CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಪ್ರಜೆ ಎಂಬ ಪದವೀಧರ

ಪ್ರಜೆಗಳು ಸದಾ ಕಿವಿ ಸೆಟೆದು ನಿಂತು ಸಕ್ರಿಯವಾಗಿ ಪಾಲ್ಗೊಂಡು ತಮ್ಮನ್ನು ಅದರಲ್ಲಿ ತೊಡಗಿಸಿಕೊಳ್ಳುವುದೇ ಪ್ರಜಾಪ್ರಭುತ್ವದ ಹೂರಣ. ಪ್ರಜೆಗಳೆಂದರೆ ಏನು, ಹೇಗಿರಬೇಕು ಎಂಬುದನ್ನು ಹೊಚ್ಚ ಹೊಸದಾಗಿ ಕಲ್ಪಿಸುತ್ತಾ ಇರಬೇಕು. ರಾಜಕೀಯಕ್ಕೆ ಸೇರುವುದೆಂದರೆ ಸಭ್ಯರಿಗೆ ಸಲ್ಲದ ವಿಷಯ ಎಂಬ ಹೇವರಿಕೆಯ ಮನೋಭಾವ ಹೋಗಬೇಕು. 

ಸಂವಿಧಾನದ ಸಾರ್ವಭೌಮತ್ವದ ಮೇಲುಗೈ, ಮಾನವನ ಮೂಲಭೂತ ಹಕ್ಕುಗಳು, ಆಯ್ಕೆ ಮಾಡಿದ ಧರ್ಮವನ್ನು ಅನುಸರಿಸುವ ಹಕ್ಕು, ವಾಕ್‌ ಸ್ವಾತಂತ್ರ್ಯ, ಸಭೆ ಸೇರುವ ಹಕ್ಕು, ಹಾಗೂ ಸ್ವತ್ಛಂದವಲ್ಲದ ಸ್ವಾಯತ್ತ ಸಂಪರ್ಕ ಮಾಧ್ಯಮಗಳು- ಇವೆಲ್ಲ ಪ್ರಜಾಪ್ರಭುತ್ವದ ಅಡಿಗಲ್ಲುಗಳು. ಪ್ರಜಾಪ್ರಭುತ್ವವನ್ನು ಜೋಪಾನವಾಗಿ ಕಾಯುವುದು ಉಡಿಯಲ್ಲಿ ಕೆಂಡವನ್ನು ಕಟ್ಟಿಕೊಂಡಂತೆ. ಪ್ರಜಾಪ್ರಭುತ್ವದ ಸಂಚಲನದಲ್ಲಿ ಎರಡು ಹೆಜ್ಜೆ ಮುಂದಿಟ್ಟಾಗ ಸರಕ್ಕನೆ ಒಂದು ಹೆಜ್ಜೆ ಹಿಂದೆ ಸರಿಯುವುದೂ ಇದೆ. ಅದು ಅನಿವಾರ್ಯವಾದರೂ ಮುಂಚಲನೆ ಇಲ್ಲದಿಲ್ಲ.

ಪ್ರಜಾಪ್ರಭುತ್ವ - ಹಲವು ಧ್ವನಿಗಳು
ಪ್ರಜಾಪ್ರಭುತ್ವವು ಜೀವಂತಿಕೆಯಿಂದಿರಲು ಕೆಲವೊಂದು ಸೂಕ್ಷ್ಮ ಆವಶ್ಯಕತೆಗಳಿವೆ. ಒಂದನೆಯದಾಗಿ, ಪ್ರಜಾಪ್ರಭುತ್ವವೆಂದರೆ ವಿವಿಧ ಧಾಟಿಯ ಚಿಂತನೆಗಳ, ನಂಬಿಕೆಗಳ, ಅಭಿಪ್ರಾಯಗಳ ನಿರಂತರ ತಿಕ್ಕಾಟ, ಆರೋಗ್ಯಕರ ಸಂವಾದ ಹಾಗೂ ವಾದವಿವಾದ. ರಾಜತ್ವದಲ್ಲಿ ಒಂದೇ ಧ್ವನಿ, ಇನ್ನಿತರ ಧ್ವನಿಗಳನ್ನು ಹೊಸಕಿ ಹಾಕಲಾಗುತ್ತದೆ. ಸಂವಿಧಾನ ಹಾಗೂ ಸಂವಿಧಾನಶಿಲ್ಪಿಗಳು ನಮಗಿತ್ತ ವರವೆಂದರೆ, ಪ್ರಜಾಪ್ರಭುತ್ವವು ನಾವು ನಮ್ಮ ವೈಯಕ್ತಿಕ ಗುರಿಗಳನ್ನು ಬೆವರು ಹಾಗೂ ಕನಸುಗಳ ಮೂಲಕ ಬೆನ್ನಟ್ಟುತ್ತಿರುವಾಗಲೇ ಈ ಗುರಿಗಳಿಗೆ ಹೆಗಲು ಹೊಸೆಯುತ್ತಾ ಸಮಷ್ಠಿಯ ಕನಸುಗಳನ್ನೂ ಇರಗೊಳಿಸಲು ಅವಿರತ ಪ್ರಯತ್ನವನ್ನು ಅಪೇಕ್ಷಿಸುತ್ತದೆ. 

ವೈಯಕ್ತಿಕ ಆಶೋತ್ತರಗಳು ಹಾಗೂ ಸಮಷ್ಟಿ ಕಲ್ಯಾಣ ಇವೆರಡರ ಸಮತೋಲನವೇ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬನೂ ರೂಢಿಸಿಕೊಳ್ಳಬೇಕಾದ ಕೌಶಲ. ಪ್ರಜಾ ಪ್ರಭುತ್ವವೆಂದರೆ ಚಿಂತನೆಗಳ ಸಂಘರ್ಷ. ಅಂದರೆ ವಿರೋಧಿಯೂ ಏನೋ ಸರಿಯಾದುದನ್ನೇ, ತರ್ಕಬದ್ಧವಾದುದನ್ನು ಹೇಳುತ್ತಿ ದ್ದಾನೆ ಎಂದು ಕಿವಿಗೊಡುವ ಸಂಯಮ. ಪ್ರಜಾಪ್ರಭುತ್ವಕ್ಕೆ ಏಕಾಭಿಪ್ರಾಯ, ಏಕರೂಪ, ಸರ್ವಸಮ್ಮತಿ ಅಗತ್ಯವಿಲ್ಲ. ಅದು ಏಕಶಿಲ್ಪ ವಲ್ಲ. ಪಕ್ಷಗಳು ಬಣಗಳಾಗಿ ಒಡೆಯುವುದು ಪ್ರಜಾಪ್ರಭುತ್ವಕ್ಕೆ ಅಪಶಕುನವಲ್ಲ, ಆಗಬೇಕಾದ್ದೇ! ಭಿನ್ನಾಭಿಪ್ರಾಯಗಳನ್ನು ಅಂಗೀಕ ರಿಸಿ ರಾಜಿ ಹೊಂದಾಣಿಕೆಯಲ್ಲಿ ನಿರತರಾಗುವುದೇ ಪ್ರಜಾಪ್ರಭು ತ್ವದ ತಿರುಳು. ನಿರಂತರ ಸಂಭಾಷಣೆ, ಸಂವಾದಗಳು ಅತ್ಯಗತ್ಯ. 

ಭಿನ್ನ ರೀತಿಯಲ್ಲಿ ಯೋಚಿಸುವ, ಮಾತಾಡುವ, ಪ್ರಾರ್ಥಿಸುವ ಜನರ ಬಗ್ಗೆ ಅಳುಕು, ಸಂಶಯಗಳು ಪ್ರಜಾಪ್ರಭುತ್ವದಲ್ಲಿ ಸಲ್ಲದು. ಭಿನ್ನರಾದ ಇತರರನ್ನು ಅರ್ಥಮಾಡಿಕೊಂಡು ಅವರ ದೃಷ್ಟಿ ಕೋನವನ್ನು ಆವಾಹನೆ ಮಾಡಿಕೊಂಡು ಅರಿಯುವುದು ಸೂಕ್ತ. ನಮ್ಮಂತೆ ಇರುವವರೊಂದಿಗೆ, ನಮ್ಮಂತೆ ಯೋಚಿಸುವವ ರೊಂದಿಗೆ, ನಾವು ಹೊರಳಾಡುವ ಪೂರ್ವಾಗ್ರಹಗಳಲ್ಲೇ ಹೊರಳಾಡುವವರೊಂದಿಗೆ, ನಮ್ಮ ದೃಷ್ಟಿಕೋನದವರೊಂದಿಗೆ, ನಮ್ಮ ತರ್ಕಗಳನ್ನು ಪ್ರಶ್ನಿಸದವರೊಂದಿಗೆ ಏಕಕೋಶಸ್ಥರಾಗಿ ಇರುವುದು ಸುರಕ್ಷಿತವೇನೋ ಹೌದು, ಆದರೆ ಪ್ರಜಾಪ್ರಭುತ್ವಕ್ಕೆ ಅದರಿಂದ ಹಾನಿಯಾಗುತ್ತದೆ. ಪೀಪೀ ಊದುತ್ತಿರುವವರ ರಾಗಕ್ಕೆ ನಮ್ಮದು ಬರೇ ಸುವ್ವಿ ಸುವ್ವಾಲೆ ಅಷ್ಟೇ ಎನ್ನುವುದು ಪ್ರಜಾಪ್ರಭುತ್ವಕ್ಕೆ ಸಲ್ಲದ ಅಂಶ. ಪ್ರಜಾಪ್ರಭುತ್ವವು ಮೇಳ ಸಂಗೀತ.

ಪ್ರಜಾಪ್ರಭುತ್ವ - ನಿರಂತರ ಕಟ್ಟೆಚ್ಚರ
ಎರಡನೆಯದಾಗಿ, ಪ್ರಜಾಪ್ರಭುತ್ವವನ್ನು ಜೀವಂತವಾಗಿರಿಸಲು ನಿರಂತರ ಕಟ್ಟೆಚ್ಚರ ಅತ್ಯಗತ್ಯ. ಸಮಾಜದಲ್ಲಿ ರಾಜಕೀಯವಲ್ಲದ್ದು ಯಾವುದೂ ಇಲ್ಲ. ಎಲ್ಲವೂ ಯಾವುದೋ ಸಿದ್ಧಾಂತದ ಒಳಸುಳಿ ಯಿರುವ ರಾಜಕೀಯವೇ. ವೋಟು ಚಲಾಯಿಸುವುದರ ಬಗ್ಗೆ, ಪ್ರತಿಭಟಿಸುವುದರ ಬಗ್ಗೆ, ನೆಟ್ಟಗೆ ನಿಂತು ಪ್ರಶ್ನಿಸುವ ಬಗ್ಗೆ ಬಿದ್ದು ಹೋಗದಿರುವುದು ಪ್ರಜಾಪ್ರಭುತ್ವಕ್ಕೆ ಸರಿಹೋಗದು. ಪ್ರಜಾಪ್ರಭುತ್ವವಿರುವುದೇ ಕಿವಿ ಸೆಟೆದು ನಿಂತು ಸಕ್ರಿಯವಾಗಿ ಪಾಲುಗೊಂಡು ತಮ್ಮನ್ನೇ ಅದರಲ್ಲಿ ತೊಡಗಿಸಿಕೊಳ್ಳುವುದರ ಮೂಲಕ. ಪ್ರಜೆಗಳೆಂದರೆ ಏನು, ಹೇಗಿರಬೇಕು ಎಂಬುದನ್ನು ಹೊಚ್ಚ ಹೊಸದಾಗಿ ಕಲ್ಪಿಸುತ್ತಾ ಇರಬೇಕು. ರಾಜಕೀಯಕ್ಕೆ ಸೇರುವುದೆಂದರೆ ಸಭ್ಯರಿಗೆ ಸಲ್ಲದ ವಿಷಯ ಎಂಬ ಹೇವರಿಕೆಯ ಮನೋಭಾವ ಹೋಗಬೇಕು. ಬಹುತೇಕ ಮಂದಿಗೆ ಇಂತಹ ನೇತ್ಯಾತ್ಮಕ ಚಿಂತನೆಯಿರುವ ಕಾರಣವಾಗಿ ರಾಜಕೀಯದಿಂದ ಸದೂರವನ್ನು ಸ್ಥಾಪಿಸುತ್ತಾರೆ. ಅಮ್ಮ ಮಗನಿಗೆ ಎಚ್ಚರಿಕೆ ಕೊಟ್ಟಂತೆ- "ಚೆನ್ನಾಗಿ ಕಲಿಯದೆ ಹೆಡ್ಡನಾದರೆ ನೀನು ಕಡೆಗೆ ಮಂತ್ರಿಯಾಗಬೇಕಾಗುತ್ತೆ ನೋಡು!' ರಾಜಕಾರಣಿಗಳು ದಪ್ಪ ಚರ್ಮದವರು ಎಂಬ ಪೂರ್ವಾಗ್ರಹವಿದೆ. ರೈನೊಸೊರಸ್‌ ಪ್ರಾಣಿಯ ಚರ್ಮ ಎರಡು ಅಡಿ ದಪ್ಪವಿದ್ದು ರಾಜಕೀಯಕ್ಕೆ ಹೇಳಿ ಮಾಡಿಸಿದ್ದಾದರೂ ಅದಕ್ಕೆ ರಾಜಕಾರಣದಲ್ಲಿ ಆಸಕ್ತಿಯೇ ಇಲ್ಲವಂತೆ. ನಿಜಕ್ಕೂ ವೇಸ್ಟ್‌! 

