CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಪ್ರೇಮಿಗಳ ಗುಂಯ್‌ಗಾಡುವ ಮಾತುಗಳು

ಜೀವಸಂಕುಲವನ್ನು ಅಹಿರ್ನಿಶಿ ಮುಂದುವರಿಸಲು ಪ್ರಕೃತಿಯು ಜೀವಿಗಳ ಮೇಲೆ ಆಡಿದ ಟ್ರಿಕ್‌ ಅನ್ನು ಪ್ರೇಮ, ಲೈಂಗಿಕತೆ ಎನ್ನುತ್ತಾರೆ. ಪ್ರೇಮದಲ್ಲಿ ನಿಜಕ್ಕೂ ಪುಳಕ ಕೊಡುವ ವಿಚಾರವೆಂದರೆ ಪ್ರೇಮಿಗಳ ಜಗಳ. ಮೊದಲು ಕೋಪ, ಅನಂತರ ರಾಜಿ, ಅನಂತರ ಪುನಃ ಕೋಪ ಮಾಡಿಕೊಳ್ಳುವುದು, ಉಳಿದದ್ದೆಲ್ಲ ಜುಜುಬಿ ನೀರಸ ವಿಚಾರಗಳು. 

ಪುರಾತನರು ಭಾಷೆಯನ್ನು ಉತ್ಪಾದಿಸಿ ಬಳಸಲು ಪ್ರಾರಂಭಿಸಿದಂದಿನಿಂದ ರಮ್ಯ ಪ್ರೇಮದ ಬಗ್ಗೆ ರೀಮುಗಟ್ಟಲೆ ಸಾಹಿತ್ಯವನ್ನು ಸೃಷ್ಟಿಸಿ ಸಂಭ್ರಮಿಸಲಾಗಿದೆ. ಒಲವಿನ ಕಲ್ಪನೆಯ ಸುತ್ತ ಕಾಮನಬಿಲ್ಲು, ಹೂಗಳು, ಒಂದೆರಡು ನಕ್ಷತ್ರಗಳು, ಹೂಬಾಣಗಳನ್ನು ಪ್ರಯೋಗಿಸುವ ಕಿನ್ನರರು ಮುಂತಾದ ಕಸೂತಿ ಕೆಲಸ ಮಾಡಿ ಶೃಂಗರಿಸಿ ಪ್ರಭಾವಳಿಯನ್ನು ಜೋಡಿಸಲಾಗಿದೆ. ರಮ್ಯಪ್ರೇಮ ಅಥವಾ ರೊಮಾನ್ಸ್‌ ಎಂಬುದು ಇತ್ತೀಚೆಗಿನ ಕಲ್ಪನೆ. ಹಿಂದಿನ ಕಾಲದಲ್ಲಿ ಬಹುಶಃ ಯಾರೂ ಪ್ರೇಮಿಸಿ ವಿವಾಹವಾಗುತ್ತಿರಲಿಲ್ಲ. ತಮ್ಮ ವಂಶವಲ್ಲರಿಯನ್ನು ತೊಂಡೆಬಳ್ಳಿಯಂತೆ ಹಬ್ಬಿಸಲು ಹಾಗೂ ಮನೆಯಲ್ಲಿ ಕತ್ತೆಚಾಕರಿಗೆ ಒಬ್ಬಳು ಬೇಕೆಂದಾಗ ಗಂಡಸರು ಮದುವೆಯಾಗುತ್ತಿದ್ದಿರಬೇಕು.

