ನಮಾಮಿ ಗಂಗೆ ಎಂದಷ್ಟೇ ಹೇಳದಿರೋಣ, ಪ್ರೀತಿಸೋಣ


Team Udayavani, Oct 7, 2017, 8:05 AM IST

Ganga-River-6-10.jpg

ನದಿಯನ್ನು ಸ್ವಚ್ಛಗೊಳಿಸುವುದೆಂದರೆ ಸಣ್ಣ ಕೆಲಸವೇನಲ್ಲ ಎಂಬುದು ಈಗಾಗಲೇ ಸರಕಾರಗಳಿಗೆ ಗೊತ್ತಾಗಿದೆ. ವಾಸ್ತವ ಹೀಗಿರುವಾಗ ನದಿಯನ್ನು ಮಲಿನಗೊಳಿಸದಿರುವಂತೆ ಜಾಗೃತಿ ಮೂಡಿಸುವುದೇ ಜಾಣತನ.

ನಮ್ಮ ಹಿರಿಯರು ಹೇಳುತ್ತಿದ್ದ ಮಾತನ್ನು ನೀವೂ ಕೇಳಿರಬಹುದು. ಯಾವುದನ್ನೇ ಆಗಲಿ ಸೃಷ್ಟಿಸುವುದು ಕಷ್ಟ; ಹಾಳು ಮಾಡುವುದು ಸುಲಭ. ಇನ್ನೂ ಗಾದೆ ಮಾತಿನಲ್ಲಿ ಹೇಳುವಂತೆ ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ. ಒಂದು ಸುಂದರವಾದ ಕಲಾಕೃತಿ ರೂಪದ ಮಡಕೆಯನ್ನು ಮಾಡಬೇಕೆಂದರೆ ಮಡಕೆ ಮಾಡುವವನಿಗೆ ಹಲವಾರು ದಿನಗಳೇ ಬೇಕು. ಆದರೆ ದೊಣ್ಣೆಯೊಂದು ಒಂದು ಕ್ಷಣದಲ್ಲಿ ಎಲ್ಲವನ್ನೂ ಪುಡಿ ಮಾಡಿಬಿಡಬಲ್ಲದು. ಇದೇ ಮಾತನ್ನು ಅನ್ವಯಿಸಿಕೊಂಡರೆ ನಮ್ಮ ಈ ನದಿಗಳನ್ನು ಮಲಿನಗೊಳಿಸುವ ಚಟದ ಬಗ್ಗೆ ವಾಕರಿಕೆ ಮೂಡೀತು.

ಒಂದು ನದಿಯನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದನ್ನು ಯೋಚಿಸುವ ಬದಲು, ನಾವು ಹೇಗೆ ಮಲಿನಗೊಳಿಸುವುದೆಂದು ಯೋಚಿಸುತ್ತಿದ್ದೇವೆ ಎಂದರೆ ತಪ್ಪೇನೂ ಇಲ್ಲ. ಎಲ್ಲೆಡೆಯೂ ನಡೆಯುತ್ತಿರುವುದು ಅದೇ. ಸಾಂಪ್ರದಾಯಿಕ ಜಲಮೂಲಗಳನ್ನು ನಾಶಪಡಿಸುತ್ತಾ ಹೋಗುತ್ತಿರುವ ಬೆಳವಣಿಗೆ ಹೊಸದೇನೂ ಅಲ್ಲ. ಮಲಿನಗೊಂಡ ನದಿಯೊಂದನ್ನು ಸ್ವಚ್ಛಗೊಳಿಸುವುದು ಎಂಥ ಕಡುಕಷ್ಟದ ಕೆಲಸವೆಂಬುದಕ್ಕೆ ನಮ್ಮ ಎದುರು ಬಹಳಷ್ಟು ಉದಾಹರಣೆಗಳಿವೆ.

