CONNECT WITH US  

ಹಾಸ್ಯವೆಂಬ ಹಗುರವಾಗುವ ವಿದ್ಯಮಾನ

ಅದುಮಿ ಹುದುಗಿಸಿಟ್ಟ ನಮ್ಮ ನಿಜಭಾವಗಳನ್ನು ಹೊರದಬ್ಬಲು ಹಾಸ್ಯ ಸಹಾಯಕವಾಗುತ್ತದೆ. ಅತಿರೇಕ ವೈಚಾರಿಕತೆಯಲ್ಲಿ ತೊಡಗುವ ವ್ಯಕ್ತಿಗಳಿಗೆ ಆ ಒಣಗಾಂಭೀರ್ಯದಿಂದ ಬಿಡುಗಡೆ ಹೊಂದಲು ಹಾಸ್ಯವು ಸಹಾಯಕ. ನಮ್ಮೊಳಗಿನ ಮಗುಭಾವವು ಕೆಲವೊಮ್ಮೆ ಎದ್ದು ಬಂದು ಬಾಲಿಶತೆ ಕಾಣಿಸಿಕೊಳ್ಳುತ್ತದೆ.

ಏಪ್ರಿಲ್‌ನಲ್ಲಿ ಪತ್ರಿಕೆಗಳ ಹಾಸ್ಯ ಸಂಚಿಕೆಗಳು ಪ್ರಕಟವಾಗುತ್ತವೆ. ಹಾಸ್ಯವು ಮಾನವ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ನೂರು ಕೆಲಸಕಾರ್ಯಗಳ ಒತ್ತಡಗಳ ನಡುವೆ ಒಂದು ಹಾಸ್ಯಚಟಾಕಿಯನ್ನು ಹಾರಿಸಿದರೆ ಅಯ್ಯಬ್ಟಾ ಎನ್ನಿಸುತ್ತದೆ. ನಾಲ್ಕು ಗೆಳೆಯರು ಒಟ್ಟು ಸೇರಿದಾಗ ಕೋತಿಚೇಷ್ಟೆ, ಮಕ್ಕರ್‌ ಇದ್ದೇ ಇದೆ. ಇತರರ ಗಮನವನ್ನು ಸೆಳೆಯಲು ಕೆಲವೊಮ್ಮೆ ಬಫ‌ೂನ್‌ ಆಗಬೇಕಾಗುತ್ತದೆ. ಕೆಲವೊಮ್ಮೆ ನಾವೇ ನಗೆಚಾಟಿಕೆಯ ಮೂಲಕ ತಿಳಿಹಾಸ್ಯವನ್ನು ಉತ್ಪಾದಿಸಿದರೆ ಹಲವೊಮ್ಮೆ ಹಾಸ್ಯವನ್ನು ಖರೀದಿಸುತ್ತೇವೆ- ಕತೆಗಳಲ್ಲಿ, ಲೇಖನಗಳಲ್ಲಿ, ಟಿವಿ ಧಾರಾವಾಹಿಗಳಲ್ಲಿ ಮಂಗಚೇಷ್ಠೆ ಮಾಡುವ ಕೋಡಂಗಿ ವಿದೂಷಕನ ಕೆಲಸವೇ ಅದು.