ಪ್ರೇಮವೆಂಬ ಪುಳಕದ ಭ್ರಮೆ ಒಬ್ಬಳು ಇನ್ನೊಬ್ಬಳಿಗಿಂತ ಭಿನ್ನ, ಈ ಲೋಕದಲ್ಲಿ ತನಗೆಂದೇ ಹೇಳಿಮಾಡಿಸಿದ ಒಬ್ಬನು ಇದ್ದಾನೆ ಮುಂತಾದ ಕಪೋಲಕಲ್ಪಿತ ಭ್ರಮೆಗಳೇ ಪ್ರೇಮದ ಮೂಲ. ಪ್ರೇಮವೆಂಬ ಮೋಕೆಯು ಬರೇ ಖಾಲಿ ಅನುಭವ, ಇತರ ಎಲ್ಲ ಖಾಲಿ ಅನುಭವಗಳಂತೆ ಅದೂ ಮಂಡೆಯನ್ನು ಚುರುಗುಟ್ಟಿಸುವ ಸುಮಧುರ ಖಾಲಿ-ಜಾಲಿ ಅನುಭವ. ಒಲವು ಎಂಬುದು ತಾತ್ಕಾಲಿಕ ಭ್ರಮೆ, ವಿವಾಹದ ಮೂಲಕ ಅದನ್ನು ಗುಣಪಡಿಸಬಹುದು. ಜೀವಸಂಕುಲವನ್ನು ಅಹಿರ್ನಿಶಿ ಮುಂದುವರಿಸಲು ಪ್ರಕೃತಿಯು ಜೀವಿಗಳ ಮೇಲೆ ಆಡಿದ ಟ್ರಿಕ್‌ ಅನ್ನು ಪ್ರೇಮ, ಲೈಂಗಿಕತೆ ಎನ್ನುತ್ತಾರೆ. ಪ್ರೇಮ ರಸಾಯನಶಾಸ್ತ್ರ, ಲೈಂಗಿಕತೆ ಬರೇ ಭೌತಶಾಸ್ತ್ರ. ನಿಜವಾದ ಪ್ರೇಮವೆಂದರೆ ಮೆಚ್ಚಿದ ಗಂಡಸನ್ನು ಮದುವೆಯಾಗಿ ಜೀವನವಿಡೀ ಸಂಬಳ ಪಡೆಯದೆ, ಅವನ ಹಾಗೂ ಹುಟ್ಟಿದ ಮಕ್ಕಳ ಚಾಕರಿ ಮಾಡುವುದು ಎನ್ನುತ್ತಾರೆ. ಪ್ರೇಮದಲ್ಲಿ ನಿಜಕ್ಕೂ ಪುಳಕ ಕೊಡುವ ವಿಚಾರವೆಂದರೆ ಪ್ರೇಮಿಗಳ ಜಗಳ, ಮೊದಲು ಕೋಪ, ಅನಂತರ ರಾಜಿ, ಅನಂತರ ಪುನಃ ಕೋಪ ಮಾಡಿಕೊಳ್ಳುವುದು, ಉಳಿದದ್ದೆಲ್ಲ ಜುಜುಬಿ ನೀರಸ ವಿಚಾರಗಳು. ಪ್ರೇಮವೆಂದರೆ ನಂಬಿಕೆಯ ಪ್ರಶ್ನೆ, ಅದು ಸದಾ ನಿಗೂಢತೆಯಲ್ಲಿ ಆವರಿತವಾಗಿ ಭಾವನಾತ್ಮಕವಾಗಿ ಇರಬೇಕು. ಅದರ ಗುಣಿಸು ಭಾಗಿಸು ಗಣಿತವನ್ನೂ ಹಾಸುಹೊಕ್ಕುಗಳನ್ನೂ ಬಿಡಿಸಲು ಹೋದರೆ, ಅದರ ವಿಸ್ಮಯ, ನಿಗೂಢತೆ ಕ್ಷಣಮಾತ್ರದಲ್ಲಿ ಆವಿಯಾಗಿ ಸಪ್ಪೆಯಾಗುತ್ತದೆ. ಅದನ್ನು ಬಿಡಿಸಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ ಬರೇ ಖಾಲಿತನ. ಪ್ರೇಮವು ಯಾವುದಕ್ಕೂ ವಿಧೇಯವಲ್ಲ, ತನ್ನ ಕಗ್ಗಂಟನ್ನು ಬಿಡಿಸುವುದರಲ್ಲಿ ಮಗ್ನರಾದವರನ್ನು ತ್ಯಜಿಸಿ ಹೋಗುತ್ತದೆ.