ನಮಾಮಿ ಗಂಗೆ
ನಮ್ಮ ದೇಶದಲ್ಲಿ ಗಂಗಾ ನದಿಯನ್ನು ಬಹಳ ಪವಿತ್ರದ ಸ್ಥಾನದಲ್ಲಿಟ್ಟಿದ್ದೇವೆ. ನಿತ್ಯವೂ ಪೂಜಿಸುತ್ತೇವೆ, ಅಷ್ಟೇ ಕಲುಷಿತಗೊಳಿಸುತ್ತಿದ್ದೇವೆ. ಉತ್ತರಾಖಂಡದ ಗಂಗೋತ್ರಿಯಲ್ಲಿ ಹುಟ್ಟುವ ಗಂಗೆ ಹರಿಯುವುದು ಸಣ್ಣ ತೊರೆಯಾಗಿ ಅಲ್ಲ; ಪ್ರವಾಹದಂತೆ. ಒಟ್ಟೂ ಎಂಟು ರಾಜ್ಯಗಳ 47 ನಗರಗಳನ್ನು ಗಂಗೆ ಹಾದು ಹೋಗುತ್ತಾಳೆ. ಇಷ್ಟೇ ಅಲ್ಲ; ಇದಕ್ಕೊಂದು ರಾಜಕೀಯ ನೆಲೆಯೂ ಇದೆ. ಈ ಗಂಗೆ ಹಾದು ಹೋಗುವುದು ಸುಮಾರು 160ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ. ಈ ವಲಯದಲ್ಲೆಲ್ಲ ಗಂಗೆ ಬಹುತೇಕ ಕಲುಷಿತಗೊಂಡಿದ್ದಾಳೆ. ಇದಕ್ಕೆ ಹಲವು ಕಾರಣಗಳಿವೆ. ಗಂಗೆಯ ತಪ್ಪಲಿನಲ್ಲಿರುವ ಪ್ರದೇಶಗಳಲ್ಲಿ ಜನಸಂಖ್ಯೆ ದಟ್ಟಣೆ ಹೆಚ್ಚಳವಾಗಿರುವುದು, ಕೈಗಾರಿಕೆಗಳ ತ್ಯಾಜ್ಯ ಸೇರುತ್ತಿರುವುದು, ವಿವಿಧ ರೀತಿಯ ತ್ಯಾಜ್ಯಗಳ ವಿಲೇವಾರಿಗೆ ಜನರು ಗಂಗೆ ಮತ್ತು ಅದರ ಉಪನದಿಗಳನ್ನು ಆಶ್ರಯಿಸಿರುವುದು-ಇವೆಲ್ಲದರ ಒಟ್ಟು ಪರಿಣಾಮ ಪವಿತ್ರ ಗಂಗೆ ಅಪವಿತ್ರಗೊಂಡಿರುವುದು ನಿಜ.

ನಮ್ಮ ಕೊಡುಗೆ ಹೇಗೆ?
ವಾರಣಾಸಿಗೆ ಹೋಗಿ ಅಲ್ಲಿನ ವಿವಿಧ ಘಾಟ್‌ಗಳಲ್ಲಿ ನಿಂತು ಗಂಗೆಯನ್ನು ನೋಡಿದರೆ ಈ ಮಾಲಿನ್ಯದ‌ ಗಂಭೀರತೆ ಅರ್ಥವಾಗಬಹುದು. ನದಿಗಳಲ್ಲಿ ಹೆಣಗಳು ತೇಲಿ ಬಂದರೆ, ಅರ್ಧಂಬರ್ಧ ಸುಟ್ಟ ಹೆಣಗಳು ಸಾಗಿ ಹೋದರೆ ಹೇಗಿರಬಹುದು? ಇದರೊಂದಿಗೆ ನದಿ ಪಾತ್ರದಲ್ಲಿನ ಬಹುತೇಕ ತ್ಯಾಜ್ಯಗಳು ಸೇರುತ್ತಿರುವುದು ಇವುಗಳ ಒಡಲನ್ನೇ. ಜತೆಗೆ ಪವಿತ್ರ ಸ್ನಾನಕ್ಕೆಂದು ಪ್ರತಿ ವರ್ಷ ವಿವಿಧ ಸಂದರ್ಭಗಳಲ್ಲಿ ಸುಮಾರು 70 ದಶಲಕ್ಷ ಮಂದಿ ಸ್ನಾನ ಮಾಡುತ್ತಾರೆ. ಬರೀ ಸ್ನಾನ ಮಾಡಿ ಬಂದರೆ ದೊಡ್ಡದಲ್ಲ. ಆಗ ಬಟ್ಟೆ, ಅನ್ನ, ಆಹಾರ ಮತ್ತಿತರ ವಸ್ತುಗಳನ್ನು ನದಿಗೆ ಹರಿಯಬಿಡುತ್ತಾರೆ.

