CONNECT WITH US  

ಮುನಿಯಮ್ಮನ ಮುಗುಳು ನಗು: ಹೂ ಮುಡಿದ ದೇವರಿಗೆ ಹೂವಾಡಗಿತ್ತಿ ಕಾಣದಾದಳೇ?

ಆಕೆ ಪೋಣಿಸಿದ ಹೂ ಮಾಲೆಯ ಮುಡಿದ ದೇವರೂ ಒಮ್ಮೆ ಮುನಿಯಮ್ಮಳನ್ನು ನೋಡಬೇಕಿತ್ತು. ಹೂವಿನಂತೆ ಅರಳಿ, ಕಷ್ಟಗಳು ತನ್ನನ್ನು ಕಿತ್ತು ತಿಂದರೂ, ನಾಲ್ಕು ಜನರೆದುರು ನಗು ನಗುತ್ತಾ, ಹೂವಿನ ಹಾಗೆಯೇ ಬದುಕಿನ ಸಂದೇಶ ರವಾನಿಸುವ ಈ ಮುನಿಯಮ್ಮ ಹೂವಿನ ಹಾಗೆ ಬಾಡುವುದಿಲ್ಲ. ಈ ಹೂವಾಡಗಿತ್ತಿಯಿಂದ ನಾವು ಕಲಿಯಬೇಕಾದದ್ದು ಬಹಳ ಇದೆ...

ಮುನಿಯಮ್ಮ, ನಮ್ಮ ಮನೆಗೆ 30 ವರ್ಷದಿಂದ ಹೂ ತಂದುಕೊಡುತ್ತಿದ್ದಾಳೆ. ಮಳೆ ಇರಲಿ, ಬಿಸಿಲಿರಲಿ, ಹಬ್ಬವಿರಲಿ, ಇಲ್ಲದಿರಲಿ, ತನ್ನ ಸ್ವಂತ ಮನೆಯ ಅಡಚಣೆ ಇರಲಿ... ಯಾವುದೇ ಸಂದ‌ರ್ಭದಲ್ಲೂ ತಪ್ಪದೇ ಹೂವನ್ನು ತಂದುಕೊಟ್ಟು "ಕಾಫಿ ಆಯತ್ರಮ್ಮಾ?' ಅಂತ ಮಾರ್ದವತೆಯ ಧ್ವನಿಯಲ್ಲಿ ಕೇಳಿ, ಹೂ ಕೊಡುವ ಆಕೆ, ನಿಧಾನವಾಗಿ ನನ್ನ ಕಣ್ಣಿಗೆ ಅಸಾಮಾನ್ಯಳಂತೆ ಕಾಣಿಸುತ್ತಾ ಹೋದಳು. ಮೊದಮೊದಲು ಆಕೆಯ ಬಗ್ಗೆ ಅಷ್ಟೇನೂ ಗಮನ ಕೊಡದ ನಾನು ಬರಬರುತ್ತಾ, ಆಕೆಯಲ್ಲಿ ಹುದುಗಿದ್ದ ವಿಶೇಷವಾದ, ಅಪರೂಪದ ಗುಣವನ್ನು ಗುರುತಿಸತೊಡಗಿದೆ. ಗುಂಗುರು ಕೂದಲು, ಸಣ್ಣದಾದ ಮೈಕಟ್ಟು, ಹೇಗೊ ಏನೋ ಸುತ್ತಿಕೊಂಡ ಸೀರೆ, ಹಣೆಯಲ್ಲಿ ಅಗಲ ಕುಂಕುಮ ಇವಿಷ್ಟೇ! ಆಕೆಯ ಅಲಂಕಾರ. ಸವೆದ ಚಪ್ಪಲಿಯನ್ನು ಮೆಟ್ಟಿಕೊಂಡು ಟಪಟಪ ಸದ್ದು ಮಾಡುತ್ತಾ ಜನನಿಬಿಡ ರಸ್ತೆಯಲ್ಲಿ ತನ್ನದೇ ಲಹರಿಯಿಂದ ನಡೆಯುತ್ತಾ ಎಂಟØತ್ತು ಮನೆಗೆ ಹೂಕೊಟ್ಟು, ತನ್ನ ಮನೆ ಸೇರಿದರೆ ಮುಗಿಯಿತು ಮುನಿಯಮ್ಮನ ದಿನಚರಿ!

