CONNECT WITH US  

ನಡುತಿಟ್ಟಿನಲ್ಲಿ ವಿಜೃಂಭಿಸಿದ ತೆಂಕಿನ ರಾತ್ರಿ ಆಟ  

ರಾತ್ರಿ 9 ಗಂಟೆಗೆ ಶುರುವಾಗಿ ಬೆಳಗ್ಗೆವರೆಗೆ ನಡೆಯುತ್ತಿದ್ದ ಯಕ್ಷಗಾನದ ಕಾಲ ಹೋಗಿ ರಾತ್ರಿ 12ಕ್ಕೆ ಮುಗಿಯುವ ಕಾಲಘಟ್ಟದಲ್ಲಿರುವಾಗ ರಾತ್ರಿ 7 ಗಂಟೆಗೆ ಆರಂಭವಾಗಿ ಬೆಳಗ್ಗೆ 7.30ರವರೆಗೂ ಕಿಕ್ಕಿರಿದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡ ಯಕ್ಷಗಾನ ನಡೆದದ್ದು ಅಪರೂಪ. ಇದು ನಡೆದದ್ದು ಜೂ. 23ರ ರಾತ್ರಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ. ಸಂಘಟಕರು ತೆಂಕುತಿಟ್ಟು ಯಕ್ಷಗಾನ ವೇದಿಕೆಯ ಸುಧಾಕರ ಆಚಾರ್ಯರು. ಆಗಸ್ಟ್‌ 15ರಂದು ಸ್ವಾತಂತ್ರ್ಯೋತ್ಸವ ತಾಳಮದ್ದಲೆಯನ್ನು ಸಂಘಟಿಸುತ್ತಿದ್ದ ಸುಧಾಕರ ಆಚಾರ್ಯರು 25ನೆಯ ವರ್ಷಕ್ಕೆ ತೆಂಕುತಿಟ್ಟಿನ ವೇದಿಕೆ ಸೃಷ್ಟಿಸಿ ಯಕ್ಷಗಾನ ಆರಂಭಿಸಿದರು. ಇದೀಗ ಐದನೆಯ ವರ್ಷದ ಯಕ್ಷಗಾನ ಅಭೂತಪೂರ್ವವಾಗಿ ನಡೆಯಿತು ಎನ್ನುವುದಕ್ಕೆ ಪ್ರೇಕ್ಷಕರು ಸಾಕ್ಷಿ. 

ಬಾಲ ಕಲಾವಿದರ ಪ್ರತಿಭೆ
ರಾತ್ರಿ 7ರಿಂದ 9 ಗಂಟೆವರೆಗೆ ಇತ್ತೀಚಿಗೆ ಕಾಣಸಿಗುವುದು ಅಪರೂಪವೆನ್ನಬಹುದಾದ ತೆಂಕುತಿಟ್ಟಿನ ಪೂರ್ವರಂಗವನ್ನು ಪ್ರಸ್ತುತಪಡಿಸಿದವರು ಕಟೀಲಿನ ದುರ್ಗಾ ಮಕ್ಕಳ ಮೇಳದ ಬಾಲಕಲಾವಿದರು. ಇದು ಒಂದರ್ಥದಲ್ಲಿ ಪ್ರಾತ್ಯಕ್ಷಿಕೆ ರೂಪದಲ್ಲಿ ಮೂಡಿಬಂತೆನ್ನುತ್ತಾರೆ ವಿಮರ್ಶಕರು. ಇದರಲ್ಲಿ ಕೋಡಂಗಿ, ಬಾಲವೇಷ, ಸ್ತ್ರೀವೇಷ, ಪೀಟಿಕೆ ಸ್ತ್ರೀವೇಷಗಳು ಇರುತ್ತವೆ. ಹಿಂದೆಲ್ಲ ಕೋಡಂಗಿ ವೇಷವನ್ನು ಹೊಸದಾಗಿ ಸೇರಿದ ಕಲಾವಿದರು ನಡೆಸುತ್ತಿದ್ದ ಕಾರಣ ಅದಕ್ಕೆ ಅಷ್ಟೊಂದು ಮಹತ್ವವಿರಲಿಲ್ಲ. ಆದರೆ ಇಲ್ಲಿ ತರಬೇತಿ ಪಡೆದ ಮಕ್ಕಳು ಮಾಡಿದ ಕಾರಣ ನಗಣ್ಯ ಪಾತ್ರಗಳೂ ಗಣ್ಯ ಪಾತ್ರಗಳಾಗಿ ಮೂಡಿಬಂತು. 