ಹಾಸ್ಯ ಎಂದರೆ ಮನರಂಜನೆ. ಹಾಸ್ಯದ ಫ‌ಲ ರಂಜನೆ. ರಂಜನೆಯು ಭಾವನಾತ್ಮಕ ಸ್ಥಿತಿ, ಕೋಪ ಭಯಗಳಂತೆ ಹಾಸ್ಯವೂ ಒಂದು ಭಾವ. ಭಯವೆಂಬ ಭಾವವು ಯಾವುದೋ ವಸ್ತುವಿನತ್ತ ಘಟನೆಯತ್ತ ಹಾಯುತ್ತದೆ. ಹಾಸ್ಯದ ಉದ್ದೇಶವೇ ನಿರಾಳತೆಯನ್ನು ಹಾಯಾಗಿ ಅನುಭವಿಸುವುದು. ಹಾಸ್ಯ ಮನೋಭಾವವಿದ್ದಲ್ಲಿ ಅಪರಿಚಿತರೊಂದಿಗೆ ಕ್ಷಣಮಾತ್ರದಲ್ಲಿ ಪರಿಚಯವನ್ನು ಸಾಧಿಸಬಹುದು, ತಿಕ್ಕಾಟದಲ್ಲಿ ತೊಡಗಿರುವವರ ನಡುವೆ ಸ್ನೇಹಪರತೆಯನ್ನು ಉಂಟುಮಾಡಬಹುದು. ಅದಲ್ಲದೆ ತನ್ನ ಬುದ್ಧಿವಂತಿಕೆಯನ್ನು ತೋರಿಸಲು ಕುಶಾಲು ಮಾಡಬಹುದು. ರಾತ್ರಿ ಮುಖ್ಯಬೀದಿಯಲ್ಲಿ ಲೈಟ್‌ ಇಲ್ಲದ ಸೈಕಲನ್ನು ಓಡಿಸುತ್ತಿ¤ದ್ದ ಹುಡುಗನನ್ನು ಪೊಲೀಸರು ಹಿಡಿದರು. ರಸ್ತೆಯಲ್ಲಿ ಇಷ್ಟೂ ದೀಪಗಳಿವೆಯಲ್ಲ ಎಂದು ಹುಡುಗ ಬುದ್ಧಿವಂತಿಕೆಯನ್ನು ತೋರಿಸಿದ. ಓಹೋ ಹಾಗೆಯೋ ಎಂದ ಪೊಲೀಸ್‌ ಕೂಡಲೇ ಬಗ್ಗಿ ಸೈಕಲಿನ ಚಕ್ರಗಳ ಗಾಳಿಯನ್ನು ಹೊರಬಿಟ್ಟು ಹೊರಗೆ ಇಷ್ಟು ಗಾಳಿಯಿದೆಯಲ್ಲ ಎಂದ. ಮಷ್ಕಿರಿಯು ಮಾನವರಿಗೆ ಮಾತ್ರ ಸೀಮಿತ ಎನ್ನುತ್ತಾರೆ, ಅದರ ಅಗತ್ಯ ಇರುವುದು ಬಿರುಸಾಗಿ ಬೀಗುತ್ತಾ ಇರುವ ಮಾನವರಿಗೆ ಮಾತ್ರ. ಹಾಸ್ಯವೆಂದರೆ ಹಗುರವಾಗುವ ವಿದ್ಯಮಾನ. ಪ್ರಾಣಿಗಳಲ್ಲಿ ಕಾಣಸಿಗದ ಹಾಸ್ಯಪ್ರವೃತ್ತಿ ಮಾನವರಲ್ಲಿ ಕಾಣಸಿಗಲು ಕಾರಣಗಳೇನು ಎಂಬುದರ ಬಗ್ಗೆ ಹಲವು ಸಿದ್ಧಾಂತಗಳಿವೆ.  