ಉದಾಹರಣೆಗೆ, ವಾರಣಾಸಿಯಲ್ಲಿ ಗಂಗೆಗೆ ಆರತಿ ಮಾಡುವಾಗ ಅಲ್ಲಿಗೆ ಗಂಗೆಗೆ ದೀಪಗಳನ್ನು ಇಡುವಂತೆ ಪ್ರವಾಸಿಗರನ್ನು ವ್ಯಾಪಾರಿಗಳು ದುಂಬಾಲು ಬೀಳುತ್ತಾರೆ. ಅದು ತಾವರೆಯಂಥ ಎಲೆಯ ತಟ್ಟೆಗೆ ಒಂದಿಷ್ಟು ಚೆಂಡು ಹೂವುಗಳನ್ನು ಇಟ್ಟು,ಒಂದು ದೀಪ ಹಚ್ಚಿ ಕೊಡುತ್ತಾರೆ. ಅದನ್ನು ಖರೀದಿಸಿ ಪ್ರವಾಸಿಗರು ನದಿಗೆ ಬಿಡಬೇಕು. ಅದು ತೇಲಿಕೊಂಡು, ಎಣ್ಣೆ ಇದ್ದಷ್ಟು ಹೊತ್ತು ದೀಪ ಉರಿಯುತ್ತದೆ. ಬಳಿಕ ಅದು ತ್ಯಾಜ್ಯವಾಗಿ ಮಾರ್ಪಡುತ್ತದೆ. ಸಂಜೆ ಹೊತ್ತು ಗಂಗೆ ದರ್ಶನಕ್ಕೆ ಬರುವ ಶೇಕಡಾ ನೂರರಷ್ಟು ಪ್ರವಾಸಿಗರಲ್ಲಿ 95ರಷ್ಟು ಮಂದಿ ಗಂಗೆಗೆ ದೀಪ ಇಡದೇ ವಾಪಸು ಬರುವುದಿಲ್ಲ. ಅದರಲ್ಲೂ ಮಹಿಳೆಯರಿಗಂತೂ ಅದು ಅತ್ಯಂತ ಪವಿತ್ರವಾದ ಕಾರ್ಯ. ಯಾಕೆಂದರೆ ನದಿಗೆ ನಾವು ಮನೆಯಲ್ಲೂ ಪವಿತ್ರ ಸ್ಥಾನ ಕೊಟ್ಟವರು. ಮಹಿಳೆಯರಿಗಂತೂ ನದಿಗೆ ದೀಪ ಇಡುವುದು ಎಂದರೆ ದೊಡ್ಡ ಪುಣ್ಯದ ಕಾರ್ಯವೆಂಬ ನಂಬಿಕೆಯಿದೆ.

