CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮೆದು ಸತ್ಯಗಳ ನೈಜೋತ್ತರ ಯುಗ

ಇಂದು ಏನು ಹೇಳಿದರೂ ನಂಬಲಾರದ ಸ್ಥಿತಿಗೆ ತಲುಪಿದ್ದೇವೆ. ಇಂದು ನಮ್ಮೊಂದಿಗೆ ಸತ್ಯವಿದೆ, ಸುಳ್ಳಿದೆ, ಇವುಗಳೊಂದಿಗೆ ಸಂಪೂರ್ಣವಾಗಿ ಸುಳ್ಳೆನ್ನುವಂತಿಲ್ಲದ ಹೆಚ್ಚು ಕಡಿಮೆ ಸತ್ಯವೋ ಎನ್ನುವಂತೆ ಭಾಸವಾಗುವ ಹೇಳಿಕೆಗಳಿವೆ. ಅಲ್ಲೋ ಇಲ್ಲೋ ಆಗಲೋ ಈಗಲೋ ಕೆಲವೊಮ್ಮೆ ಉದುರುತ್ತಿದ್ದ ಸುಳ್ಳು ತಟವಟ ಮೋಸಗಳು ಇಂದು ಬದುಕಿನ ಅನಿವಾರ್ಯ ಅಂಗಗಳಾಗಿ ಬಿಟ್ಟಿವೆ.

ಭಾಯಲ್ಲಿ ಹೊಸ ಪದಗಳು ಚಲಾವಣೆಗೆ ಬಂದಾಗ ಒಂದು ಹೊಸ ಜಗತ್ತೇ ಹುಟ್ಟುತ್ತದೆ.ಇಂಗ್ಲಿಷ್‌ ಭಾಷೆಯಲ್ಲಿ ಚಲಾವಣೆಗೆ ಬಂದು 2016ರಲ್ಲಿ ಆಕ್ಸ್‌ಫ‌ರ್ಡ್‌ ಪದಕೋಶದಲ್ಲಿ ಅಧೀಕೃತವಾಗಿ ದಾಖಲಾದ ಪದಗಳಲ್ಲಿ ಒಂದೆಂದರೆ "ಪೋಸ್ಟ್‌- ಟ್ರೂತ್‌' ಎಂಬುದು. ಕೆಲವು ವರ್ಷಗಳ ಹಿಂದೆ "ಪೋಸ್ಟ್‌' ಎಂದರೆ ಅಂಚೆ ಕಚೇರಿಯ ಕೆಂಪು ಡಬ್ಬವಾಗಿತ್ತು. ಇಂದು ಈ ತುಣುಕು ಆದಿಪ್ರತ್ಯಯವನ್ನು ಇತರ ಪದಗಳಿಗೆ ಅಂಟಿಸಿ ಪ್ರಯೋಗಿಸುತ್ತಾರೆ. "ಪೋಸ್ಟ್‌' ಎಂದರೆ ಅನಂತರದ್ದು. ನವ್ಯೋತ್ತರ, ವಸಾಹತೋತ್ತರ, ಆಧುನಿಕೋತ್ತರ, ಭೋಜನೋತ್ತರ ಕಾರ್ಯಕ್ರಮಗಳು ಇತ್ಯಾದಿ. ಈ ಪದಗಳಲ್ಲಿ "ಉತ್ತರ'ವೆಂದರೆ ಅನಂತರದ್ದು ಎಂಬ ಅರ್ಥದ ಜತೆಗೆ ಸದ್ಯದ ಪರಿಸ್ಥಿತಿ ತನ್ನ ಪ್ರಭಾವವನ್ನು ಕಳೆದುಕೊಂಡು ಅಪ್ರಸ್ತುತವಾಗುತ್ತಲಿದ್ದು, ಇನ್ನೇನೋ ಆ ಸ್ಥಳವನ್ನು ಆಕ್ರಮಿಸುತ್ತಲಿದೆ ಎಂಬ ಅರ್ಥವೂ ಹುದುಗಿಕೊಂಡಿದೆ. ನವ್ಯೋತ್ತರವೆಂದರೆ ನವ್ಯಕಾಲದ ಅನಂತರದ ಸಾಹಿತ್ಯವೆಂಬುದರ ಜತೆಗೆ ನವ್ಯ ಸಾಹಿತ್ಯ ಪ್ರಕಾರವು ತನ್ನ ಪ್ರಭಾವವನ್ನು ಕಳೆದುಕೊಂಡು ಹೊಸ ರಂಗನ್ನು ಪಡೆಯುತ್ತಿದೆ ಎಂಬ ಅರ್ಥವೂ ಹೊರಹೊಮ್ಮುತ್ತದೆ. "ಪೋಸ್ಟ್‌- ಟ್ರೂತ್‌' ಪದವನ್ನು ಕನ್ನಡದಲ್ಲಿ "ನೈಜೋತ್ತರ', ನಿಜ, ದಿಟ, ಖರೇ ಮಾತಿನ ಅನಂತರದ್ದು, ಪರ್ಯಾಯ ಸತ್ಯ ಎಂದು ಟಂಕಿಸಬಹುದು.

ಸತ್ಯ-ಸುಳ್ಳುಗಳೊಂದಿಗೆ ಇನ್ನೊಂದು
ಇಂದು ಸತ್ಯ ಮತ್ತು ಸುಳ್ಳುಗಳು ಮಾತ್ರ ಇರುವುದಲ್ಲ, ಇನ್ನೊಂದಿದೆ- ಅಸ್ಪಷ್ಟ ಗೋಜಲು ಗೋಜಲು ಹೇಳಿಕೆಗಳು, ಇತ್ತ ಸತ್ಯವೂ ಅಲ್ಲ ಅತ್ತ ಸುಳ್ಳೂ ಅಲ್ಲ. ಸುಳ್ಳಿಗೆ ಹತ್ತಿರದ ನಂಟು ಇರುವ ಲೊಟ್ಟೆಲೊಸಕು ಹೇಳಿಕೆಗಳು. ಇವು ನವ್ಯ ಸತ್ಯಗಳು, ಮೆದು ಸತ್ಯಗಳು, ನೈಜೋತ್ತರ ಸತ್ಯಗಳು. ಹಿಂದಿನ ಕಾಲದಲ್ಲಿ ಸತ್ಯ-ಸುಳ್ಳುಗಳ ನಡುವೆ ಹರಿತವಾದ ಗಡಿರೇಖೆ ಇತ್ತು.ಜನಸಾಮಾನ್ಯರ ಅಭಿಪ್ರಾಯಗಳನ್ನೂ ಚಿಂತನೆಗಳನ್ನೂ ಧೋರಣೆಗಳನ್ನೂ ರೂಪಿಸುವಲ್ಲಿ, ನೈಜ ಘಟನೆಗಳು, ಆಗುಹೋಗುಗಳು ಗೌಣವಾಗಿ, ಭಾವನೆಗಳನ್ನು ಹೊಡೆದೆಬ್ಬಿಸುವ ಹಾಗೂ ವೈಯಕ್ತಿಕ ಸೀಮಿತ ನಂಬಿಕೆಗಳನ್ನೇ ಸಾರ್ವಕಾಲಿಕ ಸತ್ಯವೆಂದು ಹೊರಒಡ್ಡುವ ಹಾಗೂ ನಂಬುವ  ರೂಢಿಯ ಚಿಂತನಾಶೈಲಿಯನ್ನು ನೈಜೋತ್ತರವೆನ್ನಬಹುದು. ನೆಲದ ಮೇಲೆ ಬಿದ್ದ ಮಾವಿನ ಮಿಡಿಗಳನ್ನು ಹೆಕ್ಕಿ ತೆಗೆದಂತೆ, ಸುತ್ತಮುತ್ತ ಸಂಭವಿಸುವ ಅಗುಹೋಗುಗಳಲ್ಲಿ, ತನಗಿಷ್ಟವಾದ, ತಮ್ಮವರಿಗೆ ಲಾಭದಾಯಕವಾದ ವಿದ್ಯಮಾನಗಳನ್ನು ಮಾತ್ರ ಆರಿಸಿ, ಅವೇ ಸತ್ಯಗಳೆಂದು ಪ್ರದರ್ಶಿಸಿ ನಿರ್ಧಾರಗಳನ್ನು ಕೈಗೊಳ್ಳುವುದು. ಸತ್ಯಸಂಗತಿಗಳು ಮುಖ್ಯವಲ್ಲ, ಸತ್ಯವೆಂದು ಭಾಸವಾಗುವ ದ್ವಂದ್ವ ಚಿಂತನೆಗಳನ್ನು, ತದ್ವಿರುದ್ಧ ಘಟನೆಗಳನ್ನೂ ಸತ್ಯವೆಂದು ಕಟ್ಟಿಕೊಡುವ ತಾಕತ್ತು ಮುಖ್ಯ. ಅಂದರೆ ಕಣ್ಣಿಗೆ ಕಣ್ಣಾರೆ ಕಂಡದ್ದನ್ನು, ಕಿವಿಯಲ್ಲಿ ಕಿವಿಯಾರೆ ಕೇಳಿದ್ದನ್ನು ಅಲ್ಲಗಳೆಯುವ ಒತ್ತಾಯ ಹಾಗೂ ಒತ್ತಡ. ಇಂದು ಸುಳ್ಳು ಸುದ್ದಿಗಳು ಸತ್ಯದ ಸ್ಥಾನವನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸುತ್ತಿವೆಯೋ ಎಂಬಂತಿದೆ. ವಸ್ತುನಿಷ್ಠ ಚಿಂತನೆಯನ್ನು ಬಾಡಿಸಿ ಸತ್ಯವನ್ನು ನಿರ್ಮೂಲನಗೊಳಿಸುವ ಯತ್ನ. ನೈಜೋತ್ತರವು ಸತ್ಯ-ಸುಳ್ಳುಗಳ, ಸಾಚಾತನ- ಮೋಸದ, ಕಟ್ಟುಕಥೆ-ನೈಜತೆಯ ಗಡಿ ಪ್ರದೇಶದಲ್ಲಿರುತ್ತದೆ. ಇತರರನ್ನು ಮೋಸ ಮಾಡುವುದು ಒಂದು ವಿಶಿಷ್ಟ ಕೌಶಲವಾಗಿ, ಒಂದು ಹೂಟವಾಗಿ, ಕೊನೆಗೆ ಒಂದು ರೂಢಿಯಾಗಿ ಬಿಡುತ್ತದೆ.