ಮೇಲ್ಮೆ, ಹಿರಿಮೆ ಸಿದ್ಧಾಂತ 
ಕೆಲವೊಮ್ಮೆ ಆ ಜನಕ್ಕಿಂತ ನಾವು ಮೇಲು ಎಂಬುದನ್ನು ಸಾಬೀತು ಪಡಿಸಲು ಹಾಸ್ಯವನ್ನು ಬಳಸಲಾಗುತ್ತದೆ ಎಂಬ ಸಿದ್ಧಾಂತವಿದೆ.ಆದುದರಿಂದಲೇ ಇತರರ ನ್ಯೂನತೆಗಳನ್ನು, ಊನಗಳನ್ನು ಬೊಟ್ಟಿಟ್ಟು ಎತ್ತಿ ತೋರಿಸಿ ಹಾಸ್ಯ ಪ್ರಸಂಗಗಳನ್ನು ಕಟ್ಟಲಾಗುತ್ತದೆ. ಇತರರ ಬಗ್ಗೆ ಅವಹೇಳನವೇ ತನ್ನ ಹೆಚ್ಚುಗಾರಿಕೆ, ತಾವೆಷ್ಟೋ ಮೇಲು ಎಂಬ ಭಾವ.  ಆದುದರಿಂದಲೇ ಇತರ ಜನಾಂಗದವರನ್ನು ಲೇವಡಿ ಮಾಡುವ ತಮಾಷೆ ಮಾತುಗಳು ಇವೆ. ಪೋಲೆಂಡ್‌ ಹಾಗೂ ಇಟಾಲಿಯನರ ಬಗ್ಗೆ ಅಮೆರಿಕನರು, ಐರೆಲಂಡಿನವರ ಬಗ್ಗೆ ಇಂಗ್ಲೆಂಡಿನವರು, ಬೆಲ್ಜಿಯನ್‌ರವರ ಬಗ್ಗೆ ಫ್ರೆಂಚ್‌ ಜನರು, ರಶಿಯನರ ಬಗ್ಗೆ ಪೋಲೆಂಡಿನವರು, ಪೋರ್ಚುಗಲ್‌ ಜನರ ಬಗ್ಗೆ ಬ್ರೆಜಿಲ್‌ ಜನರು ಸಿದ್ಧಮಾದರಿಗಳನ್ನು ರೂಪಿಸಿ ಕೀಟಲೆ ಮಾಡುವುದಿದೆ. ನಮ್ಮಲ್ಲಿ ಸಿಕ್ಖ್ ಜನರನ್ನು ಹೆಡ್ಡರೆಂದು ಚಿತ್ರಿಸುವ ಸರ್ದಾರ್ಜಿ ಜೋಕುಗಳು ಇವೆ. ಇದು ನಿಜಕ್ಕೂ ಸಿಕ್ಖ್ ಜನರಿಗೆ ಮಾಡುವ ಅನ್ಯಾಯ. ಅವರು ನಿಜಕ್ಕೂ ಬುದ್ಧಿವಂತರು ಹಾಗೂ ತುಂಬಾ ಪ್ರಗತಿಯನ್ನು ಸಾಧಿಸಿದ ಜನಾಂಗ. ಇತರರ ಬಗ್ಗೆ ಜೋಕು ಮಾಡುವುದು ಅವರು ನಮ್ಮಿಂದ ಭಿನ್ನರು ಎಂದು ಮಾತ್ರವಲ್ಲ, ಇದರೊಂದಿಗೆ ಇತರರು ನಮಗಿಂತ ಕೀಳು ಮಟ್ಟದವರು ಎಂದು ಸಾಧಿಸಲು. ಇತರರು ಹುಚ್ಚುಕಾರ್ಯಗಳಲ್ಲಿ ನಿರತರು ಎಂಬ ಭಾವನೆಯನ್ನು ಹುಟ್ಟಿಸುವ ಇಂತಹ ಜೋಕ್‌ಗಳು ಇತರರ ಹೆಚ್ಚುಗಾರಿಕೆಯ ಮೇಲೆ ನಡೆಸುವ ಶಸ್ತ್ರರಹಿತ ದಾಳಿಗಳು. ಹುಲಿ ಸಿಂಹಗಳು ದಾಳಿ ನಡೆಸುವ ಮೊದಲು ಬಾಯಿತೆರೆದು ಕೋರೆಹಲ್ಲುಗಳನ್ನು ತೋರಿಸಿದಂತೆ, ಇತರರನ್ನು ಕಂಡು ಹಲ್ಲು ಬಿಟ್ಟು ನಗುವುದೇ ಅವರನ್ನು ಕಚ್ಚಲು ಹವಣಿಸಿದಂತೆ. "ನಾವು' ಇರುವಾಗ "ಅವರು' ಎಂಬ ಪಂಗಡ ಇರಬೇಕಾದ್ದೇ. ನಾವು ಎಂಬ ಸಮಷ್ಟಿ ಅಹಂ ಅನ್ನು ರೂಪಿಸಲು ಅವರ ವಿರುದ್ಧ ನಾವು ನಮ್ಮನ್ನು ಮೇಲೇರಿಸುವ ಕಲ್ಪನೆಗಳನ್ನು ರೂಪಿಸುತ್ತೇವೆ. ನಮ್ಮದಲ್ಲದ ಕೀಳುತನವೆಲ್ಲ ಅವರದ್ದು. ನಮ್ಮಲ್ಲಿ ಕಾಣಸಿಗದ, ಅವರಲ್ಲಿ ಗೋಚರವಾಗುವ ಲಕ್ಷಣಗಳೆಲ್ಲ ಜೋಕುಗಳಾಗುತ್ತವೆ. ನಮ್ಮದು ಲಕ್ಷಣ, ಅವರದ್ದು ವಿಲಕ್ಷಣ. ನಮ್ಮದು ರೂಢಿ, ಕಾಮನ್‌ಸೆನ್ಸ್‌; ಅವರದ್ದು ಏನೋ ವಿಚಿತ್ರವಪ್ಪಾ! ನಮ್ಮಲ್ಲಿ ಆ ವಿಲಕ್ಷಣಗಳು ಇಲ್ಲದ ಕಾರಣ ನಾವು ವಿಶಿಷ್ಟರು.ಅವರದ್ದೆಲ್ಲ ಕೊಸ್ರಂಗೊಳ್ಳಿ.