ಹದಿನಾರು ವರ್ಷಕ್ಕೆ ಮರದ ಕೆಲಸ ಮಾಡುತ್ತಿದ್ದಾತನೊಂದಿಗೆ ಮದ್ವೆಯಾಗಿ, ಯಡಿಯೂರಿನಿಂದ ಈ ಬೆಂಗಳೂರಿನ ಜೆ.ಪಿ. ನಗರದ ಒಂದು ಚಿಕ್ಕ ಬಡಾವಣೆಯಲ್ಲಿ ಸಂಸಾರ ಹೂಡಿದ್ದಾಯ್ತು. ಬಡತನದ ಗೋಳು ಸಾಲದೆಂಬಂತೆ ಎರಡೆರಡು ಗಂಡು ಮಕ್ಕಳು ಹುಟ್ಟಿ 6 ವರ್ಷಕ್ಕೆ ಒಂದು, ಅದಾಗಿ ಆರು ತಿಂಗಳಿಗೆ ಇನ್ನೊಂದು ಮಡಿದವು. ಕೊನೆಗೆ ಒಬ್ಬ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಯ್ತು. ಕುಡುಕನಾಗಿದ್ದ ಗಂಡ ತನ್ನ ಅಪಾರ (?) ಆಸ್ತಿಗೆ ವಾರಸುದಾರನಿಲ್ಲವೆಂದು, ಮುನಿಯಮ್ಮನ ತಂಗಿಯನ್ನೇ ಎರಡನೇ ಮದ್ವೆ ಮಾಡಿಕೊಂಡಾಗಲೂ ಸುಮ್ಮನಿದ್ದುದು ಮುನಿಯಮ್ಮನ ಅಸಹಾಯಕತೆಯ ಪ್ರತೀಕ.

ಕಾನೂನು ಇಂಥವರನ್ನೆಲ್ಲ ಮುಟ್ಟುವುದೇ ಇಲ್ಲವಲ್ಲವೆಂಬ ಸೋಜಿಗ ನನಗೆ. "ಪಾಲಿಗೆ ಬಂದದ್ದು ಪಂಚಾಮೃತ' ಎಂದು ತನಗೆ ತಾನೇ ಹೇಳಿಕೊಂಡು, ಸ್ವಂತ ತಂಗಿ ಸವತಿಯಾಗಿ ಬಂದರೂ ಹೊಂದಿಕೊಂಡಳು ಮುನಿಯಮ್ಮ. ಸಂಸಾರದ ಏಳು ಬೀಳಿನ ಮಧ್ಯೆ ತಂಗಿಗೆ ಎರಡು ಗಂಡು, ಎರಡು ಹೆಣ್ಣು ಮಕ್ಕಳಾದವು. ಜೀವನ ಸಾಗುತ್ತಲೇ ಇತ್ತು. ಕಷ್ಟ ಸುಖಗಳನ್ನೆಲ್ಲ ಮುನಿಯಮ್ಮ ಅರೆದು ಕುಡಿದಿದ್ದಾಯ್ತು. ನಿರ್ಲಿಪ್ತತೆಯ ಮೊರೆ ಹೋಗಿ ತಾನು ಗಟ್ಟಿಯಾಗುತ್ತಾ ಹೋದಳು. ಈ ನಡುವೆ ಕುಡಿದು ಕುಡಿದು ಪತಿರಾಯನೂ ಪರಂಧಾಮಗೈದಾಯ್ತು. ಮಗಳಿಗೆ ಹಾಗೂ ಹೀಗೂ ಒಂದು ಮದ್ವೆ ಮಾಡಿ ಮುಗಿಸಿ, ನೆಮ್ಮದಿಯ ಉಸಿರು ಬಿಡುವಾಗಲೇ ತನ್ನ ತಂಗಿಯ ಮಗನಾದರೂ, ಸ್ವಂತ ಮಗನಂತೆ ಪ್ರೀತಿಯಿಂದ ಸಾಕಿದ 22 ವರುಷದ ಮಗ, ಹೇಳದೇ- ಕೇಳದೇ ಯಾವ ಕಾರಣವನ್ನು ನೀಡದೇ, ನೇಣಿಗೆ ಶರಣಾದದ್ದು ಮುನಿಯಮ್ಮನಿಗೆ ಭರಿಸಲಾಗದ ತುತ್ತು. ಆದರೂ, ಮಗನನ್ನು ಮಣ್ಣು ಮಾಡಿ ಬಂದ ಮಾರನೇ ದಿನವೇ ನಮ್ಮ ಮನೆಗೆ ಹೂವು ಕೊಡ ಬಂದ ಮುನಿಯಮ್ಮನ ಗಂಡೆದೆಗೆ ನಾನು ಶರಣಾಗಿದ್ದೆ. 