ಸುಳ್ಳು ಸಾಮ್ರಾಜ್ಯ
ಹಿಂದಿನ ಕಾಲದಿಂದಲೂ ನಮ್ಮೊಡನೆ ಸತ್ಯ, ಇದರೊಂದಿಗೆ ಅಗತ್ಯಕ್ಕೆ ಬೇಕಾಗುತ್ತದೆ ಇರಲಿ ಎಂದುಕೊಂಡು ಕೆಲವೊಂದು ಸುಳ್ಳುಗಳು ಇದ್ದುವು. ವ್ಯಕ್ತಿಯೊಬ್ಬ ಸರಾಸರಿ ದಿನಕ್ಕೆರಡು ಸುಳ್ಳುಗಳನ್ನಾದರೂ ಹೇಳುತ್ತಾನೆ. ಮನೆಯಲ್ಲಿ ಸುಳ್ಳು ಹೇಳುವುದು ಕಷ್ಟ. ಮನೆಯಲ್ಲಿ ಸುಲಭವಾಗಿ ಸುಳ್ಳು ಪತ್ತೆ ಮಾಡುವ ಯಂತ್ರವಿದೆ. ಅದರ ಹೆಸರು ಹೆಂಡತಿ. ರಾಜಕಾರಣಿಗಳು ಸುಳ್ಳಿಲ್ಲದೆ ಬದುಕುವಂತಿಲ್ಲ. ರಾಜಕಾರಣಿಗಳು ನಿಜಕ್ಕೂ ಸುಳ್ಳುಗಾರರಲ್ಲ. ಅವರಲ್ಲಿ ಎಲ್ಲದರ ಬಗ್ಗೆ ಎರಡು ಸತ್ಯಗಳಿರುತ್ತವೆ, ಅಷ್ಟೇ! ಸತ್ಯದ ತಲೆಗೆ ಹೊಡೆದಂತೆ ಸುಳ್ಳು ಹೇಳುವುದು ಒಲಿಂಪಿಕ್‌ ಸ್ಪರ್ಧೆಯಾಗಿರುತ್ತಿದ್ದರೆ ನಮ್ಮ ರಾಜಕಾರಣಿಗಳು ಬಂಗಾರ, ಬೆಳ್ಳಿ ಹಾಗೂ ಕಂಚು ಪದಕಗಳನ್ನು ಬಾಚುತ್ತಿದ್ದರು. ಆದುದರಿಂದಲೇ ಅಪರೂಪವಾಗಿ ರಾಜಕಾರಣಿಗಳ ಋಜುತ್ವವನ್ನು ಕಂಡಾಗಜನರು ಹೌಹಾರಿ ಬೀಳುತ್ತಾರೆಯೇ ವಿನಾ ಅವರ ಸುಳ್ಳುಗಳನ್ನು ಕೇಳಿದಾಗ ಆಶ್ಚರ್ಯ ಪಡುವುದಿಲ್ಲ. ಇಂದು ಸತ್ಯವನ್ನು ನಂಬದ ಸ್ಥಿತಿಗೆ ತಲುಪಿದ್ದೇವೆ. ನಂಬಲರ್ಹವಾದ ಸುಳ್ಳನ್ನು ಸೃಷ್ಟಿಸಲು ಸಾಧ್ಯವಿಲ್ಲದವರು ಸತ್ಯವನ್ನು ಹೇಳುವುದೇ ಸೂಕ್ತ. ಪುಢಾರಿಗಳು ಹೇಳುವುದು ಸುಳ್ಳಲ್ಲ, ಅವರದ್ದು ಕಾಗಕ್ಕ ಗುಬ್ಬಕ್ಕಗಳ ಕಟ್ಟುಕಥೆ ಕಟ್ಟುವ ಪ್ರತಿಭೆ.ರಾಜಕಾರಣಿಯ ತುಟಿಗಳು ಚಲಿಸುತ್ತಿವೆ ಎಂದರೆ ಅವನು ಸುಳ್ಳು ಹೇಳುತ್ತಿದ್ದಾನೆ ಎಂದರ್ಥ. ಗಾಂಧಿಯವರಿಗೆ ಒಂದು ಸುಳ್ಳನ್ನೂ ಹೇಳಲು ಆಗುತ್ತಿರಲಿಲ್ಲ. ಈಗ ನೋಡಿ, ಎಲ್ಲರಿಗೂ ಸಾಧ್ಯವಾಗಿದೆಯಾದರೆ ದೇಶವು ಪ್ರಗತಿ ಪಥದಲ್ಲಿ ಸಾಗುತ್ತಿದೆ ಎಂಬುದಕ್ಕೆ ಇದು ಒಂದು ಪುರಾವೆ.