ರಾಜಕಾರಣವೆಂದರೆ ಬಹಳ ಖರ್ಚು, ಸೋತುಹೋಗಲೂ ತುಂಬಾ ಹಣ ಖರ್ಚು ಮಾಡಬೇಕು. ರಾಜಕೀಯವೆಂದರೆ ಕುರೂಪಿಗಳ ಸೌಂದರ್ಯ ಪ್ರದರ್ಶನ ಸ್ಪರ್ಧೆ ಎನ್ನುವುದೂ ಇದೆ. ಇದರೊಂದಿಗೆ ರಾಜ ಕಾರಣವೆಂದರೆ ಸುಳ್ಳುಗಳ ಸರಮಾಲೆಯೊಡನೆ ಚಕ್ಕಂದ ಎಂಬ ಮನೋಭಾವವಿದೆ. ರಾಜಕಾರಣಿಗಳ ಹೇಳಿಕೆಗಳೆಂದರೆ, ಹೇಳುತ್ತಾ ಹೇಳುತ್ತಾ ಏನನ್ನೂ ಹೇಳದಿರುವುದು. ಸತ್ಯ ಮತ್ತು ರಾಜಕೀಯ ಗಳು ಹೆಗಲೆಣೆಯಾಗಿ ಹೋಗುವುದಿಲ್ಲವೋ ಎಂಬಂತೆ ಇಂದಿನ ಪರಿಸ್ಥಿತಿ. ರಾಜಕೀಯ ಧುರೀಣರಿಗೆ ಸತ್ಯದ ಬಗ್ಗೆ ಬಿದ್ದು ಹೋಗಿಲ್ಲ, ಅವರಿಗೆ ಬೇಕಾದುದು ಅಧಿಕಾರವನ್ನು ತಮ್ಮೊಡನೆ ಜೋಪಾನವಾಗಿ ಇರಿಸುವುದು. ಪ್ರಜೆಗಳು ಅಜ್ಞಾನದಲ್ಲೋ ತಟಸ್ಥರಾಗಿಯೋ ಬಿದ್ದುಹೋಗದವರಂತೆ ಇರುವುದೇ ರಾಜಕಾರಣಿಗಳಿಗೆ ಬೇಕಾ ದದ್ದು. ಗಾಂಧೀಜಿಯವರಿಗೆ ಸುಳ್ಳು ಹೇಳಲು ಗೊತ್ತಿರಲಿಲ್ಲ, ಪುಢಾರಿಗಳಿಗೆ ಸತ್ಯ ಹೇಳಲು ಗೊತ್ತಿಲ್ಲ. ರಾಜಕಾರಣಿಗಳಿಗೆ ಅವುಗಳ ನಡುವಣ ವ್ಯತ್ಯಾಸ ಗೊತ್ತಿಲ್ಲ.

