CONNECT WITH US  

ತುಮಕೂರಿಗೂ ಅಟಲ್‌ಜೀಗೂ ಬಿಡದ ನಂಟು 

ತುಮಕೂರು: ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಕಲ್ಪತರು ನಾಡು ತುಮಕೂರು ಜಿಲ್ಲೆಯ ಮೇಲೆ ಸ್ನೇಹ ಸಂಬಂಧ ಇತ್ತು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲಿನಲ್ಲಿ ಸ್ನೇಹ ಬೆಳೆಸಿಕೊಂಡಿದ್ದ ಸ್ನೇಹಿತನನ್ನು ನೋಡಲು ಜಿಲ್ಲೆಯ ಗಡಿ ಭಾಗ ಪಾವಗಡಕ್ಕೆ ಬಂದಿದ್ದರು ಎನ್ನುವುದೇ ಒಂದು ವಿಶೇಷ.

ಪಾವಗಡ ತಾಲೂಕಿನ ಸಿ.ಕೆ. ಪುರಕ್ಕೆ 1978 ರಲ್ಲಿ ವಿದೇಶಾಂಗ ಸಚಿವರಾಗಿದ್ದ ವೇಳೆಯಲ್ಲಿ ಬಂದಿದ್ದ ವಾಜಪೇಯಿ ಅವರು ತುರ್ತು ಪರಿಸ್ಥಿತಿಯ ವೇಳೆಯಲ್ಲಿ ಅವರ ಜೊತೆ ಒಡನಾಡಿಯಾಗಿದ್ದ ನಾಗೇಶ್‌ ರಾವ್‌ ಅವರ ಮನೆಯಲ್ಲಿ ಒಂದು ರಾತ್ರಿ ತಂಗಿದ್ದರು. ರಾಜ್ಯದಲ್ಲಿ ಅತಿ ಹಿಂದುಳಿದ ಪ್ರದೇಶ ಎಂದೇ ಗುರುತಿಸಿಕೊಂಡಿರುವ ಪಾವಗಡ ತಾಲೂಕಿನ ಸಿ.ಕೆ. ಪುರಕ್ಕೆ ವಾಜಪೇಯಿ ಅವರು ಬಂದಿದ್ದು ಆ ಭಾಗದ ಅನೇಕರಲ್ಲಿ ಹರ್ಷ ಉಂಟಾಗಿತ್ತು. 

ಶನಿ ದೇವರಿಗೆ ಪೂಜೆ ಸಲ್ಲಿಸಿದ್ದ ವಾಜಪೇಯಿ: ಪಾವಗಡ ಶನೇಶ್ವರ ಸ್ವಾಮಿ ಎಂದರೆ ಪ್ರಸಿದ್ಧಿ ಸಿ.ಕೆ. ಪುರಕ್ಕೆ ಬಂದಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರು ಪಾವಗಡದ ಶನೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು. ಆ ವೇಳೆಯಲ್ಲಿ ದೇವಸ್ಥಾನದ ಆಡಳಿತ ಮಂಡಲಿ ಅವರಿಗೆ ಗೌರವಿಸಿತ್ತು. 

ಮಲ್ಲಿಕಾರ್ಜುನಯ್ಯ ಅವರೊಂದಿಗೆ ಉತ್ತಮ ಬಾಂದವ್ಯ: ತುಮಕೂರಿನ ಲೋಕಸಭೆಯ ಉಪಸಭಾಪತಿಯಾಗಿದ್ದ ಎಸ್‌. ಮಲ್ಲಿಕಾರ್ಜುನಯ್ಯ ಅವರೊಂದಿಗೂ ವಾಜಪೇಯಿ ಅವರು ಉತ್ತಮ ಭಾಂದವ್ಯ ಹೊಂದಿದ್ದರು ತುಮಕೂರಿಗೆ ನಾಲ್ಕು ಬಾರಿ ಬೇಟಿ ನೀಡಿದ್ದರು ಎಂದು ತಿಳಿದು ಬಂದಿದೆ ಎರಡು ಬಾರಿ ಚುನಾವಣೆ ಸಂದರ್ಭದಲ್ಲಿ ಬಂದಿದ್ದರು ಎಂದು ಹಿರಿಯ ಬಿಜೆಪಿ ಮುಖಂಡರು ಹೇಳುತ್ತಾರೆ ಸಿದ್ದಗಂಗಾ ಮಠಕ್ಕೆ ಮತ್ತು ಪಾವಗಡಕ್ಕೆ ಬೇಟಿ ನೀಡುವ ಮೂಲಕ ತುಮಕೂರು ಜಿಲ್ಲೆಯೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದರು. 

ಸಿದ್ದಗಂಗಾ ಮಠಕ್ಕೆ ಭೇಟಿ: ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಗಳಾಗಿದ್ದ ವೇಳೆ ಶ್ರೀ ಕ್ಷೇತ್ರ ಸಿದ್ಧಗಂಗಾ ಮಠಕ್ಕೆ ಬೇಟಿ ನೀಡಿದ್ದರು. 1999 ರ ಜನವರಿ 3 ರಂದು ಶ್ರೀ ಮಠದಲ್ಲಿ ಏರ್ಪಡಿಸಿದ್ದ ಶ್ರೀ ಸಿದ್ದಲಿಂಗೇಶ್ವರ ಸಂಸ್ಕೃತ ಕಾಲೇಜಿನ 81 ನೇ ಸಂಸ್ಕೃತೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆಯಲ್ಲಿ ಉತ್ತರದಲ್ಲಿ ಮಹಾಗಂಗೆ ದಕ್ಷಿಣದಲ್ಲಿ ಸಿದ್ದಗಂಗೆ ಎಂದು ಮಾತನಾಡುತ್ತಾ ಸಿದ್ದಗಂಗಾ ಶ್ರೀಗಳ ಶೈಕ್ಷಣಿಕ ಸೇವೆಯನ್ನು ಕೊಂಡಾಡಿದ್ದರು. 

ಮಠದಲ್ಲಿ ಕರ್ನಾಟಕ ರತ್ನ ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಸ್ವಾಮಿಗಳೊಂದಿಗೆ ಕೆಲಹೊತ್ತು ಮಾತುಕತೆ ನಡೆಸಿದ್ದರು., ಮಠದ ಪರಿಸರ ವಿದ್ಯಾರ್ಥಿಗಳ ಲವಲವಿಕೆ ಕಂಡು ಕವಿ ಪತ್ರಕರ್ತರಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರು ಪುಳಕಿತರಾಗಿದ್ದರು. 

Trending videos

Back to Top