CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಎಂದೂ ಎಲ್ಲರಿಗೂ ಸಿಗದ ಅಮೀರತನ

ಪ್ರಗತಿಯ ಫ‌ಲ ಇಂದಲ್ಲ ನಾಳೆ ಎಲ್ಲರಿಗೂ ಸಿಗಬಹುದು. ಇಂದು ಬಡವರಾಗಿದ್ದವರು ನಾಳೆ ಶ್ರೀಮಂತರಾಗಬಹುದು, ಸಿರಿವಂತಿಕೆಯ ಕುರುಹುಗಳು ಅವರ ಕೈಗೂ ಎಟುಕಬಹುದು. ಆದರೆ ಯಾವತ್ತಿಗೂ ಎಲ್ಲರಿಗೂ ಸಿಗಲಾರದ್ದು ಎಂದರೆ ಕುಬೇರ ವರ್ಗದ ವೈಭೋಗದ ಜೀವನ. 

ಪ್ರಗತಿ ಬೇರೆ, ಸುಖದ ಸುಪ್ಪತ್ತಿಗೆಯ ಮೇಲೆ ಓಲಾಡುವ ಲೋಲುಪತೆಯ ಅಮೀರತನ ಬೇರೆಯೇ! ಆರ್ಥಿಕ ಅಭಿವೃದ್ಧಿಯ ಫ‌ಲಗಳು ಇನ್ನೇನು ಎಲ್ಲರ ಮನೆಯ ಕದಗಳನ್ನು ತಟ್ಟುತ್ತವೆ, ಎಲ್ಲರ ಕೈಗೂ ಎಟಕುತ್ತವೆ ಎಂಬುದನ್ನು ನಂಬಬಹುದು. ಆದರೆ, ಎಲ್ಲರಿಗೂ ವೈಭವದ ಅಖೀಲೈಶ್ವರ್ಯದ ಜೀವನ ಸಿಕ್ಕೇ ಸಿಗುತ್ತದೆ ಎಂಬುದಂತೂ ತಿರುಕನ ಕನಸು. ಕೆಲವು ವರ್ಷಗಳಿಂದ ಸ್ವಲ್ಪಮಟ್ಟಿಗೆ ಪ್ರಗತಿ ಸಾಧಿತವಾಗಿದೆ. ಹಿಂದಿನ ಕಾಲದಲ್ಲಿ ಒಂದು ಬಸ್ಸು ತಪ್ಪಿ ಹೋದರೆ ಎಂಟು ಗಂಟೆ ಕಾಯಬೇಕಿತ್ತು, ಈಗ ಲಿಫ್ಟ್ ತಪ್ಪಿ ಹೋದರೆ ಕೋಪ ಬರುತ್ತದೆ. ಚಿಕ್ಕವರಾಗಿದ್ದಾಗ ಸೋಫಾದಿಂದ ಟಿವಿಗೆ ನಡೆಯಬೇಕಿತ್ತು, 

ಚಾನೆಲ್‌ ಬದಲಾಯಿಸಲು. ಪ್ರಗತಿಯು ಹಲವು ಆಶೋತ್ತರಗಳನ್ನು ಉದ್ದೀಪಿಸುತ್ತದೆ. ನೆಲದ ಮೇಲೆ ನಿಂತವರು ಮೇಲೆ ವಿಮಾನವನ್ನು ನೋಡಿ ಹಾರಬೇಕೆಂದು ಆಶಿಸುತ್ತಾರೆ. ವಿಮಾನದಲ್ಲಿದ್ದವರು ಕೆಳಗೆ ಚಿಕ್ಕಚಿಕ್ಕ ಮನೆಗಳನ್ನು ನೋಡಿ ಒಮ್ಮೆ ಮನೆಗೆ ಸೇರಿದರೆ ಸಾಕೆಂದು ಚಡಪಡಿಸುತ್ತಾರೆ. ಅಭಿವೃದ್ಧಿಯೇನೋ ಆಗಬೇಕಾದ್ದೇ. ಆದರೆ, ಅದರಿಂದ ಸಿಕ್ಕ ಆಧುನಿಕ ಸೌಲಭ್ಯಗಳು ದ್ವಿಗುಣ ಶಿಕ್ಷೆಯಾಗುತ್ತವೆ- ಇತ್ತ ಬಹುಬೇಗ ಮುದಿಯರಾಗುವಂತೆ ಮಾಡುತ್ತಾ, ಅತ್ತ ಹೆಚ್ಚು ಕಾಲ ಬಾಳುವಂತೆ ಮಾಡುತ್ತದೆ. ಇಂದು ಅನಗತ್ಯ ಸರಕುಗಳೇ ಆವಶ್ಯಕವಾಗಿ ಬಿಟ್ಟಿವೆ. ಪ್ರಗತಿಯು ದಯಪಾಲಿಸುವ ಶ್ರೀಮಂತಿಕೆ ಒಂದಾದರೆ, ಡೌಲು ಮೆರೆತದ ವೈಭೋಗದ ಬದುಕು ಇನ್ನೊಂದೇ.

