CONNECT WITH US  

ಪೋಷಕರು ಮಕ್ಕಳ ಬಗ್ಗೆ ವಿಶೇಷ ಗಮನಹರಿಸಿ

ತುಮಕೂರು: ಪರಶುರಾಂ ವಾಗ್ಘೋರೆಯಂತಹ ಯುವಕರು ಹಾದಿ ತಪ್ಪುತ್ತಿದ್ದರೂ ತಂದೆ ತಾಯಿಗಳು ತನ್ನ ಮಗ ಏನು ಮಾಡುತ್ತಿದ್ದಾನೆಂಬುದು ತಿಳಿಯದೆ ನೋವು ಅನುಭವಿಸುವಂತಾಗಿದೆ. ಮಕ್ಕಳ ಒಂದು ಮುಖವನ್ನಷ್ಟೇ ನೋಡುವ ಪೋಷಕರಿಗೆ ಮಗ ತಪ್ಪು ಹೆಜ್ಜೆ ಇಟ್ಟು ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗುವುದು ಗೊತ್ತಿರುವುದಿಲ್ಲ. ಹಾಗಾಗಿಯೇ ಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪೊ›.ಎಸ್‌.ಜಿ.ಸಿದ್ದರಾಮಯ್ಯ ಹೇಳಿದರು.

ನಗರದ ಎಸ್‌ಎಸ್‌ಪುರಂನಲ್ಲಿರುವ ಕನ್ನಿಕಾಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ಏರ್ಪಡಿಸಿದ್ದ  ಜ್ಞಾನಬುತ್ತಿ ಸತ್ಸಂಗದ 475ನೇ ಕಾರ್ಯಕ್ರಮದ ಅಂಗವಾಗಿ ನೂತನ ಪದಾಧಿಕಾರಿಗಳ ಆಯ್ಕೆ  ಸಮಾರಂಭ ಉದ್ಘಾಟಿಸಿ ಮಾತನಾಡಿ, ಒಡಿಸ್ಸಾ, ಅಸ್ಸಾಂ, ತಮಿಳುನಾಡು ಮತ್ತು ಆಂಧ್ರಪ್ರದೇಶವೂ ಸೇರಿದಂತೆ ದೇಶದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಮತ್ತು ರಾಜಕೀಯ ಬೆಳವಣಿಗೆಗಳು ಆತಂಕವನ್ನುಂಟು ಮಾಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ದೇಶದೊಳಗೆ ಇರುವ ಮೇಲುಕೀಳಿನ ಭಾವನೆ ಹೋಗಬೇಕು. ಸರ್ವ ಸಮತೆ ಮೂಡಬೇಕು. ಇದು ದೊಡ್ಡ ಆಶಯವಾಗಿದೆ. ಸರ್ವ ಜನಾಂಗದ ಶಾಂತಿಯ ತೋಟ ಎಂದು ಕುವೆಂಪು ಆಶಿಸಿದಂತೆ ಅದು ನಮ್ಮ ಬದುಕಾಗಬೇಕು. ಆದರೆ ಅದು ನಡೆಯುತ್ತಿಲ್ಲ. ಎಲ್ಲ ಮನುಷ್ಯರಲ್ಲೂ ತುಂಬಿರುವ ಕತ್ತಲು ಹೋಗಲಾಡಿಸಬೇಕು. ಅದು ಧರ್ಮದ, ಅಜ್ಞಾನದ ಕತ್ತಲಾಗಿರಬಹುದು. ಶ್ರೀಮಂತಿಕೆಯ ಕತ್ತಲಾಗಿರಬಹುದು ಮತ್ತು ಅಕ್ಷರದ ಅಹಂಕಾರದ ಕತ್ತಲಾಗಿರಬಹುದು. ಇವೆಲ್ಲವನ್ನು ಕಳೆದುಕೊಳ್ಳಬೇಕಾದರೆ ಕಲಿಯಬೇಕು ಎಂದು ತಿಳಿಸಿದರು.

ದೀಪದ ಕೆಳಗಿನ ಕತ್ತಲು ನಮಗೆ ಅರಿವಾಗಬೇಕು. ಆದರೆ ನಮಗೆ ಆ ಕತ್ತಲು ಕಾಣುತ್ತಿಲ್ಲ. ಮೇಲುಕೀಳು, ಶ್ರೀಮಂತ-ಬಡವ ಇವೆಲ್ಲವು ಅಳಿಯಬೇಕು. ಜಾತಿ, ಧರ್ಮ, ಭಾಷೆ, ಪಂಥ ಎಷ್ಟು ವಿಷಯಗಳಲ್ಲಿ ನಾವು ಹರಡಿಕೊಂಡಿದ್ದೇವೆ. ಬಹುತ್ವದ ಭಾರತದಲ್ಲಿ ಸೀಳಿಕೊಂಡ ಭಾರತದಂತೆ ಕಂಡು ಬರುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪೊ›.ಎಸ್‌.ಜಿ.ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿದರು.

ಜ್ಞಾನಬುತ್ತಿ ಸತ್ಸಂಗದ ನೂತನ ಅಧ್ಯಕ್ಷರಾಗಿ ಎಂ.ಸಿ.ಲಲಿತಾ, ಕಾರ್ಯದರ್ಶಿಯಾಗಿಮಿಮಿಕ್ರಿ ಈಶ್ವರಯ್ಯ ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಜ್ಞಾನಬುತ್ತಿ ಸತ್ಸಂಗ ಸಂಸ್ಥಾಪಕ ಪಿ.ಶಾಂತಿಲಾಲ್‌, ಇಂದಿರಮ್ಮ, ಜ್ಞಾನಬುತ್ತಿ ಸತ್ಸಂಗ ಗೌರವಾಧ್ಯಕ್ಷ ಮುರಳಿಕೃಷ್ಣಪ್ಪ, ದ್ವಾರಕನಾಥ್‌, ಸಮಾಜ ಸೇವಕ ಡಾ.ರಮೇಶ್‌ಬಾಬು, ಸಾಹಿತಿ ಎನ್‌. ನಾಗಪ್ಪ, ವಿಮರ್ಶಕ ಎಸ್‌.ಪಿ.ಪದ್ಮಪ್ರಸಾದ್‌ ಇತರರು ಇದ್ದರು.

Trending videos

Back to Top