CONNECT WITH US  

ಸ್ವಾಮಿನಾಥನ್‌ ವರದಿ ಜಾರಿಗೆ ಆಗ್ರಹ

ತುಮಕೂರು: ಕೇಂದ್ರ ರಾಜ್ಯ ಸರ್ಕಾರಗಳು ಸಂಕಷ್ಟದಲ್ಲಿ ಇರುವ ರೈತರ ನೆರವಿಗೆ ಬರಬೇಕು, ನೊಂದು ಆತ್ಮಹತ್ಯೆ ದಾರಿ ಹಿಡಿದಿರುವ ರೈತರು ಮತ್ತು ಕೃಷಿ ಕಾರ್ಮಿಕರ ರಕ್ಷಣೆಗೆ ಮುಂದಾಗಬೇಕು ಕೇಂದ್ರ ಸರ್ಕಾರ ಡಾ.ಎಂ.ಎಸ್‌.ಸ್ವಾಮಿನಾಥನ್‌ ವರದಿ ಜಾರಿಗೊಳಿಸಬೇಕು, ಕೃಷಿ ಸಾಲ ನೀಡಬೇಕು, ಋಣ ಮುಕ್ತಿ ಕಾನೂನುಗಳನ್ನು ಪಾರ್ಲಿಮೆಂಟ್‌ನ ಮುಂಗಾರು ಅಧಿವೇಶನದಲ್ಲಿ ಅಂತಿಮಗೊಳಿಸಬೇಕೆಂದು ಕರ್ನಾಟಕ ಪ್ರಾಂತ ರೈತರ ಸಂಘದ ರಾಜ್ಯಾಧ್ಯಕ್ಷ ಜೆ.ಸಿ. ಬೈಯಾರೆಡ್ಡಿ ಒತ್ತಾಯಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಾ.ಸ್ವಾಮಿನಾಥನ್‌ ವರದಿ ಅನ್ವಯ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಯ ಖಾತ್ರಿಯ ಕಾನೂನು, ರೈತರು ಕೃಷಿ ಕಾರ್ಮಿಕರ ಸಂಪೂರ್ಣ ಸಾಲ ಮನ್ನಾ, ರೈತರು ಕೃಷಿ ಕಾರ್ಮಿಕರಿಗೆ ವೃದ್ಧಾಪ್ಯ ವೇತನವಾಗಿ ಮಾಸಿಕ 5 ಸಾವಿರ ನೀಡಬೇಕು, ರೈತ ಸ್ನೇಹಿ ಬೆಳೆ ವಿಮೆ ಯೋಜನೆಗಾಗಿ ಹಾಗೂ ಉದ್ಯೋಗ ಖಾತ್ರಿ ಯೋಜನೆಯನ್ನು 200 ದಿನಕ್ಕೆ ಹೆಚ್ಚಿಸಬೇಕು ಮತ್ತು ಕೂಲಿಯನ್ನು 600 ರೂ ಗೆ ಏರಿಸಬೇಕೆಂದು ಅಗ್ರಹಿಸಿ ಆ.9 ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು. 

ಗೋಮಾಳ ಅರಣ್ಯ ಇತ್ಯಾದಿ ಹೆಸರಿನ ಎಲ್ಲಾ ರೀತಿಯ ಬಗರ್‌ ಹುಕ್ಕಂ ಸಾಗುವಳಿಯನ್ನು ಸಕ್ರಮಗೊಳಿಸಬೇಕು ಜೊತೆಗೆ ಎಲ್ಲಾ ಭೂಹೀನ ಕುಟುಂಬಗಳಿಗೆ ತಲಾ 5 ಎಕರೆ ಕೃಷಿ ಭೂಮಿಯನ್ನು ವಸತಿ ಸೌಲಭ್ಯ ಒದಗಿಸಬೇಕು ಹಾಗೂ ಬ್ಯಾಂಕುಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. 

ಉತ್ಪಾದನಾ ವೆಚ್ಚದ ಬೆಲೆ 50ರಷ್ಟು ಲಾಭಾಂಶವನ್ನು ಸೇರಿಸಿ ಎಲ್ಲಾ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತ್ರಿ ಮಾಡುವ ಉದ್ದೇಶಿತ ಕರಡು ಮಸೂದೆ ಹಾಗೂ ಅಗತ್ಯವಿರುವ ರೈತರು ಮತ್ತು ಕೃಷಿ ಕಾರ್ಮಿಕರಿಗೆ ಸಾಲ ನೀಡಿಕೆ ವಿಶೇಷ ಸಂದರ್ಭದಲ್ಲಿ ಸಾಲ ಮನ್ನಾ ಇತ್ಯಾದಿ ಅಂಶಗಳಿಗೆ ಸಂಬಂಧಿಸಿದೆ ಋಣಮುಕ್ತ ಕಾಯ್ದೆಯ ಕರಡು ಮಸೂದೆಯನ್ನು

ಈಗಾಗಲೇ ಮಹಾರಾಷ್ಟ್ರದ ಲೋಕಸಭಾ ಸದಸ್ಯರಾದ ರಾಜು ಶೆಟ್ಟಿ ಹಾಗೂ ಕೇರಳದ ರಾಜ್ಯ ಸಭಾ ಸದ್ಯರಾದ ಕೆ.ಕೆ.ರಾಘೇಶ್‌ ಮೂಲಕ ಖಾಸಗಿ ಮಸೂದೆಗಳಾಗಿ ಪಾರ್ಲಿಮೆಂಟ್‌ಗೆ ಒಪ್ಪಿಸಲಾಗಿದೆ 22 ರಾಜಕೀಯ ಪಕ್ಷಗಳು ಈ ಮಸೂದೆ ಪಾಸು ಮಾಡಲು ಶ್ರಮಿಸುವುದಾಗಿ ಭರವಸೆ ನೀಡಿವೆ ಎಂದು ಹೇಳಿದರು. 

ಕರ್ನಾಟಕ ಪ್ರಾಂತ ರೈತ ಸಂಘದ ಸಹ ಸಂಚಾಲಕ ಬಿ.ಉಮೇಶ್‌, ಸಿಐಟಿಯೂ ಜಿಲ್ಲಾಧ್ಯಕ್ಷ ಸೈಯದ್‌ ಮುಜೀದ್‌, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ ಮೊದಲಾದವರು ಇದ್ದರು. 


Trending videos

Back to Top