ಅಧಿಕಾರ ಹಸ್ತಾಂತರವೆಂಬ ದೊಡ್ಡ ಗುಣ
ಅಧಿಕಾರ ಹಸ್ತಾಂತರವು ರಾಜತ್ವದಲ್ಲಿ ಹುಡುಕಿದರೂ ಸಿಗದ, ಆದರೆ ಪ್ರಜಾಪ್ರಭುತ್ವದ ಮಹಾ ಲಕ್ಷಣವಾಗಿದ್ದು ಹೆಮ್ಮೆಯಿಂದ ಬೀಗಬೇಕಾದ ವಿಚಾರ. ಕುರ್ಚಿಗೆ ಅಂಟಿ ನಿಲ್ಲುವುದು ಪ್ರಜಾ ಪ್ರಭುತ್ವಕ್ಕೆ ಮಾರಕ. ಸಿದ್ಧ ಸಂಪ್ರದಾಯಗಳನ್ನೇ ನೆಚ್ಚಿಕೊಂಡು ಅದರಲ್ಲೇ ಹೊರಳಾಡಿಕೊಂಡು ಹಪಹಪಿಸುವವರಿಗೆ ಪ್ರಜಾ ಪ್ರಭುತ್ವವೆಂಬುದು ಹೇಳಿ ಮಾಡಿಸಿದ್ದಲ್ಲ. ಪ್ರಜಾಪ್ರಭುತ್ವವೆಂದರೆ ಸುಲಲಿತವಾದ ಅಧಿಕಾರ ವರ್ಗಾವಣೆ. ಅಧಿಕಾರವು ತನ್ನ ಮನೆತನದಲ್ಲೇ ಉಳಿಯಬೇಕು, ತನ್ನಂತೆ ತನ್ನ ಮಗನೂ ಚುನಾಯಿತನಾಗಿ ಅಧಿವೇಶನದಲ್ಲಿ ಕೂತು ತೂಕಡಿಸಬೇಕು ಎಂಬ ತುರಿಕೆಯಿಲ್ಲ. ರಾಜಕೀಯ ಮುತ್ಸದ್ದಿಗಳು, ತಮ್ಮ ಅಧಿಕಾರಾವಧಿ ಮುಗಿಯಿತೋ, ಇನ್ನೂ ಇಲ್ಲೇ ಗೂಡು ಕಟ್ಟಿ ತಂಗಬೇಕು ಎಂದು ಆಶಿಸದೆ, ತುದಿಗಾಲಿನಲ್ಲಿ ನಿಂತು ಅನಂತರ ತಣ್ಣಗೆ ಮನೆ ಸೇರುತ್ತಾರೆ. ಅಧಿಕಾರಾವಧಿ ಮುಗಿದ ಮೇಲೆ ಪುನಃ ಸಾಮಾನ್ಯ ಪ್ರಜೆಯಾಗುವುದೇ ರಾಜತ್ವಕ್ಕೂ ಪ್ರಜಾಪ್ರಭುತ್ವಕ್ಕೂ ಇರುವ ಮುಖ್ಯ ವ್ಯತ್ಯಾಸ. ರಾಜತ್ವದಲ್ಲಿ ಕಾಣಸಿಗದ ಪ್ರಜಾಪ್ರಭುತ್ವದಲ್ಲಿ ನಿಚ್ಚಳವಾಗಿರಬೇಕಾದ ಅಂಶವೆಂದರೆ, ಪ್ರಜೆಗೆ ತಾನು ಹೀರೋ, ಪದವೀಧರ ಎಂದು ಅನ್ನಿಸಬೇಕು. ರಾಜತ್ವದಲ್ಲಿ ಅರಸನು ಮಾತ್ರ ಹೀರೋ ಆಗಲು ಸಾಧ್ಯ, ರಾಜನು ರಣರಂಗದತ್ತ ಕಣ್ಣೆತ್ತಿ ನೋಡದೆಯೇ, ರಣರಂಗ ಪ್ರಚಂಡ ಮಾರ್ತಾಂಡ, ಮೂರು ಲೋಕದ ಗಂಡನಾಗಲು ರಾಜತ್ವದಲ್ಲಿ ಮಾತ್ರ ಸಾಧ್ಯ. 

