CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮಕ್ಕಳಲ್ಲಿ ಕೋಂಬ್ಲೆತನದ ಗೀಳು; ವಿಪರೀತ ಅಕ್ಕರೆಯ ಫ‌ಲ "ಜರೂರಿ ಜನಾಂಗ'

ತಂದೆತಾಯಂದಿರ ವಿಪರೀತ ಪ್ರೀತಿಯಲ್ಲಿ ಬೆಳೆದ ಮಕ್ಕಳಿಗೆ ಮುಂದೆ ಬೆಳೆದಾಗಲೂ ಪರಿಪಕ್ವ ವ್ಯಕ್ತಿತ್ವದ ಲಕ್ಷಣಗಳಾದ ಕೊಡು-ಕೊಳುವಿಕೆ, ಹೊಂದಿಕೊಳ್ಳುವ ಸ್ವಭಾವ, ತಾಳ್ಮೆ ಕಡಿಮೆ. ಇಂತಹ ಮಗುವಿಗೆ ಸಮಾಜದ ಬೇಡಿಕೆಗಳಿಗೆ, ಶಿಸ್ತಿಗೆ ಒಗ್ಗಿಹೋಗಲು ಕಷ್ಟವಾಗುತ್ತದೆ. ಆದ್ದರಿಂದಲೇ ಸಣ್ಣ ಸಣ್ಣ ಸಮಸ್ಯೆಗೆಲ್ಲ ಆತ್ಮಹತ್ಯೆ.

ಕೋಂಬ್ಲೆತನ‌ವೆಂದರೆ ಅತಿರೇಕ ಕೋಮಲತೆಯಿಂದ ಮಕ್ಕಳನ್ನು ಮುದ್ದು ಮಾಡಿ ಲಾಲನೆಪಾಲನೆಯಲ್ಲಿ ತೊಡಗುವುದು.ಮಕ್ಕಳನ್ನು ನಾಜೂಕಿನಿಂದ ರಾಜಕುಮಾರ- ರಾಜಕುವರಿಯಂತೆ ಆರೈಕೆ ಮಾಡುವುದು.ಇಂತಹ ಅತಿರೇಕ ಓಲೈಕೆಯ ಆರೈಕೆಯು ಮಕ್ಕಳಲ್ಲಿ ಹಾಗೂ ಸಮಾಜದಲ್ಲಿ ಕೆಲವೊಂದು ಸಮಸ್ಯೆಗಳನ್ನು ಇರಗೊಳಿಸುತ್ತದೆ. ಮಕ್ಕಳಿರಲವ್ವಾ ಮನೆ ತುಂಬಾ ಎಂಬ ಸ್ಲೋಗನ್ನಿನಿಂದ ಹಿಡಿದು, ಮನೆಗೆ ಮೂರು ಮಕ್ಕಳು, ಅನಂತರ ಆರತಿಗೊಬ್ಬಳು, ಕೀರ್ತಿಗೊಬ್ಬ, ಅನಂತರ ಎರಡು ಬೇಕು ಒಂದು ಸಾಕು. ಇಂದು ಮನೆಗೊಂದು ಮಗು, ಹಿತ್ತಿಲಿಗೊಂದು ಮರ, ಹಾದಿಗೊಂದು ದೀಪ, ಬೀದಿಗೊಂದು ಪಾಪು ಎಂದಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಗಲ್ಲಿಗೊಂದೇ ಮಗು ಎಂಬ ಪರಿಸ್ಥಿತಿ. ಮಕ್ಕಳಿದ್ದರೆ ಮುಂದೆ ಅದು ವಿವಾಹ ವಿಘಟನೆಯನ್ನು ಕಷ್ಟಗೊಳಿಸುತ್ತದೆ ಎಂಬ ಕಾರಣವಿರಬಹುದು. 