ಇಳಿ ವಯಸ್ಸಿನಲ್ಲೂ ಚಲಾವಣೆಯ ಕಲಾವಿದ
9 ಗಂಟೆಗೆ ಬಳಿಕ ಪ್ರಸಿದ್ಧ ಕಲಾವಿದ ಅರುವ ಕೊರಗಪ್ಪ ಶೆಟ್ಟಿಯವರನ್ನು ಅಭಿನಂದಿಸಲಾಯಿತು. 78 ವರ್ಷದವರಾದರೂ ಇನ್ನೂ ಯಕ್ಷ ಲೋಕದಲ್ಲಿ ಚಲಾವಣೆಯಲ್ಲಿರುವವರು. ಹಿಂದೆ ಕರ್ನಾಟಕ ಮೇಳ, ಎಡನೀರು ಮೇಳದಲ್ಲಿದ್ದ ಕೊರಗಪ್ಪ ಶೆಟ್ಟರು ಪ್ರಸ್ತುತ ಬಪ್ಪನಾಡು ಮೇಳದಲ್ಲಿ ಹಿರಿಯ ಕಲಾವಿದರು. ಕೋಟಿ ಚೆನ್ನಯ ಕಥಾನಕದಲ್ಲಿ ಕೋಟಿ, ಇತರ ಪ್ರಸಂಗಗಳಲ್ಲಿ ಕೃಷ್ಣನ ಪಾತ್ರಕ್ಕೆ ಪ್ರಸಿದ್ಧರಾದ ಶೆಟ್ಟರು ಒಟ್ಟಾರೆಯಾಗಿ ದುಃಶಾಸನ ಪಾತ್ರದಲ್ಲಿ ಸೈ ಎನಿಸಿಕೊಂಡವರು. ಕೋಟಿ, ಕೃಷ್ಣ, ದುಃಶಾಸನ ಪಾತ್ರಗಳು ಒಂದಕ್ಕೊಂದು ತದ್ವಿರುದ್ಧ ಗುಣಲಕ್ಷಣವಾದರೂ ಶೆಟ್ಟರು ಇಲ್ಲಿ ಸಮಾನವಾಗಿ ಯಶಸ್ಸು ಕಂಡದ್ದು ವಿಶೇಷವೇ. ಈ ರಾತ್ರಿ ಆಟದಲ್ಲಿ ಅವರು ದುಃಶಾಸನ ಪಾತ್ರ ನಿರ್ವಹಿಸಿದರು. ಭುಜ ಹಾರಿಸುವುದೇ ಮೊದಲಾದ ಆಂಗಿಕ ಅಭಿನಯದಲ್ಲಿ ಶೆಟ್ಟರು ವಿಶಿಷ್ಟ ಛಾಪು ಮೂಡಿಸಿದವರು, ಇಲ್ಲಿಯೂ ಪ್ರೇಕ್ಷಕರಿಗೆ ತನ್ನ ಛಾಪು ತೋರಿಸಿದರು. 

