CONNECT WITH US  

ಜಿಲ್ಲೆಯಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ತುಮಕೂರು: ಭಾರತ್‌ ಬಂದ್‌ ಹಿನ್ನೆಲೆಯಲ್ಲಿ ಕಾರ್ಮಿಕರು ಬೆಳಿಗ್ಗೆ 7 ಗಂಟೆಯಿಂದ ವಿವಿಧ ಕಾರ್ಖಾನೆಗಳಿಂದ ಬೈಕ್‌ ರ್ಯಾಲಿಗಳಲ್ಲಿ ಬಂದು ನಗರದ ಟೌನ್‌ ಹಾಲ್‌ನಲ್ಲಿ ಸಮಾವೇಶಗೊಂಡರು. ನಂತರ ವಿವಿಧ ಗುಂಪುಗಳಾಗಿ ಎಂ.ಜಿ.ರಸ್ತೆ, ಆಶೋಕ ರಸ್ತೆ, ಶಿರಾಗೇಟ್‌, ಎಸ್‌.ಎಸ್‌.ಪುರಂ ಸೇರಿದಂತೆ ವಿವಿಧ ಕಡೆ ಬೈಕ್‌ ರ್ಯಾಲಿ ನಡೆಸಿದರು. ಬಿ.ಎಚ್‌.ರಸ್ತೆಯಲ್ಲಿ ಅಲ್ಲಲ್ಲಿ ತೆರೆದಿದ್ದ ಅಂಗಡಿ ಮುಂಗಟ್ಟುಗಳ ಬಾಗಿಲು ಮುಚ್ಚಿಸಿದರು. ಪ್ರತಿ ಅರ್ಧ, ಒಂದು ಗಂಟೆಗೊಮ್ಮೆ ಬೈಕ್‌ ರ್ಯಾಲಿ ನಡೆಸಿ ಸಂಜೆ ನಾಲ್ಕು ಗಂಟೆಯವರೆಗೂ ಅಂಗಡಿ ಬಾಗಿಲು ತೆರೆಯದಂತೆ ಎಚ್ಚರಿಕೆ ನೀಡಿದರು. 

 ಭಾರತ ಬಂದ್‌ ಹಿನ್ನೆಲೆಯಲ್ಲಿ ಸಿಐಟಿಯು,  ಎಐಟಿಯುಸಿ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು, ನಗರದ ಟೌನ್‌ ಹಾಲ್‌ ವೃತ್ತದಲ್ಲಿ ಪ್ರತಿಭಟನಾ ಧರಣಿ ನಡೆಸಿದರು. ವೃತ್ತದಲ್ಲಿ ಕೆಲ  ಕಾಲ ಮಾನವ ಸರಪಳಿ ನಿರ್ಮಿಸಿ ಖಾಸಗಿ ವಾಹನಗಳ ಸಂಚಾರಕ್ಕೆ ತಡೆಯೊಡ್ಡಿದರು.  ಸಿಐಟಿಯುನ ಜಿಲ್ಲಾಧ್ಯಕ್ಷ ಸೈಯದ್‌ಮುಜೀಬ್‌ ಮಾತನಾಡಿ, ಕೇಂದ್ರದ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕೇಂದ್ರ ಕಾರ್ಮಿಕ ಸಂಘಟನೆಗಳು ಎತ್ತಿರುವ ಪ್ರಶ್ನೆಗಳ ಕುರಿತು ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಬದಲು ಇತರ ಸಂಘಟನೆಯೊಂದಿಗೆ ಮಾತುಕತೆ ನಾಟಕ ನಡೆಸಿದೆ ಎಂದು ದೂರಿದರು.

 ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್‌.ಕೆ. ಸುಬ್ರಹ್ಮಣ್ಯ, ಎಐಟಿಯುಸಿ ಗಿರೀಶ್‌, ಕಂಬೇಗೌಡ, ಎಐಯುಟಿಯುಸಿಯ ನರಸಿಂಹರಾಜು, ಎಲ್‌ ಐಸಿ ಮಧುಸುಧನ್‌, ನಾಗಲಕ್ಷ್ಮೀ, ಬಿಎಸ್‌ಎನ್‌ಎಲ್‌ ನಾಗೇಶ್ವರಯ್ಯ, ನರೇಶ್‌ರೆಡ್ಡಿ, ಅಂಚೆ ನೌಕರರ ಸಂಘದ ಕಾಂತರಾಜು ಮಾತನಾಡಿ, ಕೇಂದ್ರ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿರುವ ಆಶ್ವಾಸನೆ ಈಡೇರಿಸುವಲ್ಲಿ ವಿಫ‌ಲಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