ಒಂದು ವೇಳೆ ಪರಮೋಶದಿಂದ ಇಬ್ಬರು ಹುಟ್ಟಿದರೂ ಅವಕ್ಕೆ "ಅಪ್ಪಿ-ತಪ್ಪಿ' ಎಂದು ಹೆಸರು ಕೊಡುತ್ತಾರೆ.ಇಂದು ನಗರ ಪ್ರದೇಶಗಳಲ್ಲಿ ದಂಪತಿಕೇಂದ್ರಿತ ಕುಟುಂಬ ಪರಿಕಲ್ಪನೆಯಿದೆ. ನಾವಿಬ್ಬರು ಸಾಕು, ಮಕ್ಕಳೇ ಬೇಡ ಎಂಬ ಅಭಿಮತ. ಅವಿಭಕ್ತ ಕುಟುಂಬದ ಕೃಷಿಯೇ ಏಕೈಕ ಆರ್ಥಿಕ ವ್ಯವಸ್ಥೆಯಲ್ಲಿ ಹೆಚ್ಚು ಮಕ್ಕಳು, ಅದರಲ್ಲೂ ಗಂಡು ಮಕ್ಕಳಿದ್ದರೆ ಹೊಲದಲ್ಲಿ ಕೆಲಸ ಮಾಡಲು ಹೆಚ್ಚು ಕೈಗಳು, ಹೆಚ್ಚು ಮಕ್ಕಳಿರುವುದು ಆರ್ಥಿಕವಾಗಿ ಲಾಭ, ಹೊರಗಿನವರಿಗೆ ದಿನಗೂಲಿ ಕೊಡಬೇಕಾಗಿಲ್ಲ. 

ಹೆಚ್ಚು ಮಕ್ಕಳಿರುವುದೇ ಗಂಡಸಿಗೆ ತಾಕತ್ತು, ಹೆಮ್ಮೆಗಳ ವಿಷಯವಾಗಿತ್ತು. ಮಕ್ಕಳಿಲ್ಲದಿರುವುದು ಹೆಂಗಸಿಗೆ ಮುಖ ಮರೆಸಿಕೊಳ್ಳುವ ಸಂಗತಿಯಾಗಿತ್ತು. ಒಬ್ಬನಿಗೆ ಮಕ್ಕಳಿಲ್ಲ, ಇನ್ನೊಬ್ಬನಿಗೆ ಒಂಬತ್ತು. ಒಬ್ಬನಿಗೆ ಸಂತಾನವಿಲ್ಲ, ಇನ್ನೊಬ್ಬನಿಗೆ ನಿಯಂತ್ರಣವಿಲ್ಲವೆಂಬಂತೆ. ಇಂದು ಮದುವೆಯಾದರೂ ನಳನಳಿಸುವ ತಾರುಣ್ಯವನ್ನು ಉಳಿಸಿಕೊಳ್ಳುವುದು ಪ್ರಮುಖ ಕಾಳಜಿಯಾದ ಕಾರಣವಾಗಿ ಹತ್ತಾರು ಮಕ್ಕಳನ್ನು ಹೆತ್ತರೆ ತಮ್ಮ ಯೌವ್ವನ ಸುಕ್ಕುಗಟ್ಟಬಹುದು ಎಂಬ ತಲ್ಲಣದಿಂದಾಗಿ ಮಕ್ಕಳನ್ನು ಹೆರಲು ಹಿಂದೆಮುಂದೆ ನೋಡುವುದಿದೆ. 

ಅಪ್ಪ ಕೇಂದ್ರಿತ ಕುಟುಂಬ.
ಹಿಂದಿನ ಕಾಲದಲ್ಲಿ ಹಲವು ಮಕ್ಕಳು ಇದ್ದಾಗ, ಮಕ್ಕಳು ತಮ್ಮಷ್ಟಕ್ಕೆ ಹಿತ್ತಿಲಿನಲ್ಲಿ ಆಟವಾಡುತ್ತಿದ್ದರು, ಮರವನ್ನೇರಿ ಕೋತಿಯಾಟ, ಮನೆಯಾಟ ಆಡುತ್ತಿದ್ದರು. ಅಪ್ಪ-ಅಮ್ಮ ತಮ್ಮಷ್ಟಕ್ಕೆ ಕೆಲಸದಲ್ಲಿ ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು.ಮಕ್ಕಳನ್ನು ಎಲ್ಲಿಡಬೇಕೋ ಅಲ್ಲಿಡುತ್ತಿದ್ದರು. ಅಪ್ಪನೇ ಕುಟುಂಬದ ಕೇಂದ್ರವಾಗಿ ಅವನ ಸುತ್ತು ಎಲ್ಲವೂ ಗಿರಕಿ ಹೊಡೆಯಬೇಕು. ಮಗು ಅನ್ನದ ತುತ್ತು ತಿನ್ನುವಂತೆ ಪುಸಲಾಯಿಸಲು- "ಇದು ಅಮ್ಮನ ತುತ್ತು, ಇದು ಅಪ್ಪನ ತುತ್ತು, ಇದು ದೇವರ ತುತ್ತು' ಎಂದು ತಿನ್ನಿಸುವುದಿತ್ತು. ಇಂದು ಮಕ್ಕಳು ಟಿವಿಯಲ್ಲಿ ಕಾಣಿಸಿದ್ದನ್ನು ಮಾತ್ರ ಆಹಾರವೆಂದು ಭಾವಿಸುತ್ತಾರೆ. ಮನೆಯಲ್ಲಿ ಅಜ್ಜನ ಕುರ್ಚಿ ಅಜ್ಜನಿಗೆ ಮಾತ್ರ ಮೀಸಲು. ಅಪ್ಪ ಅಧಿಕಾರಕ್ಕೆ ಬಂದಾಗ ಮಕ್ಕಳು ಕುರ್ಚಿಯಲ್ಲಿ ಕೂರಬಹುದು. 