ಅಷ್ಟೇ ಏಕೆ? ನಮ್ಮ ಮಂತ್ರಿಗಳು, ಮುಖ್ಯಮಂತ್ರಿಗಳೆಲ್ಲ ನಮ್ಮ ನದಿಗಳು ತುಂಬಿದಾಗ, ಅಣೆಕಟ್ಟುಗಳು ತುಂಬಿ ತುಳುಕುವಾಗ ಪ್ರತಿ ವರ್ಷ ಹೋಗಿ ಬಾಗಿನ ಅರ್ಪಿಸುವ ಸಂಪ್ರದಾಯವಿಲ್ಲವೇ? ಅಂಥದ್ದೇ ಒಂದು  ಆಚರಣೆ ಅಲ್ಲಿಯದೂ ಸಹ. ನಾವೇ ಸಣ್ಣಗೆ ಲೆಕ್ಕ ಹಾಕೋಣ. ಒಂದು ದಿನಕ್ಕೆ ವಾರಣಾಸಿಗೆ ಭೇಟಿ ನೀಡುವ ಮಂದಿ ಕಡಿಮೆ ಏನೂ ಇಲ್ಲ. ಉತ್ತರ ಪ್ರದೇಶದಲ್ಲಿ ಸಾಕಷ್ಟು ಜನಪ್ರಿಯವಾಗಿರುವ ತಾಣವಿದು. ಈ ಊರಿನಲ್ಲಿ ಎರಡನೇ ಅತ್ಯಂತ ದೊಡ್ಡ ಉದ್ಯೋಗ ಸೃಷ್ಟಿಸಿರುವ ಕ್ಷೇತ್ರವೆಂದರೆ ಅದು ಪ್ರವಾಸೋದ್ಯಮ. ಸಾಮಾನ್ಯವಾಗಿ ಪ್ರತಿ ವರ್ಷ ಕನಿಷ್ಠ 30 ಲಕ್ಷ ದೇಶೀಯರು ಹಾಗೂ 2-3 ಲಕ್ಷದಷ್ಟು ವಿದೇಶಿಯರು ಇಲ್ಲಿಗೆ ಭೇಟಿ ನೀಡುತ್ತಾರೆ. ಇವರಲ್ಲಿ ಕಾಶಿ ವಿಶ್ವನಾಥ, ಗಂಗೆಯನ್ನು ನೋಡದೆ ಇರಲಾರರು. ಇವರಲ್ಲಿ ಬಹುಪಾಲು ಮಂದಿ ಗಂಗೆಗೆ ಆರತಿ ಎತ್ತದೇ ಅಥವಾ ದೀಪ ಹಚ್ಚದೇ ಇರಲಾರರೆಂದುಕೊಂಡರೆ ಎಷ್ಟೊಂದು ಅನಾಹುತವನ್ನು ಸೃಷ್ಟಿಸುತ್ತಿದ್ದೇವೆ ಎಂದು ಲೆಕ್ಕ ಹಾಕಿಕೊಳ್ಳೋಣ. ಪ್ರವಾಸಿಗರಾದ ನಾವು ನಮ್ಮ ನಂಬಿಕೆಯ ಆಧಾರದ ಮೇಲೆ ಮಾಡುವ ಇಂಥ ಸಣ್ಣ ಸಣ್ಣ ಮಲಿನವೂ ದೊಡ್ಡ ತ್ಯಾಜ್ಯದ ಗುಂಡಿಗೆ ಹೋಗಿ ಸೇರುತ್ತಿದೆ. ಒಟ್ಟೂ ನಮ್ಮ ನದಿಗಳು ಕಲುಷಿತಗೊಳ್ಳುತ್ತಿವೆ.

ಗಂಗೆ ಜೀವನದಿಯಷ್ಟೇ ಅಲ್ಲ
ಗಂಗೆ ಜೀವನದಿಯಷ್ಟೇ ಅಲ್ಲ; ಜೀವ ಇರುವ ನದಿ ಎಂದು ಸಾರಿದ್ದು ಉತ್ತರಾಖಂಡ ರಾಜ್ಯದ ಹೈಕೋರ್ಟ್‌. 2017ರ ಜನವರಿಯಲ್ಲಿ ಗಂಗೆ, ಯಮುನಾ ಹಾಗೂ ಅವುಗಳ ಉಪನದಿಗಳಿಗೆ ಈ ಸ್ಥಾನಮಾನ ನೀಡಿತು ಹೈಕೋರ್ಟ್‌. ಇವುಗಳಿಗೂ ಜೀವ ಇದೆ ಎಂದು ಸಾರಿತು. ಅದುವರೆಗೆ ನಾವು ಅವುಗಳಿಗೆ ಜೀವವಿದೆ ಎಂದೇ ನಂಬಿರಲಿಲ್ಲ. ಎಷ್ಟೊಂದು ಅಚ್ಚರಿಯಲ್ಲವೇ? ಕಾರಣವಿಷ್ಟೇ. ಅವುಗಳಿಗೂ ಜೀವವಿದೆ ಎಂದುಕೊಂಡಿದ್ದರೆ ಇಷ್ಟೊಂದು ಕಲುಷಿತಗೊಳಿಸುತ್ತಿರಲಿಲ್ಲವೆಂಬುದು ನನ್ನ ನಂಬಿಕೆಯೂ ಸಹ.

