CONNECT WITH US  

ಜಯಪ್ರಕಾಶ್‌ ತಾಂತ್ರಿಕ ಸಮಿತಿಯ ಮುಖ್ಯ ಸಲಹೆಗಾರ

ತುಮಕೂರು: ನಗರ ವಿಧಾನಸಭಾ ಕ್ಷೇತ್ರದ ಅಧ್ಯಯನ ಕೇಂದ್ರದ ತಾಂತ್ರಿಕ ಸಮಿತಿಯ ಮುಖ್ಯ ಸಲಹೆಗಾರರಾಗಿ ಕೆ.ಜಯಪ್ರಕಾಶ್‌ ಸೇವೆ ಸಲ್ಲಿಸಲು ಸ್ವಯಂ ಮುಂದೆ ಬಂದಿದ್ದಾರೆ ಎಂದು ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಅಧ್ಯಯನ ಕೇಂದ್ರದ ಅಧ್ಯಕ್ಷರು ಹಾಗೂ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ತಿಳಿಸಿದರು.

ವಿಷನ್‌ 2025 ಸಿದ್ಧಪಡಿಸಲು ಅಧ್ಯಯನ: ನಗರದ ಎತ್ತಿನಹೊಳೆ ಮುಖ್ಯ ಎಂಜಿನಿಯರ್‌ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಯಪ್ರಕಾಶ್‌ ಅವರು ಪ್ರಸ್ತುತ ರಾಜ್ಯ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಹಾಗೂ ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೂ ತುಮಕೂರು ಸ್ಮಾರ್ಟ್‌ ಸಿಟಿ ಯೋಜನೆಗಳ ಸಾಧಕ-ಬಾಧಕಗಳ ತಾಂತ್ರಿಕ ಅವಲೋಕನ ಮತ್ತು ವಿಷನ್‌ 2025 ಸಿದ್ಧಪಡಿಸಲು ಅಧ್ಯಯನ ಕೇಂದ್ರದಲ್ಲಿ ಭಾಗವಹಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

ನಾಗರಿಕನಗಿ ಭಾಗವಹಿಸಿದ್ದೇನೆ: ರಾಜ್ಯ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಕೆ.ಜಯಪ್ರಕಾಶ್‌ ಮಾತನಾಡಿ, ತುಮಕೂರು ಸ್ಮಾರ್ಟ್‌ ಸಿಟಿಯಾಗಿ ಘೋಷಣೆಯಾಗಿರುವುದರಿಂದ ನಗರದಲ್ಲಿ ವಾಸಿಸುವ ಪ್ರತಿಯೊಬ್ಬರ ಜವಾಬ್ದಾರಿ ಹೆಚ್ಚಿದೆ, ನಾನೂ ಅಧಿಕಾರಿಯಾಗಿ ಇಲ್ಲಿ ಬಂದಿಲ್ಲ. ನಗರದ ನಾಗರಿಕನಾಗಿ ಭಾಗವಹಿಸಿದ್ದೇನೆ ಎಂದರು. 

ಶಾಸಕರಾದ ಜಿ.ಬಿ.ಜ್ಯೋತಿಗಣೇಶ್‌ ಅವರು ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಅಧ್ಯಯನ ಕೇಂದ್ರ ಆರಂಭಿಸಿರುವುದು ದೇಶಕ್ಕೆ ಮಾದರಿಯಾಗಿದೆ. ಇದಕ್ಕೆ ಸರ್ಕಾರದ ಸಹಭಾಗಿತ್ವ ಅಗತ್ಯ ನಗರದಲ್ಲಿನ ಹಾಗೂ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ಅಧಿಕಾರಿಗಳು ಮತ್ತು ನೌಕರರು ಅವರು ಸೇವೆ ಮಾಡುತ್ತಿರುವ ಇಲಾಖಾ ಅಡಿಯಲ್ಲಿ ಒಂದೊಂದು ಯೋಜನೆಯ ಜವಾಬ್ದಾರಿ ಪಡೆಯುವಂತೆ ಸಲಹೆ ನೀಡಿದರು.

ಜಿಐಎಸ್‌ ಆಧಾರಿತ ನಕ್ಷೆ ಅಗತ್ಯ: ಡಿಜಿಟಲ್‌ ಯುಗದಲ್ಲಿ ನಗರದ ಪ್ರತಿಯೊಂದು ಇಲಾಖೆಯ ಕಾಮಗಾರಿಗಳು ಜಿಐಎಸ್‌ ಆಧಾರಿತ ಇತಿಹಾಸ ಸಹಿತ ನಕ್ಷೆಯಲ್ಲಿ ನಮೂದಾಗಬೇಕು. ಎಲ್ಲಾ ಇಲಾಖೆಗಳು ಅಧ್ಯಯನ ಕೇಂದ್ರದಲ್ಲಿ ಅಪ್‌ಲೋಡ್‌ ಮಾಡಬೇಕು. ಈ ಬಗ್ಗೆ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಕಂಪನಿ ಮತ್ತು ತುಮಕೂರು ಮಹಾನಗರ ಪಾಲಿಕೆ ಏನೇನು ಕ್ರಮಕೈಗೊಂಡಿದೆ ಎಂಬ ಬಗ್ಗೆ ಮುಂದಿನ ಸಭೆಯಲ್ಲಿ ಮಂಡಿಸಲು ಅಧ್ಯಯನ ಕೇಂದ್ರದ ಸಿಇಒಗೆ ಸೂಚಿಸಿದರು.

