CONNECT WITH US  

ರಾತ್ರಿ ವೇಳೆ ಶಿರಾಕ್ಕೆ ಬಸ್‌ ಸೌಲಭ್ಯ ಕಲ್ಪಿಸಲು ಆಗ್ರಹ 

ಶಿರಾ: ನಗರಕ್ಕೆ ರಾತ್ರಿ 8 ಗಂಟೆಯ ನಂತರ ಶಿರಾ ಬೆಂಗಳೂರು ತುಮಕೂರು ಮಾರ್ಗದ ಕಡೆಯಿಂದ ಕೆಎಸ್ಸಾರ್ಟಿಸಿ ಬಸ್‌ ಶಿರಾ ನಗರಕ್ಕೆ ಬಾರದೇ ಬೈಪಾಸ್‌ನಲ್ಲೇ ತೆರಳುವುದರಿಂದ ಬೆಂಗಳೂರಿನಿಂದ ಶಿರಾಕ್ಕೆ ಬರುವ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂದು ಕರುನಾಡ ಸೇನೆಯ ಅಧ್ಯಕ್ಷರಾದ ತಿಪ್ಪೇಶ್‌ಗುರುವಾರ ನಗರದ ಕೆಎಸ್ಸಾರ್ಟಿಸಿ ಡಿಪೋ ಮುಂದೆ ಪ್ರತಿಭಟನೆ ಸಂದರ್ಭದಲ್ಲಿ ತಿಳಿಸಿದರು.

ನಂತರ ಡಿಪೋ ಅಧಿಕಾರಿ ತಮ್ಮಣ್ಣನವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿರಾ ತಾಲೂಕು ಕೆಎಸ್ಸಾರ್ಟಿಸಿ ಘಟಕವು ಈ ಹಿಂದೆ ತುಮಕೂರು ವಿಭಾಗಕ್ಕೆ ಒಳಪಟ್ಟಿತ್ತು ಈಗ ಘಟಕವು ಚಿತ್ರದುರ್ಗಕ್ಕೆ ವರ್ಗಾವಣೆಯಾಗಿರುವುದರಿಂದ ಅಂಗವಿಕಲರು ಬಸ್‌ ಪಾಸ್‌ ಪಡೆಯಲು ಮೂಲ ಘಟಕಕ್ಕೆ ಹೋಗಬೇಕಾಗಿರುವುದರಿಂದ ತಾಲೂಕಿನ ಅಂಗವಿಕಲಿರಿಗೆ ತೊಂದರೆಯಾಗುತ್ತದೆ.

ಶಿರಾ ಕೆಎಸ್ಸಾರ್ಟಿಸಿ ನಿಲ್ದಾಣದಲ್ಲಿ ಸ್ವತ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಸರಿಯಿರುವುದಿಲ್ಲ ಹಾಗೂ ಉಪಹಾರ ಮಂದಿರದ ವ್ಯವಸ್ಥೆಯಿಲ್ಲದ ಕಾರಣ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಗ್ರಾಮೀಣ ಪ್ರದೇಶಕ್ಕೆ ಸಮಯಕ್ಕೆ ಸರಿಯಾಗಿ ಬಸ್‌ ಬರದೇ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ತಲುಪಲಾಗುತ್ತಿಲ್ಲ ಸರ್ಕಾರಿ ಬಸ್‌ ಪಾಸ್‌ ಹೊಂದಿದ್ದರೂ ಸಹ ಖಾಸಗಿ ಬಸ್‌ ಮೊರೆ ಹೋಗುವ ಪರಿಸ್ಥಿತಿ ಉಂಟಾಗಿರುತ್ತದೆ.

ಶಿರಾ ನಗರದ ಕೋಟೆ ಕೆರೆಹಿಂದಲಹಟ್ಟಿಯಿಂದ ಕಲ್ಲುಕೋಟೆಯವರೆಗೆ ನಗರ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈಗ ಬಸ್‌ ಸ್ಥಗಿತಗೊಳಿಸಿರುವ ಕಾರಣ ವಿದ್ಯಾರ್ಥಿಗಳು ಸುಮಾರು 5 ಕಿ.ಮೀ. ನಡೆದುಕೊಂಡು ಶಾಲಾ ಕಾಲೇಜುಗಳಿಗೆ ತಲುಪಬೇಕಾಗಿದೆ ಈ ಸಮಸ್ಯೆಗಳನ್ನು ಸಂಭಂದಪಟ್ಟ ಅಧಿಕಾರಿಗಳು ಒಂದು ತಿಂಗಳ ಒಳಗೆ ಬಗೆಹರಿಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. 

ಈ ಸಂದರ್ಭದಲ್ಲಿ ಕರುನಾಡ ಸೇನೆಯ ಉಪಾಧ್ಯಕ್ಷರಾದ ಯದು ನಂದನ್‌, ಕಾರ್ಯದರ್ಶಿಯಾದ ರಮೇಶ್‌, ಸದಸ್ಯರಾದ ಅರ್ಜುನ್‌, ಕಾರ್ತಿಕ್‌, ಅವಿನಾಶ್‌, ಮಧು, ಜಯರಾಜ್‌, ಲೋಕಿ ಮುಂತಾದವರು ಉಪಸ್ಥಿತರಿದ್ದರು.

Trending videos

Back to Top