ಆದರೆ ಅಪ್ಪ ಬಂದನೋ, ಕೂಡಲೇ ಆ ಕುರ್ಚಿ ಖಾಲಿ ಮಾಡಬೇಕು. ಇಂದು ಹಾಗೇನಿಲ್ಲ. ಅಪ್ಪ ಬಂದರೂ ಕ್ಯಾರೇ ಇಲ್ಲ. ಅದೇ ರೀತಿ ಪೇಪರ್‌, ಮೊದಲು ಅಪ್ಪ ಓದುವುದು, ಅನಂತರ ಇತರರು. ಮನೆಯೊಳಗೆ ಲೂಟಿ ಮಾಡಬೇಡಿ, ಹೊರಗೆ ಹೋಗಿ ಲಾಗ ಹೊಡೆಯಿರಿ, ಅಪ್ಪ ಸುಸ್ತಾಗಿ ಮಲಗಿದ್ದಾರೆ ಎನ್ನುವುದಿತ್ತು. ಇಂದು ಕುಟುಂಬದ ಆಗುಹೋಗುಗಳೆಲ್ಲ ಒಂದೇ ಮಗುವಿನ ಸುತ್ತ. ಇಂದು ಮಗುವಿನ ಆರಾಧನೆಯ ಭಕ್ತಿ, ಹಿಂದಿನ ಕಾಲದಲ್ಲಿ ತಲೆಮಾಸಿದ ಹಿರಿಯರ ಬಗ್ಗೆ ಭಕ್ತಿಭಾವ. ಹಿರಿಯರ ಆರೈಕೆ ಮನೆಯೊಡತಿಯ ಆದ್ಯ ಕರ್ತವ್ಯವಾಗಿತ್ತು. ಈಗ ಈ ಅವಲಂಬಿತ ಹಿರಿಯರ ಯೋಗಕ್ಷೇಮವನ್ನು ಸಂಸ್ಥೆಗಳಿಗೆ ಜಾರಿಸಲಾಗಿದೆ.

ಮಗು ಕೇಂದ್ರಿತ ಕುಟುಂಬಗಳು
ಮಗುವನ್ನು ಕುಸುಮಕೋಮಲವೆಂಬಂತೆ ಆರೈಕೆ ಮಾಡುವುದನ್ನು ಕೋಂಬ್ಲೆತನವೆನ್ನುತ್ತಾರೆ. ಮಗು ರಾಜಕುಮಾರನೋ ಎಂಬಂತೆ ಅದರ ಪರಿಚಾರಿಕೆ ನಡೆಸುವ ವಿದ್ಯಮಾನವು ನಗರಪ್ರದೇಶಕ್ಕೆ ಹೆಚ್ಚು ಸೀಮಿತ. ಒಂದು ಮಗು ಅಥವಾ ಒಬ್ಬಿಬ್ಬರು ಮಕ್ಕಳು ಮಾತ್ರ ಇರುವುದರಿಂದಾಗಿ ಅಪ್ಪಅಮ್ಮಂದಿರು ಮಕ್ಕಳನ್ನು ತಮ್ಮ ಕಣ್ಣಲ್ಲಿಟ್ಟು ಓಲೈಕೆ ಮಾಡುತ್ತಾರೆ.ಅಪ್ಪ ಅಮ್ಮಂದಿರೊಂದಿಗೆ ಅಜ್ಜಿ ಅಜ್ಜಂದಿರೂ, ಅಂದರೆ ಒಟ್ಟು ಆರು ಮಂದಿ, ತಾಮುಂದು ನಾಮುಂದು ಎಂದು ಚಾಕರಿಯಲ್ಲಿ ತೊಡಗುತ್ತಾರೆ. 

