿ ಅಸಹಜ ಊತಕ್ಕೆ ಗುರಿಯಾಗುವುದನ್ನು ವೈದ್ಯಕೀಯ ಭಾಷೆಯಲ್ಲಿ 'ಗಾಯ್ಟರ್‌' ಎನ್ನುತ್ತಾರೆ. ಅಯೋಡಿನ್‌ ಕೊರತೆಯಿಂದ ಉಲ್ಬಣಿಸುವ ಈ ಸಮಸ್ಯೆ, ಹೈಪೋಥೈರಾಯ್ಡ್ ಮತ್ತು ಹೈಪರ್‌ ಥೈರಾಯ್ಡ್ ಜತೆಗೂ ಕಾಣಿಸಿಕೊಳ್ಳಬಹುದು. 

ಹೈಪೋಥೈರಾಯ್ಡ್
3, 4 ಥೈರಾಯ್ಡ್ ಹಾರ್ಮೋನುಗಳು ಸಾಮಾನ್ಯ ಪ್ರಮಾಣದಲ್ಲಿ ಇದ್ದಾಗ ಕೂಡ 'ಗಾಯ್ಟರ್‌' ಸಮಸ್ಯೆ ಬರುವುದಕ್ಕೆ ಅವಕಾಶವಿದೆ. ಗಂಟಲು ಕೆಳಗಡೆ ನೋವು ತೀವ್ರವಾದಾಗ ಶ್ವಾಸನಾಳ, ಅನ್ನನಾಳದ ಮೇಲೆ ಒತ್ತಡ ಹೆಚ್ಚಾಗಿ ಆಹಾರ ನುಂಗಲು ಕಷ್ಟವಾಗಬಹುದು. ಧ್ವನಿಯಲ್ಲಿ ಮಾರ್ಪಾಡು, ಉಸಿರಾಟದಲ್ಲಿ ತೊಂದರೆಯ ಜತೆಗೆ ಕೆಲವರಿಗೆ ಹೈಪೋಥೈರಾಯ್ಡ್ ಮತ್ತು ಹೈಪರ್‌ ಥೈರಾಯ್ಡ್ ರೋಗ ಲಕ್ಷಣಗಳೂ ಕಾಣಬಹುದು. ಹೈಪೋಥೈರಾಯ್ಡಿಸಂ' ಎಂಬ ಥೈರಾಯ್ಡ್ ಸಮಸ್ಯೆ ಸಾಮಾನ್ಯವಾಗಿ ಮಕ್ಕಳಲ್ಲಿ ಹಾಗೂ ಸ್ತ್ರೀಯರಲ್ಲಿ ಕಾಣಿಸುತ್ತದೆ. ಇದಕ್ಕೆ ವಯಸ್ಸಿನ ಮಿತಿ ಇಲ್ಲ. ನಿಶ್ಯಕ್ತಿ, ಚರ್ಮ ಒಣಗುವುದು, ಕಡಿಮೆ ಬೆವರುವಿಕೆ, ಬೊಜ್ಜು, ಋತುಚಕ್ರದಲ್ಲಿ ಏರುಪೇರು ಹೀಗೆ ಕೆಲವು ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಹೈಪರ್‌ ಥೈರಾಯ್ಡಿಸಂ
ಈ ಮಧ್ಯೆ ಶರೀರದಲ್ಲಿ ಅಗತ್ಯ ಪ್ರಮಾಣಕ್ಕಿಂತ ಅಧಿಕ ಥೈರಾಯ್ಡ ಹಾರ್ಮೊನುಗಳು ಉತ್ಪತ್ತಿಯಾಗುವುದನ್ನು 'ಹೈಪರ್‌ ಥೈರಾಯ್ಡಿಸಂ' ಅನ್ನುತ್ತಾರೆ. ಈ ಸಮಸ್ಯೆ ಹೆಚ್ಚಾಗಿ 20ರಿಂದ 40ರ ಒಳಗಿನ ವಯಸ್ಸಿನವರಿಗೆ ಕಂಡುಬರುತ್ತದೆ. ಆದರೆ ಈ ಸಮಸ್ಯೆಯನ್ನು ಗುರುತಿಸದೆ ಹೋದರೆ ಅಥವಾ ನಿರ್ಲಕ್ಷ್ಯಿಸಿದರೆ ಹಲವು ದುಷ್ಪರಿಣಾಮಗಳು ಉಂಟಾಗುತ್ತದೆ. ಥೈರಾಯ್ಡ್ ಸಮಸ್ಯೆಗೆ ತುತ್ತಾದವರಲ್ಲಿ ಶೇ. 80ರಷ್ಟು ಮಂದಿ ಹೈಪೋಥೈರಾಯ್ಡಿಸಂ ಮತ್ತು ಶೇ.20 ರಷ್ಟು ಮಂದಿ ಹೈಪರ್‌ ಥೈರಾಯ್ಡಿಸಂ ರೋಗಕ್ಕೆ ತುತಾಗಿರುತ್ತಾರೆ.

