CONNECT WITH US  

ಜನರಿಗೆ ಲಂಚ ಪಡೆದರೆ ಸಹಿಸಲ್ಲ

ತುಮಕೂರು: ಗ್ರಾಮಾಂತರ ಕ್ಷೇತ್ರದಲ್ಲಿ ಶಾಸಕನಾಗಿ ತಾವು ಅಧಿಕಾರದಲ್ಲಿರುವ ಅವಧಿಯ ವರೆಗೂ ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಲಂಚಕ್ಕೆ ಬೇಡಿಕೆ ಇಡುವುದು ತಮ್ಮ ಗಮನಕ್ಕೆ ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ಶಾಸಕ ಡಿ.ಸಿ. ಗೌರಿಶಂಕರ್‌ ಎಚ್ಚರಿಕೆ ನೀಡಿದರು. 

ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಬ್ಬೂರು ಹೋಬಳಿ ಸಿರಿವರ ಗ್ರಾಮ ಪಂಚಾಯಿತಿಯ ಗೋವಿಂದರಾಜಪುರಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು,  ಅಧಿಕಾರಿಗಳು ಕ್ಷೇತ್ರದ ಜನರಿಂದ ಲಂಚ ಪಡೆದಿರುವುದು ತಮ್ಮ ಗಮನಕ್ಕೆ ಬಂದರೆ ಅಂತಹ ಅಧಿಕಾರಿಗಳನ್ನು ಜನತಾದರ್ಶನ ಕಾರ್ಯಕ್ರಮದಲ್ಲಿ ಕರೆಸಿ ಜನರಿಂದ ಪಡೆದ ಲಂಚದ ಹಣವನ್ನು ಅವರಿಗೆ ವಾಪಸ್‌ ವಿತರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

 ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆಗಳ ಅಧಿಕಾರಿಗಳು ರೈತರ, ಬಡವರ ಕಷ್ಟಗಳಿಗೆ ಸಮರ್ಪಕವಾಗಿ ಸ್ಪಂದಿಸಬೇಕು. ಒಂದು ವೇಳೆ ಅಧಿಕಾರಿಗಳಿಂದ ಸಮರ್ಪಕವಾದ ಪ್ರತಿಕ್ರಿಯೆ ದೊರಕದಿದ್ದರೆ ಪ್ರತಿ ಸೋಮವಾರ ತಾಲೂಕು ಪಂಚಾಯಿತಿ ಆವರಣದಲ್ಲಿ ಜರುಗುವ ಜನತಾದರ್ಶನ ಕಾರ್ಯಕ್ರಮಕ್ಕೆ ಬಂದು ತಮ್ಮ ಅಹವಾಲುಗಳನ್ನು ನೇರವಾಗಿ ತನಗೆ ತಿಳಿಸಿದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ಪರಿಹರಿಸುವಂತೆ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಬಹಳಷ್ಟು  ಕೆರೆಗಳಿಗೆ ಏತ ನೀರವಾರಿ ಯೋಜನೆ ಮೂಲಕ ನೀರು ಹರಿಸಲಾಗುತ್ತಿದೆ. ನಾಗವಲ್ಲಿಕೆರೆಗೂ ಸಹ ಹೇಮಾವತಿ ನೀರು ಹರಿಯಲಿದೆ. ಸರ್ಕಾರ ನಿಗದಿಪಡಿಸಿರುವ 310 ಎಂಸಿಎಫ್ಟಿ ನೀರಿನಲ್ಲಿ ಏತ ನೀರವಾರಿ ಯೋಜನೆಗೆ ಒಳಪಡುವ ಎಲ್ಲಾ ಕೆರೆಗಳನ್ನು ತುಂಬಿಸಲು ಸಾಧ್ಯವಿಲ್ಲ.

ಹೀಗಾಗಿ ಹೆಚ್ಚುವರಿ 1 ಟಿಎಂಸಿ ನೀರಿನ ಅವಶ್ಯಕತೆಯಿದ್ದು, ಈ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವರಿಗೆ ಮನವಿ ಮಾಡಿರುವುದಾಗಿ ಹೇಳಿದರು. ಈ ವೇಳೆ ಜೆಡಿಎಸ್‌ ಹೆಬ್ಬೂರು ಹೋಬಳಿ ಅಧ್ಯಕ್ಷ ವೈ.ಟಿ.ನಾಗರಾಜು, ನಾರಾಯಣಪ್ಪ, ಪ್ರಕಾಶ್‌, ಶ್ರೀನಿವಾಸ್‌ ಇತರರಿದ್ದರು.

Trending videos

Back to Top