ಶ್ರೀಮಂತಿಕೆಯ ಕುರುಹುಗಳು ಟೆರೇಸಿನ, ಐದು ಬೆಡ್‌ರೂಮಿನ ಮನೆ, ಮನೆಯೊಳಗೆ ಬಿಸಿನೀರಿನ ಸೌಕರ್ಯ, ಹವಾನಿಯಂತ್ರಿತ ದಿವಾನಖಾನೆ, ತಂಪಾದ ಉದ್ದಗಿನ ಏಸಿ ಕಾರು, ಎರಡು ಜಾತಿ ನಾಯಿಗಳು, ಒಂದು ಬೆಕ್ಕು- ಇವು ಶ್ರೀಮಂತಿಕೆಯ ಕುರುಹುಗಳು.ಮಂದಿಯೊಳಗೆ ಒಂದು ಜನ ಅಂತ ಅನ್ನಿಸಿಕೊಳ್ಳುವ ಗತ್ತು ಗೈರತ್ತುಗಳನ್ನು ಇವು ದಯಪಾಲಿಸುತ್ತವೆ. ಅಭಿವೃದ್ಧಿಶೀಲ ದೇಶದಲ್ಲಿ ಹಳ್ಳಿಯ ಬಡ ರೈತನಿಗೂ ಒಂದಲ್ಲ ಒಂದು ದಿನ ಇಂತಹ ಸವಲತ್ತುಗಳು ದೊರೆಯುವ ಅವಕಾಶ ಇದೆ.ಆರು ಡಿಜಿಟ್‌ ಸಂಬಳ, ಐದು ಬೆಡ್‌ರೂಮ್‌ ಮನೆ, ನಾಲ್ಕು ಚಕ್ರಗಳ ಗಾಡಿ, ಎರಡು ಮಕ್ಕಳು, ಒಬ್ಬಳು ಹೆಂಡತಿ, ಮೂವರು ಜವಾನರು. ಆದರೆ ಮೂವರು ಜವಾನರ ಬದಲು ಮೂವರು ಹೆಂಡಿರಿದ್ದರೆ ಕಷ್ಟ. ಆದರೆ ಮನೆಯಲ್ಲೇ ಟೆನ್ನಿಸ್‌ಕೋರ್ಟ್‌, ಈಜುಕೊಳ, ಖಾಸಗಿ ಜೆಟ್‌ ವಿಮಾನ, ಪ್ರಸಿದ್ಧ ನಟನಟಿಯರು ಮಗಳ ಮದುವೆಗೆ ಬಂದದ್ದು ಇವು ವೈಭವದ ಲೋಲುಪ್ತ ಜೀವನದ ಕುರುಹುಗಳು. ಇಂತಹ ಸವಲತ್ತುಗಳು ಶ್ರೀಮಂತರ ಪರಿಧಿಯಲ್ಲಿ ಬರುವುದಿಲ್ಲ, ಇವುಗಳು ಶ್ರೀಮಂತಿಕೆಯ ಪರಿಧಿಯನ್ನು ದಾಟಿಹೋದ ಸುಖಲೋಲುಪ್ತ 
ಕೇವಲ ಕೆಲವೇ ದೊರೆಗಳ ಸುಪರ್ದಿಗೆ ಬರುತ್ತವೆ. ಸುಖಲೋಲುಪ್ತ ವರ್ಗದ ಹದಿವಯಸ್ಕ ಜಕ್ಕ ಜವ್ವನ ಪುತ್ರರತ್ನಗಳನ್ನು ಗುರುತಿಸುವುದು ಸುಲಭ. ಅವರು ಹರಕ್‌ಚಂದ್‌ ಚಿಂದಿಮಲ್‌ತೂತ್‌ವಾಲಾ ಜಾಯಮಾನದವರು, ಅಂದರೆ, ಚಿಂದಿ ಬಟ್ಟೆಯನ್ನು ಧರಿಸುತ್ತಾರೆ. ಹಿಂದಿನ ಕಾಲದಲ್ಲಿ ಕುಚೇಲ ವರ್ಗದ ಬಡವರು ಹರಿದ ಬಟ್ಟೆಯನ್ನು ಧರಿಸುತ್ತಿದ್ದರು. ಇಂದು ಆರ್ಥಿಕವಾಗಿ ಮೇಲ್‌ಸ್ತರಕ್ಕೆ ದಾಟಿ ಕುಬೇರ ವರ್ಗಕ್ಕೆ ಸೇರುವುದೆಂದರೆ ಸೀಳು ಚಿಂದಿ ಬಟ್ಟೆಯನ್ನೂ ಧರಿಸುವುದು. ಇಂತಹ ಸೀಳು ಬಟ್ಟೆಗಳು ಬಹಳಷ್ಟು ದುಬಾರಿ. ಈ ಪ್ಯಾಂಟುಗಳು ಸೊಂಟದ ಹತ್ತಿರ, ತೊಡೆಯ ಮೇಲೆ ಹರಿದು ಸೀಳಿ ಹೋಗಿವೆ, ಅಲ್ಲಲ್ಲಿ ತೂತುಗಳು. ಇವುಗಳನ್ನು ಖರೀದಿಸಿದವರು ಹರಿದುದಲ್ಲ, ತಯಾರಕರು ಹರಿದು ಅನಂತರ ಅದರ ಮೇಲೆ ದುಬಾರಿ ಬೆಲೆಯ ಚೀಟಿಯನ್ನು ಅಂಟಿಸಿದ್ದು. ಥರ ಥರಾವರಿ ದಿರಿಸು, ಸೊಂಟದಿಂದ ಹಿಮ್ಮಡಿಯವರೆಗೆ ಹತ್ತು ಜೇಬು, ನೂರು ತೇಪೆ ಹಾಕಿದ ಪ್ಯಾಂಟು. ಇಂತಹ ದಿರಿಸುಗಳು ಇಂದು ಆಗರ್ಭ ಅಮೀರತನದ ಸಂಕೇತಗಳು.

ವೈಭೋಗದ ಜೀವನದ ಕುರುಹುಗಳು 
ಶ್ರೀಮಂತಿಕೆ ಬೇರೆ, ವೈಭವೋಪೇತ ಜೀವನ ಬೇರೆ. ಶ್ರೀಮಂತಿಕೆ ಎಂದರೆ ದಿನನಿತ್ಯದ ಸರಕು- ಸವಲತ್ತುಗಳನ್ನು ಖರೀದಿಸುವ ತಾಕತ್ತು. ಆದರೆ ವೈಭವೋಪೇತ ಷರೀಫ್ ಬದುಕೆಂದರೆ ಪ್ರತಿಷ್ಠೆಯನ್ನೇ ಖರೀದಿಸುವುದು. ಸಾಮಾನ್ಯವಾಗಿ ಪ್ರತಿಯೊಬ್ಬರೂ ಪ್ರತಿಷ್ಠೆಗೆ ಹಾತೊರೆಯುತ್ತಾರೆ. ಇಂದು ಶರೀರ ಗೋಧಿ ಬಣ್ಣದ್ದಾಗಿರಬಹುದು, ಆದರೆ ಪ್ರತಿಷ್ಠೆ ಇಲ್ಲದಿದ್ದರೆ ವಿವಾಹವಾಗುವುದು ಸ್ವಲ್ಪ ಕಷ್ಟ. ಆದುದರಿಂದಾಗಿ ಸಿನೆಮಾ ನಟಿಯರು, ಕ್ರಿಕೆಟಿಗರನ್ನು ಆರಿಸುತ್ತಾರೆ. 