 ಸಿಐಟಿಯುನ ಜಿಲ್ಲಾ ಖಜಾಂಚಿ ದಿಶಾ ಲೋಕೇಶ್‌, ಕೈಗಾರಿಕಾ ಕಾರ್ಮಿಕ ಮುಖಂಡರಾದ ಷಣ್ಮುಖಪ್ಪ, ಪುಟ್ಟಗೌಡ, ಕಟ್ಟಡ ಕಾರ್ಮಿಕರಾದ ರಾಮಚಂದ್ರು, ಮಂಜು, ಶ್ರೀಧರ್‌, ಲಕ್ಷ್ಮಣ್‌, ಗ್ರಾಪಂ ನೌಕರರ ಸಂಘದ ನಾಗೇಶ್‌, ಪಂಚಾಕ್ಷರಿ, ಫ‌ುಟಾ³ತ್‌ ವ್ಯಾಪಾರಿಗಳ ಸಂಘದ, ಇಬ್ರಾಹಿಂ, ಲಕ್ಷ್ಮಮ್ಮ, ಪೌರ ಕಾರ್ಮಿಕರ ಸಂಘದ ನಗರಾಧ್ಯಕ್ಷ ರಾಮಕೃಷ್ಣ, ರಾಜ್ಯ ಖಜಾಂಚಿ ಸಿ.ವೆಂಕಟೇಶ್‌, ಜೂನಿ ಮತ್ತಿತರರು ಮುಷ್ಕರಕ್ಕೆ ಬೆಂಬಲ ನೀಡಿದರು. 

ಸಿಐಟಿಯು, ಎಐಟಿಯುಸಿ, ಎಐಯುಟಿಯುಸಿ, ಬ್ಯಾಂಕ್‌, ಎಲ್‌ಐಸಿ, ಬಿಎಸ್‌ಎನ್‌ಎಲ್‌, ಅಂಚೆ ನೌಕರರ ಸಂಘಗಳು ಕರೆ ನೀಡಿದ್ದ ಅಖೀಲ ಭಾರತ ಮುಷ್ಕರದ ಭಾಗವಾಗಿ ನಗರ ಸಂಪೂರ್ಣ ಬಂದ್‌ ಆಗಿತ್ತು. ಈ ಮುಷ್ಕರವನ್ನು ವರ್ತಕರು, ವಾಹನಚಾಲಕರು, ಚಿತ್ರಮಂದಿರಗಳು, ಅಂಗಡಿ ಮುಂಗಟ್ಟುಗಳು, ಸಾರಿಗೆ ಮತ್ತು ಖಾಸಗಿ ಬಸ್‌ಗಳು ಹೋರಾಟ ಬೆಂಬಲಿಸಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿದವು. 

 ಬಂದ್‌ ಹಿನ್ನೆಲೆಯಲ್ಲಿ ಸದಾ ಜನಜಂಗುಳಿಯಿಂದ ತುಂಬಿರುತಿದ್ದ ನಗರದ ಪ್ರಮುಖ ವಾಣಿಜ್ಯ ಕೇಂದ್ರ ಎಂ.ಜಿ.ರಸ್ತೆಯ ಅಂಗಡಿಗಳು ಸಂಪೂರ್ಣ ಮುಚ್ಚಿದ್ದು, ಜನರ ಓಡಾಟವೇ ವಿರಳವಾಗಿತ್ತು. ಚಲನ ಚಿತ್ರ ಮಂದಿರಗಳು ಮುಚ್ಚಿದ್ದವು, ನಗರದ ವಿವಿಧ ಕಡೆ ಸಂಚರಿಸಲು ಆಗಮಿಸಿದ್ದ ಕೆಲ ಪ್ರಯಾಣಿಕರು ಸಾರಿಗೆ ವ್ಯವಸ್ಥೆ ಇಲ್ಲದೆ ಸಂಜೆಯವರೆಗೆ ಕಾಯುವಂತಾಯಿತು. ಸರ್ಕಾರಿ ಕಚೇರಿಗಳಲ್ಲಿಯೂ ಜನರ ಓಡಾಟ ತೀರಾ ಕಡಿಮೆಯಿದ್ದು ಹೊಟೇಲ್‌ಗ‌ಳು ಮುಚ್ಚಿದ್ದವು.
 ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಬಂದ್‌ ಹಿನ್ನೆಲೆಯಲ್ಲಿ ಪೆಟ್ರೋಲ್‌ ಬಂಕ್‌ಗಳು ತರೆದಿರಲಿಲ್ಲ. ಲಾರಿ ಮಾಲಿಕರು ತಮ್ಮ ವಾಹನವನ್ನು ರಸ್ತೆಗೆ ಇಳಿಸದೆ ಬಂದ್‌ಗೆ ಬೆಂಬಲ ಸೂಚಿಸಿದರು. ಅಲ್ಲಲ್ಲಿ
ಕೆಲ ಆಟೋಗಳು ಸಂಚರಿಸಿದರೂ ಪ್ರತಿಭಟನಾನಿರತ ಕಾರ್ಮಿಕರು ತಡೆದು ಪ್ರಯಾಣಿಕರನ್ನು ಕೆಳಗೆ
ಇಳಿಸಿದರು. ಸಂಜೆ ವೇಳೆಗೆ ನಗರದಲ್ಲಿ ಜನಸಂಚಾರ ಆರಂಭಗೊಂಡಿತು.

ಬಿಗಿ ಭದ್ರತೆ: ಕಾರ್ಮಿಕ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಗಿ ಭದ್ರತೆ 
ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದೆ ಬಂದ್‌ ಶಾಂತಿಯುತವಾಗಿತ್ತು.

Trending videos

Back to Top