ಹೆಚ್ಚಿನ ದಿನ ಕೇಳುತ್ತಿದ್ದೆ: "ಮುನಿಯಮ್ಮ, ಒಂದು ಲೋಟ ಕಾಫೀ ಕುಡಿ ಬಾ' ಎಂದು. ಅವಳದು ಅದೇ ಉತ್ತರ! "ಇಲ್ಲ ಕಣಮ್ಮಾ... ಈಗಷ್ಟೇ ಕಾಫೀ ಕುಡಿದು ಲೋಟ ಕೆಳಗಿಟ್ಟು ಬಂದೆ, ಬೇಡಿ ಅಮ್ಮ' ಎಂದು. ಮುಖದಲ್ಲಿ ಅದೇ ಆರದ ಮುಗುಳು ನಗು. ಒಂದೇ ಒಂದು ದಿನ ನಮ್ಮ ವಿಶಾಲ ಮನೆಯಲ್ಲಿ ಏನೂ ಬೇಡಿದವಳಲ್ಲ. ಒಂದು ದಿನವೂ ಸೀರೆಯಾಗಲಿ ಅಥವಾ ಯಾವುದೇ ವಸ್ತುವಿನ ಬಗ್ಗೆ ಆಸೆ ಪಡದ "ಶ್ರೀಮಂತೆ' ಮುನಿಯಮ್ಮ. ಆಗಾಗ್ಗೆ ನನಗೆ ಸಂಸಾರದ ಬಗ್ಗೆ ಸಲಹೆ ಕೊಡುತ್ತಾ, ಆತ್ಮೀಯವಾಗಿ ಮಾತಾಡುತ್ತಾ, ಕೊನೆಯಲ್ಲಿ "ಅಮ್ಮ ನಾನು ಹೀಗೆಲ್ಲ ಹೇಳಿದೆ ಎಂದು ಮತ್ತೆ ಬೈಕೋ ಬ್ಯಾಡ್ರಿ ಮತ್ತ್' ಎನ್ನುತ್ತಿದ್ದ ಆಕೆಯ ಮುಗ್ಧ ಮಾತಿಗೆ ನಾನು ಸೋಲುತ್ತಿದ್ದೆ.

"ಏನು ಮುನಿಯಮ್ಮ, ಆ ದೇಗುಲದ ಮುಂದೆ ಕುಳಿತಿರ್ತಾಳಲ್ಲ... ಆಕೆಯ ಜೊತೆ ನೀನೂ ವ್ಯಾಪಾರ ಮಾಡು. ತುಂಬಾ ಸಂಪಾದನೆ ಮಾಡಬಹುದು' ಅಂದ ನನ್ನ ಸಲಹೆಗೆ, "ಇಲ್ಲಮ್ಮಾ... ಯಾರ್‌ ಹೊಟ್ಟೆಗೂ ಹೊಡೀಬಾರ್ಧು.... ಏನೋ ನನ್‌ ಪಾಡಿಗೆ ಎಂಟತ್ತು ಮನೆಗೆ ಹೂವ ಕೊಡ್ತೀನೀ... ನನ್‌ ಬದುಕಿಗೆ ಅಷ್ಟು ಸಾಕ್‌ ಬಿಡ್‌ ತಾಯಿ' ಅಂದಾಗ ನಾನು ಅವಳೆದುರು ತೀರಾ ಕುಗ್ಗಿ ಹೋದೆ. ಜೀವನದಲ್ಲಿ ದೇವರು ನಮಗೆ ಬೇಕಾದಷ್ಟನ್ನು ಕೊಟ್ಟಿದ್ದರೂ, ಕೆಲವೊಮ್ಮೆ ಗೊಣಗುವ ನಮ್ಮ ಮುಂದೆ, ಮುನಿಯಮ್ಮ ಅಪಾರ ಶ್ರೀಮಂತೆಯೇ ಸರಿ! 

ಶಾಲಿನಿ ಮೂರ್ತಿ


Trending videos

Back to Top