CONNECT WITH US  

ಮೃತ ಪೌರ ಕಾರ್ಮಿಕರ ಕುಟುಂಬಕ್ಕೆಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

ತುಮಕೂರು: ಶಿವಮೊಗ್ಗದಲ್ಲಿ ನಿರ್ಮಾಣದ ಹಂತದ ಮ್ಯಾನ್‌ಹೋಲ್‌ಗೆ ಇಳಿದು ಉಸಿರುಗಟ್ಟಿ ಸಾವನ್ನಪ್ಪಿದ ಇಬ್ಬರು ಕಾರ್ಮಿಕರ ಕುಟುಂಬಗಳಿಗೆ ತಲಾ 20 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಪೌರಕಾರ್ಮಿಕರು ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಟೌನ್‌ಹಾಲ್‌ನ ಬಿಜಿಎಸ್‌ ವೃತ್ತದಲ್ಲಿ ಸಿಐಟಿಯು ನೇತೃತ್ವದಲ್ಲಿ ಸಮಾವೇಶಗೊಂಡ ಪೌರಕಾರ್ಮಿಕರು ಮೃತ ಪೌರ ಕಾರ್ಮಿಕರ ಕುಟುಂಬದ ನಿರ್ವಹಣೆಗಾಗಿ ಸರ್ಕಾರ ಸೂಕ್ತ ಪರಿಹಾರ ನೀಡುವುದರೊಂದಿಗೆ ಎ ಕಾರ್ಮಿಕರ
ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಕಾರ್ಮಿಕರ ಸಾವಿಗೆ ಕಾರಣರಾದ ಗುತ್ತಿಗೆದಾರರು ಮತ್ತು ಇಂಜಿನಿಯರ್‌ ವಿರುದ್ಧ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು. 

ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರಲಿಲ್ಲ: ಮ್ಯಾನ್‌ ಹೋಲ್‌ಗೆ ಕಾರ್ಮಿಕರನ್ನು ಇಳಿಸುವ ಮೊದಲು ಗುತ್ತಿಗೆದಾರರು ಮತ್ತು ಒಳಚರಂಡಿ ಮಂಡಳಿ ಇಂಜಿನಿಯರ್‌ಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಕಾರ್ಮಿಕರು ಮ್ಯಾನ್‌ಹೋಲ್‌ಗೆ
ಇಳಿದಾಗ ಮೇಲ್ವಿಚಾರಕರೂ ಕೂಡ ಅಲ್ಲಿ ಇಲ್ಲದೇ ಇರುವುದನ್ನು ತೀವ್ರವಾಗಿ ಖಂಡಿಸಿದರು.