ಹೈಪರ್‌ ಥೈರಾಯ್ಡಿಸಂನಿಂದ ಸರಿಯಾದ ಪ್ರಮಾಣದಲ್ಲಿ ಆಹಾರ ಸೇವಿಸಲು ಸಾಧ್ಯವಾಗದೆ ದೇಹದ ತೂಕ ತಗ್ಗುವುದು, ನಿದ್ರೆ ಬಾರದಿರುವುದು, ಎದೆಬಡಿತ, ಬಿಸಿ ಸಹಿಸಲಾಗದಿರುವುದು, ಹೆಚ್ಚು ಬೆವರುವಿಕೆ, ಅತಿಯಾದ ಭೇದಿ, ಕೈಗಳು ನಡುಗುವುದು, ನಿಶ್ಯಕ್ತಿ, ಸ್ತ್ರೀಯರಲ್ಲಿ ಬೇಗ ಋತುಚಕ್ರ ಆಗುವುದು ಹಾಗೂ ಅಧಿಕ ರಕ್ತಸ್ರಾವ ಇತ್ಯಾದಿ ಹಲವು ಲಕ್ಷಣಗಳು ಈ ಸಂದರ್ಭದಲ್ಲಿ ಕಂಡುಬರುತ್ತದೆ. ಸಕಾಲದಲ್ಲಿ ಚಿಕಿತ್ಸೆ ಮಾಡಿದರೆ ಈ ಸಮಸ್ಯೆಯಿಂದ ಮುಕ್ತಿ ಹೊಂದಲು ಸಾಧ್ಯ.

ನಿರ್ಲಕ್ಷ್ಯ ಸಲ್ಲದು
ಹಾರ್ಮೋನುಗಳ ಕೊರತೆ ಹಾಗೂ ಜಾಸ್ತಿಯ ಕಾರಣದಿಂದ ಥೈರಾಯ್ಡ್ ನಲ್ಲಿ ಸಮಸ್ಯೆ ಉಂಟಾಗುತ್ತದೆ. ಆಯೋಡಿನ್‌ ಕೊರತೆಯಿಂದಾಗಿ ಈ ವ್ಯತ್ಯಾಸಗಳು ನಡೆಯುತ್ತವೆ. ಇದರಲ್ಲಿ ಬೇರೆ ಬೇರೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸಹಜವಾಗಿ 'ಗಾಯ್ಟರ್‌' ಎಂಬುದು ಕಾಣಿಸುತ್ತದೆ. ಥೈರಾಯ್ಡ ಸಮಸ್ಯೆಯ ಬಗ್ಗೆ ನಿರ್ಲಕ್ಷ್ಯ ವಹಿಸಲೇಬಾರದು. ಯಾಕೆಂದರೆ ಕೆಲವೊಮ್ಮೆ ಇದು ಕ್ಯಾನ್ಸರ್‌ ರೂಪಕ್ಕೂ ಬದಲಾಗಬಹುದು.
- ಡಾ| ಸತೀಶ್‌ ಭಂಡಾರಿ, ಡೀನ್‌, ಕೆ.ಎಸ್‌.ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆ

- ದಿನೇಶ್‌ ಇರಾ

ಇಂದು ಹೆಚ್ಚು ಓದಿದ್ದು

Trending videos

Back to Top