ಹಳೆಬೇರು ಹೊಸ ಚಿಗುರು 
ಸುಣ್ಣಂಬಳ ವಿಶ್ವೇಶ್ವರ ಭಟ್‌, ಎಂ.ವಾಸುದೇವ ಸಾಮಗ, ಜಯಪ್ರಕಾಶ ಶೆಟ್ಟಿ ಪೆರ್ಮುದೆ, ಸುಬ್ರಾಯ ಹೊಳ್ಳ ಕಾಸರಗೋಡು, ಜಗದಾಭಿರಾಮ ಪಡುಬಿದ್ರಿ, ಶಶಿಕಾಂತ ಶೆಟ್ಟಿ ಕಾರ್ಕಳ, ನೆಲ್ಯಾಡಿ ಪ್ರಶಾಂತ ಶೆಟ್ಟಿಯವರಂತಹ ಪ್ರಸಿದ್ಧ ಕಲಾವಿದರೊಂದಿಗೆ ಧರ್ಮಸ್ಥಳ ಚಂದ್ರಶೇಖರ, ಅಮ್ಮುಂಜೆ ಮೋಹನ, ರವಿ ಮುಂಡಾಜೆ, ಲೋಕೇಶ ಮುಚ್ಚಾರು, ಮೋಹನ್‌ ಬೆಳ್ಳಿಪ್ಪಾಡಿಯವರಂತಹ ಯುವಕರನ್ನು ಒಳಗೊಂಡ 55 ಕಲಾವಿದರು ರಾಜಾಂಗಣದಲ್ಲಿ ತಮ್ಮ ಕಲಾ ಸಾಮರ್ಥ್ಯ ಮೆರೆದರು. ಒಟ್ಟಾರೆ "ಹಳೆಬೇರು ಹೊಸ ಚಿಗುರು'ಎಂಬಂತೆ ಹಿರಿಯ ಕಲಾವಿದರು ಮತ್ತು ಉದಯೋನ್ಮುಖ ಕಲಾವಿದರನ್ನು ಒಂದೆಡೆ ಕೂಡಿ ಹಾಕಿದ್ದು ವಿಶೇಷ. 

ಕಂಠ ಚಳಕವೂ, ಕೈ ಚಳಕವೂ...
ಪಟ್ಲ ಸತೀಶ ಶೆಟ್ಟಿ,  ಪದ್ಯಾಣ ಗಣಪತಿ ಭಟ್‌, ದಿನೇಶ ಅಮ್ಮಣ್ಣಾಯ, ಪ್ರಸಾದ್‌ ಬಲಿಪ. ಬೊಂದೇಲ್‌ ಸತೀಶ ಶೆಟ್ಟಿ, ದೇವಿಪ್ರಸಾದ ಆಳ್ವ, ಚಿನ್ಮಯ ಭಟ್‌ ಕಲ್ಲಡ್ಕ ಈ ಏಳು ಮಂದಿ ಭಾಗವತರು ಕಂಠ ಚಳಕವನ್ನೂ ಆರು ಮಂದಿ ಇತರ ಹಿಮ್ಮೇಳದವರು ಕೈ ಚಳಕವನ್ನೂ ತೋರಿದರು. ಬಾಲಕಲಾವಿದರು ಸೇರಿದಂತೆ ಒಟ್ಟು ಕಲಾವಿದರ ಸಂಖ್ಯೆ 75 ದಾಟುತ್ತದೆ. ಪ್ರಸಿದ್ಧ ಕಲಾವಿದರಿಗೆ ಅವರದ್ದೇ ಆದ ಅಭಿಮಾನಿಗಳಿರುವುದರಿಂದ ಅವರು ವೇದಿಕೆಗೆ ಬರುವಾಗ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದರು. ಮಳೆಗಾಲವಾದರೂ ವರುಣ ಬಿಡುವು ಮಾಡಿಕೊಟ್ಟ ಕಾರಣ ಪ್ರೇಕ್ಷಕರಿಗೆ ಹೆಚ್ಚಿನ ಅನುಕೂಲವೇ ಆಯಿತು. ಆರಂಭದಲ್ಲಿ ಪಾಂಡವರ ಒಡ್ಡೋಲಗ (ಪೂರ್ವರಂಗ) ನಡೆದರೆ ಬಳಿಕ ಅಕ್ಷಯಾಂಬರ, ಬಬ್ರುವಾಹನ, ರತಿ ಕಲ್ಯಾಣ ಪ್ರಸಂಗಗಳು ಪ್ರಸ್ತುತಗೊಂಡವು. ಈ ಸುದೀರ್ಘ‌ ಅವಧಿಯಲ್ಲಿ ಪ್ರೇಕ್ಷಕರ ಕೊರತೆ ಕಂಡುಬಾರದೆ ಇದ್ದದ್ದು ಉತ್ತಮ ಪ್ರದರ್ಶನ ನೀಡಿದರೆ ಪ್ರೇಕ್ಷಕರ ಕೊರತೆ ಬಾರದು ಎಂಬ ಸಂದೇಶವನ್ನು ಸಾರುತ್ತದೆ. 