ವಿರೇಚನ ಸಿದ್ಧಾಂತ
ಅದುಮಿ ಹುದುಗಿಸಿಟ್ಟ ನಮ್ಮ ನಿಜಭಾವಗಳನ್ನು ಹೊರದಬ್ಬಲು ಹಾಸ್ಯ ಸಹಾಯಕವಾಗುತ್ತದೆ. ಅತಿರೇಕವಾದ ವೈಚಾರಿಕತೆಯಲ್ಲಿ ತೊಡಗುವ ವ್ಯಕ್ತಿಗಳಿಗೆ ಆ ಒಣಗಾಂಭೀರ್ಯದಿಂದ ಬಿಡುಗಡೆ ಹೊಂದಲು ಹಾಸ್ಯವು ಸಹಾಯಕ. ನಮ್ಮೊಳಗಿನ ಮಗುಭಾವವು ಕೆಲವೊಮ್ಮೆ ಎದ್ದು ಬಂದು ಬಾಲಿಶತೆ ಕಾಣಿಸಿಕೊಳ್ಳುತ್ತದೆ. ಮಹತ್ತಾದುದನ್ನು ಯೋಚಿಸುತ್ತಿರುವಾಗ ಯಾವುದೋ ಜುಜುಬಿ ವಿಷಯವೇ ಹಾಸ್ಯವನ್ನು ಉಂಟುಮಾಡುತ್ತದೆ. ಮಾಮೂಲಿನ, ರೂಢಿಯ, ಔಚಿತ್ಯದ ಪದ್ಧತಿಯ ಸಿದ್ಧಕಲ್ಪನೆಯಿರುವಾಗ ಅದು ಮಾಮೂಲನ್ನು ದಾಟಿ ಇನ್ನೊಂದೇ ಆದಾಗ ನಗು ಬರುತ್ತದೆ. ಬುದ್ಧಿ ಖರ್ಚು ಮಾಡಿ ತಲೆಬಿಸಿಯಾದಾಗ ಹಾಸ್ಯವು ನಿರಾಳ ಭಾವವನ್ನು ದಯಪಾಲಿಸುತ್ತದೆ. ಹಾಸ್ಯಕ್ಕೆ ಸೋಂಕು ಲಕ್ಷಣವಿದೆ- ಥಿಯೇಟರಿನಲ್ಲಿ ಹೆಚ್ಚು ನಗು ಬರುತ್ತದೆ. ಆದರೆ ಅದೇ ಸಿನೆಮಾವನ್ನು ಒಬ್ಬಂಟಿಗನಾಗಿ ನೋಡಿದಾಗ ಅಷ್ಟೊಂದು ನಗು ಉಕ್ಕಲಾರದು. ಹೆಣ್ಣು ಆನೆ ಹಾಗೂ ಗಂಡು ಇರುವೆ ಪರಸ್ಪರ ಪ್ರೀತಿಸುತ್ತಿದ್ದುವು. ಆದರೆ ಇರುವೆಯ ತಂದೆತಾಯಿ ಒಪ್ಪಲಿಲ್ಲ. ಆನೆಗೆ ಹಲ್ಲುಬ್ಬು, ಎರಡು ಹಲ್ಲುಗಳು ಈಚೆಗೆ ಬಂದಿವೆ- ಎಂಬಂಥ ಸರಳ ಜೋಕುಗಳೂ ಹೊಟ್ಟೆಹುಣ್ಣಾಗುವಂತೆ ನಗುವನ್ನು ಉಂಟುಮಾಡುತ್ತವೆ.ಇತರರನ್ನು ಲೇವಡಿಗೆ ತುತ್ತಾಗಿಸಿ ನಮಗೇನು ಲಾಭ? ಭಯವೆಂಬ ಭಾವವು ಅಪಾಯಗಳಿಂದ ನಮ್ಮನ್ನು ರಕ್ಷಿಸುತ್ತದೆ, ಸಿಟ್ಟು ಭಾವವು  ಅನ್ಯಾಯದಿಂದ ರಕ್ಷಿಸುತ್ತದೆ, ಮತ್ಸರ ಭಾವವು ನಮ್ಮಿಂದ ಏನೋ ಅಮೂಲ್ಯವಾದುದು ತಪ್ಪಿಹೋಗುತ್ತದೆ ಎಂಬ ಅಳುಕಿನಿಂದಾಗಿ ಉಂಟಾಗುತ್ತದೆ. ಹಾಸ್ಯವು ಏನನ್ನು ಸಾಧಿಸುತ್ತದೆ? ಮೇಲ್ಮೆ ಸಿದ್ಧಾಂತದ ಪ್ರಕಾರ ಇತರರನ್ನು ಗೇಲಿಗೆ ಈಡು ಮಾಡುವುದರಿಂದಾಗಿ ನಮಗೊಂದು ಸ್ಥಾನಮಾನ ಸಿಗುತ್ತದೆ, ನಾವು ಅವರಂತೆ ಪೆದ್ದು ಅಲ್ಲ ಎಂದು ಸಾಧಿಸಿದಂತಾಗುತ್ತದೆ. ರಾಜಕಾರಣಿಗಳ ಬಗ್ಗೆ ಹೇಳುವಂತೆ- ಇನ್ನೇನು, ಚುನಾವಣೆ ಸಮೀಪಿಸುತ್ತಿದೆ, ನರಿಗಳೆಲ್ಲ ಸೇರಿ ಕೋಳಿಗಳನ್ನು ಅಭಿವೃದ್ಧಿ ಪಥದಲ್ಲಿ ಒಯ್ಯುತ್ತೇವೆ ಎಂದು ಆಶ್ವಾಸನೆ ನೀಡುತ್ತಿದ್ದಾರೆ.