ಆದರೆ ಸುಳ್ಳುಗಳೇ ರೂಢಿಗತವಾಗಿ ಬಿಟ್ಟರೆ ಏನಾಗಬಹುದು? ಒಂದು ಕಡೆ ಪ್ರಬಲ ರಾಷ್ಟ್ರವಾಗುತ್ತಿದೆ ಎಂಬ ಸತ್ಯವನ್ನು ಉತ್ಪಾದಿಸುತ್ತಾ ಇನ್ನೊಂದೆಡೆ ಟೀಚರ್‌ ಇಲ್ಲದ ಕ್ಲಾಸುಗಳು, ಸರಕಾರಿ ಶಾಲೆಗಳನ್ನು ಮುಚ್ಚೋಣವೆಂದರೆ ಮುಚ್ಚಲು ಬಾಗಿಲುಗಳೇ ಇಲ್ಲದ ಶಾಲೆಗಳು, ವಿದ್ಯುತ್ಛಕ್ತಿ ಇಲ್ಲದ ಹಳ್ಳಿಗಳು, ಕುಡಿಯಲು ನೀರಿಲ್ಲದ ಬರಪೀಡಿತ ಪ್ರದೇಶಗಳು. ನೈಜ ಘಟನೆಗಳನ್ನು ಹಾಗೂ ಭ್ರಮೆಗಳನ್ನು ಸಜ್ಜಿಗೆ ಬಜಿಲ್‌ನಂತೆ ಕಲಸಿ, ಗಾಳಿ ಸುದ್ದಿಗೆ ನೈಜದ ರಂಗು ಕೊಟ್ಟು, ನೈಜತೆಯೇ ಬರೇ ಭ್ರಮೆಗಳಂತೆ ಭ್ರಮೆಗಳು ನೈಜವೆಂದು ಕಾಣುವುದು. ರೇಷನ್‌ಗೆ, ಚಿಮಿಣಿ ಎಣ್ಣೆಗೆ ಕ್ಯೂ ನಿಂತಾಗ ಗಲಾಟೆಯಾದರೂ, ಖಾಲಿ ಎಟಿಎಂಗಳ ಮುಂದೆ ಗಲಾಟೆಯೇಇರಲಿಲ್ಲ, ಯಾಕೆಂದರೆ ಇನ್ನೇನು ಮುಂದಿನ ಅಮಾವಾಸ್ಯೆಯೊಳಗೆ ಭ್ರಷ್ಟಾಚಾರ ನಿರ್ಮೂಲನವಾಗುತ್ತದೆ ಎಂಬ ನಂಬಿಕೆಯನ್ನು ತೇಲಿಸಿಬಿಟ್ಟ ಕಾರಣವಾಗಿ. ದಿನ ಬೆಳಗಾಗುವುದರೊಳಗೆ ಭ್ರಷ್ಟಾಚಾರ ಮಟ್ಟಮಾಯವಾಗುತ್ತದೆ ಎಂಬುದು ನೈಜೋತ್ತರ ಸತ್ಯ. ನೈಜೋತ್ತರ ಯುಗದಲ್ಲಿ ಈ ಸರಕಾರ ಆ ಸರಕಾರದ ನಡುವೆ ವ್ಯತ್ಯಾಸಗಳೇ ಇಲ್ಲ. ಎಲ್ಲ  ಸರಕಾರಗಳದ್ದು ಒಂದೇ ರಂಗು. 