ಉಭಯ ತಿಟ್ಟುಗಳ ಅಭಿಮಾನಿಗಳು
ಯಕ್ಷಗಾನದ ವಿಷಯದಲ್ಲಿ ಹೇಳುವುದಾದರೆ ಉಡುಪಿ ಕೇಂದ್ರ ಬಿಂದು. ಉಡುಪಿಯ ದಕ್ಷಿಣಕ್ಕೆ ತೆಂಕುತಿಟ್ಟು, ಉತ್ತರಕ್ಕೆ ಬಡಗುತಿಟ್ಟು ಯಕ್ಷಗಾನ ಜನಪ್ರಿಯ. ಉಡುಪಿ ಕೇಂದ್ರ ಬಿಂದುವಾದ ಕಾರಣ ಇದನ್ನು ನಡುತಿಟ್ಟು ಎನ್ನುವವರೂ ಇದ್ದಾರೆನ್ನುವುದಕ್ಕಿಂತ ಇಲ್ಲಿ ಉಭಯ ತಿಟ್ಟುಗಳ ಅಭಿಮಾನಿಗಳಿದ್ದಾರೆ. ಬಹುತೇಕ ಅಭಿಮಾನಿಗಳು ಎರಡೂ ತಿಟ್ಟುಗಳಿಗೂ ಸಲ್ಲುವವರು. ಈ ಅಭಿಮಾನಿ ವರ್ಗಕ್ಕೆ ಅನುಕೂಲವೆಂದರೆ ಶ್ರೀಕೃಷ್ಣಮಠದ ವಿಶಾಲವಾದ ರಾಜಾಂಗಣ ಸಭಾಂಗಣ. ಇದನ್ನು ಸ್ವಾಮೀಜಿಯವರು ಸುಸಜ್ಜಿತವಾಗಿ ಕಟ್ಟಿದ್ದು ಸಾರ್ಥಕ ಎನ್ನುತ್ತಾರೆ ಪ್ರೇಕ್ಷಕರಾಗಿ ಪಾಲ್ಗೊಂಡ ಯಕ್ಷಗಾನ ವಿದ್ವಾಂಸ ಪ್ರೊ|ಎಂ.ಎಲ್‌.ಸಾಮಗ. 

ಜಾಗರಣೆಗೆ ಪ್ರಶಸ್ತ
ಏಕಾದಶಿಯಾದ ಕಾರಣ ಉಪಾಹಾರದ ಪೂರೈಕೆ ಇಲ್ಲವಾದರೂ ಕಲಾಪ್ರೇಕ್ಷಕರು ಆಹಾರಕ್ಕಿಂತ ಕಲೆಯೇ ಪ್ರಧಾನ ಎನ್ನುವುದನ್ನು ತೋರಿಸಿಕೊಟ್ಟರು.ಏಕಾದಶಿ ರಾತ್ರಿ ಜಾಗರಣೆ ಆಚರಿಸುವುದು ಸಾಂಪ್ರದಾಯಿಕ ಪದ್ಧತಿ.  ಪರ್ಯಾಯ ಪಲಿಮಾರು ಮಠಾಧೀಶರು, ಬಾಳೆಗಾರು ಮಠಾಧೀಶರು ಯಕ್ಷಗಾನ ನೋಡುತ್ತಲೇ ಜಾಗರಣೆ ಮಾಡಿ ಬೆಳಗ್ಗೆ ನೇರ ಪೂಜೆಗೆ ತೆರಳಿದರು. 

 ಕುಮಾರಸ್ವಾಮಿ  


Trending videos

Back to Top