ಅಸಮಂಜಸತೆ, ಅನುಚಿತತೆ, ಅಸಂಬದ್ಧತೆ
ಚಾರ್ಲಿ ಚಾಪ್ಲಿನ್‌ ತಾನು ನಿರ್ದೇಶಿಸಿದ ಒಂದು ಸಿನೆಮಾದಲ್ಲಿ, ತನ್ನ ಕಾಲಿನ ಬೂಟನ್ನು ಊಟದ ಮೇಜಿನ ಮೇಲಿರಿಸಿ ಮುಕ್ಕುವ ಒಂದು ದೃಶ್ಯವಿದೆ. ಇದು ನಗುವನ್ನು ತರಿಸುತ್ತದೆ, ಯಾಕಾಗಿ? ಬೂಟು ಬಟ್ಟೆಯಂತೆ ತೊಡುಗೆಯ ವರ್ಗಕ್ಕೆ ಸೇರಿದ ವಸ್ತು. ಬೂಟನ್ನು ತೊಡುಗೆಯ ವಸ್ತುವರ್ಗದಿಂದ ಬಲಾತ್ಕಾರವಾಗಿ ಹೊರತೆಗೆದು, ರುಚಿಕರವಾದ ಖಾದ್ಯ ವರ್ಗಕ್ಕೆ ಸೇರಿಸಿ ರುಚಿ ಸವಿಯುವ ಅನುಚಿತತೆಯ ದೃಶ್ಯವು ಮಿದುಳಿಗೆ ಕಚಗುಳಿಯಿಡುತ್ತದೆ. ಸಮಾಜವು ಯಾದೃಚ್ಛಿಕವಾಗಿ ಮನಸೊÕà ಇಚ್ಛೆಯಂತೆ ಹೇರುವ ರೂಢಿಗತ ವರ್ಗಗಳನ್ನು ಒಡೆದುಹಾಕುವ ಮೂರ್ತಿಭಂಜಕತೆಯೇ ನಗು ಬರಿಸುತ್ತದೆ. ಸಮಾಜವು ಇದೇ ಸತ್ಯ, ಇದೇ ಪ್ರಕೃತಿದತ್ತ, ಇದೇ ಸನಾತನ ಎಂದು ಒದಗಿಸಿಕೊಡುವ ಕಲ್ಪನೆಗಳನ್ನು ಪುಡಿಪುಡಿ ಮಾಡಿ ಗಹಗಹಿಸಿ ನಗುವುದೇ ಹಾಸ್ಯ. ಜೋಕ್‌ಗಳು ಸಿದ್ಧವರ್ಗಗಳನ್ನೂ ರೂಢಿಗಳನ್ನೂ ಪರಾಂಬರಿಸುವಂತೆ ಮಾಡುತ್ತವೆ. 