ಸಾಮಾನ್ಯವಾಗಿ ಅಪ್ಪ-ಅಮ್ಮ ಇಬ್ಬರೂ ಉದ್ಯೋಗಸ್ಥರಾಗಿರುವುದರಿಂದಾಗಿ ಕುಟುಂಬದ ಆರ್ಥಿಕ ಸ್ಥಿತಿಯು ಸುಧಾರಿಸಿದೆ. ಅಲ್ಲದೆ ತಾವು ಚಿಕ್ಕವರಿದ್ದಾಗ ತಮಗೆ ಸಿಗದ ಸವಲತ್ತುಗಳು ಮಗುವಿಗೆ ಸಿಗಲಿ ಎಂಬ ಹಂಬಲ. ಹೆಂಡತಿಯೂ ಉದ್ಯೋಗಸ್ಥೆಯಾಗಿರುವ ಕಾರಣವಾಗಿ ಆರ್ಥಿಕ ಆದಾಯವು ದ್ವಿಗುಣವಾದರೂ, ಪುನಃಪುನಃ ಪ್ರಸೂತಿಗೆ ಅವಕಾಶ ಕಡಿಮೆ. ಮಗು ಒಂದು ಕೇಳಿದರೆ ಹತ್ತು ಒದಗಿಸಿ ಮಗುವಿನ ಬೇಡಿಕೆಗಳನ್ನೆಲ್ಲ ಉಠಾಉಠಿ ಪೂರೈಸುವುದಿದೆ. ಒಂದೇ ಮಗುವಾದ ಕಾರಣವಾಗಿ ಮಗುವನ್ನು ಪ್ರದರ್ಶನಕ್ಕಿಡುವ ಬೊಂಬೆಯಂತೆ ಉಡುಗೆ ತೊಡುಗೆಗಳು. ಆದುದರಿಂದಲೇ ಮಕ್ಕಳ ಬಟ್ಟೆಬರೆ ಗೊಂಬೆಗಳಿಗಾಗಿಯೇ ಮೀಸಲಿಟ್ಟ ಶಾಪುಗಳು ತಲೆಯೆತ್ತಿವೆ. ಒಂದೇ ಮಗುವಿರುವ ಈ ದಿನಗಳಲ್ಲಿ ಕಣ್ಣರಳಿಸಿ ಬೈಯುವುದನ್ನು ತಂದೆತಾಯಿಗಳು ಮರೆತುಬಿಟ್ಟಿದ್ದಾರೆ. ಬೆಳೆದಾಗಲೂ ತನ್ನ ಮಕ್ಕಳು ಈಗ ಮಕ್ಕಳಲ್ಲ ಎಂದು ತಾಯಿ ಗ್ರಹಿಸುವುದೇ ಇಲ್ಲ.

ದಿಢೀರ್‌ ಸಾಧನೆಯ ಹಪಹಪಿಕೆ 
ಇಂತಹ ರಾಜಕುಮಾರನಂತಹ ಲಾಲನೆಪಾಲನೆಯು ಮುಂದೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಬಹುದು. ತಂದೆತಾಯಿಗಳಂತೆಯೇ ಹೆಂಡತಿಯಿಂದಲೂ ಪೂರ್ಣಗಮನವನ್ನೂ ನಿರಂತರ ಚಾಕರಿಯನ್ನೂ ನಿರೀಕ್ಷಿಸಿದಲ್ಲಿ ವೈವಾಹಿಕ ತಿಕ್ಕಾಟಗಳು ಗ್ಯಾರಂಟಿ. ಇದರೊಂದಿಗೆ ಇಂತಹ ರಾಜಕುಮಾರರು ಅಪ್ಪ-ಅಮ್ಮನ ಉತ್ಪ್ರೇಕ್ಷಿತ ನಿರೀಕ್ಷೆಗಳಿಗೆ ಬಲಿಪಶುವಾಗುತ್ತಾರೆ. ತಮಗೆ ಚಿಕ್ಕಂದಿನಲ್ಲಿ ದಕ್ಕದ ಅವಕಾಶಗಳನ್ನು ತಮ್ಮ ಮಗ-ಮಗಳು ಪಡೆಯಬೇಕೆಂಬ ತವಕದಲ್ಲಿ, ಅವರು ದಿಢೀರನೆ ಬಹಳಷ್ಟು ಸಾಧಿಸಬೇಕೆಂದೂ ತೊಂಬತ್ತೆಂಟು ಶೇಕಡಾ ಅಂಕಗಳನ್ನು ಗಳಿಸಲೇಬೇಕೆಂದೂ, ಅದರೊಂದಿಗೆ ಮುಂದೆ ಅಮೆರಿಕಕ್ಕೆ ಹಾರುವ ನಿಟ್ಟಿನಲ್ಲಿ ಈಗಲೇ ಭರತನಾಟ್ಯ, ಗಿಟಾರ್‌, ಕರಾಟೆ, ಟೆನ್ನಿಸ್‌ ಹಾಗೂ ಪತಂಜಲಿ ಯೋಗದಲ್ಲಿ  ಆಗಿ ಪಾರಂಗತರಾಗಬೇಕೆಂದೂ, ಇವಕ್ಕೆಲ್ಲ ಕಳಶವಿಟ್ಟಂತೆ ಟ್ಯೂಷನ್‌ಗೆ ಒತ್ತುಕೊಡುವ ದುಬಾರಿ ಸ್ಕೂಲ್‌ಗ‌ಳಿಗೆ ಜೀತದಾಳುಗಳಾಗಿ ಭರ್ತಿಯಾಗಬೇಕೆಂದೂ ಅಭೀಪ್ಸೆ. ಈ ಮೂಲಕ ಮಕ್ಕಳಿಗೆ ಆಟದ ವಯಸ್ಸು ಎಂಬ ವಯೋಮಾನವೇ ಇಲ್ಲದಾಗಿದೆ.  ಭೂಮಿ ಸೂರ್ಯನಿಗೆ ಸುತ್ತು ಹಾಕಿದಂತೆ ಅಪ್ಪ-ಅಮ್ಮಂದಿರು ಮಕ್ಕಳಿಗೆ ಸುತ್ತು ಹಾಕುತ್ತಾ ಇರುತ್ತಾರೆ. ಅಪ್ಪ-ಅಮ್ಮನಿಗೆ ತಮ್ಮದೇ ಏಕಾಂತವಿಲ್ಲದೆ ಹೋಗಿದೆ. ತಮ್ಮ ಮಗುವನ್ನು ಶಂಖ ಜಾಗಟೆಗಳೊಂದಿಗೆ ಹೊಗಳುತ್ತಾ, ಮಗುವಿನ ಚಿಟಿಕೆಯ ಚಿಹ್ನೆಯೇ ಪರಮಾಜ್ಞೆ ಎಂಬ ಮನೋಭಾವ ಕಂಡುಬರುತ್ತದೆ. ತಮ್ಮ ಎಲ್ಲ ಅಗತ್ಯಗಳನ್ನು ಜರೂರಿಯಿಂದ ಪೂರೈಸುವುದು ಹಿರಿಯರ ಮೇಲೆ ಮಕ್ಕಳ ನಿಯಂತ್ರಣವನ್ನು ಪುಗ್ಗೆಯಂತೆ ಊದಿಬಿಡುತ್ತದೆ.
 