ಕೆಲವು ಮನೆಗಳಿಗೆ ಅಕ್ರಮವಾಗಿ ಯುಜಿಡಿ ಸಂಪರ್ಕ ಕಲ್ಪಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ ಮುಚ್ಚಿದ ಯುಜಿಡಿ ಮ್ಯಾನ್‌ಹೋಲ್‌ನಲ್ಲಿ ವಿಷಾನಿಲ ಸೃಷ್ಟಿಯಾಗಿ ಉಸಿರುಕಟ್ಟಿ ಮೃತ ಪಟ್ಟಿದ್ದಾರೆ. ಇದರ ಬಗ್ಗೆ
ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ನಿಯಮ ಉಲ್ಲಂಘನೆ: ಕಾರ್ಮಿಕರನ್ನು ಮ್ಯಾನ್‌ ಹೋಲ್‌ಗ‌ಳಿಗೆ ಇಳಿಸಬಾರದು ಎಂಬ ನಿಯಮ ಇದೆ. ಆದರೂ ನಿಯಮಗಳನ್ನು ಗಾಳಿಗೆ ತೂರಿ ಗುತ್ತಿಗೆದಾರರು ಮತ್ತು ಇಂಜಿನಿಯರ್‌ಗಳು ಕಾರ್ಮಿಕರನ್ನು ಮ್ಯಾನ್‌ಹೋಲ್‌ಗ‌ಳಿಗೆ ಇಳಿಸುತ್ತಿದ್ದಾರೆ. ಇಂತಹ ಘಟನೆಗಳು ರಾಜ್ಯದಲ್ಲಿ ಪದೇ ಪದೇ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್‌. ಕೆ.ಸುಬ್ರಹ್ಮಣ್ಯ ಮಾತನಾಡಿ, ಕಾರ್ಮಿಕರು ಮ್ಯಾನ್‌ ಹೋಲ್‌ನಲ್ಲಿ ಇಳಿಯಲು ಗುತ್ತಿಗೆದಾರರು ಮತ್ತು ಇಂಜಿನಿಯರ್‌ಗಳ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಕಾನೂನು ಗಾಳಿಗೆ ತೂರಿರುವುದರಿಂದ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದೆ ಇಂತಹ ಘಟನೆಗಳು ನಡೆಯದಂತೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪೌರಕಾರ್ಮಿಕರ ಸಂಘದ ನಗರಾಧ್ಯಕ್ಷ ಬಿ.ಜಿ.ರಾಮಕೃಷ್ಣಪ್ಪ, ಮುಖಂಡರಾದ ನಾಗರಾಜು, ಹನುಮಂತರಾಜು, ರಾಜು, ಜಯಲಕ್ಷ್ಮೀ , ಶಾಂತಮ್ಮ, ಅಂಜನಮೂರ್ತಿ, ಶಿವಣ್ಣ, ರಂಗಯ್ಯ, ರಾಮು, ಸಿದ್ದರಾಜು, ನಾಗೇಶ್‌ ಮೊದಲಾದವರು ಇದ್ದರು.
 
ಕಾರ್ಮಿಕರ ಸಾವಿಗೆ ಗುತ್ತಿಗೆದಾರರೇ ಹೊಣೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಟ್ಟಡ ಕಾರ್ಮಿಕರ ಸಂಘದ ಮುಖಂಡ ಲಕ್ಷ್ಮಣ್‌, ಎರಡು ದಿನಗಳ ಹಿಂದಷ್ಟೇ ಶಿವಮೊಗ್ಗ ನಗರಕ್ಕೆ ಬಂದು ಬೀಡುಬಿಟ್ಟಿದ್ದ ಅಂಜನಪ್ಪ ಮತ್ತು ವೆಂಕಟೇಶ್‌ ಆ. 6 ರಂದು ಶಿವಮೊಗ್ಗ ನಗರದ ಆರ್‌ಎಂಎಲ್‌ ನಗರ ಎರಡನೇ ಹಂತದ ಕಾಮಗಾರಿ ನಡೆಯುತ್ತಿದ್ದ ಮ್ಯಾನ್‌ಹೋಲ್‌ಗೆ ಇಳಿದಿದ್ದಾರೆ. ಮ್ಯಾನ್‌ಹೋಲ್‌ನಲ್ಲಿ ತುಂಬಿಕೊಂಡಿದ್ದ ಮಣ್ಣು, ಕಸ, ನೀರು ಮೇಲಕ್ಕೆ ಹಾಕುತ್ತಿದ್ದಾಗ ಅವರು ಹಿಡಿದುಕೊಂಡಿದ್ದ ಹಗ್ಗ ಜಾರಿ ನೀರಿಗೆ ಬಿದ್ದಿದ್ದಾರೆ. 20 ಅಡಿ ಆಳವಿದ್ದ ಮ್ಯಾನ್‌ಹೋಲ್‌ನಿಂದ ಮೇಲೆ ಬರಲು ಆಗದೆ ಒದ್ದಾಡಿ ಸಾವನ್ನಪ್ಪಿದ್ದಾರೆ. ಇದಕ್ಕೆ ಗುತ್ತಿಗೆದಾರರು ಮತ್ತು ಇಂಜಿನಿಯರ್‌ಗಳ ನಿರ್ಲಕ್ಷ್ಯವೇ ಕಾರಣವಾಗಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Trending videos

Back to Top