ಪ್ರತಿಷ್ಠೆಯನ್ನು ದಯಪಾಲಿಸುವ ಸರಕುಗಳಿವೆ. ಬಂಗಲೆಯ ಹಿತ್ತಿಲಿನಲ್ಲಿ ಬೆಚ್ಚನೆ ನೀರಿನ ಈಜುಕೊಳವಿರಬೇಕು, ಆದರೆ ಅದರಲ್ಲಿ ಈಜಲು ಪುರುಸೊತ್ತಿಲ್ಲ. ಪ್ರತಿಷ್ಠಿತರಲ್ಲಿ ಈಜುಕೊಳವಿರುವುದು ಈಜಲು ಅಲ್ಲ. ಒಂದು ವೇಳೆ ಈಜುಕೊಳಗಳು ಬಹುಮಂದಿಗೆ ಲಭ್ಯವಿದ್ದರೆ ಅವು ತಮ್ಮ ಪ್ರತಿಷ್ಠೆಯ ಮೌಲ್ಯವನ್ನು ಕಳೆದುಕೊಳ್ಳುತ್ತವೆ. ಎಲ್ಲರ ಕೈಗೆ ಎಟುಕದ ಕಾರಣವಾಗಿಯೇ ಅವುಗಳಿಗೆ ಪ್ರತಿಷ್ಠೆಯ ಮೌಲ್ಯವಿದೆ. ತಾಂತ್ರಿಕತೆ ಕೊಡುವ ಪೊಳ್ಳು ಭರವಸೆಯೇನು? ಇಂದಲ್ಲ ನಾಳೆಯಾದರೂ ಎಲ್ಲ ವೈಭವಗಳು ಎಲ್ಲರಿಗೂ ಸಿಗುತ್ತವೆ ಎಂಬ ಭರವಸೆ. ತಾಂತ್ರಿಕತೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದಿಲ್ಲ. ಸುಖಲೋಲುಪ್ತ ವೈಭವೋಪೇತ ಶ್ರೀಮಂತರು ತಮ್ಮ ಬ್ಯಾಗ್‌ಗಳನ್ನು ಸೇವಕರಿಂದ ಹೊರಿಸಿಕೊಂಡು ಜಿಮ್‌ಗೆ ಹೋಗಿ ಅಲ್ಲಿ ಭಾರ ಇಳಿಸಿಕೊಳ್ಳಲು ಕಬ್ಬಿಣದ ಗುಂಡುಗಳನ್ನು ಮೇಲಕ್ಕೆತ್ತಿ ಬೊಜ್ಜನ್ನು ಇಳಿಸಿಕೊಳ್ಳುತ್ತಾರೆ. ಕಾರಿನಲ್ಲಿ ಕೂತು ಪಾರ್ಕುಗಳಿಗೆ ಹೋಗಿ ಅಲ್ಲಿ ನಡೆಯುತ್ತಿರುತ್ತಾರೆ. ಇವೆಲ್ಲ ಹಣದಿಂದ ಸಿಗುವ ಸುಖವಲ್ಲ, ಪ್ರತಿಷ್ಠೆ ದಯಪಾಲಿಸುವ ಭರಾಮು. ಅಮೀರ ದೊರೆ ಒಬ್ಬನೇ ಬರುವಾಗಲೂ ಮೆರವಣಿಗೆ ಬಂದಂತೆ, ರಥಯಾತ್ರೆಯಂತೆ. ಆರು ಮಕ್ಕಳಿರುವವನು ಆರು ಕೋಟಿ ಇರುವವನಿಗಿಂತ ಹೆಚ್ಚು ಸುಖೀ, ಆರು ಕೋಟಿ ಇರುವವನಿಗೆ ಇನ್ನೂ ಬೇಕು ಅನ್ನಿಸುತ್ತದೆ. ಎಂತಹ ವೈಭವದ ಸಾಹುಕಾರ ಬದುಕೆಂದರೆ, ಮನೆ ಮುಂದಿನ ಹೂದೊಟದಲ್ಲಿ ನಡೆಯುವಾಗ ಒಂದು ಜೋಡಿ ಬಟ್ಟೆಯಾದರೆ, ಮನೆಯ ಹಿಂದಿನ ಹುಲ್ಲುಹಾಸಿನ ಮೇಲೆ ನಡೆಯುವಾಗ ಇನ್ನೊಂದು ಜೋಡಿ ಬಟ್ಟೆ. ಊರಿನಲ್ಲಿ ದೊಡ್ಡ ಮನೆಯಿರುವುದು ಶ್ರೀಮಂತಿಕೆ; ಆದರೆ ವಿದೇಶದಲ್ಲಿ ಕೂಡ ಒಂದು ಬಂಗ್ಲೆ ಇರುವುದು ಪ್ರತಿಷ್ಠೆ. ಜಾತಿನಾಯನ್ನು ಸಾಕುವುದು ಶ್ರೀಮಂತಿಕೆ. ಇಡೀ ಮನೆಗೆ ಮಾತ್ರವಲ್ಲ, ನಾಯಿಗೂಡಿಗೂ ಹವಾನಿಯಂತ್ರಣದ ಅನುಕೂಲವಿರುವುದು ಪ್ರತಿಷ್ಠೆ; ಬರೇ ಶ್ರೀಮಂತಿಕೆಯಲ್ಲ. ವೈಭವೋಪೇತವಾಗಿ ಮಗಳ ಮದುವೆ ಮಾಡಿಸುವುದು ಶ್ರೀಮಂತಿಕೆ; ಆದರೆ ಒಂದು ಹಿಂಡು ಹಿಂದಿ ಸಿನೆಮಾ ನಟನಟಿಯರು ವಿವಾಹಕ್ಕೆ ಹಾಜರಾಗುವುದು ಪ್ರತಿಷ್ಠೆ.

ವೈಭವೋಪೇತ ಜೀವನದ ಅಲಭ್ಯತೆ
ತಾಂತ್ರಿಕತೆಯ ಆವಿಷ್ಕಾರಗಳು ಕಾಲಕ್ರಮೇಣವಾಗಿ ಹಳ್ಳಿಯ ರೈತನಿಗೂ ಲಭ್ಯವಾಗಬಹುದು. ಆದರೆ ಪ್ರತಿಷ್ಠೆಯ ಸರಕುಗಳು ಎಲ್ಲರಿಗೂ ಲಭ್ಯವಾಗುವುದಿಲ್ಲ. ಯಾಕೆಂದರೆ ಪ್ರತಿಷ್ಠೆಯನ್ನು ಒದಗಿಸುವ ಸರಕುಗಳ ಮೌಲ್ಯವಿರುವುದು ಅವು ಎಲ್ಲರಿಗೂ ಲಭ್ಯವಾಗದಂತೆ ನೋಡಿಕೊಳ್ಳುವ ಹೂಟಗಳಲ್ಲಿ. ವೈಭವದ ಜೀವನ ಎಲ್ಲರಿಗೂ ಲಭ್ಯವಾಗುವುದು ಸಾಧ್ಯವೇ ಇಲ್ಲ. ಕೇವಲ ಕೆಲವರು ಮಾತ್ರ ಭರಮಿನಿಂದ ನಾನುಂಟೋ ಮೂರು ಲೋಕವುಂಟೋ ಎಂದು ಬೀಗಲು ಸಾಮಾಜಿಕ ವ್ಯವಸ್ಥೆಯು ಸೂಕ್ಷ್ಮವಾಗಿ ಅನುವು ಮಾಡಿಕೊಡುತ್ತದೆ. ಹಿಂದಿನ ಕಾಲದಲ್ಲಿ ಬದುಕನ್ನು ಸುಗಮಗೊಳಿಸುವ ಸರಕುಗಳನ್ನು ವೈಭವವೆಂದು ಕರೆಯಲಾಗುತ್ತಿತ್ತು- ಶುದ್ಧ ನೀರು ಸರಬರಾಜು, ವಿದ್ಯುತ್‌, ಹವಾನಿಯಂತ್ರಿತ ಕೊಠಡಿಗಳು, ಫ್ರಿಜ್‌, ಕಾರುಗಳು, ವಾಷಿಂಗ್‌ ಮಶಿನ್‌, ಟಿವಿ, ಸ್ಮಾರ್ಟ್‌ಫೋನ್‌ಗಳು. ಇಂತಹ ಸಾಮಾನ್ಯ ಶ್ರೀಮಂತಿಕೆಯ ಸಂಕೇತಗಳಾಗಿರುವ ಸರಕುಗಳು ಅಮೀರರಿಗೆ ಬರೇ ಚಕ್ಕುಲಿ ಮುರುಕುಗಳು.