ರಾಜಕುಮಾರ ವಿದ್ಯಮಾನದ ಪರಿಣಾಮಗಳು
ಮಕ್ಕಳನ್ನು ಕೊಂಬ್ಲೆತನದಿಂದ ಉಪಚರಿಸಿ, ಅಪ್ಪ-ಅಮ್ಮಂದಿರು ಮಗುವಿನ ಪರಿಚಾರಿಕೆಯರಾಗಿರುವ ಕೌಟುಂಬಿಕ ಹಾಗೂ ಸಾಮಾಜಿಕ ವಿದ್ಯಮಾನದ ಫ‌ಲವೇ ಪ್ರಚಲಿತ, "ಜರೂರಿ ಜನಾಂಗ', ಅಂದರೆ ಎಲ್ಲವೂ ಈಗಿಂದೀಗ ರೆಪ್ಪೆ ಮಿಟುಕುವಷ್ಟರಲ್ಲಿ ಫ‌ಟಾಫ‌ಟ್‌ ಸಿಗಬೇಕು. ಇಂತಹ ಮಕ್ಕಳಿಗೆ ಮುಂದೆ ಬೆಳೆದಾಗಲೂ ಪರಿಪಕ್ವ ವ್ಯಕ್ತಿತ್ವದ ಲಕ್ಷಣಗಳಾದ ಕೊಡು-ಕೊಳ್ಳುವಿಕೆ, ಒಗ್ಗಿಕೊಳ್ಳುವಿಕೆ, ತಾಳ್ಮೆಗಳು ಕಡಿಮೆ. ಎಲ್ಲವೂ ಚಕಚಕನೆ ಆಗಬೇಕು, ಜಳಕ್ಕನೆ ದೊರೆಯಬೇಕು.ಇತರರು ತನಗೆ ಗಮನ ಕೊಟ್ಟು, ತನಗೆ ಮನೋರಂಜನೆಯನ್ನು ಒದಗಿಸಿ ತಮ್ಮ ಜೀವನ ಸಾರ್ಥಕ್ಯವನ್ನು ಪಡೆಯಬೇಕು. ಬೊಂಬೆಗಳೆಲ್ಲ ನನ್ನದು, ನನ್ನದೆಂದು ಭಾವಿಸಿದ್ದೆಲ್ಲ ನನ್ನದು, ಬೊಂಬೆಯನ್ನು ನಾನು ಮೊದಲು ನೋಡಿದ್ದು, ಆದುದರಿಂದ ನನ್ನದು, ಒಡೆದು ಹೋಗಿದ್ದರೆ ಅದು ನಿನ್ನದು, ನಾನು ಒಡೆದಿದ್ದರೆ ಅದು ನಿನ್ನತಪ್ಪು, ನಾನು ಸಿಕ್ಕಾಪಟ್ಟೆಗೊಳಿಸಿದ್ದನ್ನು ನೀನು ಓರಣವಾಗಿಡಬೇಕು. ಮಗುವನ್ನು ಸಾಂತ್ವನಗೊಳಿಸುವ ಒಂದೇ ಒಂದು ಉಪಾಯವೆಂದರೆ ಎಲ್ಲ ಅಪ್ಪನದೇ ತಪ್ಪು ಎಂದು ಸಮಜಾಯಿಷಿ. ಒಂದು ಕಡೆ ಯಶಸ್ಸನ್ನು ಸಾಧಿಸಲು ಒತ್ತಡ, ಇನ್ನೊಂದೆಡೆ ತಂದೆತಾಯಿಗಳು ತನ್ನ ಬಗ್ಗೆ ಇರಿಸಿಕೊಂಡ ಆರಾಧನಾ ಭಕ್ತಿಭಾವ. ಇಂತಹ ಮಗುವಿಗೆ ಸಮಾಜದ ಬೇಡಿಕೆಗಳಿಗೆ, ಶಿಸ್ತಿಗೆ ಒಗ್ಗಿಹೋಗಲು ಕಷ್ಟವಾಗುತ್ತದೆ. ಆದುದರಿಂದಲೇ ಮಿಠಾಯಿ ಕೊಡಲಿಲ್ಲವೆಂದೋ ಪರೀಕ್ಷೆಯಲ್ಲಿ ಪ್ರಶ್ನೆಗಳು ಕಠಿನವಿದ್ದವೆಂದೋ, ಹುಡುಗ ಕೈಗೊಟ್ಟನೆಂದೋ, ಮುದ್ದು ಮುಖದ ಮೇಲೆ ಮೊಡವೆಗಳು ಕಾಣಿಸಿಕೊಂಡಿವೆಯೆಂದೋ ಒಯ್ಯನೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಮೆರಿಕದ ಹದಿವಯಸ್ಸಿನವರು ಇಂತಹ ಅತಿರೇಕಗಳಿಗೆ ಮನಗೊಡದೆ ಪಿಸ್ತೂಲು ಬಳಸಿ ಸಹಪಾಠಿಗಳನ್ನು ಕ್ಲಾಸಿನಲ್ಲೇ ಗುಂಡಿಟ್ಟು ಕೊಲ್ಲುತ್ತಾರೆ.

ಮಕ್ಕಳ ಬಗ್ಗೆ ಒಂದು ಸಮಸ್ಯೆಯೆಂದರೆ ಅವುಗಳನ್ನು ಬೇಡವೆಂದು ಹಿಂದಿರುಗಿಸುವಂತಿಲ್ಲ.

- ಫಾ| ಪ್ರಶಾಂತ್‌ ಮಾಡ್ತ

Back to Top