ಮೆದು ನೈಜೋತ್ತರಗಳು   
ಇಂದು ಏನು ಹೇಳಿದರೂ ನಂಬಲಾರದ ಸ್ಥಿತಿಗೆ ತಲುಪಿದ್ದೇವೆ. ಇಂದು ನಮ್ಮೊಂದಿಗೆ ಸತ್ಯವಿದೆ, ಸುಳ್ಳಿದೆ, ಇವುಗಳೊಂದಿಗೆ ಸಂಪೂರ್ಣವಾಗಿ ಸುಳ್ಳೆನ್ನುವಂತಿಲ್ಲದ ಹೆಚ್ಚು ಕಡಿಮೆ ಸತ್ಯವೋ ಎನ್ನುವಂತೆ ಭಾಸವಾಗುವ ಹೇಳಿಕೆಗಳಿವೆ. ವಿವಾಹದ, ಪ್ರೇಮ ಪ್ರಕರಣದ, ಉದ್ಯೋಗಕ್ಕಾಗಿ ಅರ್ಜಿ ಗುಜರಾಯಿಸುವ ಸಂದರ್ಭಗಳಲ್ಲಿ ಮೆದು ಸತ್ಯಗಳು ಪ್ರವರ್ತಿಸುತ್ತವೆ. ಪ್ರೇಮ ಪ್ರಕರಣದಲ್ಲಂತೂ ಮೆದು ಸತ್ಯಗಳ ರೀಲು ಬಿಡುವುದು ಸಾಮಾನ್ಯ. ಅಲ್ಲೋ ಇಲ್ಲೋ ಆಗಲೋ ಈಗಲೋ ಕೆಲವೊಮ್ಮೆ ಉದುರುತ್ತಿದ್ದ ಸುಳ್ಳು ತಟವಟ ಮೋಸಗಳು ಇಂದು ಬದುಕಿನ ಅನಿವಾರ್ಯ ಅಂಗಗಳಾಗಿ ಬಿಟ್ಟಿವೆ. ವೈದ್ಯಕೀಯ ಕಾಲೇಜಿನ ಮೆಟ್ಟಲನ್ನು ಹತ್ತದವರು ಖೋಟಾ ಸರ್ಟಿಫಿಕೆಟ್‌ಗಳನ್ನು ಪ್ರದರ್ಶಿಸಿ ಇಂಜಕ್ಷನ್‌ ಚುಚ್ಚುವುದು, ಖೋಟಾ ಡಿಗ್ರಿ ಪದವಿಗಳನ್ನು ಇಟ್ಟುಕೊಳ್ಳುವುದು - ಇವೆಲ್ಲ ಮೆದು ಸತ್ಯಗಳು. ನೀವು ಹೇಳಿದ್ದನ್ನು ನಾನು ಯಾರಿಗೂ ಬಾಯಿ ಬಿಡುವುದಿಲ್ಲ, ಗೇಟು ತೆರೆದು ಬನ್ನಿ ಬನ್ನಿ, ನಮ್ಮ ನಾಯಿ ಕಚ್ಚುವುದಿಲ್ಲ - ಇವೆಲ್ಲ ಸತ್ಯದ ಲೇಪವಿರುವ ಮೆದು ಸತ್ಯಗಳು. ಹೆಂಡತಿ ತನ್ನ ಗಂಡನನ್ನು ಕಂಡಾಪಟ್ಟೆ ಹೊಗಳುತ್ತಿರುವುದನ್ನು ಕಂಡು ಯಾಕೆಂದು ಪ್ರಶ್ನಿಸಿದಾಗ, ಯಾಕೆಂದರೆ, ಗಂಡನ ಬಗ್ಗೆ ಕೆಲವೊಮ್ಮೆ ಸುಳ್ಳು ಹೇಳುವುದು ಹೆಂಡತಿಯ ಕರ್ತವ್ಯ ಎಂದಳಂತೆ. ಅಂಗವಿಕಲರನ್ನು ವಿಕಲಚೇತನರು, ಅನ್ಯಚೇತನರು, ವಿಶಿಷ್ಟ ಚೇತನರು ಎಂದು ಕರೆಯುವುದಿದೆ. ಇಂತಹ ಪದಗಳನ್ನು ಟಂಕಿಸಿ ಮೆದು ಸತ್ಯಗಳನ್ನು ರೂಪಿಸಲಾಗುತ್ತದೆ. ತಾನು ಸುಳ್ಳು ಹೇಳಿಲ್ಲ, ಬದಲಾಗಿ ಏನೋ ತಪ್ಪು ಮಾತು ಬಾಯಿಂದ ಜಾರಿತು ಎನ್ನುವುದು. ಸುಳ್ಳುಗಾರರಿಲ್ಲ, ಅವರು ನೈತಿಕವಾಗಿ ವಿಶಿಷ್ಟ ಚೇತನರು. ಶಾಲೆಯಲ್ಲಿ ವಿದ್ಯಾರ್ಥಿಯು ಫೇಲಾಗಿದ್ದಾನೆ ಎನ್ನುವುದಿಲ್ಲ, ಬದಲಾಗಿ ಅವನ ಯಶಸ್ಸನ್ನು ಮುಂದೂಡಲಾಗಿದೆ ಎಂದೋ, ನಿಧಾನ ಚೇತನರೆಂದೋ ಹೆಸರಿಸುವುದಿದೆ. ಪರೀಕ್ಷೆಯಲ್ಲಿ ಪಕ್ಕದ ವಿದ್ಯಾರ್ಥಿಯ ಉತ್ತರಪತ್ರಿಕೆಯಿಂದ ಕಾಪಿ ಹೊಡೆಯುವ ವಿದ್ಯಾರ್ಥಿಯ ಬಗ್ಗೆ, "ದೂರದ ಬರಹವನ್ನು ಸ್ಪಷ್ಟವಾಗಿ ಅವಲೋಕಿಸಿ ಯಥಾವತ್ತಾಗಿ ಬರೆಯುವ ದೂರಗ್ರಾಹಿ ವಿಶಿಷ್ಟ ಚೇತನ', ಧಡೂತಿಯಾಗಿದ್ದರೆ ಅಡ್ಡ ಶರೀರ ಚೇತನವೆಂದೂ, ದುಡುಮ್ಮಿಯಾಗಿದ್ದರೆ ಭಾರ ಚೇತನವೆಂದೂ ಮೆದುಸತ್ಯಗಳನ್ನು ಉತ್ಪಾದಿಸಲಾಗುತ್ತದೆ. ಮೈಗಳ್ಳನನ್ನು ಶ್ರಮಪೂರ್ವ ಸುಸ್ತುಚೇತನವೆನ್ನುತ್ತಾರೆ.

ಸತ್ಯವು ಆಪ್ಯಾಯಮಾನವಾಗದಿರಬಹುದು, ಆದರೆ ಅಸ್ಪಷ್ಟವಾಗಿರುವಂತಿಲ್ಲ. ಸಾತ್ವಿಕ ವ್ಯಕ್ತಿಯನ್ನು ಶುದ್ಧ ನಾಲಗೆಯ ಯಕೀನಿ ಮನಷ್ಯಾಎನ್ನುತ್ತಿದ್ದರು. ಆರೋಗ್ಯಕರ ನಾಗರಿಕತೆಯ ಅಡಿಗಲ್ಲು ಇರುವುದೇ ಇತರರು ನಂಬಲರ್ಹರು, ನಂಬಬಹುದು ಎಂಬುದರ ಮೇಲೆ. ಕಂಡದ್ದನ್ನು ಕಂಡ ಹಾಗೆ ಹೇಳುವ ಕೆಲವರು ಇನ್ನೂ ಇರುವ ಕಾರಣವಾಗಿ ಸತ್ಯದ ಪಳೆಯುಳಿಕೆಗಳು ಇನ್ನೂ ಉಳಿದಿವೆ. ಸತ್ಯವು ರಾಜಕೀಯವನ್ನು ರೂಪಿಸಬೇಕಲ್ಲದೆ ರಾಜಕೀಯವು ಸತ್ಯವನ್ನು ರೂಪಿಸಬಾರದು. ಸತ್ಯದ ಬಗ್ಗೆ ಇನ್ನಿತರ ಆಯ್ಕೆಗಳಿರುವುದು, ಇನ್ನಿತರ ಆವೃತ್ತಿಗಳಿರುವುದು ದೊಡ್ಡ ದುರಂತ.
 

ಫಾ| ಪ್ರಶಾಂತ್‌ ಮಾಡ್ತ

Back to Top