ಆದರೆ ಇಂದು ಅತ್ಯಧಿಕ ವೈಭವದಿಂದ ಜೀವಿಸುವುದು ಸುಲಭವಲ್ಲ. ಬಂಗ್ಲೆ ಖರೀದಿ, ಟೆನ್ನಿಸ್‌ ಆಟ, ವಿದೇಶಿ ಬೆಲೆಬಾಳುವ ಕಾರನ್ನು ಇಟ್ಟುಕೊಳ್ಳುವುದು, ನಟನಟಿಯರನ್ನು ಆಮಂತ್ರಿಸುವುದು ತುಂಬಾ ಕಷ್ಟಸಾಧ್ಯವಾದ ಕೆಲಸಗಳು. ಬಹುಜನರಿಗೆ ಮಾತ್ರವಲ್ಲ, ಶ್ರೀಮಂತರಿಗೂ ಇವುಗಳು ಅಲಭ್ಯವೆಂಬುದೇ ಅದರ ತಿರುಳು. ಅವುಗಳ ಮೌಲ್ಯವಿರುವುದೇ ಕೆಲವರಿಗೆ ಮಾತ್ರ ಎಟಕುವಂತಹ ಪರಿಸ್ಥಿತಿಯನ್ನು ಏರ್ಪಡಿಸಿದ ಕಾರಣವಾಗಿ.

ಪ್ರಖ್ಯಾತಿ ಒಂದಾದರೆ ಶ್ರೀಮಂತಿಕೆ ಮತ್ತೂಂದು! ಇಂದು ಪ್ರಖ್ಯಾತನಾಗುವುದು ಸುಲಭ. ಆದರೆ ಒಂದೆರಡು ವರ್ಷಕ್ಕಿಂತ ಹೆಚ್ಚು ಕಾಲ ಪ್ರಖ್ಯಾತನಾಗಿರುವುದು ಬಹುಕಷ್ಟ. ಅದರಲ್ಲೂ ಆ ಪ್ರಖ್ಯಾತಿ ವ್ಯಕ್ತಿಯ ಶರೀರಕ್ಕೆ ಸಂಬಂಧಿಸಿದ್ದರೆ ಕಷ್ಟ. ಸಿನೆಮಾ ನಟಿಯರ ಸಮಸ್ಯೆ ಅದು, ಅವರು ಹೆಚ್ಚೆಂದರೆ ಐದು ವರ್ಷ ಪ್ರಖ್ಯಾತರಾಗಿರಬಹುದು. ಶ್ರೀಮಂತಿಕೆಯ ಬಗ್ಗೆ ಒಂದು ವಿರೋಧಾಭಾಸವಿದೆ- ಪ್ರತಿಯೊಬ್ಬರೂ ಶ್ರೀಮಂತರಾಗಬೇಕೆಂದು ಆಶಿಸುತ್ತಾರೆ, ಅದು ಪರವಾಗಿಲ್ಲ. ಆದರೆ ಅದರ ಜತೆಗೆ ಇತರರು ಶ್ರೀಮಂತರಾಗಬಾರದು ಎಂಬ ಹೂಟವೂ ಇರುತ್ತದೆ. ಇಡೀ ರೈಲ್ವೇ ಕಂಪಾರ್ಟ್‌ಮೆಂಟ್‌ ತನಗೆ ಮಾತ್ರ ಮೀಸಲಿಡಬೇಕೆಂಬ ತವಕ. ಇಂತಹ ವಿದ್ಯಮಾನದಲ್ಲಿ ಉದರಾರ್ಥಿ ಬಡವರ ಸ್ಥಾನಮಾನವೇನು? ಬಡವರ ಶ್ರಮವಿಲ್ಲದಿದ್ದರೆ ಶ್ರೀಮಂತರು ತಮ್ಮ ಹಣವನ್ನೇ ತಿನ್ನಬೇಕಾಗುತ್ತದೆ.

ಫಾ| ಪ್ರಶಾಂತ್‌ ಮಾಡ್ತ

Back to Top