ಸಮಾಜವು ಯಾವುದನ್ನು ಅತ್ಯಂತ ಸೀರಿಯಸ್‌ ಎಂದು ಮುಂದೊಡ್ಡುತ್ತದೋ ಅದೇ ಅತ್ಯಂತ ಹಾಸ್ಯಾಸ್ಪದವಾಗುತ್ತದೆ. ದಿನನಿತ್ಯದ ಚಿಂತನಾರೂಢಿಗಳ ಹಳಿ ತಪ್ಪಿಸುವುದೇ ಹಾಸ್ಯವಾಗಿ ಪರಿಣಮಿಸುತ್ತದೆ. ಯಾವುದು ಸಮಾಜದಲ್ಲಿ ವೈಭವಪೂರ್ಣವೋ ಪವಿತ್ರವೋ ಪರಿಪೂರ್ಣವೆಂದು ಗಣಿಸಲಾಗುತ್ತದೋ ಅದರ ಹಿರಿಮೆಯನ್ನು ಕಡಿದುರುಳಿಸುವುದು, ಯಾವುದು ಔಚಿತ್ಯವೆಂದು ಒಪ್ಪಿಕೊಳ್ಳಲಾಗಿದೆಯೋ ಅದಕ್ಕೆ ಹುಳ ಹಿಡಿದಿದೆ ಎಂದು ಎತ್ತಿತೋರಿಸುವುದು. 

ಗಂಭೀರ ಮುಖಭಾವದ ಪೊಲೀಸ್‌ ದಾಪುಗಾಲು ಹಾಕಿ ನಡೆಯುತ್ತಾ ಸಿನೆಮಾ ಪೋಸ್ಟರ್‌ ನೋಡುತ್ತಾ ರಸ್ತೆಯ ಹೊಂಡಕ್ಕೆ ಬಿದ್ದಾಗ, ಅವನ ಗಾಂಭೀರ್ಯವು ದಸಕ್ಕನೆ ಇಳಿದುಹೋಗುತ್ತದೆ.ಅಂಗಡಿಯ ಮುಂದೆ ನಿಂತು ಹುಡುಗ ಸಿಗರೇಟು ಎಳೆಯುತ್ತಿದ್ದ. ಇಲ್ಲಿ ಹಾಗೆ ಮಾಡಬೇಡಿ ಎಂದು ಅಂಗಡಿಯವನು ಹೇಳಿದ. ಹುಡುಗ ನಿಮ್ಮ ಅಂಗಡಿಯಲ್ಲೇ ಸಿಗರೇಟು ಖರೀದಿಸಿದ್ದು ಎಂದ. ಅದಕ್ಕೆ ಅಂಗಡಿಯವನು- "ನಾವು ಬೇಧಿ ಮಾತ್ರೆಯನ್ನೂ ಮಾರುತ್ತಿದ್ದೇವೆ, ಅದನ್ನೂ ಇಲ್ಲೇ ಮಾಡುತ್ತೀರಾ?' ಎಂದ. ಖಾನೇಶುಮಾರಿಗೆ ಬಂದ ಆಫೀಸರ್‌ ಮನೆಹೆಂಗಸಿನೊಂದಿಗೆ ಕೇಳಿದ, "ಎಷ್ಟು ಮಕ್ಕಳು?' "ಆರು' ಎಂದಳು.' ಗಂಡ ಎಲ್ಲಿ?' "ಅವರು ಸತ್ತು ಐದು ವರ್ಷವಾಯಿತು'. "ಸತ್ತು ಐದು ವರ್ಷವಾಯಿತು? ಆದರೆ ನಿಮಗೆ ಎರಡು ವರ್ಷದ, ಮೂರು ವರ್ಷದ ಮಕ್ಕಳಿದ್ದಾರೆ ಅಲ್ವೇ?' "ಸತ್ತದ್ದು ಅವರು, ಜೀವಂತವಾಗಿದ್ದೇನೆ ಅಲ್ವೇ' ಎಂದಳು ಅವಳು.

ಫಾ| ಪ್ರಶಾಂತ್‌ ಮಾಡ್ತ

Trending videos

Back to Top