CONNECT WITH US  

ನೀ ನನ್ನ ಮಳೆಗಾಲ...

ನನ್ನ ಜೀವನದಾಗ ಹಸಿರ ತುಂಬಿದಾವ ನೀ. ಹೂ ಅರಳುವಾಂಗ ಮಾಡಿದಿ.ಈ ನನ್ನ ಮಳೆಗಾಲಕ್ಕ ಅತೀವೃಷ್ಟಿ, ಅನಾವೃಷ್ಟಿ ಆಗದಿರಲಿ ಅಂತಾ ದೇವರಲ್ಲಿ ಕೇಳಕೊತೀನಿ. ಏನೇ ಆದರೂ ಹಿತಮಿತವಾದ ಮಳೆಗಾಲ ನನ್ನ ಪಾಲಿಗಿರಲಿ.ಅಂಥಾ ಮಳೆಗಾಲ ನೀನಲೇ! ಈ ಮಳೆಗಾಲ ನನ್ನ ಜೀವನದುದ್ದಕ್ಕೂ ಸಿಗಲಿ. ಹಂಗ ಇರತಿ ಅಲ್ವೋ?

ನಲ್ಮೆಯ ಸಂಗಾತಿಯೇ,
ಈಗಂತೂ ಎಲ್ಲಾ ಕಡೆ ಮಳೆ ಆರ್ಭಟ ಚಾಲೂ ಆಗೈತಿ. ಎಲ್ಲಿ ನೋಡದ್ರ ಹಚ್ಚಂದ ಹಸರ. ಬ್ಯಾಸಗ್ಯಾಗ ಒಣಗಿದ ಎಲ್ಲಾ ರೋಡ ಹಂತಲ್ಲೆ, ಗಿಡ ಮತ್ತ ಹುಲ್ಲು ಬೆಳದಾವ. ಬಾಡಿದ ಗಿಡಗಳಿಗೆ ಮಳೆ ನೀರ ತಾಗಿ, ಚಿಗರೊಡದಾವ.ಬಿಸಲ ಬಿಸಲ ಅಂದ, ಬರೀ ಸೆಕೆ ಕಂಡ ದೇಹಗಳಿಗೆ, ತಂಪಾದ, ನವಿರಾದ ಮಳೆಗಾಲದ ಗಾಳಿ ಹಿತಾ ನೀಡತೈತಿ. ಇದೆಲ್ಲಾ ಅಂದಾ ಚೆಂದ ಪ್ರಾಪಂಚಿಕ ಜಗತ್ತಿಗಾದ್ರ ನನಗ ಮಾತ್ರ ನೀ ಮಳೆಗಾಲ ನೋಡ.

ಮಳೆಗಾಲ ಅಂದದಕ್ಕ ಸೆಟಗೊಬ್ಯಾಡಲೇ. ಮಳಿ ಅಂದ್ರ ಒಂದ ಸಲ ಜಾಸ್ತಿ, ಒಂದ ಸಲ ಕಡಿಮಿ ಅನ್ನೋ ಆರೋಪಗಳು ಪ್ರತಿ ಮಳೆಗಾಲಕ್ಕೂ ಇರತದ. ಹಂಗ ಅಂದ ನಿನ್ನಲ್ಲಿ ದೋಷಾ ಹುಡುಕತಿಲ್ಲ ನಾ. ಆದ್ರ ಮನುಷ್ಯ ಸಹಜ ದೋಷಗೊಳ ಮಾತ್ರ ಪ್ರತಿ ಮನುಷ್ಯನಾಗ ಕಂಡ ಬರತಾವ. ಮತ್ತ ಅವು ಕಂಡ ಬರಲೇಬೇಕ. ಅಂದಾಗ ನಾವ್‌ ಮನಷ್ಯಾರ ಅನ್ನಸಿಕೊತೆವಿ. ಹೌದಲ್ಲೋ ಮತ್ತ? ಅತಿವೃಷ್ಟಿ, ಅನಾವೃಷ್ಟಿ ಹಂಗ, ಒಮ್ಮೆ ಸಿಟ್ಟ, ಜಗಳ, ವಾದಗಳ ಜೊತಿ ಅತೀಯಾದ ಪ್ರೀತಿನೂ ಇರತದ... ಅಲ್ಲೇನೋ?

ಒಮ್ಮೆ ಸಿಟ್ಟು, ಮತ್ತ ಜಗಳ ಮಾಡತಿ ಅನ್ನೊ ದೋಷ ಬದಿಗೊತ್ತಿದರ, ನನಗ ನಿನ್ನಲ್ಲಿ ಕಂಡ ಬರೋ ದೊಡ್ಡ ಗುಣಾನೇ ಸಕಾರಾತ್ಮಕತೆ. ಎನರ ಆಗಲಿ ಪಾಸಿಟಿವ್‌ ಥಿಂಕ್‌ ಮಾಡಬೇಕ; ಹೆದರಬಾರದ್‌. ಕಷ್ಟಗೊಳ ಮನುಷ್ಯಾರಿಗೆನ ಬರತಾವ, ಗಿಡಕಲ್ಲ. ಎದುರಿಸಬೇಕ, ಹೊಂದಿಕೊಂಡ ಹೋಗಬೇಕ ಎಂದ ಮ್ಯಾಲಿಂದ ಮ್ಯಾಲ ನನಗ ಆತ್ಮವಿಶ್ವಾಸ ತುಂಬತಿ. ಅಂದಕೊಂಡಿದ್ದ ಕೆಲಸಗಳು ಆಗದಿ¨ªಾಗ, ಕಾಯೋದ ಜಾಸ್ತಿಯಾಗಿ ಬೇಸರಿಸಿದಾಗ, ಜೀವನಾನ ಸಾಕಾಗೇತಿ ಅನ್ನುತ್ತಾ ದುಃಖ ತೊಡಕೊಂಡಾಗ, ನನ್ನ ಕಲ್ಪನೆನೂ ಮೀರಿ ಸಮಾಧಾನ ಹೇಳ. ಎಲ್ಲಾದಕ್ಕೂ ಒಂದ ವ್ಯಾಳಾ ಇರತದ, ಅದ ಕೂಡಿ ಬಂದಾಗನ ನಿನ್ನ ಕೆಲಸಾ ಆಗತಾವ, ಅಲ್ಲಿವರೆಗೂ ಸಮಾಧಾನದಿಂದ ಕಾಯಬೇಕ, ಎಲ್ಲಾನೂ ನಿತ್ರಾಟಿಲೇ ಆಗಬೇಕಂದ್ರ ಹೆಂಗ? ಸ್ವಲ್ಪ ತಡಕೊ, ಎಲ್ಲಾ ನೀ ಅನಕೊಂಡಂಗ ಆಗತೈತಿ. ಚಿಂತಿಯನ್ನ ನನ್ನ ತಲ್ಯಾಗಿಂದ ಒದ್ದ ಓಡಿಸಿದಾವ ನೀ.

ಎಲ್ಲರದೂ ಜೀವನಾ ದೇವ್ರ ಒಂದ ಥರಾ ಇಟ್ಟಿಲ್ಲ. ಎಲ್ಲಾ ಬ್ಯಾರೆ ಬ್ಯಾರೆ. ಹಾಗಂತ ಎಲ್ಲಾ ಸುಖಾನೂ ಇಲ್ಲ, ಎಲ್ಲಾ ದುಃಖಾನೂ ಇಲ್ಲ. ಬಂದದನ್ನ ಅನುಭವಿಸಬೇಕ. ಕಡ್ಡಾಯ ಅನ್ನೋ ಶಬ್ದ ಎಲ್ಲರಿಗೂ ಅನ್ವಯ ಆಗತದ ಅನ್ನೋದು, ದೇವರ ಕೊಟ್ಟ ಈ ಜೀವನದ ಪಾಠಸಾಲ್ಯಾಗ ಖರೆ ಆಗೇತಿ ನೋಡ. ಜೀವನ ಹೆಂಗ ಕರಕೊಂಡ ಹೋಗತೈತಿ, ಹಂಗ ಹೋಗುನು. ಯಾವದ ಕಾರಣಕ್ಕ ಜೀವನೋತ್ಸಾಹ ಕಳಕೊಬಾರದ ಅಂತ ಮನದಟ್ಟ ಆಗೇತಿ ನನಗ. ಈ ಪರಿಣಾಮಕ್ಕ ನೀನ ಕಾರಣ.

ಅದಕ್ಕ ನಿನಗ ನಾ ಅನ್ನತೇನಿ, ನೀ ನನ್ನ ಮಳೆಗಾಲ ಅಂತ. ನನ್ನ ಜೀವನದಾಗ ಹಸಿರ ತುಂಬಿದಾವ ನೀ. ಹೂ ಅರಳುವಾಂಗ ಮಾಡಿದಿ. ಈ ನನ್ನ ಮಳೆಗಾಲಕ್ಕ ಅತೀವೃಷ್ಟಿ, ಅನಾವೃಷ್ಟಿ ಆಗದಿರಲಿ ಅಂತಾ ದೇವರಲ್ಲಿ ಕೇಳಕೊತೀನಿ. ಏನೇ ಆದರೂ ಹಿತಮಿತವಾದ ಮಳೆಗಾಲ ನನ್ನ ಪಾಲಿಗಿರಲಿ. ಅಂಥಾ ಮಳೆಗಾಲ ನೀನಲೇ! ಈ ಮಳೆಗಾಲ ನನ್ನ ಜೀವನದುದ್ದಕ್ಕೂ ಸಿಗಲಿ. ಹಂಗ ಇರತಿ ಅಲ್ವೋ?
  
ಇಂತಿ ನಿನ್ನ 
ಪೂವು

ಮಾಲಾ ಮ. ಅಕ್ಕಿಶೆಟ್ಟಿ


Trending videos

Back to Top