ಹೈಕೋರ್ಟ್‌ ಅವುಗಳಿಗೆ ಜೀವವಿದೆ ಎಂದು ಸಾರುವ ಮೂಲಕ, ಒಂದು ಬಗೆಯ ಕಾನೂನಾತ್ಮಕ ನೆಲೆಗಟ್ಟನ್ನು ಒದಗಿಸಿತು. ಹಾಗೆ ನೋಡುವುದಾದರೆ ಮನುಷ್ಯರನ್ನು ಹೊರತುಪಡಿಸಿದಂತೆ ಉಳಿದ ಯಾವುದೂ ಕಾನೂನಿನಾತ್ಮಕ ನೆಲೆಯಲ್ಲಿ ಜೀವವುಳ್ಳವು ಎಂಬುದಾಗಿ ವಿಶಾಲವಾಗಿ ನೋಡಿಲ್ಲ. ಹಾಗಾಗಿ ದೇಶದಲ್ಲೇ ಮೊದಲ ಬಾರಿಗೆ ಮನುಷ್ಯೆತರ ಪ್ರಭೇದವನ್ನು ಜೀವವುಳ್ಳವು ಎಂದು ಪರಿಗಣಿಸಿದಂತಾಗಿತ್ತು. ಇದೊಂದು 2014ರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿನ್ನೆಲೆಯಲ್ಲಿ ಹೊರಬಿದ್ದ ತೀರ್ಪಾಗಿತ್ತು. ನ್ಯಾಯಮೂರ್ತಿಗಳಾದ ರಾಜೀವ್‌ ಶರ್ಮ ಮತ್ತು ಅಲೋಕ್‌ ಸಿಂಘ್ ಈ ತೀರ್ಪನ್ನು ನೀಡಿದ್ದರು. ಈ ತೀರ್ಪಿನಲ್ಲಿ ಈ ನದಿಗಳು (ಗಂಗೆ ಮತ್ತು ಯಮುನಾ) ಕಾನೂನಾತ್ಮಕ ನೆಲೆಯಲ್ಲಿ ರಕ್ಷಿಸಲ್ಪಡಬೇಕು. ಇವುಗಳನ್ನು ಕಲುಷಿತ ಗೊಳಿಸುವ, ಹಾಳು ಮಾಡುವ ಹಾಗೂ ನಾಶಪಡಿಸುವ ಎಲ್ಲ ಪ್ರಯತ್ನಗಳಿಗೆ ಕಡಿವಾಣ ಹಾಕಬೇಕು ಎಂದು ಸೂಚಿಸಲಾಗಿತ್ತು.

ನ್ಯೂಜಿಲೆಂಡ್‌ನ‌ಲ್ಲೂ ಅಲ್ಲಿಯ ಮೂರನೇ ಬೃಹತ್‌ ನದಿಯಾದ ವಾಂಗಾನ್ಯೂ ನದಿಗೆ ಇಂಥದ್ದೇ ಒಂದು ಸ್ಥಾನಮಾನ ಕೊಡಲಾಗಿತ್ತು. ಈ ಸಂಬಂಧ ಅಲ್ಲಿಯ ಸರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ವಿಧೇಯಕವನ್ನು ಅಂಗೀಕರಿಸಿತ್ತು. ಇದೂ ಸಹ ಉತ್ತರಾ ಖಂಡದ ಹೈಕೋರ್ಟ್‌ ತೀರ್ಪಿಗೆ ಪ್ರೇರಣೆ ನೀಡಿರಲೂ ಬಹುದು. ಸದ್ಯಕ್ಕೆ ನಮಾಮಿ ಗಂಗೆ ಯೋಜನೆ ಮೂಲಕ ಗಂಗೆಯ ಶುದ್ಧೀಕರಣಕ್ಕೆ ಹೊರಟಿರುವ ಕೇಂದ್ರ ಸರಕಾರದ ಪ್ರಯತ್ನಕ್ಕೆ ಇದು ಒಂದು ಬಗೆಯ ಸಾಥ್‌ ನೀಡಿದಂತಾಗಿದೆ ಎನ್ನಬಹುದು.