ಸ್ವಗತವೆಂಬ ಭಾಷಾ ಬಳಕೆಗಳು
ಪ್ರೇಮವು ಭಾಷೆಯನ್ನು ಹೇಗೆ ಪ್ರಭಾವಿಸುತ್ತದೆ? ಭಾಷೆಯನ್ನು ಉತ್ಪಾದಿಸುವ ಮಿದುಳಿನ ಮೇಲೆ ಹೇಗೆ ಪ್ರಭಾವ ಬೀರುತ್ತದೆ? ಪ್ರೇಮವು ಒಟ್ಟಾರೆಯಾಗಿ ಇರುವುದು ಭಾಷೆಯ ಹೊರಹೊಮ್ಮುವಿಕೆಯಾಗಿ- "ನಾನೆಷ್ಟು ಅವಳನ್ನು ಹಚ್ಚಿಕೊಂಡಿದ್ದೇನೆ', "ಅವನಿಲ್ಲದೆ ನಾನಿಲ್ಲ'. ಪ್ರೇಮವು ಇರುವುದೇ ಭಾಷೆಯ ಬರೇ ಒಂದು ಉದ್ಗಾರವಾಗಿ, ಪ್ರೇಮಿಯು ಭಾಷೆಯ ಮೂಲಕ ಉತ್ಪಾದಿಸುವ ವಾದಮಂಡನೆಯಾಗಿ. ಪ್ರೇಮವೆಂದರೆ ಯಾವುದೋ ಲೋಕದಿಂದ ಇಳಿದುಬರುವ ಅಮೃತವರ್ಷಿಣಿಯಲ್ಲ. ಬರೇ ಭಾಷಾ ಬಳಕೆ, ಭಾಷೆಯನ್ನು ಒಂದು ವಿಶಿಷ್ಟ ರೀತಿಯಲ್ಲಿ ಬಳಸುವ ವೈಖರಿ. ಎಲ್ಲ ಪ್ರೇಮ ವರ್ತನೆಯನ್ನು ವಿಶ್ಲೇಷಿದಾಗ ಕೆಲವೊಂದು ಸಿದ್ಧ ಲಕ್ಷಣಗಳು ಎದ್ದುಕಾಣುತ್ತವೆ. ಕುಚ್ಚಿಕೂ ಕುಚ್ಚಿಕೂ ಪ್ರೇಮಿಗಳ ಒಳಗಿಂದೊಳಗೆ ಸೊಲ್ಲು ಇಲ್ಲದ ಸ್ವಗತ ಭಾಷೆಯೊಂದು ಪ್ರವರ್ತಿಸುತ್ತದೆ. ಸಾಮಾನ್ಯವಾಗಿ ಭಾಷೆಯನ್ನು ಬಳಸುವುದು ಎರಡು ರೀತಿಗಳಲ್ಲಿ, ಅಂತರ್‌-ಸಂಬಂಧಿಯಾಗಿ, ಏನನ್ನೋ ಮಾತಾಡಿ ಪೂರೈಸಲು (ಈಗಲೇ ಹೊರಗೆ ಹೋಗು) ಅಥವಾ ವರ್ಣಿಸಲು (ಅವಳ ಕೆನ್ನೆ ಕೆಂಪಾಯಿತು). ಈ ಎರಡು ರೀತಿಗಳಿಗೆ ಸೀಮಿತವಾದ ಭಾಷೆಯು ಇನ್ನೊಂದು ಕೆಲಸದಲ್ಲೂ ತೊಡಗುತ್ತದೆ- ಏನನ್ನೂ ಮಾಡಿ ಮುಗಿಸದ, ಏನನ್ನೂ ವರ್ಣಿಸದ, ಮಂಡರಗಪ್ಪೆಯ ವಟರ್‌ಗುಟ್ಟುವಿಕೆಯಂತಹ ಭಾಷಾಬಳಕೆ. ಈಗಾಗಲೇ ಬಳಕೆಯಲ್ಲಿರುವ ಜನನುಡಿಗಳನ್ನು ಆವಾಹನೆ ಮಾಡಿಕೊಳ್ಳುವುದು. ಅವುಗಳನ್ನು ಸ್ವಗತವಾಗಿ, ಅಂದರೆ ತನ್ನಷ್ಟಕ್ಕೆ ಉದ್ಗರಿಸುತ್ತಿರುವುದು, ಇಂತಹ ರಮ್ಯ ಮಾತುಗಳು ಮಿದುಳಿನಲ್ಲಿ ಗುಂಯ್‌ಗಾಡುವುದು. "ನಾನು ಅವಳನ್ನು ಪ್ರೀತಿಸುತ್ತೇನೆ' ಎಂದು ಸ್ವಗತವಾಗಿ ಉದ್ಗರಿಸಿದಾಗ ವರ್ಣನೆಯಿಲ್ಲ, ಏನೂ ಮಾಡುವುದೂ ಇಲ್ಲ. ಪ್ರೇಮಿಗಳ ಸ್ವಗತ ಮಾತುಗಳು ಶಬ್ದಕೋಶದಲ್ಲಿ ಕಾಣಸಿಗುವ ಪದಗಳಂತೆ- ಆ ಪದಗಳು ಏನನ್ನೂ ನಿರ್ವಹಿಸುವುದಿಲ್ಲ, ಏನನ್ನೂ ಬೊಟ್ಟಿಟ್ಟು ತೋರಿಸುವುದಿಲ್ಲ. ತಮ್ಮಷ್ಟಕ್ಕೇ ಬಿದ್ದುಕೊಂಡಿರುತ್ತವೆ. ಪ್ರೇಮಿಯ ನಿಟ್ಟುಸಿರು ಕೂಡ ಇಂತಹ ಮಾತು. 