ಪಕ್ಷಾತೀತ ಸಲಹೆ ಅಗತ್ಯ: ಮಾಜಿ ಸಂಸದ ಜಿ.ಎಸ್‌. ಬಸವರಾಜ್‌ ಮಾತನಾಡಿ, ನಾನು ನಗರದ ನಾಗರಿಕನಾಗಿ ಅಧ್ಯಯನ ಕೇಂದ್ರದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಪಕ್ಷಾತೀತ ವಾಗಿ ಎಲ್ಲಾ ಪಕ್ಷಗಳ ನಾಯಕರ ಅಭಿಪ್ರಾಯ
ಪಡೆಯುವುದು ಈ ಕೇಂದ್ರದ ಜವಾಬ್ದಾರಿ. ತುಮಕೂರಿನ ಮಾಜಿ ಶಾಸಕರು, ವಿಜ್ಞಾನಿಗಳಾದ ಹಾಗೂ ರ್‍ಯಾಂಕ್‌ ನಜೀರ್‌ ಎಂದೇ ಖ್ಯಾತಿ ಪಡೆದಿರುವ ನಜೀರ್‌ ಅಹಮ್ಮದ್‌ಅವರು ಈ ಕೇಂದ್ರಕ್ಕೆ ಸಲಹೆ ನೀಡಲು ಮುಂದೆ ಬಂದಿದ್ದಾರೆ
ಎಂದರು.

 ತುಮಕೂರು ನಗರ ದೇಶದಲ್ಲಿಯೇ ನಂಬರ್‌ -1 ಆಗಲು ಪಣತೊಟ್ಟಿರುವ ಅಧ್ಯಯನ ಕೇಂದ್ರಕ್ಕೆ ನಾನೂ ಸದಾ ಸೇವೆ ಸಲ್ಲಿಸಲು ಸಿದ್ಧ, ಅಧಿಕಾರ ಇರಲಿ ಇಲ್ಲದಿರಲಿ ನಗರದ ಅಭಿವೃದ್ಧಿ ಕಡತಗಳು ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವುದೇ ಇಲಾಖೆಯಲ್ಲಿರಲಿ ನಾನೂ ಶ್ರಮಿಸುತ್ತೇನೆ ಎಂದು ಘೋಷಿಸಿದರು. 

ಕಾಮಗಾರಿಗಳ ಅವಲೋಕನ: ಮೊದಲ ಸಭೆಯಲ್ಲಿ ತುಮಕೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಕೈಗೊಂಡಿರುವ ಕಾಮಗಾರಿಗಳ ಅವಲೋಕನ ನಡೆಯಿತು, ಮುಂದಿನ ಸಭೆಯಲ್ಲಿ ಸಮಾಲೋಚನೆ ನಡೆಸಿ ಅಧ್ಯಯನ ಕೇಂದ್ರದ ಸಲಹೆ ನೀಡಲು ತಿರ್ಮಾನಿಸಲಾಯಿತು.

ಅಮಾನಿಕೆರೆಗೆ ಹೇಮಾವತಿ ನೀರು: ತುಮಕೂರು ಅಮಾನಿಕೆರೆಗೆ ಹೇಮಾವತಿ ಕಾಲುವೆಯಿಂದ ನೀರು ತುಂಬಿಸುವ ಸುಮಾರು 22.50 ಕೋಟಿ ರೂ. ವೆಚ್ಚದ ಯೋಜನೆಯನ್ನು ಕೈಗೆತ್ತಿಕೊಳ್ಳಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪ್ರಸ್ತಾವನೆಗೆ ಹಸಿರು ನಿಶಾನೆ ನೀಡಲಾಯಿತು. ಮುಂದಿನ ಸಭೆಯಲ್ಲಿ ನಗರದ ಕೆರೆಗಳಿಗೆ ನೀರು, ಶಾಶ್ವತ ಕುಡಿಯುವ ನೀರಿನ ಯೋಜನೆಗಳು, ಯುಜಿಡಿ ಯೋಜನೆ, ರಸ್ತೆ ಪಕ್ಕದ ಚರಂಡಿ ಮತ್ತು ಮಳೆ ನೀರಿನ ಚರಂಡಿ ಬಗ್ಗೆ ಚರ್ಚಿಸಲು ತಿರ್ಮಾನಿಸಲಾಯಿತು.

 ಸಭೆಯಲ್ಲಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಅಧ್ಯಯನ ಕೇಂದ್ರದ ಸಿಇಒ ಕುಂದರನಹಳ್ಳಿ ರಮೇಶ್‌, ಎಂಜಿನಿಯರ್‌ಗಳಾದ ಹರೀಶ್‌, ಮಲ್ಲೇಶ್‌, ಕೃಷ್ಣಮೂರ್ತಿ, ರಾಜಶೇಖರ್‌, ತಿಪ್ಪೇಸ್ವಾಮಿ ಮೊದಲಾದವರು ಇದ್ದರು. 

Trending videos

Back to Top