ಹೊಸ ಸಂಪ್ರದಾಯ
ಈ ಹೊತ್ತಿನಲ್ಲಿ ನಾವೂ ಒಂದಿಷ್ಟು ಹೊಸ ಸಂಪ್ರದಾಯಗಳನ್ನು ಆರಂಭಿಸಬೇಕಿದೆ. ಯಾವುದೇ ಕ್ಷೇತ್ರಗಳಿಗೆ ಹೋದಾಗ ಅಲ್ಲಿನ ಜಲಮೂಲಗಳನ್ನು ಆದಷ್ಟು ಕಲುಷಿತಗೊಳಿಸದಿರುವ ಬದ್ಧತೆಯನ್ನು ನಾವೂ ರೂಢಿಸಿಕೊಳ್ಳುವ ಕಾಲವಿದು. ಯಾಕೆಂದರೆ ಸರಕಾರದಂಥ ವ್ಯವಸ್ಥೆಯಿಂದ ಆಗುವ ಕೆಲಸವಲ್ಲ; ಪ್ರತಿಯೊಬ್ಬರಿಂದಲೂ ಆಗುವಂಥದ್ದು. ನಾವು ಒಂದು ನಿರ್ಣಯಕ್ಕೆ ಬಂದರೆ ಉಳಿದೆಲ್ಲವೂ ಆದೀತು. ಇಲ್ಲವಾದರೆ ಸರಕಾರ ಮಡಕೆಯನ್ನು ಮಾಡಬಹುದು, ನಾವು ನಮ್ಮ ದೊಣ್ಣೆಯಿಂದ ಪುಡಿ ಮಾಡುತ್ತಲೇ ಇರುತ್ತೇವೆ. ಅಲ್ಲಿಗೆ ಸಾಧಿಸಿದ್ದಾದರೂ ಏನು? ಎಂಬುದೇ ಅರ್ಥವಾಗದು.

ಇದೇ ಕಾರಣಕ್ಕೆ, ಬರೀ ನಮಾಮಿ ಗಂಗೆ ಎಂದರೆ ಸಾಲದು, ಗೌರವಿಸಬೇಕು, ಪ್ರೀತಿಸಬೇಕು ಹಾಗೂ ನಮಿಸಬೇಕು.

ಟಾಪ್ ನ್ಯೂಸ್

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

z-11

ಇಂದ್ರನ ಕಾಮಧೇನು ಭುವಿಗಿಳಿದ ತಾಣ

d-102.jpg

ನಗರಗಳ ಸಮಸ್ಯೆಗಳಿಗೆ ನಾವು ಉತ್ತರವಾಗುವುದು ಹೇಗೆ?

1.jpg

ನಗರೀಕರಣದ ಕಾವಲಿಯಲ್ಲೇ ಹುಟ್ಟಿಕೊಂಡದ್ದು ನೂರಾರು ದೋಸೆಗಳು

untitled-1.jpg

ನಮ್ಮ ಊರುಗಳೂ ದಿಲ್ಲಿಯಾಗದಂತೆ ತಪ್ಪಿಸಬೇಕಾದ ಹೊತ್ತಿದು

v-2.jpg

ಹಸಿರು ಕಾಯಲು ಬೇಕು ಕಾವಲು ಸಮಿತಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.