ಅನುದಿನದ ವ್ಯವಹಾರಗಳಲ್ಲಿ ಪ್ರಜೆಯೇ ಹೀರೋ ಆಗಿರುವ ಒಂದು ಲಕ್ಷಣವೆಂದರೆ ರಸ್ತೆಯನ್ನು ದಾಟುತ್ತಿರುವಾಗ ಕಾರನ್ನು ನಿಲ್ಲಿಸಿ, ಪಾದಚಾರಿಯು ದಾಟುವಂತೆ ಅವಕಾಶ ಕೊಡುವುದು, ಕಡತಗಳ ವಿಲೇವಾರಿ ತ್ವರಿತವಾಗಿ ಸಾಗುವುದು. ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಒಬಾಮ ಅವರ ಕೊನೆಯ ಭಾಷಣದಲ್ಲಿ ತನ್ನ ಪತ್ನಿ ಮಿಶೆಲ್‌ ಬಗ್ಗೆ ಹೇಳಿದ್ದು- "ಮಿಶೆಲ್‌ ಇಪ್ಪತೈದು ವರ್ಷಗಳ ಕಾಲ ನನ್ನ ಹೆಂಡತಿಯಾಗಿ, ನಮ್ಮಿಬ್ಬರ ಎರಡು ಮಕ್ಕಳ ತಾಯಿಯಾಗಿ, ನನ್ನ ಆತ್ಮೀಯ ಗೆಳತಿಯಾಗಿದ್ದಾಳೆ, ಅವಳಿಗೆ ನಾನು ಕೃತಜ್ಞ'. ಹೆಂಡತಿಯನ್ನು ಮುನ್ನೆಲೆಗೆ ತರುವ ಇದು ಪ್ರಜಾಪ್ರಭುತ್ವದ ಆಪೂಟ್‌ ಚಿಂತನಾ ವೈಖರಿ. 
ಪ್ರಜಾಪ್ರಭುತ್ವದ ಬಗ್ಗೆ ಅವಿರತ ಜೋಕೆ, ಸಂವಿಧಾನಕ್ಕೆ ಬದ್ಧತೆ ಇಲ್ಲದಿದ್ದಲ್ಲಿ ಅದಕ್ಕೆ ಭ್ರಷ್ಟಾಚಾರದ ಗೆದ್ದಲು ಹಿಡಿಯುತ್ತದೆ. ಒಂದು ಜೋಕ್‌ ಜಾಲತಾಣಗಳಲ್ಲಿ ಹರಿದಾಡುತ್ತಿದೆ- ಡೊನಾಲ್ಡ್‌ ಟ್ರಂಪ್‌, ಅಮೆರಿಕದ ಅಧ್ಯಕ್ಷ ತನ್ನ ಅಧಿಕೃತ ನಿವಾಸವಾದ ಶ್ವೇತಭವನಕ್ಕೆ ಪೈಂಟ್‌ ಹೊಡಿಸಲೆಂದು ಟೆಂಡರ್‌ ಕರೆದನಂತೆ. ಚೀನದವನು ಅಂದಾಜು ಖರ್ಚು ಮೂರು ಕೋಟಿ ಎಂದೂ, ಫ್ರೆಂಚ್‌ನವನು ಏಳು ಕೋಟಿ ಎಂದೂ, ಇಂಡಿಯಾದವನು ಹನ್ನೊಂದು ಕೋಟಿ ಎಂಬ ತಮ್ಮ ಬೇಡಿಕೆಯನ್ನು ಮುಂದಿಟ್ಟರು. ಚೀನದವನ ವಿವರಣೆಯ ಪ್ರಕಾರ, ಒಂದು ಕೋಟಿ ಪೈಂಟಿಗೆ, ಒಂದು ಕೋಟಿ ಕೆಲಸದವರಿಗೆ, ಒಂದು ಕೋಟಿ ತನ್ನ ಲಾಭ, ಒಟ್ಟು ಮೂರು ಕೋಟಿ. ಅದರಂತೆ ಫ್ರೆಂಚ್‌ನವನು- ಮೂರು ಕೋಟಿ ಪೈಂಟಿಗೆ, ಎರಡು ಕೋಟಿ ಕೆಲಸದವರ ಸಂಬಳ, ಎರಡು ಕೋಟಿ ನನ್ನ ಲಾಭ, ಒಟ್ಟು ಏಳು ಕೋಟಿ. ಕೊನೆಗೆ ಇಂಡಿಯಾದವನ ಬೇಡಿಕೆ. ಅವನು ಅಧ್ಯಕ್ಷನನ್ನು "ಸ್ವಲ್ಪ ಇತ್ತ ಬನ್ನಿ, ಗುಟ್ಟಿನಲ್ಲಿ ಮಾತಾಡಬೇಕು' ಎಂದುಕೊಂಡು ಪಿಸುನುಡಿಯಲ್ಲಿ ಇಂತೆಂದ- "ನನ್ನದು ಸರಳ ಲೆಕ್ಕಾಚಾರ, ಹನ್ನೊಂದು ಕೋಟಿಯಲ್ಲಿ ನಿಮಗೆ ನಾಲ್ಕು ಕೋಟಿ, ನಾಲ್ಕು ಕೋಟಿ ನನಗೆ, ಆ ಚೀನದವನಿಗೆ ಮೂರು ಕೋಟಿ ಬಿಸಾಡಿ ಅವನಿಂದಲೇ ಪೈಟಿಂಗ್‌ ಮಾಡಿಸುತ್ತೇನೆ, ಮಂಡೆಬಿಸಿಯಿಲ್ಲ, ನಿಮ್ಮ ಕೆಲಸ ಮುಗಿಯಿತು ಎಂದೇ ಅಂದೊRಳ್ಳಿ'.

- ಫಾ| ಪ್ರಶಾಂತ್‌ ಮಾಡ್ತ

Back to Top