ಪ್ರೇಮ ಭಾವದ ಒಣ ಪ್ರತೀಕಗಳು   
ಪ್ರೇಮಿಗಳ ಸ್ವಗತ ಭಾಷೆಯಲ್ಲಿ ಕೆಲವು ಸಿದ್ಧಮಾದರಿಯ ವರ್ತನೆಗಳ, ಕಲ್ಪನೆಗಳ ಸಿದ್ಧ ಕೋಶವಿದೆ. ಪ್ರೇಮದ ಸ್ವಗತ ಮಾತುಗಳು, ಪ್ರತಿಮೆಗಳು ಬರೇ ಹಳಸಲು, ಸೀದು ಹೋದ, ಜಗತ್ತಿನ ಸಾವಿರಾರು ಮಂದಿ ಈಗಾಗಲೇ ಬಳಸಿದ ಎಂಜಲು ಮಾತುಗಳು. ಪ್ರೇಮದ ವಿರಹ ಕೋಶದಲ್ಲಿ ಕೆಲವು ಸಿದ್ಧ ಮಾದರಿಯ ವರ್ತನೆಗಳೂ ಶೇಖರಣೆಯಾಗಿವೆ- ನಾಲ್ಕಾರು ದಿನ ಗಡ್ಡ ಬಿಡುವುದು, ಕೂದಲು ಬಾಚದಿರುವುದು, ಬೈಕ್‌ನ ಮೇಲೆ ಆಕಾಶ ನೋಡಿ ಮಲಗುವುದು, ಮಂಡೆ ಬಿಂಗ್ರಿ ಕಟ್ಟಿದಂತಾಗುವುದು. ಹುಡುಗನಿಗೆ ಎರಡು ಮೂರು ದಿನ ಬೈಕ್‌ನಲ್ಲಿ ಆಸಕ್ತಿಯಿಲ್ಲದಿದ್ದರೆ, ಹುಡುಗಿ ಮೊಣಕಾಲುಗಳ ಮೇಲೆ ಗದ್ದವಿಟ್ಟು ನೆಲವನ್ನು ಅಳೆಯುತ್ತಿದ್ದರೆ ಅವರು ಪ್ರೇಮಪಾಶದಲ್ಲಿ ಸಿಲುಕಿದ್ದಾರೆ ಎಂದರ್ಥ. ಸಿನಿಮಾ ಮಾಡುವವರಿಗೆ ಈ ಕೋಶದ ಪರಿಚಯವಿರುತ್ತದೆ. ಇದರೊಂದಿಗೆ ಒಂದು ಸಿದ್ಧ ಚಿತ್ರವೆಂದರೆ ಖನ್ನತೆ, ತನ್ನನ್ನೇ ಖನ್ನತೆಯಲ್ಲಿ ಇರಿಸುವ ಪುಳಕ, ಬೇಗುದಿ, ಪ್ಯಾಲಿ ಮೋರೆಯ ಒಂದು ಹದ, ಒಂದು ಮುದ, ಒಂದು ವಿಷಾದ. ಅವನು ಪಾರ್ಕಿನ ತಂಪೇರಿಯಾದಲ್ಲಿ ಅವಳಿಗಾಗಿ ಕಾಯುತ್ತಿರುತ್ತಾನೆ. ದಾರಿ ಕಾಯುತ್ತಾ ಇರುವ ಎಲ್ಲ ಪ್ರೇಮಿಗಳಲ್ಲಿ ಕಾಣಸಿಗುವ ಮಣಮಣ ಸ್ವಗತ ಮಾತುಗಳು ಇಂತಿರುತ್ತವೆ- "ಯಾಕೆ ತಡ?, ಇಷ್ಟು ಸಮಯಕ್ಕೆ ಇಂಥಲ್ಲಿ ಬಾ ಅಂತ ಹೇಳಿದ್ದು ತಪ್ಪಾಗಿ ಅರ್ಥಮಾಡಿಕೊಂಡಳೇ? ಇದೇ ಸ್ಥಳ ತಾನೇ? ಇಷ್ಟೇ ಹೊತ್ತಿಗೆ ತಾನೇ? ಅವಳು ಅಪಾರ್ಥ ಮಾಡಿಕೊಂಡಿರಬಹುದೇ? ಮೊಬೈಲನಲ್ಲಿ "ಈಗ ಎಲ್ಲಿದ್ದಿಯೇ?' ಎಂದು ಕೇಳ್ಳೋಣವೆಂದರೆ ಅವಳಿಗೆ ಕಿರಿಕಿರಿಯಾದಿತು. "ಕೆಲಸಮಯದ ಅನಂತರ ಅವನ ಖನ್ನತೆಯು ಸಿಡುಕಾಗುತ್ತದೆ. "ಇವಳು ಹೀಗೆ ಬಿದ್ದುಹೋಗದವರ ಹಾಗೇ ವರ್ತಿಸಬಹುದೇ, ಒಂದು ಕಾಲ್‌ ಮಾಡಬಹುದಿತ್ತು, ಮೆಸೇಜ್‌ ಮಾಡಬಹುದಿತ್ತು.' ಅನಂತರದ ಹಂತವು ತಲ್ಲಣ ಹಾಗೂ ಕಂಗಾಲು. "ಬಹುಶಃ ನಮ್ಮ ಪ್ರೇಮಕ್ಕೆ ಇದೇ ಕೊನೆ. ನಾನು ಅವಳ ಸಸಾರಕ್ಕೆ ಬಿದ್ದೆ, ಅವಳಿಗೆ ಇನ್ಯಾವನೋ ಗಂಟು ಬಿದ್ದಿರಬಹುದು, ನಮ್ಮ ರೊಮಾನ್ಸ್‌ ಮುಗಿದದ್ದೇ.' ಹೀಗೆಂದು ಅನ್ನುತ್ತಿರುವಾಗಲೇ ಅಗೋ ಅವಳು ಮುಂಗಾಲುಪುಟಿಕೆಯಲ್ಲೇ ಚಂಗನೆ ನೆಗೆದು ಬರುತ್ತಾಳೆ, ಹಾಯ್‌ ಎನ್ನುತ್ತಾಳೆ. ಅವನು ದಿಲ್‌ಕುಶ್‌, ಈ ತನಕದ ವಿವಿಧ ವಿಷಾದ ಭಾವಗಳು, ಸ್ವಗತಗಳು ಚೂರುಚೂರು.

ಬುದ್ಧಿ ಓಡಿಸಲಾಗದ ಪ್ರೇಮ
ಆ ವ್ಯಕ್ತಿಯೊಂದಿಗೆ ಹೇಗೆ ವ್ಯವಹರಿಸುವುದು ಎಂಬ ಆಂತರಿಕ ತಿಕ್ಕಾಟವು ನಿರಂತರವಾಗಿ ಸ್ವಗತ ರೂಪದಲ್ಲಿ ನಡೆಯುತ್ತಿರುತ್ತದೆ. ಮೊದಮೊದಲು ಪ್ರೇಮದ ಭಾವುಕ ಚಿಂತನೆಗಳು, ಅನಂತರ ಏನೇನೋ ಸಂದೇಹದ ಮಾತುಗಳು, ಅನಂತರ ಖನ್ನತೆಯ ಸ್ವಗತ- ಚಕ್ರಗತಿಯಲ್ಲಿ ಸಾಗುತ್ತಿರುತ್ತವೆ. ಇಂತಹ ಸ್ವಯಂಪ್ರೇರಿತ, ಸ್ವಯಂಚಾಲಿತ ಖನ್ನತೆಗೆ ಕೊನೆಯೇ ಇಲ್ಲ. ಪ್ರೇಮಿಯು ಮಂಡೆಬೆಚ್ಚ ಮಾಡಿಕೊಳ್ಳುತ್ತಾನೆ , ಅವನ ಬುದ್ಧಿ ಓಡುವುದಿಲ್ಲ, ಬುದ್ಧಿಯನ್ನು ಓಡಿಸಲು ಆಗುವುದಿಲ್ಲ. ಪ್ರತೀ ಪ್ರೇಮಿಯು ಅತ್ಯಂತ ತೇಜಿಯನ್ನೂ ಅತ್ಯಂತ ಘೋರ ಖನ್ನತೆಯನ್ನೂ ಅನುಕ್ರಮವಾಗಿ ಅನುಭವಿಸುತ್ತಾನೆ. ಅಮ್ಮ ಎಲ್ಲಿಗೋ ಹೋಗಿದ್ದಾಳೆ, ಹಿಂದಿರುಗುತ್ತಾಳ್ಳೋ ಇಲ್ಲವೋ, ತನ್ನನ್ನು ಬಿಟ್ಟುಹೋಗಬಹುದೋ ಎಂಬ ಶೈಶವದ ಭಯ, ಅಮ್ಮ ಬಂದಳ್ಳೋ; ಸದ್ಯಕ್ಕೆ ಮಗುವಿಗೆ ಸಂತಸ. ಅಮ್ಮ ತನ್ನನ್ನು ಬಿಟ್ಟುಹೋಗುವ ತಲ್ಲಣವು ಸದಾ ಉಳಿಯುತ್ತದೆ. ಈ ತಲ್ಲಣವು ಪ್ರತಿ ಪ್ರೇಮಿಯಲ್ಲಿ ಇದ್ದೇ ಇದೆ, ಆದುದರಿಂದಲೇ ತಾನು ಪ್ರೀತಿಸುವ ಹುಡುಗಿಗೆ ಸುಳ್ಳು ಹೇಳಲು ಹುಡುಗನಿಗೆ ಆಗುವುದಿಲ್ಲ. ಅಂದರೆ, ಮೊದಲ ಸಲ ಮಾತ್ರ ಆಗುವುದಿಲ್ಲ. "ಅಯ್ಯೋ ನಿನ್ನನ್ನು ಬಿಟ್ಟು ಹೇಗೆ ಹೋಗಲಿ?' ಎನ್ನುತ್ತಾನೆ. "ರಿಕ್ಷಾದಲ್ಲಿ ಹೋಗು' ಎನ್ನುತ್ತಾಳೆ ಅವಳು. ಒಂದು ವೇಳೆ ತಮ್ಮ ಸ್ನೇಹ ಕೊನೆಗೊಂಡಾಗ ಅವಳು ಮಂಗಾಟಿಸಿ ಆಂಶಿಕವಾಗಿ ಸ್ಪಂದಿಸುತ್ತಾಳೆ- ಅವನು ಬರೆದ ಪ್ರೇಮಪತ್ರಗಳನ್ನೆಲ್ಲ ಅವನಿಗೆ ಹಿಂದಿರುಗಿಸಿದರೂ ಅವನು ಕೊಟ್ಟ ಚಿನ್ನದ ಉಂಗುರವನ್ನು ತನ್ನಲ್ಲೇ ಇಟ್ಟುಕೊಳ್ಳುತ್ತಾಳೆ.

"ನನ್ನ ಅಪ್ಪ ಹಲ್ಕಾಟ್‌ ಬುರ್ನಾಸು ಎಂದು ಯಾಕೆ ಹೇಳುತ್ತಿಯಾ?' ಎಂದು ವಗ್ಗರಣೆಯ ಸಾಸಿವೆ ಕಾಳಾಗಿ ಚಟಪಟ ಸಿಡಿದು ಹುಡುಗಿ ತನ್ನ ಪ್ರೇಮಿಯನ್ನು ದುರುಗುಟ್ಟಿ ಕೇಳಿದಳು. "ಯಾಕೆಯಾ? ನಿಮ್ಮ ಮಗಳನ್ನು ಮದುವೆಯಾಗದಿದ್ದರೆ ನಾನು ಸಾಯುವುದೇ ಸರಿ ಎಂದಾಗ, ನಿನ್ನ ಅಪ್ಪ ನನಗೆ ಏನೆಂದ ಗೊತ್ತೇ? ಸರಿ, ನಡಿ, ಹಾಗೆ ಮಾಡು, ನಿನ್ನ ಶವಸಂಸ್ಕಾರದ ಖರ್ಚೆಲ್ಲ ನಾನು ನೋಡಿಕೊಳ್ಳುತ್ತೇನೆ' ಎಂದ.
 

ಫಾ| ಪ್ರಶಾಂತ್‌ ಮಾಡ್ತ

Back to Top